ಇಪಿಎಫ್‌ಒ ವೇತನ ಮಿತಿ 15,000 ದಿಂದ 25,000 ರೂಗೆ ಏರಿಕೆ; ಹೆಚ್ಚು ಉದ್ಯೋಗಿಗಳಿಗೆ ಇಪಿಎಫ್ ಅಕೌಂಟ್, ಹೆಚ್ಚು ಕಾರ್ಪಸ್
ಇಪಿಎಫ್‌ಒ ಸಂಸ್ಥೆಯು ವೇತನ ಮಿತಿ ನಿಯಮ ಪರಿಷ್ಕರಿಸಿದ್ದು, ಮಿತಿಯನ್ನು 15,000 ರೂನಿಂದ 25,000 ರೂಗೆ ಹೆಚ್ಚಿಸಲಾಗಿದೆ. ಈ ಕ್ರಮದಿಂದ 51 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಉದ್ಯೋಗಿಗಳು ಇಪಿಎಫ್‌ಒ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಇಪಿಎಫ್ ಅಕೌಂಟ್ಗಳಿಗೆ ಉದ್ಯೋಗದಾತರ ವತಿಯಿಂದ ಸಿಗುವ ಕೊಡುಗೆಯ ಮೊತ್ತವೂ ಹೆಚ್ಚಲಿದೆ.

ನವದೆಹಲಿ, ಸೆಪ್ಟೆಂಬರ್ 16: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ವೇತನ ಮಿತಿಯನ್ನು ₹15,000 ದಿಂದ ₹25,000 ಕ್ಕೆ ಏರಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಕ್ರಮವು ಬಹಳ ಮಹತ್ವದ್ದೆಂದು ಪರಿಗಣಿತವಾಗಿದೆ. ಈ ನಿರ್ಧಾರದಿಂದ ದೇಶದ ಹೆಚ್ಚುವರಿ 51 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕಡ್ಡಾಯ ಪಿಎಫ್, ಪಿಂಚಣಿ ಮತ್ತು ವಿಮಾ ಸೌಲಭ್ಯಗಳ ವ್ಯಾಪ್ತಿಗೆ ಬರಲಿದ್ದಾರೆ.
ವೇತನ ಮಿತಿ ಹೆಚ್ಚಳದಿಂದ ಹಲವು ಲಾಭ
51 ಲಕ್ಷ ನೌಕರರಿಗೆ ನೇರ ಲಾಭ: ವೇತನ ಮಿತಿಯ ಏರಿಕೆಯಿಂದಾಗಿ ₹15,000 ದಿಂದ ₹25,000 ರವರೆಗೆ ಮಾಸಿಕ ವೇತನ ಪಡೆಯುತ್ತಿರುವ ಸುಮಾರು 51 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಉದ್ಯೋಗಿಗಳಿಗೆ ಕಡ್ಡಾಯ ಇಪಿಎಫ್‌ಒ ಭದ್ರತೆ ಸಿಗಲಿದೆ.
ಹೆಚ್ಚಿನ ಇಪಿಎಫ್ ಕಾರ್ಪಸ್: ಪ್ರಸ್ತುತ ಉದ್ಯೋಗಿಗಳು ಕೆಲಸ ಮಾಡುತ್ತಿರುವ ಸಂಸ್ಥೆಗಳು ₹15,000 ವೇತನ ಲೆಕ್ಕದಲ್ಲಿ ಶೇ. 12ರಷ್ಟು ಹಣವನ್ನು ಕೊಡುಗೆಯಾಗಿ ನೀಡುತ್ತಿವೆ. ಈಗ ₹25,000 ಲೆಕ್ಕದಲ್ಲಿ ಅವುಗಳು ಕನಿಷ್ಠ ಕೊಡುಗೆ ನೀಡಬೇಕಾಗುತ್ತದೆ. ಅಂದರೆ, ₹3,000 ಹಣವು ಕಂಪನಿ ವತಿಯಿಂದ ಉದ್ಯೋಗಿಯ ಇಪಿಎಫ್ ಮತ್ತು ಇಪಿಎಸ್ ಖಾತೆಗಳಿಗೆ ಸಂದಾಯವಾಗುತ್ತದೆ.
ಇದನ್ನೂ ಓದಿ: ಯುಪಿಐ ಪಾವತಿಗೆ ಎಂಡಿಆರ್ ಶುಲ್ಕ; ನಾಲ್ಕು ಭಾಗವಾಗಿ ಹಂಚಿಕೆ; ಯಾರಿಗೆ ಎಷ್ಟು ಆದಾಯ ಸಿಗುತ್ತೆ? ಇಲ್ಲಿದೆ ವಿವರ
ಈ ನೂತನ ಮಿತಿಯ ವ್ಯಾಪ್ತಿಗೆ ಬರುವ ಹೊಸ ಉದ್ಯೋಗಿಗಳು ಮೂರು ಪ್ರಮುಖ ಯೋಜನೆಗಳ ಲಾಭ ಪಡೆಯಲಿದ್ದಾರೆ:
- ಉದ್ಯೋಗಿಗಳ ಭವಿಷ್ಯ ನಿಧಿ (EPF): ನಿವೃತ್ತಿಯ ನಂತರದ ಒಂದಷ್ಟು ಒಟ್ಟು ಲಂಪ್ಸಮ್ ಹಣ ಸಿಗುತ್ತದೆ.
- ಉದ್ಯೋಗಿಗಳ ಪಿಂಚಣಿ ಯೋಜನೆ (EPS): ನಿವೃತ್ತಿಯ ನಂತರ ಮಾಸಿಕ ಪಿಂಚಣಿ ಸೌಲಭ್ಯ.
- ಇಡಿಎಲ್‌ಐ (EDLI): ಜೀವ ವಿಮಾ ರಕ್ಷಣೆ.
ಸರ್ಕಾರಕ್ಕೆ ಹೆಚ್ಚುವರಿ ವೆಚ್ಚ: ಈ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ವಾರ್ಷಿಕ ಅಂದಾಜು ₹11,339 ಕೋಟಿ ವೆಚ್ಚ ಮಾಡಲಿದ್ದು, ಮುಂದಿನ 5 ವರ್ಷಗಳಲ್ಲಿ ಹೆಚ್ಚುವರಿಯಾಗಿ ಒಟ್ಟು ₹56,696 ಕೋಟಿ ಬಜೆಟ್ ಮೀಸಲಿಡಬೇಕಾಗುತ್ತದೆ.
ಏರಿಕೆಗೆ ಪ್ರಮುಖ ಕಾರಣ: ದೇಶದಲ್ಲಿ ಕನಿಷ್ಠ ವೇತನ ಮತ್ತು ಸರಾಸರಿ ವೇತನ ಮಟ್ಟಗಳು ಹೆಚ್ಚಾಗಿರುವುದನ್ನು ಪರಿಗಣಿಸಿ, ಸಾಮಾಜಿಕ ಭದ್ರತಾ ಶ್ರೇಣಿಯನ್ನು ಪ್ರಚಲಿತ ಆರ್ಥಿಕ ವಾಸ್ತವಕ್ಕೆ ಅನುಗುಣವಾಗಿ ವಿಸ್ತರಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಫ್ಲಿಪ್ಕಾರ್ಟ್ನಿಂದ ಬಿಗ್ ಬಿಲಿಯನ್ ಡೇಸ್ 2026 ಸೇಲ್ ಘೋಷಣೆ; ಯಾವಾಗ ಆರಂಭ?
ಎಂಟು ಕೋಟಿ ಇಪಿಎಫ್ ಸಬ್ಸ್ಕ್ರೈಬರ್ಸ್
ಪ್ರಸ್ತುತ ಇಪಿಎಫ್‌ಒ ಸಂಸ್ಥೆಯು ಸುಮಾರು 7.68 ಲಕ್ಷ ಸಂಸ್ಥೆಗಳಲ್ಲಿ 7.98 ಕೋಟಿ ಚಂದಾದಾರರನ್ನು ಹೊಂದಿದೆ. ಇಪಿಎಸ್ ಪಿಂಚಣಿ ಹೊಂದಿರುವವರ ಸಂಖ್ಯೆ 82 ಲಕ್ಷಕ್ಕೂ ಹೆಚ್ಚು ಇದೆ.
ಅಶ್ವಿನಿ ವೈಷ್ಣವ್ ಮಾಹಿತಿ ಹಂಚಿಕೊಂಡಿರುವುದು
#WATCH | Delhi | Union Minister Ashwini Vaishnaw says, “A major decision has been taken for employees working in industries across the country. Regarding the Provident Fund (PF) rules, there was previously a wage ceiling of Rs 15,000. This ceiling has now been raised to a monthly… pic.twitter.com/H47PBIL8jn
— ANI (@ANI) September 16, 2026
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ನಿರ್ಧಾರವು ದೇಶದ ಶ್ರಮಿಕ ವರ್ಗದ ನಿವೃತ್ತಿ ಭದ್ರತೆಯನ್ನು ಬಲಪಡಿಸುವುದಲ್ಲದೆ, ಉದ್ಯೋಗ ವಲಯದ ಔಪಚಾರಿಕೀಕರಣವನ್ನು (Formalisation) ಮತ್ತಷ್ಟು ವೇಗಗೊಳಿಸಲಿದೆ ಎಂದು ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Wed, 16 September 26




