Gautam Adani: ವಾರೆನ್ ಬಫೆಟ್ರನ್ನು ಹಿಂದಿಕ್ಕಿ ವಿಶ್ವದ ಐದನೇ ಶ್ರೀಮಂತರಾದ ಗೌತಮ್ ಅದಾನಿ
ಗೌತಮ್ ಅದಾನಿ ಅವರು ಜನಪ್ರಿಯ ಹೂಡಿಕೆದಾರ ವಾರೆನ್ ಬಫೆಟ್ ಅವರನ್ನು ಮೀರಿ ವಿಶ್ವದ ಐದನೇ ಶ್ರೀಮಂತರಾಗಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ (Gautam Adani) ಪ್ರಸಿದ್ಧ ಹೂಡಿಕೆದಾರ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ವಿಶ್ವದ ಐದನೇ ಶ್ರೀಮಂತ ವ್ಯಕ್ತಿ ಆಗಿದ್ದಾರೆ. ಫೋರ್ಬ್ಸ್ ವರದಿ ಪ್ರಕಾರ, 59 ವರ್ಷ ವಯಸ್ಸಿನ ಅದಾನಿ ಅವರು ಶುಕ್ರವಾರದ ಮಾರುಕಟ್ಟೆಯ ಅಂತ್ಯದ ವೇಳೆಗೆ 123.7 ಬಿಲಿಯನ್ ಯುಎಸ್ಡಿ (12,370 ಕೋಟಿ ಯುಎಸ್ಡಿ) ನಿವ್ವಳ ಮೌಲ್ಯವನ್ನು ಹೊಂದಿದ್ದು, ಬಫೆಟ್ ಅವರ 121.7 ಬಿಲಿಯನ್ ಯುಎಸ್ಡಿ (12,170 ಕೋಟಿ ಯುಎಸ್ಡಿ) ಸಂಪತ್ತನ್ನು ದಾಟಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು 2022ರಲ್ಲಿ ತನ್ನ ಸಂಪತ್ತಿಗೆ 43 ಬಿಲಿಯನ್ ಯುಎಸ್ಡಿ ಸೇರಿಸಿದ್ದು, ಇದು ಅವರ ಪೋರ್ಟ್‌ಫೋಲಿಯೊದಲ್ಲಿ ಶೇ 56.2ರಷ್ಟು ಏರಿಕೆಯಾಗಿದೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ (ಯುಎಸ್ಡಿ 130.2 ಶತಕೋಟಿ), ಬರ್ನಾರ್ಡ್ ಅರ್ನಾಲ್ಟ್ (ಯುಎಸ್ಡಿ 167.9 ಶತಕೋಟಿ), ಜೆಫ್ ಬೆಜೋಸ್ (ಯುಎಸ್ಡಿ 170.2 ಶತಕೋಟಿ), ಮತ್ತು ಎಲಾನ್ ಮಸ್ಕ್ (ಯುಎಸ್ಡಿ 269.7 ಶತಕೋಟಿ) ವಿಶ್ವದ ನಾಲ್ಕು ಶ್ರೀಮಂತ ಉದ್ಯಮಿಗಳ ಹಿಂದೆ ಅದಾನಿ ಮಾತ್ರ ಈಗ ಇದ್ದಾರೆ. ಅದಾನಿಯವರ ಅಂದಾಜು ಯುಎಸ್ಡಿ 123.7 ಬಿಲಿಯನ್ ನಿವ್ವಳ ಮೌಲ್ಯವು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡುತ್ತದೆ.
ಗೌತಮ್ ಅದಾನಿ ಅವರು ಅದಾನಿ ಸಮೂಹದ ಅಧ್ಯಕ್ಷ ಮತ್ತು ಸಂಸ್ಥಾಪಕರಾಗಿದ್ದಾರೆ – ಈ ಸಮೂಹವು ವಿಮಾನ ನಿಲ್ದಾಣಗಳಿಂದ ಬಂದರುಗಳವರೆಗೆ ಮತ್ತು ವಿದ್ಯುತ್ ಉತ್ಪಾದನೆಯಿಂದ ವಿತರಣೆಯವರೆಗೆ ಹಲವಾರು ವ್ಯವಹಾರಗಳನ್ನು ನಡೆಸುತ್ತದೆ. ಇದು ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಪವರ್ ಸೇರಿದಂತೆ ಭಾರತದಲ್ಲಿ ಆರು ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪೆನಿಗಳನ್ನು ಹೊಂದಿದೆ. ಅದಾನಿ ಸಮೂಹವು ಏಪ್ರಿಲ್ 8ರಂದು ಅಬುಧಾಬಿ ಮೂಲದ ಇಂಟರ್ನ್ಯಾಷನಲ್ ಹೋಲ್ಡಿಂಗ್ ಕಂಪೆನಿ PJSC (IHC) ಮೂರು ಅದಾನಿ ಪೋರ್ಟ್ಫೋಲಿಯೊ ಕಂಪೆನಿಗಳಲ್ಲಿ ಯುಎಸ್ಡಿ 2 ಬಿಲಿಯನ್ ಹೂಡಿಕೆ ಮಾಡಿದೆ – ಅದಾನಿ ಗ್ರೀನ್ ಎನರ್ಜಿ (AGEL), ಅದಾನಿ ಟ್ರಾನ್ಸ್ಮಿಷನ್ (ATL) ಮತ್ತು ಅದಾನಿ ಎಂಟರ್‌ಪ್ರೈಸಸ್ (AEL).
ಕಳೆದ ವಾರ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮಾತನಾಡಿ, 2050ರ ವೇಳೆಗೆ ದೇಶವು ಯುಎಸ್ಡಿ 30-ಟ್ರಿಲಿಯನ್ ಆರ್ಥಿಕತೆಯಾದರೆ ಯಾರೂ ಖಾಲಿ ಹೊಟ್ಟೆಯಲ್ಲಿ ಮಲಗದ ರಾಷ್ಟ್ರ ಆಗಬಹುದು ಎಂದಿದ್ದಾರೆ.”ನಾವು 2050ನೇ ಇಸವಿಯಿಂದ ಸುಮಾರು 10,000 ದಿನಗಳ ದೂರದಲ್ಲಿದ್ದೇವೆ. ಈ ಅವಧಿಯಲ್ಲಿ ನಮ್ಮ ಆರ್ಥಿಕತೆಗೆ ಸುಮಾರು ಯುಎಸ್ಡಿ 25 ಟ್ರಿಲಿಯನ್ ಅನ್ನು ಸೇರಿಸುತ್ತೇವೆ ಎಂದು ನಿರೀಕ್ಷಿಸುತ್ತೇನೆ. ಇದು ಪ್ರತಿ ದಿನ ಜಿಡಿಪಿಗೆ ಯುಎಸ್ಡಿ 2.5 ಶತಕೋಟಿಯ ಸೇರ್ಪಡೆಯಾಗಿದೆ. ನಾನು ಇದನ್ನು ನಿರೀಕ್ಷಿಸುತ್ತೇನೆ. ಈ ಅವಧಿಯಲ್ಲಿ ನಾವು ಎಲ್ಲ ರೀತಿಯ ಬಡತನವನ್ನು ನಿರ್ಮೂಲನೆ ಮಾಡುತ್ತೇವೆ,” ಎಂದು ಹೇಳಿದ್ದಾರೆ.
ಇದನ್ನೂ ಓದಿ: Top 10 Richest Indian 2021: ಗೌತಮ್ ಅದಾನಿಯ ಒಂದು ದಿನದ ಗಳಿಕೆಯೇ 1,002 ಕೋಟಿ ರೂಪಾಯಿ!