AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPF Scheme 2026: ಕಡ್ಡಾಯ ಪಿಎಫ್ ಕಡಿತ 1,800 ರೂಗೆ ಸೀಮಿತ; ಹಣ ಹಿಂಪಡೆಯುವಿಕೆ ನಿಯಮಗಳಲ್ಲಿ ಬದಲಾವಣೆ ಗಮನಿಸಿ

EPF scheme 2026 new rules: ಕೇಂದ್ರ ಸರ್ಕಾರ ಹೊಸ ಇಪಿಎಫ್ ಸ್ಕೀಮ್ ಅನ್ನು ಈ ತಿಂಗಳಿಂದ ಜಾರಿಗೆ ತಂದಿದೆ. ಹೊಸ ನಿಯಮಗಳ ಪ್ರಕಾರ, ಕಡ್ಡಾಯ ಪಿಎಫ್ ಕಡಿತ 1,800 ರೂಗೆ ಸೀಮಿತವಾಗಿರುತ್ತದೆ. ಪಿಎಫ್ ವಿತ್​ಡ್ರಾ ನಿಯಮಗಳಲ್ಲಿ ಬದಲಾವಣೆ ಇದೆ. ಪಿಎಫ್ ಬ್ಯಾಲನ್ಸ್​ನ ಶೇ. 75ರಷ್ಟನ್ನು ಹಿಂಪಡೆಯಲು ಅವಕಾಶ ಇರುತ್ತದೆ.

EPF Scheme 2026: ಕಡ್ಡಾಯ ಪಿಎಫ್ ಕಡಿತ 1,800 ರೂಗೆ ಸೀಮಿತ; ಹಣ ಹಿಂಪಡೆಯುವಿಕೆ ನಿಯಮಗಳಲ್ಲಿ ಬದಲಾವಣೆ ಗಮನಿಸಿ
ಇಪಿಎಫ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 02, 2026 | 1:01 PM

Share

ಮುಖ್ಯಾಂಶಗಳು

  • ಕೇಂದ್ರ ಸರ್ಕಾರ ಹೊಸ ಇಪಿಎಫ್ ಸ್ಕೀಮ್ ಅನ್ನು ಈ ತಿಂಗಳಿಂದ ಜಾರಿಗೆ ತಂದಿದೆ.
  • ಹೊಸ ನಿಯಮಗಳ ಪ್ರಕಾರ, ಕಡ್ಡಾಯ ಪಿಎಫ್ ಕಡಿತ 1,800 ರೂಗೆ ಸೀಮಿತವಾಗಿರುತ್ತದೆ.
  • ಪಿಎಫ್ ಬ್ಯಾಲನ್ಸ್​ನ ಶೇ. 75ರಷ್ಟನ್ನು ಹಿಂಪಡೆಯಲು ಅವಕಾಶ ಇರುತ್ತದೆ.

ನವದೆಹಲಿ, ಜುಲೈ 2: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ದಶಕಗಳ ಹಳೆಯ 1952ರ ಇಪಿಎಫ್ ಕಾಯ್ದೆಯನ್ನು ಬದಲಾಯಿಸಿ, ಹೊಸ ‘ಇಪಿಎಫ್ ಯೋಜನೆ 2026’ (EPF Scheme 2026) ಅನ್ನು ಜಾರಿಗೆ ತಂದಿದೆ. ಸಾಮಾಜಿಕ ಭದ್ರತಾ ಸಂಹಿತೆ 2020ರ (Code on Social Security) ಅಡಿಯಲ್ಲಿ ಈ ಹೊಸ ನಿಯಮಗಳನ್ನು ರೂಪಿಸಲಾಗಿದ್ದು, ದೇಶದ ಸುಮಾರು 8 ಕೋಟಿ ಸಕ್ರಿಯ ಉದ್ಯೋಗಿಗಳಿಗೆ ಇದು ನೇರವಾಗಿ ಅನ್ವಯಿಸಲಿದೆ. ಮಹತ್ವದ ನಿಯಮ ಬದಲಾವಣೆಯಲ್ಲಿ ಕಡ್ಡಾಯ ಪಿಎಫ್ ಕಡಿತವೂ ಸೇರಿದೆ. ಕಂಪನಿಗಳು ತಮ್ಮ ಉದ್ಯೋಗಿಗಳ ಸಂಬಳದಿಂದ ಪಿಎಫ್​ಗಾಗಿ ಹಣ ಕಡಿತಗೊಳಿಸುವ ಸಂಬಂಧದ ನಿಯಮ ಇದು.

ಕಡ್ಡಾಯ ಪಿಎಫ್ ಕಡಿತ ರೂ. 1,800ಕ್ಕೆ ಸೀಮಿತ

ಹೊಸ ನಿಯಮದ ಪ್ರಕಾರ, ಉದ್ಯೋಗಿ ಹಾಗೂ ಉದ್ಯೋಗದಾತರ (Employer) ಕಡ್ಡಾಯ ಪಿಎಫ್ ಕೊಡುಗೆಗೆ ಮಿತಿ ಹೇರಲಾಗಿದೆ. ಸರ್ಕಾರದ ನಿಯಮದಂತೆ ಮಾಸಿಕ ರೂ. 15,000 ಮೂಲ ವೇತನದ (Basic Wage Ceiling) ಮೇಲೆ ಶೇ. 12 ರಷ್ಟು ಅಂದರೆ ಗರಿಷ್ಠ ರೂ. 1,800 ಮಾತ್ರ ಕಡ್ಡಾಯವಾಗಿ ಪಿಎಫ್ ಕಡಿತಗೊಳಿಸಲಾಗುತ್ತದೆ.

ನಿಮ್ಮ ಮೂಲ ವೇತನ (Basic Salary) ತಿಂಗಳಿಗೆ ರೂ. 1 ಲಕ್ಷ ಇದ್ದರೂ ಸಹ, ರೂ. 1,800 ಮಾತ್ರ ಕಡಿತವಾಗುತ್ತದೆ. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಕಡಿತಗೊಳಿಸಲು ಬಯಸಿದರೆ ಅದನ್ನು ‘ಸ್ವಯಂಪ್ರೇರಿತ ಪಿಎಫ್ ಕೊಡುಗೆ’ (Voluntary Contribution) ಎಂದು ಪರಿಗಣಿಸಲಾಗುತ್ತದೆ. ಉದ್ಯೋಗಿಗಳು ಈ ಸೌಲಭ್ಯ ಆಯ್ಕೆ ಮಾಡಿಕೊಳ್ಳಬಹುದು.

ಉದ್ಯೋಗಿಗಳು ತಮಗೆ ಬೇಡವೆಂದಾಗ ಈ ಸ್ವಯಂಪ್ರೇರಿತ ಕೊಡುಗೆಯನ್ನು ನಿಲ್ಲಿಸುವ ಅಥವಾ ಕಡಿಮೆ ಮಾಡುವ ಸ್ವಾಯತ್ತತೆಯನ್ನು ಹೊಂದಿದ್ದಾರೆ. ಇದರಿಂದ ಉದ್ಯೋಗಿಗಳ ಕೈಗೆ ಸಿಗುವ ಸಂಬಳ (In-hand Salary) ಹೆಚ್ಚಾಗಲು ಮತ್ತು ಹಣಕಾಸಿನ ಯೋಜನೆಗಳನ್ನು ತಾವೇ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ.

ಶೇ. 25 ರಷ್ಟು ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ

ಇಪಿಎಫ್ ಖಾತೆಯಿಂದ ಭಾಗಶಃ ಹಣವನ್ನು ಹಿಂಪಡೆಯುವಾಗ ಉದ್ಯೋಗಿಗಳು ತಮ್ಮ ಖಾತೆಯಲ್ಲಿ ಕನಿಷ್ಠ ಶೇ. 25 ರಷ್ಟು ಹಣವನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕು.

ಇದನ್ನೂ ಓದಿ: mAadhaar ನಿರ್ಗಮನ, ಹೊಸ ಆಧಾರ್ ಆ್ಯಪ್ ಆಗಮನ; ನೂತನ ಆ್ಯಪ್​ನಲ್ಲಿನ ವಿಶೇಷತೆಗಳೇನು?

ಉದಾಹರಣೆಗೆ, ನಿಮ್ಮ ಪಿಎಫ್ ಖಾತೆಯಲ್ಲಿ ಒಟ್ಟು ರೂ. 1 ಲಕ್ಷ ಇದ್ದರೆ, ಅದರಲ್ಲಿ ರೂ. 25,000 ಖಾತೆಯಲ್ಲೇ ಉಳಿಯಬೇಕು. ಉಳಿದ ರೂ. 75,000 ಮೊತ್ತವನ್ನು ಮಾತ್ರ ‘ಅರ್ಹ ಬ್ಯಾಲೆನ್ಸ್’ ಎಂದು ಪರಿಗಣಿಸಿ ಹಿಂಪಡೆಯಲು ಅವಕಾಶ ನೀಡಲಾಗುತ್ತದೆ. ಇದು ಉದ್ಯೋಗಿಗಳ ನಿವೃತ್ತಿ ಉಳಿತಾಯವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ.

ಹಣ ಹಿಂಪಡೆಯುವಿಕೆ ನಿಯಮಗಳ ಸರಳೀಕರಣ

ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಇಪಿಎಫ್‌ಒ ಈ ಹಿಂದೆ ಇದ್ದ 13 ಅಡ್ವಾನ್ಸ್ (Advance) ವಿಭಾಗಗಳನ್ನು ಕೇವಲ 3 ಪ್ರಮುಖ ವಿಭಾಗಗಳಿಗೆ ಇಳಿಸಿದೆ:

  1. ಅತ್ಯಗತ್ಯ ಅಗತ್ಯಗಳು: ಅನಾರೋಗ್ಯ/ವೈದ್ಯಕೀಯ ಚಿಕಿತ್ಸೆ, ಶಿಕ್ಷಣ ಮತ್ತು ಮದುವೆ.
  2. ವಸತಿ ಅಗತ್ಯಗಳು: ಮನೆ ಅಥವಾ ಸೈಟ್ ಖರೀದಿ, ಮನೆ ನಿರ್ಮಾಣ, ನವೀಕರಣ ಅಥವಾ ಗೃಹ ಸಾಲದ ಮರುಪಾವತಿ.
  3. ವಿಶೇಷ ಸಂದರ್ಭಗಳು: ಇಪಿಎಫ್ ನಿಯಮಾವಳಿಗಳ ಅಡಿಯಲ್ಲಿ ಅನುಮೋದನೆ ಪಡೆದ ವಿಶೇಷ ಪರಿಸ್ಥಿತಿಗಳು.

ಹಣ ಹಿಂಪಡೆಯುವಿಕೆಯ ಅರ್ಹತೆಗಳು ಮತ್ತು ಮಿತಿಗಳು

  • ವೈದ್ಯಕೀಯ ಚಿಕಿತ್ಸೆ: ಈ ಕಾರಣ ನೀಡಿ ಅರ್ಹ ಬ್ಯಾಲೆನ್ಸ್​ನ ಎಲ್ಲಾ ಹಣವ ವಿತ್​ಡ್ರಾ ಮಾಡಬಹುದು. ಪಿಎಫ್ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರ ವೈದ್ಯಕೀಯ ಚಿಕಿತ್ಸೆಯ ಅಗತ್ಯ ಇದ್ದಾಗ ಈ ಹಣ ಪಡೆಯಬಹುದು. ಆದರೆ, ಕನಿಷ್ಠ 12 ತಿಂಗಳ ಪಿಎಫ್ ಸದಸ್ಯತ್ವ ಇರಬೇಕು.
  • ಶಿಕ್ಷಣ: ಈ ಕಾರಣ ನೀಡಿ 10 ಬಾರಿ ಮುಂಗಡವಾಗಿ ಹಣ ವಿತ್​ಡ್ರಾ ಮಾಡಬಹುದು. ಎಲಿಜಿಬಲ್ ಬ್ಯಾಲನ್ಸ್​ನಲ್ಲಿ ನೂರಕ್ಕೆ ನೂರು ಹಣ ಪಡೆಯಬಹುದು. ಇಲ್ಲಿಯೂ 12 ತಿಂಗಳಗಿಂತ ಹೆಚ್ಚು ಪಿಎಫ್ ಸದಸ್ಯತ್ವ ಇರಬೇಕು.
  • ಮದುವೆ: ಅರ್ಹ ಬ್ಯಾಲನ್ಸ್​ನ ಎಲ್ಲಾ ಹಣ ಪಡೆಯಬಹುದು. ಒಟ್ಟು ಐದು ಬಾರಿ ಮಾತ್ರ ಈ ಕಾರಣದಿಂದ ಹಣ ಹಿಂಪಡೆಯಲು ಅವಕಾಶ ಇದೆ.
  • ಗೃಹ ನಿರ್ಮಾಣ: ಮನೆ ಕಟ್ಟಲು, ಖರೀದಿಸಲು, ನವೀಕರಿಸಲು ಅಥವಾ ಗೃಹ ಸಾಲ ಮರುಪಾವತಿಸಲು ಹಣ ಹಿಂಪಡೆಯಬಹುದು.
  • ವಿಶೇಷ ಸಂದರ್ಭ: ನಿರ್ದಿಷ್ಟಪಡಿಸದ ಯಾವುದಾದರೂ ವಿಶೇಷ ಅಥವಾ ತುರ್ತು ಸಂದರ್ಭ ಇದ್ದಾಗ ಪಿಎಫ್ ಹಣ ಹಿಂಪಡೆಯಬಹುದು. ಆದರೆ, ಇಪಿಎಫ್ ನಿಯಮಗಳ ಪ್ರಕಾರ ಅನುಮೋದನೆ ಸಿಗಬಹುದು.
  • ಉದ್ಯೋಗನಷ್ಟ: ಉದ್ಯೋಗ ನಷ್ಟವಾದಾಗ ಪಿಎಫ್ ಹಣ ಹಿಂಪಡೆಯಬಹುದು. ಪಿಎಫ್ ಸದಸ್ಯತ್ವ 12 ತಿಂಗಳು ದಾಟುವವರೆಗೂ ಕಾಯಬೇಕಿಲ್ಲ. ಆದರೆ, ಒಂದು ಹಣಕಾಸು ವರ್ಷದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಈ ಕಾರಣದಿಂದ ಹಣ ಹಿಂಪಡೆಯಲು ಆಗುವುದಿಲ್ಲ.

ಇದನ್ನೂ ಓದಿ: ಜೂನ್ ತಿಂಗಳ ಜಿಎಸ್​ಟಿ ಸಂಗ್ರಹ ಶೇ. 14ರಷ್ಟು ಹೆಚ್ಚಳ; ಅತಿಹೆಚ್ಚು ತೆರಿಗೆ ಕಲೆಕ್ಷನ್​ನಲ್ಲಿ ಕರ್ನಾಟಕ ನಂ. 2

ಗುತ್ತಿಗೆ ನೌಕರರಿಗೂ ರಕ್ಷಣೆ: ಹೊಸ ಯೋಜನೆಯಡಿ ಗುತ್ತಿಗೆ ನೌಕರರ (Contract workers) ಪಿಎಫ್ ಕೊಡುಗೆಗಳನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಮುಖ್ಯ ಉದ್ಯೋಗದಾತರ (Principal Employer) ಮೇಲೆಯೇ ಹೊರಿಸಲಾಗಿದೆ. ಗುತ್ತಿಗೆ ಸಂಸ್ಥೆಯು ಸ್ವತಂತ್ರವಾಗಿ ನೋಂದಾಯಿಸಿಕೊಳ್ಳದಿದ್ದರೆ, ಮುಖ್ಯ ಸಂಸ್ಥೆಯೇ ಪಿಎಫ್ ಪಾವತಿಗೆ ಹೊಣೆಯಾಗಿರುತ್ತದೆ.

ಒಟ್ಟಾರೆಯಾಗಿ, ಇಪಿಎಫ್ ಯೋಜನೆ 2026 ಉದ್ಯೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಹಣಕಾಸಿನ ನಮ್ಯತೆಯನ್ನು ನೀಡುವ ಜೊತೆಗೆ, ಅವರ ದೀರ್ಘಕಾಲೀನ ನಿವೃತ್ತಿ ಭದ್ರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Thu, 2 July 26

Follow Us