ಆಂಧ್ರ ನೋಡಿ ಕೆಲವರಿಗೆ ಉರಿ..! ನಗುತ್ತಲೇ ಕರ್ನಾಟಕವನ್ನು ತಿವಿದ ಆಂಧ್ರ ಸಚಿವ ನರ ಲೋಕೇಶ್
Andhra minister Nara Lokesh trolls Karnataka indirectly: ಗೂಗಲ್ನಿಂದ ಆಂಧ್ರದಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆಯಲ್ಲಿ ಎಐ ಹಬ್ ಯೋಜನೆ ಪ್ರಕಟವಾಗಿದೆ. ಇದರ ಬೆನ್ನಲ್ಲೇ ಆಂಧ್ರ ಸಚಿವ ನರ ಲೋಕೇಶ್ ಎಕ್ಸ್ ಪೋಸ್ಟ್ನಲ್ಲಿ ಪಕ್ಕದ ರಾಜ್ಯಗಳನ್ನು ಕಿಚಾಯಿಸಿದ್ದಾರೆ. ಆಂಧ್ರದ ಊಟದಂತೆ ಹೂಡಿಕೆಯೂ ಸ್ಪೈಸಿ. ನೆರೆ ರಾಜ್ಯದವರಿಗೆ ಉರಿ ಶುರುವಾಗಿದೆ ಎಂದಿದ್ದಾರೆ.

ವೈಜಾಗ್, ಅಕ್ಟೋಬರ್ 16: ಹೂಡಿಕೆದಾರರನ್ನು ಸೆಳೆಯುವ ವಿಚಾರದಲ್ಲಿ ರಾಜ್ಯ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗುತ್ತಿದೆ. ಆಂಧ್ರಪ್ರದೇಶ ಬಹಳ ಉತ್ಸಾಹ ತೋರುತ್ತಿದೆ. ಗೂಗಲ್ನಿಂದ 15 ಬಿಲಿಯನ್ ಡಾಲರ್ ಹೂಡಿಕೆ ಹರಿದುಬರಲಿರುವುದು (Google investments) ಆಂಧ್ರಕ್ಕೆ ಹೊಸ ಉತ್ಸಾಹದ ಅಲೆಯನ್ನೇ ಎಬ್ಬಿಸಿದೆ. ಇದೇ ಉತ್ಸಾಹದ ಭರದಲ್ಲಿ ಆಂಧ್ರ ಐಟಿ ಸಚಿವ ನರ ಲೋಕೇಶ್, ಕರ್ನಾಟಕ ವಿರುದ್ಧ ಪರೋಕ್ಷವಾಗಿ ವ್ಯಂಗ್ಯಾಸ್ತ್ರ ಪ್ರಯೋಗಿಸಿದ್ದಾರೆ. ಎಕ್ಸ್ ಪೋಸ್ಟ್ನಲ್ಲಿ ಅವರು ಆಂಧ್ರಕ್ಕೆ ಹೂಡಿಕೆ ಹರಿದುಬರುತ್ತಿರುವುದು ಕೆಲ ನೆರೆಯ ರಾಜ್ಯಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.
‘ಆಂಧ್ರದ ಊಟ ಸ್ಪೈಸಿ ಎಂದು ಹೇಳುತ್ತಾರೆ. ನಮ್ಮ ಕೆಲ ಹೂಡಿಕೆಗಳೂ ಕೂಡ ಸ್ಪೈಸಿಯೇ ಎನಿಸಬಹುದು. ಕೆಲ ನೆರೆಹೊರೆಯವರಿಗೆ ಉರಿ ಹತ್ತಿಕೊಳ್ಳುತ್ತಿದೆ’ ಎಂದು ನರ ಲೋಕೇಶ್ ಹೇಳಿದ್ದಾರೆ. ಇಲ್ಲಿ ಕರ್ನಾಟಕ ಮತ್ತು ತೆಲಂಗಾಣದ ಹೆಸರೆತ್ತದೆಯೇ ಈ ಎರಡು ರಾಜ್ಯಗಳನ್ನು ನರ ಲೋಕೇಶ್ ಮೂದಲಿಸಿದ್ದಾರೆ.
ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಐಎಂಎಫ್ನಿಂದಲೂ ನಿರೀಕ್ಷೆ ಹೆಚ್ಚಳ; ಶೇ. 6.4ರಿಂದ ಶೇ. 6.6ಕ್ಕೆ ಅಂದಾಜು ಪರಿಷ್ಕರಣೆ
ಕರ್ನಾಟಕ ಮತ್ತು ಆಂಧ್ರ ನಡುವೆ ಪೈಪೋಟಿ…
ಆಂಧ್ರದ ವೈಜಾಗ್ನಲ್ಲಿ ಗೂಗಲ್ ಸಂಸ್ಥೆ 15 ಬಿಲಿಯನ್ ಡಾಲರ್ ಹೂಡಿಕೆಯಲ್ಲಿ ಡಾಟಾ ಸೆಂಟರ್ ಸೇರಿದಂತೆ ಎಐ ಹಬ್ ನಿರ್ಮಿಸಲು ಹೊರಟಿದೆ. ಇದಕ್ಕೆ ಆಂಧ್ರ ಸರ್ಕಾರ ಸಬ್ಸಿಡಿ ದರದಲ್ಲಿ ನೆಲ, ವಿದ್ಯುತ್, ನೀರು ಇತ್ಯಾದಿ ಸೌಕರ್ಯ ಒದಗಿಸುವ ಭರವಸೆ ನೀಡಿದೆ. ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಆಂಧ್ರದ ಈ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ನರ ಲೋಕೇಶ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಕೆಲ ನೆರೆಹೊರೆಯವರಿಗೆ ಉರಿ ಶುರುವಾಗಿದೆ ಎಂದು ಹೇಳಿದ್ದಿರಬಹುದು.
ನರ ಲೋಕೇಶ್ ಅವರ ಎಕ್ಸ್ ಪೋಸ್ಟ್
They say Andhra food is spicy. Seems some of our investments are too. Some neighbours are already feeling the burn! 🌶️🔥 #AndhraRising #YoungestStateHighestInvestment
— Lokesh Nara (@naralokesh) October 16, 2025
ಸಚಿವರಾಗಿ ನರ ಲೋಕೇಶ್ ಅವರು, ಆಂಧ್ರದಲ್ಲಿ ಹೂಡಿಕೆ ಮಾಡುವಂತೆ ವಿವಿಧ ಉದ್ದಿಮೆಗಳಿಗೆ ಆಹ್ವಾನ ಕೊಡುತ್ತಲೇ ಇರುತ್ತಾರೆ. ಯಾವುದೇ ಹೊಸ ಹೂಡಿಕೆಗಳ ಪ್ರಸ್ತಾಪವಾದರೂ ಆಂಧ್ರಕ್ಕೆ ಗಿಟ್ಟಿಸಲು ಪ್ರಯತ್ನಿಸುತ್ತಿರುತ್ತಾರೆ.
ಇದನ್ನೂ ಓದಿ: ಭಾರತದಲ್ಲಿ ಗೂಗಲ್ನಿಂದ ಬೃಹತ್ ಎಐ ಹಬ್; 15 ಬಿಲಿಯನ್ ಡಾಲರ್ ಹೂಡಿಕೆ; ಪ್ರಧಾನಿ ಮೋದಿ ಸ್ವಾಗತ
ಬೆಂಗಳೂರಿನ ಕಂಪನಿಯೊಂದರ ಸಿಇಒ ತಾನು ಸಿಲಿಕಾನ್ ಸಿಟಿಯ ಟ್ರಾಫಿಕ್ನ ಬಗ್ಗೆ ಬೇಸರ ವ್ಯಕ್ತಪಡಿಸಿ, ತಮ್ಮ ಕಂಪನಿಯನ್ನು ಬೇರೆಡೆ ಸ್ಥಳಾಂತರ ಮಾಡಲಿರುವುದಾಗಿ ಹೇಳಿದ್ದರು. ಆಗಲೂ ಕೂಡ ಆಂಧ್ರವು ತಮ್ಮಲ್ಲಿಗೆ ಬರಬೇಕೆಂದು ಆ ಕಂಪನಿಗೆ ಆಹ್ವಾನ ಕೊಟ್ಟಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:25 pm, Thu, 16 October 25




