GST Collection: ಸೆಪ್ಟೆಂಬರ್ ತಿಂಗಳಲ್ಲಿ 1.17 ಲಕ್ಷ ಕೋಟಿ ರೂಪಾಯಿ ಸಂಗ್ರಹ
2021ರ ಸೆಪ್ಟೆಂಬರ್ ತಿಂಗಳಿಗೆ ಜಿಎಸ್‌ಟಿ ಸಂಗ್ರಹ ಮೊತ್ತವು ರೂ. 1.17 ಲಕ್ಷ ಕೋಟಿ ಆಗಿದೆ. ಆ ಬಗ್ಗೆ ಸಂಪೂರ್ಣ ವಿವರವು ಇಲ್ಲಿದೆ.
2021ರ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹ 1,17,010 ಕೋಟಿ ರೂಪಾಯಿ ಆಗಿದೆ. ಒಟ್ಟು ಮೊತ್ತದಲ್ಲಿ 20,578 ಕೋಟಿ ರೂಪಾಯಿ ಸಿಜಿಎಸ್ಟಿ, ರೂ. 26,767 ಕೋಟಿ ಎಸ್ಜಿಎಸ್ಟಿ, ರೂ. 60,911 ಕೋಟಿ ಐಜಿಎಸ್ಟಿ (ಸರಕುಗಳ ಆಮದು ಮೇಲೆ ಸಂಗ್ರಹಿಸಿದ ರೂ 29,555 ಕೋಟಿ ಸೇರಿದಂತೆ) ಒಳಗೊಂಡಿದೆ. ಸೆಸ್ 8,754 ಕೋಟಿ ರೂಪಾಯಿ (ಸರಕುಗಳ ಆಮದು ಮೇಲೆ ಸಂಗ್ರಹಿಸಿದ ರೂ. 623 ಕೋಟಿ ಸೇರಿದಂತೆ) ಇದೆ. ಇನ್ನು 2021ರ ಸೆಪ್ಟೆಂಬರ್ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿ ಜಿಎಸ್‌ಟಿ ಆದಾಯಕ್ಕಿಂತ ಶೇ 23ರಷ್ಟು ಹೆಚ್ಚಾಗಿದೆ. ಸರ್ಕಾರವು ಸಿಜಿಎಸ್‌ಟಿಗೆ ರೂ. 28,812 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ ರೂ. 24,140 ಕೋಟಿಯನ್ನು ಐಜಿಎಸ್‌ಟಿಯಿಂದ ನಿಯಮಿತ ಪರಿಹಾರವಾಗಿ ಇತ್ಯರ್ಥಪಡಿಸಿದೆ. 2021ರ ಸೆಪ್ಟೆಂಬರ್ನಲ್ಲಿ ಸಾಮಾನ್ಯ ಸೆಟ್ಲ್ಮೆಂಟ್ ನಂತರ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು CGSTಗೆ 49,390 ಕೋಟಿ ಮತ್ತು SGSTಗೆ 50,907 ಕೋಟಿ ರೂಪಾಯಿ ಇದೆ.
ಈ ತಿಂಗಳಲ್ಲಿ ಸರಕುಗಳ ಆಮದಿನ ಆದಾಯವು ಶೇ 30ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟುಗಳ ಆದಾಯ (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇ 20ರಷ್ಟು ಹೆಚ್ಚಾಗಿದೆ. 2020ರ ಸೆಪ್ಟೆಂಬರ್ ಆದಾಯವು 2019ರ ಸೆಪ್ಟೆಂಬರ್ ಆದಾಯಕ್ಕಿಂತ ಶೇ 4ರಷ್ಟು ಬೆಳವಣಿಗೆಯಾಗಿದ್ದು, ಆಗ 91,916 ಕೋಟಿ ರೂಪಾಯಿ ಇತ್ತು. ಪ್ರಸಕ್ತ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸರಾಸರಿ ಮಾಸಿಕ ಒಟ್ಟು ಜಿಎಸ್‌ಟಿ ಸಂಗ್ರಹ 1.15 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇದು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರಾಸರಿ ಮಾಸಿಕ 1.10 ಲಕ್ಷ ಕೋಟಿ ಸಂಗ್ರಹಕ್ಕಿಂತ ಶೇ 5ರಷ್ಟು ಹೆಚ್ಚಾಗಿದೆ. ಆರ್ಥಿಕತೆಯು ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಆರ್ಥಿಕ ಬೆಳವಣಿಗೆ, ವಂಚನೆ-ವಿರೋಧಿ ಚಟುವಟಿಕೆಗಳ ಜೊತೆಯಲ್ಲಿ ವಿಶೇಷವಾಗಿ ನಕಲಿ ಬಿಲ್ಲರ್‌ಗಳ ವಿರುದ್ಧದ ಕ್ರಮವು ಹೆಚ್ಚಿದ ಜಿಎಸ್‌ಟಿ ಸಂಗ್ರಹಕ್ಕೆ ಕೊಡುಗೆ ನೀಡುತ್ತಿದೆ. ಆದಾಯದಲ್ಲಿ ಸಕಾರಾತ್ಮಕ ಪ್ರವೃತ್ತಿ ಮುಂದುವರಿಯುತ್ತದೆ ಮತ್ತು ವರ್ಷದ ದ್ವಿತೀಯಾರ್ಧವು ಹೆಚ್ಚಿನ ಆದಾಯವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಜಿಎಸ್‌ಟಿ ಆದಾಯದ ಅಂತರವನ್ನು ಪೂರೈಸಲು ರಾಜ್ಯಗಳಿಗೆ 22,000 ಕೋಟಿ ರೂಪಾಯಿಯನ್ನು ಕೇಂದ್ರವು ಜಿಎಸ್‌ಟಿ ಪರಿಹಾರ ಬಿಡುಗಡೆ ಮಾಡಿದೆ.
ಇಬ್ಬರು ಸಚಿವರ ತಂಡವು ತೆರಿಗೆ ದರಗಳು, ಸ್ಲ್ಯಾಬ್‌ಗಳು, ವಿನಾಯಿತಿಗಳ ಪಟ್ಟಿ ಮತ್ತು ಭಾರತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಡಳಿತದ ಅಡಿಯಲ್ಲಿ ನಿಯಮಾವಳಿಗಳನ್ನು ಸುಧಾರಿಸಲು ತಂತ್ರಜ್ಞಾನದ ಬಳಕೆಯಲ್ಲಿ ಕೆಲಸ ಮಾಡುತ್ತಿದೆ. ಇದು ಅದರ ಮೊದಲ ಮಹತ್ವದ ರಚನಾತ್ಮಕ ಬದಲಾವಣೆಗೆ ಕಾರಣವಾಗಿದೆ. ಎರಡು ಪ್ಯಾನೆಲ್ಗಳನ್ನು ಸರ್ಕಾರ ಕಳೆದ ವಾರ ರಚಿಸಿದ್ದು, ಒಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇನ್ನೊಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದಲ್ಲಿ ರಚಿಸಲಾಗಿದೆ.
ಇದನ್ನೂ ಓದಿ: GST Filing: ಜಿಎಸ್‌ಟಿ ಮರುಪಾವತಿಗೆ ಕ್ಲೇಮ್ ಮಾಡುವುದಕ್ಕೆ ತೆರಿಗೆದಾರರ ಆಧಾರ್ ದೃಢೀಕರಣ ಕಡ್ಡಾಯಗೊಳಿಸಿದ ಸಿಬಿಐಸಿ