Gautam Adani: ಗೌತಮ್ ಅದಾನಿ ಕುಟುಂಬದಿಂದ 60 ಸಾವಿರ ಕೋಟಿ ದಾನದ ಘೋಷಣೆ; ಅದಾನಿ ಫೌಂಡೇಷನ್​ನಿಂದ ನಿರ್ವಹಣೆ

Gautam Adani: ಗೌತಮ್ ಅದಾನಿ ಕುಟುಂಬದಿಂದ 60 ಸಾವಿರ ಕೋಟಿ ದಾನದ ಘೋಷಣೆ; ಅದಾನಿ ಫೌಂಡೇಷನ್​ನಿಂದ ನಿರ್ವಹಣೆ
ಗೌತಮ್ ಅದಾನಿ (ಸಂಗ್ರಹ ಚಿತ್ರ)

ಭಾರತದ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಮತ್ತು ಕುಟುಂಬವು 60,000 ಕೋಟಿ ರೂಪಾಯಿಯನ್ನು ದಾನ ಮಾಡುವುದಾಗಿ ಘೋಷಣೆ ಮಾಡಿದೆ. ಹೇಗೆ, ಏನು ಹಾಗೂ ಯಾವ ಸಂದರ್ಭ ಎಂಬಿತ್ಯಾದಿ ವಿವರ ಈ ಲೇಖನದಲ್ಲಿದೆ.

TV9kannada Web Team

| Edited By: Srinivas Mata

Jun 24, 2022 | 10:59 AM

ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ (Gautam Adani) ಅವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಇದೀಗ ಅವರ 60ನೇ ಹುಟ್ಟುಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಉದಾತ್ತವಾದ ಘೋಷಣೆಯೊಂದನ್ನು ಕುಟುಂಬದಿಂದ ಮಾಡಲಾಗಿದೆ. ಏನು ಆ ಘೋಷಣೆ ಅಂದರೆ, 60,000 ಕೋಟಿ ರೂಪಾಯಿಗಳನ್ನು ಸಾಮಾಜಿಕ ಕಾರ್ಯಗಳಿಗೆ ದೇಣಿಗೆ ನೀಡಲು ವಾಗ್ದಾನ ಮಾಡಲಾಗಿದೆ. ಆ ನಿಧಿಯನ್ನು ಅದಾನಿ ಫೌಂಡೇಷನ್ ನಿರ್ವಹಿಸುತ್ತದೆ. ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಯನ್ನು ಉತ್ತೇಜಿಸಲು ಅದಾನಿ ಫೌಂಡೇಷನ್ ಈ ದೇಣಿಗೆಯನ್ನು ಬಳಸುತ್ತದೆ ಎಂದು ಗೌತಮ್ ಅದಾನಿ ಗುರುವಾರ ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. “ಇದು ಭಾರತೀಯ ಕಾರ್ಪೊರೇಟ್ ಇತಿಹಾಸದಲ್ಲಿ ಪ್ರತಿಷ್ಠಾನಕ್ಕೆ ಮಾಡಿದ ಅತಿದೊಡ್ಡ ವರ್ಗಾವಣೆಯಾಗಿದೆ,” ಎಂದು ಅವರು ಹೇಳಿದ್ದಾರೆ. ಈ ಘೋಷಣೆಯು ಗೌತಮ್ ಅದಾನಿ ಅವರ ತಂದೆ ಶಾಂತಿಲಾಲ್ ಅದಾನಿ ಜನ್ಮ ಶತಮಾನೋತ್ಸವ ವರ್ಷವನ್ನು ಗೌರವಿಸುತ್ತದೆ ಎಂದು ಹೇಳಿದ್ದಾರೆ.

“ಭಾರತದ ಜನಸಂಖ್ಯಾ ಪ್ರಯೋಜನದ ಸಾಮರ್ಥ್ಯವನ್ನು ಬಳಸಿಕೊಳ್ಳಲು, ಆರೋಗ್ಯ, ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಯ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಅಗತ್ಯ ಹೆಚ್ಚುತ್ತಿದೆ. ಈ ಪ್ರತಿಯೊಂದು ಕ್ಷೇತ್ರಗಳಲ್ಲಿನ ಕೊರತೆಗಳು ‘ಆತ್ಮನಿರ್ಭರ ಭಾರತ’ಕ್ಕೆ ಅಡ್ಡಿಯಾಗಿದೆ. ಅದಾನಿ ಫೌಂಡೇಷನ್ ಈ ಎಲ್ಲ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿ ಪ್ರಯತ್ನಗಳ ಮೇಲೆ ಕೇಂದ್ರೀಕರಿಸಿದ ಸಮುದಾಯಗಳೊಂದಿಗೆ ಕೆಲಸ ಮಾಡುವಲ್ಲಿ ದೊಡ್ಡ ಅನುಭವವನ್ನು ಗಳಿಸಿದೆ. ಈ ಸವಾಲುಗಳನ್ನು ಎದುರಿಸುವುದು ನಮ್ಮ ಭವಿಷ್ಯದ ಉದ್ಯೋಗಿಗಳ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕತೆಯನ್ನು ಗಣನೀಯವಾಗಿ ಹೆಚ್ಚಿಸಬಹುದು,” ಎಂದು ಅದಾನಿ ಸಮೂಹವು ಹೇಳಿಕೆಯಲ್ಲಿ ತಿಳಿಸಿದೆ.

ಅದಾನಿ ತಂದೆಯ ಜನ್ಮ ಶತಮಾನೋತ್ಸವ ವರ್ಷ

“ನನ್ನ ಸ್ಪೂರ್ತಿದಾಯಕ ತಂದೆಯ 100ನೇ ಜನ್ಮ ವರ್ಷದ ಜತೆಗೆ, ಈ ವರ್ಷವು ನನ್ನ 60ನೇ ಹುಟ್ಟುಹಬ್ಬದ ವರ್ಷವಾಗಿದೆ. ಆದ್ದರಿಂದ ಕುಟುಂಬವು 60,000 ಕೋಟಿ ರೂಪಾಯಿಯನ್ನು ವಿಶೇಷವಾಗಿ ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಗೆ ಸಂಬಂಧಿಸಿದ ದತ್ತಿ ಚಟುವಟಿಕೆಗಳಿಗೆ ಮೀಸಲಿಡಲಿದೆ,” ಎಂದು ಗೌತಮ್ ಅದಾನಿ ಹೇಳಿದ್ದಾರೆ. ಶುಕ್ರವಾರ (ಜೂನ್ 24, 2022) 60 ವರ್ಷಕ್ಕೆ ಕಾಲಿಡುವ ಮೊದಲ ತಲೆಮಾರಿನ ಉದ್ಯಮಿ ಗೌತಮ್ ಅದಾನಿ ಅವರು ಮಾರ್ಕ್ ಝುಕರ್‌ಬರ್ಗ್ ಮತ್ತು ವಾರೆನ್ ಬಫೆಟ್‌ರಂತಹ ಜಾಗತಿಕ ಬಿಲಿಯನೇರ್‌ಗಳ ಶ್ರೇಣಿಯನ್ನು ಸೇರುತ್ತಾರೆ. ಅವರು ತಮ್ಮ ಸಂಪತ್ತಿನ ಹೆಚ್ಚಿನ ಭಾಗವನ್ನು ಜನರ ಉಪಯೋಗಕ್ಕಾಗಿ ಅರ್ಪಿಸಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ, ಸುಮಾರು 92 ಶತಕೋಟಿ ಯುಎಸ್​ಡಿ ನಿವ್ವಳ ಮೌಲ್ಯದೊಂದಿಗೆ, ಅದಾನಿ ಈ ವರ್ಷ ತನ್ನ ಸಂಪತ್ತಿಗೆ ಯುಎಸ್​ಡಿ 15 ಶತಕೋಟಿಯನ್ನು ಸೇರಿಸಿದ್ದಾರೆ.

“ನಾವು ಮುಂಬರುವ ತಿಂಗಳಲ್ಲಿ ಕಾರ್ಯತಂತ್ರವನ್ನು ರೂಪಿಸಲು ಮತ್ತು ಈ ಮೂರು ಕ್ಷೇತ್ರಗಳಲ್ಲಿ ಹಣ ಹಂಚಿಕೆಯನ್ನು ನಿರ್ಧರಿಸಲು ಮೂರು ತಜ್ಞರ ಸಮಿತಿಗಳನ್ನು ಆಹ್ವಾನಿಸುತ್ತೇವೆ,” ಎಂದು ಅವರು ಹೇಳಿದ್ದಾರೆ. ಸಮಿತಿಗಳು ಪೋಷಕ ಪಾತ್ರಗಳಲ್ಲಿ ಅದಾನಿ ಕುಟುಂಬದ ಸದಸ್ಯರನ್ನು ಹೊಂದಿರುತ್ತವೆ ಎಂದು ಸೇರಿಸಿದ್ದಾರೆ. “ಬಹಳ ಮೂಲಭೂತ ಮಟ್ಟದಲ್ಲಿ ಈ ಎಲ್ಲ ಮೂರು ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸಮಗ್ರವಾಗಿ ನೋಡಬೇಕು ಮತ್ತು ಸಮಾನ ಹಾಗೂ ಭವಿಷ್ಯಕ್ಕೆ ಸಿದ್ಧವಾಗಿರುವ ಭಾರತವನ್ನು ನಿರ್ಮಿಸಲು ಅವು ಒಟ್ಟಾಗಿ ಜನರನ್ನು ರೂಪಿಸುತ್ತವೆ. ದೊಡ್ಡ ಪ್ರಾಜೆಕ್ಟ್ ಮತ್ತು ಅನುಷ್ಠಾನದಲ್ಲಿನ ನಮ್ಮ ಅನುಭವ ಮತ್ತು ಅದಾನಿ ಫೌಂಡೇಷನ್ ಮಾಡಿದ ಕೆಲಸದ ಕಲಿಕೆಗಳು ಈ ಕಾರ್ಯಕ್ರಮಗಳನ್ನು ವಿಶಿಷ್ಟವಾಗಿ ವೇಗಗೊಳಿಸಲು ನಮಗೆ ಸಹಾಯ ಮಾಡುತ್ತದೆ,” ಎಂದಿದ್ದಾರೆ ಗೌತಮ್ ಅದಾನಿ.

ದಾನ ಮಾಡುವುದಕ್ಕೆ ವಯಸ್ಸಾಗುವ ತನಕ ಕಾಯಬೇಕಿಲ್ಲ

ಇದೇ ಸಂದರ್ಭದಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಅಧ್ಯಕ್ಷರು ಮತ್ತು ವಿಪ್ರೋ ಲಿಮಿಟೆಡ್‌ನ ಸಂಸ್ಥಾಪಕ ಅಧ್ಯಕ್ಷರು ಆದ ಅಜೀಂ ಪ್ರೇಮ್​ಜಿ ಮಾತನಾಡಿ, “ಗೌತಮ್ ಅದಾನಿ ಮತ್ತು ಅವರ ಕುಟುಂಬದ ಈ ಪರೋಪಕಾರದ ಬದ್ಧತೆಯು ನಾವೆಲ್ಲರೂ ಪ್ರಯತ್ನಿಸಬಹುದಾದ ಉದಾಹರಣೆ ಆಗಬೇಕು. ಮಹಾತ್ಮ ಗಾಂಧಿಯವರ ಸಂಪತ್ತಿನ ಹಂಚಿಕೆ ತತ್ವವನ್ನು ನಮ್ಮ ವ್ಯವಹಾರದ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಪ್ರಯತ್ನಿಸಬೇಕು ಮತ್ತು ಅದಕಕ್ಕಾಗಿ ನಮಗೆ ವಯಸ್ಸಾಗಲಿ ಎಂದು ಕಾಯಬೇಕಾಗಿಲ್ಲ. “ನಮ್ಮ ದೇಶದ ಸವಾಲುಗಳು ಮತ್ತು ಸಾಧ್ಯತೆಗಳು ಸಂಪತ್ತು, ಪ್ರದೇಶ, ಧರ್ಮ, ಜಾತಿ ಮತ್ತು ಹೆಚ್ಚಿನವುಗಳ ಎಲ್ಲ ವಿಭಜನೆಗಳನ್ನು ತುಂಡರಿಸಿ ನಾವು ಒಂದಾಗಿ ಕೆಲಸ ಮಾಡಬೇಕೆಂದು ಬಯಸುತ್ತವೆ,” ಎಂದು ಅವರು ಹೇಳಿದರು.

ಇದನ್ನೂ ಓದಿ: Top 10 Richest Indian 2021: ಗೌತಮ್ ಅದಾನಿಯ ಒಂದು ದಿನದ ಗಳಿಕೆಯೇ 1,002 ಕೋಟಿ ರೂಪಾಯಿ!

Follow us on

Related Stories

Most Read Stories

Click on your DTH Provider to Add TV9 Kannada