ಚಿನ್ನ, ಬೆಳ್ಳಿ ಬೆಲೆಗಳು ಎಷ್ಟು ಕಡಿಮೆ ಆಗಬಹುದು? ಇಲ್ಲಿದೆ ತಜ್ಞರ ಅಂದಾಜು
Gold and silver, probability of price correction: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಎಗ್ಗಿಲ್ಲದೇ ಏರುತ್ತಿರುವಂತೆಯೇ ಜನರು ಇವುಗಳನ್ನು ಖರೀದಿಸಲು ಮುಗಿಬೀಳುತ್ತಲೇ ಇದ್ದಾರೆ. ಇದೇ ವೇಳೆ, ಇವುಗಳ ಬೆಲೆ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಬಹುದು ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ. ದಿನ ದಿನಗಳಲ್ಲಿ ಪ್ರೈಸ್ ಕರೆಕ್ಷನ್ ಆಗಬಹುದಾದರೂ ಅದು ಸೀಮಿತ ಪ್ರಮಾಣದಲ್ಲಿ ಮಾತ್ರವಾ? ತಜ್ಞರ ಅನಿಸಿಕೆ ಇಲ್ಲಿದೆ...

ಬೆಂಗಳೂರು, ಅಕ್ಟೋಬರ್ 16: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಭಾರೀ ಏರಿಕೆ ಪಡೆದು ನಿರಂತರವಾಗಿ ಸಾರ್ವಕಾಲಿಕ ದಾಖಲೆ ಮುರಿಯುತ್ತಲೇ ಹೋಗುತ್ತಿವೆ. ಭಾರತದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಈ ಅಮೂಲ್ಯ ಲೋಹಗಳಿಗೆ ಬೇಡಿಕೆ ವಿಪರೀತ ಹೆಚ್ಚುತ್ತಿದೆ. ಇದೇ ವೇಳೆ, ಇವುಗಳ ಬೆಲೆ (gold and silver rates) ಗಣನೀಯವಾಗಿ ಕುಸಿಯಬಹುದು ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ. 13,000 ರೂ ಸಮೀಪ ಇರುವ ಚಿನ್ನದ ಬೆಲೆ 8-9 ಸಾವಿರ ರೂ ಮುಟ್ಟಬಹುದು ಎನ್ನುವ ವದಂತಿ ಹಬ್ಬಿದೆ. ಹಾಗೆಯೇ, ಬೆಳ್ಳಿ ಬೆಲೆ ಅರ್ಧದಷ್ಟು ಕಡಿಮೆ ಆಗಬಹುದು ಎಂಬ ಊಹಾಪೋಹಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ವಾಸ್ತವವಾಗಿ ಇವುಗಳ ಬೆಲೆ ಇಷ್ಟು ವೇಗವಾಗಿ ಹೆಚ್ಚುತ್ತಿರುವುದು ಯಾಕೆ, ದೊಡ್ಡ ಮಟ್ಟದಲ್ಲಿ ಬೆಲೆ ಕುಸಿತ ಆಗಬಹುದಾ ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಚಿನ್ನದ ಬೆಲೆ ಎಷ್ಟು ಇಳಿಯಬಹುದು?
ಯಾವುದೇ ಬೆಲೆ ಅಸ್ವಾಭಾವಿಕವಾಗಿ ಹೆಚ್ಚಾದರೆ ಅದು ಕುಸಿಯಲೇಬೇಕು. ಆದರೆ, ಚಿನ್ನ ಬಹಳ ಸೀಮಿತವಾಗಿ ದೊರಕುವ ಒಂದು ಲೋಹ. ಇದರ ಬೆಲೆ ಅಸ್ವಾಭಾವಿಕವಾಗಿ ಏರಿಕೆ ಆಗಿದೆಯಾದರೂ ಅದು ತೀಕ್ಷ್ಣವಾಗಿ ತಗ್ಗುವ ಸಾಧ್ಯತೆ ಕಡಿಮೆ.
ಇದನ್ನೂ ಓದಿ: Gold Rate Today: ಬೆಳ್ಳಿ ಬೆಲೆ ಇಳಿಕೆ; ಚಿನ್ನದ ಬೆಲೆ ಅಲ್ಪ ಏರಿಕೆ
ಜೂಲಿಯಸ್ ಬಾಯರ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮಿಲಿಂದ್ ಮುಚ್ಚಾಲ ಅವರ ಪ್ರಕಾರ ಚಿನ್ನದ ಬೆಲೆ ತೀಕ್ಷ್ಣವಾಗಿ ಇಳಿಕೆ ಆಗುವ ಸಾಧ್ಯತೆ ಕಡಿಮೆ. ಹೆಚ್ಚೆಂದರೆ 10-20 ಪ್ರತಿಶತದಷ್ಟು ಬೆಲೆ ಕಡಿಮೆ ಆಗಬಹುದು. ಜಾಗತಿಕ ಪರಿಸ್ಥಿತಿಯನ್ನು ಗಮನಿಸಿದರೆ ಇದಕ್ಕಿಂತ ಹೆಚ್ಚು ಬೆಲೆ ಇಳಿಕೆ ಸಾಧ್ಯತೆ ಇಲ್ಲ ಎಂಬುದು ಅವರ ಅನಿಸಿಕೆ. ಇನ್ನೊಂದು ಸಂಗತಿ ಎಂದರೆ, ಚಿನ್ನದ ಬೆಲೆ ಇಳಿಕೆ ಆದರೆ, ಬಹಳ ಬೇಗ ಮತ್ತೆ ಹೊಸ ಎತ್ತರಕ್ಕೆ ಹೋಗುವ ಅವಕಾಶ ಹೆಚ್ಚು.
ಬೆಳ್ಳಿ ಬೆಲೆ ಎಷ್ಟು ಇಳಿಯಬಹುದು?
ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿ ಮಾರುಕಟ್ಟೆ ಬಹಳ ಚಿಕ್ಕದು. ಆದರೆ, ಬೆಳ್ಳಿ ಅಲಂಕಾರಿಕ ವಸ್ತು ಮಾತ್ರವಲ್ಲ, ಕೈಗಾರಿಕೆಗಳಿಗೆ ಬೇಕಾಗಿರುವ ವಸ್ತುವೂ ಹೌದು. ಚಿನ್ನದ ಜೊತೆಗೆ ಹೂಡಿಕೆದಾರರು ಬೆಳ್ಳಿಗೂ ಲಗ್ಗೆ ಹಾಕುತ್ತಿರುವುದರಿಂದ ಇದಕ್ಕೆ ಬೇಡಿಕೆ ವಿಪರೀತ ಹೆಚ್ಚಿದೆ. ಬೆಳ್ಳಿಯ ಕೊರತೆ ಸೃಷ್ಟಿಯಾಗಿದೆ. ಬೇಡಿಕೆಗೆ ತಕ್ಕಷ್ಟು ಸರಬರಾಜು ಇಲ್ಲವಾಗಿದೆ. ಹೀಗಾಗಿ, ಬೆಳ್ಳಿ ಬೆಲೆ ಕಳೆದ ಕೆಲ ತಿಂಗಳಲ್ಲಿ ಶೇ. 70ಕ್ಕಿಂತಲೂ ಹೆಚ್ಚಾಗಿದೆ.
ಇದನ್ನೂ ಓದಿ: ಈ ವರ್ಷ ಬಿಗ್ ಕ್ರ್ಯಾಷ್; ಕರೆನ್ಸಿಗೆ ಇರಲ್ಲ ಮೌಲ್ಯ; ಚಿನ್ನ, ಬೆಳ್ಳಿ, ಬಿಟ್ಕಾಯಿನ್ನಂತಹ ಆಸ್ತಿಗಳಿಗೆ ಉಳಿಗಾಲ: ಕಿಯೋಸಾಕಿ
ಆದರೆ, ಬೆಳ್ಳಿ ಬೆಲೆ ಇಳಿಕೆ ಸಾಧ್ಯತೆ ವಿಚಾರಕ್ಕೆ ಬರುವುದಾದರೆ, ಪ್ರಸಕ್ತ ಬೆಲೆಯುಬ್ಬರಕ್ಕೆ ಕಾರಣವಾಗಿರುವುದು ಹೂಡಿಕೆಗಳೆಯೇ. ಈ ಹೂಡಿಕೆ ವಾಪಸ್ ಹೋದರೆ ಬೆಳ್ಳಿ ಬೆಲೆ ಝರ್ರೆಂದು ಜಾರಬಹುದು. ಇಷ್ಟು ದಿಢೀರನೆ ಬೆಳ್ಳಿ ಬೆಲೆ ಜಾರದಂತೆ ಸೆಂಟ್ರಲ್ ಬ್ಯಾಂಕುಗಳು ಬಿಡದೇ ಹೋಗಬಹುದು.
ಬ್ಯಾಂಕ್ ಆಫ್ ಅಮೆರಿಕವು 2026ರಕ್ಕೆ ಬೆಳ್ಳಿಗೆ ದೊಡ್ಡ ಪ್ರೈಸ್ ಟಾರ್ಗೆಟ್ ಇಟ್ಟಿದೆ. ಔನ್ಸ್ಗೆ 44 ರೂ ಇರುವ ಬೆಳ್ಳಿ ಬೆಲೆ 2026ಕ್ಕೆ 65 ರೂಗೆ ಏರಬಹುದು ಎಂದು ಅದು ನಿರೀಕ್ಷಿಸಿದೆ. ಅಂದರೆ, ಇನ್ನೊಂದು ವರ್ಷದಲ್ಲಿ ಬೆಳ್ಳಿ ಬೆಲೆ ಮತ್ತಷ್ಟು ಶೇ. 50 ಹೆಚ್ಚಳ ಆಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




