ಇಪಿಎಫ್​ಒ ವೇತನ ಮಿತಿ ಏರಿದ ಬೆನ್ನಲ್ಲೇ ಇಡಿಎಲ್​ಐ ಇನ್ಷೂರೆನ್ಸ್ ಪ್ರೊಟೆಕ್ಷನ್ ಮಿತಿ 10.50 ಲಕ್ಷ ರೂಗೆ ಏರುವ ನಿರೀಕ್ಷೆ

ಇಪಿಎಫ್​ಒದ ವೇತನ ಮಿತಿಯನ್ನು 15,000 ರೂನಿಂದ 25,000 ರೂಗೆ ಏರಿಸಲಾಗಿದೆ. ಇದರಿಂದ ಇಪಿಎಫ್ ಖಾತೆಗಳಿಗೆ ಹೆಚ್ಚಿನ ಹರಿವು ಸಿಗಲಿದೆ. ಇದೇ ವೇಳೆ, ಇಪಿಎಫ್ ಜೊತೆ ಉಚಿತವಾಗಿ ಸಿಗುವ ಇನ್ಷೂರೆನ್ಸ್ ಹಣದ ಮಿತಿಯೂ ಏರಿಕೆಯಾಗುವ ನಿರೀಕ್ಷೆ ಇದೆ. ಇಡಿಎಲ್​ಐ ಸ್ಕೀಮ್​ನಲ್ಲಿ ಇಪಿಎಫ್ ಸದಸ್ಯರಿಗೆ ಸಿಗುವ 7 ಲಕ್ಷ ರೂಗಳ ವಿಮಾ ರಕ್ಷಣೆಯ ಮೊತ್ತ 10.50 ಲಕ್ಷ ರೂಗೆ ಏರಿಕೆಯಾಗಬಹುದು.

ಇಪಿಎಫ್​ಒ ವೇತನ ಮಿತಿ ಏರಿದ ಬೆನ್ನಲ್ಲೇ ಇಡಿಎಲ್​ಐ ಇನ್ಷೂರೆನ್ಸ್ ಪ್ರೊಟೆಕ್ಷನ್ ಮಿತಿ 10.50 ಲಕ್ಷ ರೂಗೆ ಏರುವ ನಿರೀಕ್ಷೆ
ಇನ್ಷೂರೆನ್ಸ್
Image Credit source: Getty Images

Updated on: Sep 16, 2026 | 8:13 PM

ನವದೆಹಲಿ, ಸೆಪ್ಟೆಂಬರ್ 16: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ಕಡ್ಡಾಯ ವೇತನ ಮಿತಿಯನ್ನು ₹15,000 ದಿಂದ ₹25,000 ಗೆ ಏರಿಸುವ ಸರ್ಕಾರದ ತೀರ್ಮಾನದ ಬೆನ್ನಲ್ಲೇ, ಉದ್ಯೋಗಿಗಳಿಗೆ ಸಿಗುವ ಉದ್ಯೋಗಿಗಳ ಡೆಪಾಸಿಟ್ ಲಿಂಕ್ಡ್ ಇನ್ಶೂರೆನ್ಸ್ (EDLI) ವಿಮಾ ಕವರೇಜ್ ಮಿತಿ ₹10.50 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಸ್ತುತ ಇಡಿಎಲ್‌ಐ ನಿಯಮಾವಳಿಗಳ ಪ್ರಕಾರ, ನೌಕರರ ಮರಣದ ಸಂದರ್ಭದಲ್ಲಿ ನಾಮಿನಿ ಪಡೆಯುವ ವಿಮಾ ಮೊತ್ತವನ್ನು ಲೆಕ್ಕ ಹಾಕಲು ಒಂದು ಸೂತ್ರ ಇದೆ. ಅದು “(A x 35) + B”. ಇಲ್ಲಿ (ಕಳೆದ A ಎಂಬುದು ಉದ್ಯೋಗಿಯ 12 ತಿಂಗಳ ಮಾಸಿಕ ಸರಾಸರಿ ವೇತನ. B ಎಂಬುದು ಉದ್ಯೋಗಿ ಮೃತಪಟ್ಟ ದಿನದ ಹಿಂದಿನ ತಿಂಗಳಿಂದ ಹಿಂದಿನ 12 ತಿಂಗಳ ಸರಾಸರಿ ಇಪಿಎಫ್ ಬ್ಯಾಲನ್ಸ್ ಮೊತ್ತದ ಶೇ. 50. ಆದರೆ, B ಅನ್ನು ₹1.75 ಲಕ್ಷಕ್ಕೆ ಕ್ಯಾಪ್ ಮಾಡಲಾಗಿದೆ. ಈ ಲೆಕ್ಕ ನೋಡಿದರೆ, A=15,000. B= ₹1,75,000 ಆಗುತ್ತದೆ. “(A x 35) + B” ಸೂತ್ರದಂತೆ (15,000 x 35) + 1,75,000 = 7,00,000 ಆಗುತ್ತದೆ.

ಇದನ್ನೂ ಓದಿ: ಇಪಿಎಫ್​ಒ ವೇತನ ಮಿತಿ 15,000 ದಿಂದ 25,000 ರೂಗೆ ಏರಿಕೆ; ಹೆಚ್ಚು ಉದ್ಯೋಗಿಗಳಿಗೆ ಇಪಿಎಫ್ ಅಕೌಂಟ್, ಹೆಚ್ಚು ಕಾರ್ಪಸ್

ವೇತನ ಮಿತಿ ₹25,000 ಕ್ಕೆ ಏರಿದಾಗ

ವೇತನ ಮಿತಿ ₹25,000 ಕ್ಕೆ ಏರಿದಾಗ A ಎಂಬುದು 25,000 ಆಗುತ್ತದೆ. B ಅನ್ನೂ ಏರಿಸುವ ಸಾಧ್ಯತೆ ಇದೆ. ಏರಿಸುವುದಿಲ್ಲ ಎಂದು ಭಾವಿಸಿದರೂ ಅದು 1,75,000 ಆಗಿರುತ್ತದೆ. ಈಗ “(A x 35) + B” = (25,000 x 35) + 1,75,000 = 10,50,000 ಆಗುತ್ತದೆ.

ಒಂದು ವೇಳೆ, 12 ತಿಂಗಳ ಸರಾಸರಿ ಇಪಿಎಫ್ ಬ್ಯಾಲನ್ಸ್​ನ ಮಿತಿಯನ್ನು ಹೆಚ್ಚಿಸಿದಲ್ಲಿ ವಿಮಾ ಮಿತಿಯೂ ಹೆಚ್ಚುತ್ತದೆ.

ಅಧಿಕೃತ ಅಧಿಸೂಚನೆ ನಿರೀಕ್ಷೆ: ಸರ್ಕಾರವು ವೇತನ ಮಿತಿ ಏರಿಕೆಗೆ ಸಂಪುಟ ಅನುಮೋದನೆ ನೀಡಿದ್ದರೂ, ಇಡಿಎಲ್‌ಐ ವಿಮಾ ಮಿತಿಯ ಲೆಕ್ಕಾಚಾರದ ಹೊಸ ನಿಯಮಗಳು ಮತ್ತು ಅಂತಿಮ ಅಧಿಸೂಚನೆ (Official Notification) ಹೊರಬಂದ ನಂತರವೇ ಈ ನೂತನ ವಿಮಾ ರಕ್ಷಣೆ ಅಧಿಕೃತವಾಗಿ ಜಾರಿಗೆ ಬರಲಿದೆ.

ಇದನ್ನೂ ಓದಿ: UPI ಪಾವತಿ ಮೇಲಿನ MDR ಶುಲ್ಕ: ನಿರ್ಧಾರ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಮೂಲಗಳ ಸ್ಪಷ್ಟನೆ

ಸಾಮಾಜಿಕ ಭದ್ರತೆಗೆ ಬಲ: ಈ ನಿರ್ಧಾರದಿಂದ ವೇತನದಾರರಿಗೆ ನಿವೃತ್ತಿ ನಿಧಿ ಮತ್ತು ಪಿಂಚಣಿ ಜೊತೆಗೆ ಕುಟುಂಬದ ಆರ್ಥಿಕ ಭದ್ರತೆಗಾಗಿ ಸಿಗುವ ಉಚಿತ ಜೀವ ವಿಮಾ ರಕ್ಷಣೆಯ ಮೌಲ್ಯವೂ ಗಣನೀಯವಾಗಿ ಏರಿಕೆಯಾಗಲಿದೆ.

ಇಡಿಎಲ್​ಐ ಇನ್ಷೂರೆನ್ಸ್ ಹಣ ಪಡೆಯುವುದು ಹೇಗೆ?

ಇಪಿಎಫ್ ಖಾತೆದಾರರಿಗೆ ಆಟೊಮ್ಯಾಟಿಕ್ ಆಗಿ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ಇದು ಜೀವ ವಿಮೆ ಹೊರತು ಎಂಡೋಮೆಂಟ್ ಸ್ಕೀಮ್ ಅಲ್ಲ. ಖಾತೆದಾರ ಮೃತಪಟ್ಟಾಗ ನಾಮಿನಿಗೆ ಈ ಇನ್ಷೂರೆನ್ಸ್ ಹಣ ಸಿಗುತ್ತದೆ. ಆದರೆ, ಇಪಿಎಫ್ ಅಕೌಂಟ್​ಗೆ ನಾಮಿನಿಯನ್ನು ಹೆಸರಿಸಿದ್ದಿರಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us