ಮೂರು ವರ್ಷಕ್ಕಿಂತ ಹಿಂದಿನ ಜಿಎಸ್​​ಟಿ ಸಲ್ಲಿಸದವರಿಗೆ ಜೂನ್ 30 ಡೆಡ್​​ಲೈನ್; ಕಾನೂನು ಕ್ರಮದ ಜೊತೆಗೆ ಟ್ಯಾಕ್ಸ್ ಕ್ರೆಡಿಟ್ ಅವಕಾಶ ಇರಲ್ಲ

Deadline for filing over 3 year old GST returns is June 30th: ಜುಲೈ 1ರಿಂದ ಹೊಸ ಜಿಎಸ್​​ಟಿ ನಿಯಮ ಜಾರಿಗೆ ಬರಲಿದೆ. ಮೂರು ವರ್ಷಕ್ಕಿಂತ ಹಳೆಯ ಜಿಎಸ್​​ಟಿ ಫೈಲ್ ಮಾಡಲು ಅವಕಾಶ ಇರುವುದಿಲ್ಲ. ಇಷ್ಟು ಹಳೆಯ ಜಿಎಸ್​​ಟಿ ಫೈಲಿಂಗ್ ಬಾಕಿ ಉಳಿಸಿಕೊಂಡಿರುವವರಿಗೆ 2025ರ ಜೂನ್ 30 ಡೆಡ್​​ಲೈನ್ ನೀಡಲಾಗಿದೆ. ಈ ಗಡುವು ದಾಟಿದರೆ, ಹಳೆಯ ಜಿಎಸ್​​ಟಿಗೆ ನೀವು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಸಾಧ್ಯವಾಗುವುದಿಲ್ಲ.

ಮೂರು ವರ್ಷಕ್ಕಿಂತ ಹಿಂದಿನ ಜಿಎಸ್​​ಟಿ ಸಲ್ಲಿಸದವರಿಗೆ ಜೂನ್ 30 ಡೆಡ್​​ಲೈನ್; ಕಾನೂನು ಕ್ರಮದ ಜೊತೆಗೆ ಟ್ಯಾಕ್ಸ್ ಕ್ರೆಡಿಟ್ ಅವಕಾಶ ಇರಲ್ಲ
ಜಿಎಸ್​​ಟಿ

Updated on: Jun 08, 2025 | 11:47 AM

ನವದೆಹಲಿ, ಜೂನ್ 8: ಮೂರು ವರ್ಷಕ್ಕಿಂತ ಪೂರ್ವದ ಜಿಎಸ್​​ಟಿ (GST) ಸಲ್ಲಿಸದೇ ಬಾಕಿ ಉಳಿಸಿಕೊಂಡಿರುವವರಿಗೆ ಈ ತಿಂಗಳ ಕೊನೆಯವರೆಗೆ ಅವಕಾಶ ಕೊಡಲಾಗಿದೆ. ಇಷ್ಟು ಹಳೆಯ ಜಿಎಸ್​​ಟಿ ಫೈಲ್ ಮಾಡಲು ಜೂನ್ 30ಕ್ಕೆ ಡೆಡ್​​ಲೈನ್ ನಿಗದಿ ಮಾಡಲಾಗಿದೆ. ಜುಲೈ 1ರಿಂದ ನೀವು ಆ ಮೂರು ವರ್ಷದ ಹಿಂದಿನ ಜಿಎಸ್​​ಟಿ ರಿಟರ್ನ್ಸ್ ಸಲ್ಲಿಸಲು ಆಗುವುದಿಲ್ಲ. ಒಂದು ವೇಳೆ, ನೀವು ಜೂನ್ 30ರೊಳಗೆ ಜಿಎಸ್​​ಟಿ ಸಲ್ಲಿಸದೇ ಇದ್ದರೆ ಆ ತೆರಿಗೆಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ಸಿಕ್ಕೋದಿಲ್ಲ. ಇದರ ಜೊತೆಗೆ, ತೆರಿಗೆ ಅಧಿಕಾರಿಗಳು ನಿಮ್ಮ ಮೇಲೆ ಕ್ರಮಕ್ಕೆ ಮುಂದಾಗಬಹುದು.

ಜುಲೈ 1ರಿಂದ ನೀವು ಮೂರು ವರ್ಷದವರೆಗೆ ಮಾತ್ರ ಜಿಎಸ್​​ಟಿ ಸಲ್ಲಿಸಲು ಅವಕಾಶ ಇರುತ್ತದೆ. ಅದಕ್ಕೂ ಹಿಂದಿನ ತೆರಿಗೆಗೆ ರಿಟರ್ನ್ ಫೈಲ್ ಮಾಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಮೂರು ವರ್ಷದ ವಿಂಡೋವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಂದರೆ, ಅದು ಎರಡು ವರ್ಷಕ್ಕೆ ಸೀಮಿತಗೊಳ್ಳಬಹುದು. ಅಥವಾ ಒಂದು ವರ್ಷಕ್ಕೂ ಸೀಮಿತಗೊಳ್ಳಬಹುದು. ಒಂದು ವೇಳೆ ಎರಡು ವರ್ಷಕ್ಕೆ ಈ ವಿಂಡೋ ಸೀಮಿತಗೊಳಿಸಲು ನಿರ್ಧರಿಸಿದರೆ ನೀವು ಎರಡು ವರ್ಷದಷ್ಟು ಹಿಂದಿನ ಜಿಎಸ್​​ಟಿ ರಿಟರ್ನ್ ಫೈಲ್ ಮಾಡಲು ಆಗುವುದಿಲ್ಲ. ಸದ್ಯ ಇದು ಮೂರು ವರ್ಷ ಇದೆ. ಇವತ್ತಿನ (2025ರ ಜೂನ್) ಜಿಎಸ್​​ಟಿ ರಿಟರ್ನ್ ಅನ್ನು ಸಲ್ಲಿಸಲು ನೀವು 2028ರ ಜೂನ್​​ವರೆಗೂ ಸಮಯಾವಕಾಶ ಹೊಂದಿರುತ್ತೀರಿ.

ಇದನ್ನೂ ಓದಿ: ಆರ್​​ಬಿಐ ಸಿಆರ್​​ಆರ್ ಕಡಿತದಿಂದ ಲಕ್ಷಾಂತರ ಕೋಟಿ ರೂ ಹಣದ ಹರಿವಿನ ನಿರೀಕ್ಷೆ; ಇದು ಹೇಗೆ ಸಾಧ್ಯ?

ಏನಿದು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್?

ನೀವು ಒಂದು ಉತ್ಪನ್ನ ತಯಾರಿಸಬೇಕಾದರೆ ಕಚ್ಛಾ ವಸ್ತುಗಳನ್ನು ಖರೀದಿಸುವಾಗ ತೆರಿಗೆ ಪಾವತಿಸಿರುತ್ತೀರಿ. ಆದರೆ, ನಿಮ್ಮ ಉತ್ಪನ್ನ ಮಾರುವಾಗಲೂ ನೀವು ತೆರಿಗೆ ಪಾವತಿಸುತ್ತೀರಿ. ಒಂದೇ ಉತ್ಪನ್ನಕ್ಕೆ ನೀವು ಎರಡೆರಡು ಬಾರಿ ಟ್ಯಾಕ್ಸ್ ಕಟ್ಟಿದಂತಾಗುತ್ತದೆ. ಇದನ್ನು ತಪ್ಪಿಸಲು ಸರ್ಕಾರವು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ಒದಗಿಸಿದೆ. ನೀವು ಕಚ್ಛಾ ವಸ್ತುಗಳ ಖರೀದಿ ವೇಳೆ ಪಾವತಿಸಿದ ತೆರಿಗೆ ಮೊತ್ತವನ್ನು ಮರಳಿ ಪಡೆಯಬಹುದು. ಇದನ್ನೇ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಎನ್ನುವುದು. ಇದನ್ನು ಪಡೆಯಬೇಕಾದರೆ ನೀವು ಜಿಎಸ್​​ಟಿ ರಿಟರ್ನ್ ಫೈಲ್ ಮಾಡಬೇಕು.

ಜಿಎಸ್​​ಟಿ ರಿಟರ್ನ್ ಫೈಲ್ ಮಾಡುವುದು ಹೇಗೆ?

ವ್ಯಾಪಾರಸ್ಥರಾದವರಿಗೆ ಜಿಎಸ್​​ಟಿ ಅನ್ವಯ ಆಗುತ್ತದೆ. ಜಿಎಸ್​​ಟಿ ನೊಂದಾವಣಿ ಮಾಡಿಸಿರಬೇಕು. ಹೀಗಿದ್ದಾಗ, ನೀವು ಈ ಕ್ರಮ ಅನುಸರಿಸಿ ಜಿಎಸ್​​ಟಿ ರಿಟರ್ನ್ ಫೈಲ್ ಮಾಡಬಹುದು. ಅದಕ್ಕೆ ಮುನ್ನ ಎಲ್ಲಾ ಇನ್ವಾಯ್ಸ್ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.

ಇದನ್ನೂ ಓದಿ: ಇಲಾನ್ ಮಸ್ಕ್ ಅವರ ಸ್ಟಾರ್​​ಲಿಂಕ್​​​ಗೆ ಸಿಕ್ತು ಭಾರತದ ಸೆಟಿಲೈಟ್ ಇಂಟರ್ನೆಟ್ ಸರ್ವಿಸ್ ಲೈಸೆನ್ಸ್

ಜಿಎಸ್​​ಟಿ ನೊಂದಾಯಿತ ಉದ್ದಿಮೆಗಳಿಗೆ ಮಾರಾಟ ಮಾಡಲಾದ ಇನ್ವಾಯ್ಸ್; ಜಿಎಸ್​​ಟಿ ನೊಂದಾಯಿಸದ ವ್ಯಕ್ತಿಗಳಿಗೆ ಮಾರಾಟವಾದ ಇನ್ವಾಯ್ಸ್ ಇತ್ಯಾದಿ ದಾಖಲೆಗಳು ನಿಮ್ಮಲ್ಲಿರಲಿ. ಈಗ ಫೈಲ್ ಮಾಡುವ ಕ್ರಮ ಈ ಕೆಳಕಂಡಂತೆ ಇರುತ್ತದೆ:

  • ಜಿಎಸ್​​ಟಿ ಪೋರ್ಟಲ್​​ಗೆ ಹೋಗಿ ಲಾಗಿನ್ ಆಗಿ: www.gst.gov.in/
  • ಡ್ಯಾಷ್​​ಬೋರ್ಡ್​​ನಲ್ಲಿ ತಿಂಗಳನ್ನು ಆಯ್ಕೆ ಮಾಡಿ. ಬಳಿಕ ಜಿಎಸ್​​ಟಿಆರ್-1 ಅನ್ನು ಆಯ್ಕೆ ಮಾಡಿ.
  • ಇಲ್ಲಿ ಉದ್ದಿಮೆಗಳಿಗೆ ಮಾರಾಟ ಮಾಡಿದ್ದಕ್ಕೆ ದಾಖಲೆ (ಇನ್ವಾಯ್ಸ್) ನಮೂದಿಸಿ.
  • ನೊಂದಾಯಿತರಲ್ಲದ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದರೆ ಅದರ ಇನ್ವಾಯ್ಸ್ ಹಾಕಿರಿ.
  • ನಂತರ ಸಲ್ಲಿಕೆ ಮಾಡಿ.

ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುವುದು…

  • ನೀವು ಮತ್ತೆ ಡ್ಯಾಷ್​​ಬೋರ್ಡ್​​ಗೆ ಹೋಗಿ, ಅಲ್ಲಿ ಜಿಎಸ್​​ಟಿಆರ್-3ಬಿ ಆಯ್ಕೆ ಮಾಡಿ.
  • ಅಲ್ಲಿ ಒಟ್ಟು ಮಾರಾಟದ ಮೌಲ್ಯ ಮತ್ತು ತೆರಿಗೆ ಬಾಧ್ಯತೆಯನ್ನು ನಮೂದಿಸಿ.
  • ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಲಭ್ಯ ಇದ್ದರೆ ಅನ್ನೂ ನಮೂದಿಸಿ.
  • ಇಲ್ಲಿ ನಿಮ್ಮ ತೆರಿಗೆ ಬಾಧ್ಯತೆಯನ್ನು ಐಟಿಸಿಯಿಂದ ಕಳೆಯಿರಿ. ಉಳಿದ ಬಾಕಿ ತೆರಿಗೆಯನ್ನು ಪಾವತಿಸಿ.
  • ಇದಾದ ಬಳಿಕ ಸಬ್ಮಿಟ್ ಕ್ಲಿಕ್ ಮಾಡಿ.
  • ನಂತರ, ‘ಫೈಲ್ ರಿಟರ್ನ್ ವಿತ್ ಡಿಎಸ್​​ಸಿ/ಇವಿಸಿ’ ಎಂಬುದನ್ನು ಕ್ಲಿಕ್ ಮಾಡಿ.

ಇದಾದ ಬಳಿಕ ಡ್ಯಾಷ್​​ಬೋರ್ಡ್​ನಿಂದ ನೀವು ಅಕ್ನಾಲೆಡ್ಜ್​ಮೆಂಟ್ ಅನ್ನು ಡೌನ್​​ಲೋಡ್ ಮಾಡಬಹುದು.

ನಿಮಗೆ ಜಿಎಸ್​​ಟಿ ರಿಟರ್ನ್ ಫೈಲ್ ಮಾಡಲು ಸಮಸ್ಯೆ ಆಗಿದ್ದಲ್ಲಿ ವೃತ್ತಿಪರ ಜಿಎಸ್​​ಟಿ ಪ್ರಾಕ್ಟಿಶನರ್​​ವೊಬ್ಬರ ನೆರವು ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us