
ನವದೆಹಲಿ, ನವೆಂಬರ್ 29: ಚೀನಾ ಕಳೆದ ನಾಲ್ಕು ದಶಕದಲ್ಲಿ ಅಗಾಧ ವೇಗದಲ್ಲಿ ಬೆಳವಣಿಗೆ ಹೊಂದಿದೆ. ಎಲ್ಲಾ ಕ್ಷೇತ್ರಗಳಲ್ಲೂ ಭಾರತಕ್ಕಿಂತ ಚೀನಾ ಬಹಳ ಮುಂದಿದೆ. ತಂತ್ರಜ್ಞಾನ ಮತ್ತು ಅಭಿವೃದ್ಧಿಯಲ್ಲಿ ಅಮೆರಿಕಕ್ಕೆ ಸಮಾನವಾಗಿ ನಿಲ್ಲುವ, ಮತ್ತು ಕೆಲ ಕ್ಷೇತ್ರಗಳಲ್ಲಿ ಅಮೆರಿಕವನ್ನೂ ಅದು ಹಿಂದಿಕ್ಕಿದೆ. ಚೀನಾಗಿಂತ ಭಾರತ ಹಲವು ದಶಕಗಳಷ್ಟು ಹಿಂದೆಬಿದ್ದಿದೆ ಎನ್ನುವವರಿದ್ದಾರೆ. ಆದರೆ, ಅಮೆರಿಕದ ಕೆಲ ಆರ್ಥಿಕ ತಜ್ಞರ ಪ್ರಕಾರ, ಚೀನಾಗಿಂತ ಭಾರತ 15 ವರ್ಷಗಳಷ್ಟು ಮಾತ್ರ ಹಿಂದುಳಿದಿದೆ. ತಲಾದಾಯ ಬೆಳವಣಿಗೆ ದರದಲ್ಲಿ ಚೀನಾಗಿಂತ ಭಾರತ ಮುಂದಿದೆ ಎಂದೂ ಅವರು ಹೇಳುತ್ತಾರೆ.
ಅಮೆರಿಕದ ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಅಲೆಕ್ಸ್ ತಬಾರೊಕ್ ಅವರು ವಿಶ್ವ ಬ್ಯಾಂಕ್ ಅಂಕಿಅಂಶಗಳ ಆಧಾರದ ಮೇಲೆ ನಡೆಸಿದ ವಿಶ್ಲೇಷಣೆಯ ಪ್ರಕಾರ, 2025ರಲ್ಲಿ ಕೊಳ್ಳುವ ಶಕ್ತಿಯ ಸಮಾನತೆ (PPP) ಆಧಾರದಲ್ಲಿ ಭಾರತದ ತಲಾ ಜಿಡಿಪಿ (GDP per capita) 10,039 ಡಾಲರ್ ತಲುಪಿದೆ; ಇದು 1990ರ ಮಟ್ಟಕ್ಕಿಂತ ಸುಮಾರು ಐದು ಪಟ್ಟು ಹೆಚ್ಚಾಗಿದ್ದು, 2009ರ ಅಂತ್ಯದಲ್ಲಿ ಚೀನಾ ಇದ್ದ ಆರ್ಥಿಕ ಸ್ಥಿತಿಗೆ ಸಮನಾಗಿದೆ.
2025ರಲ್ಲಿ ಚೀನಾದ ತಲಾ ಜಿಡಿಪಿ (PPP) 25,067 ಡಾಲರ್ ಇದ್ದು, ಭಾರತಕ್ಕಿಂತ ಸುಮಾರು 2.5 ಪಟ್ಟು ಹೆಚ್ಚಾಗಿದೆ. 1978ರಲ್ಲಿ ಡೆಂಗ್ ಕ್ಸಿಯಾವೊಪಿಂಗ್ ನೇತೃತ್ವದಲ್ಲಿ ಚೀನಾ ಆರ್ಥಿಕ ಸುಧಾರಣೆ ಆರಂಭಿಸಿದ್ದರೆ, ಭಾರತವು 1991ರಲ್ಲಿ ಉದಾರೀಕರಣದ ಮೂಲಕ ಲೈಸೆನ್ಸ್ ರಾಜ್ ನಿರ್ಬಂಧಗಳನ್ನು ಸಡಿಲಿಸಿತ್ತು; ಈ ಎರಡು ಪ್ರಮುಖ ಬದಲಾವಣೆಗಳ ನಡುವಿನ ಅಂತರ ಸುಮಾರು 15 ವರ್ಷಗಳಷ್ಟಿದ್ದು, ಇತಿಹಾಸದ ದೃಷ್ಟಿಯಲ್ಲಿ ಇದು ಕೇವಲ ಕಣ್ಣುರೆಪ್ಪೆ ಮುಚ್ಚಿ ತೆರೆಯುವಷ್ಟು ಕಾಲ ಎಂದು ಅವರು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಅತ್ಯಂತ ಪ್ರಬಲ ಎಐ ಮಾಡಲ್ಗಳು ಬಿಡುಗಡೆಯಾದರೆ ಅಪಾಯವಾಗಬಹುದು: ಓಪನ್ಎಐ, ಆಂಥ್ರೋಪಿಕ್ ಸಿಬ್ಬಂದಿ ಆತಂಕ
ಚೀನಾ ಉತ್ಪಾದನೆ, ರಫ್ತು ಆಧಾರಿತ ಕೈಗಾರಿಕೀಕರಣ ಮತ್ತು ಮೂಲಸೌಕರ್ಯದ ಮೇಲೆ ಹೆಚ್ಚು ಗಮನ ಹರಿಸಿದ್ದರೆ, ಭಾರತವು ಸೇವಾ ವಲಯ, ದೇಶೀಯ ಬಳಕೆ ಮತ್ತು ತಂತ್ರಜ್ಞಾನ ಆಧಾರಿತ ಬೆಳವಣಿಗೆಯನ್ನು ಅವಲಂಬಿಸಿದೆ.
ಕಳೆದ ಮೂರು ವರ್ಷಗಳ ವಾರ್ಷಿಕ ತಲಾ ಜಿಡಿಪಿ ಬೆಳವಣಿಗೆ ದರದಲ್ಲಿ ಭಾರತವು ಶೇ. 6.3ರಷ್ಟು ದಾಖಲಿಸಿದ್ದು, ಚೀನಾದ ಶೇ. 5.3ಕ್ಕಿಂತ ಹೆಚ್ಚಾಗಿದೆ.
ತಲಾ ಜಿಡಿಪಿ ಬೆಳವಣಿಗೆ ದರ ಶೇ. 6ರಷ್ಟಿದ್ದರೆ ಪ್ರತಿ 12 ವರ್ಷಕ್ಕೊಮ್ಮೆ ಜೀವನಮಟ್ಟ ದ್ವಿಗುಣಗೊಳ್ಳುತ್ತದೆ; ಮುಂದಿನ ಒಂದೂವರೆ ದಶಕದಲ್ಲೂ ಇದೇ ವೇಗ ಮುಂದುವರಿದರೆ ಭಾರತವು 20,000 ಡಾಲರ್ ತಲಾ ಜಿಡಿಪಿ ಹೊಂದಿರುವ ಮಧ್ಯಮ-ಆದಾಯದ ದೇಶವಾಗಿ ಬದಲಾಗಬಹುದು ಎಂದು ತಬಾರೊಕ್ ಅಂದಾಜಿಸಿದ್ದಾರೆ.
ವಿಶ್ವ ಬ್ಯಾಂಕ್‌ನ ದಿನಕ್ಕೆ 3 ಡಾಲರ್ ಬಡತನ ಮಾನದಂಡದ (2021 PPP) ಪ್ರಕಾರ, ಭಾರತದಲ್ಲಿ ತೀವ್ರ ಬಡತನವು 1993ರ ಶೇ. 47.5ರಿಂದ 2011ರಲ್ಲಿ ಶೇ. 27.1ಕ್ಕೆ ಮತ್ತು 2023ರಲ್ಲಿ ಶೇ. 2.6ಕ್ಕೆ ಇಳಿದಿದೆ.
ಇದನ್ನೂ ಓದಿ: 340 ಉದ್ಯೋಗಿಗಳ ಲೇಆಫ್ಗೆ ಸ್ವಿಗ್ಗಿ ನಿರ್ಧಾರ; ಕ್ವಿಕ್ ಕಾಮರ್ಸ್ ವಿಭಾಗವಾದ ಇನ್ಸ್ಟಾಮಾರ್ಟ್ನಲ್ಲಿ ಕೆಲಸ ಮಾಡುವವರಿಗೆ ಸಂಕಟ
ವಿದ್ಯುತ್ ಸಂಪರ್ಕವು 2000ರಲ್ಲಿ ಶೇ. 60.3ರಿಂದ 2024ರಲ್ಲಿ ಶೇ. 99.9ಕ್ಕೆ ಏರಿದ್ದರೆ, ಬಯಲು ಶೌಚದ ಪ್ರಮಾಣ ಶೇ. 73.2ರಿಂದ ಶೇ. 6.7ಕ್ಕೆ ಇಳಿದಿದೆ; 1990ರಿಂದ ಶಿಶು ಮರಣ ಪ್ರಮಾಣ ಶೇ. 72ರಷ್ಟು ಕಡಿಮೆಯಾಗಿದ್ದು, ಜೀವಿತಾವಧಿ ನಿರೀಕ್ಷೆ (life expectancy) 72.2 ವರ್ಷಗಳಿಗೆ ತಲುಪಿದೆ.
ಈ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲು ಭಾರತವು ಕಾರ್ಮಿಕ ಮತ್ತು ಭೂ ಸುಧಾರಣೆಗಳು, ಶುದ್ಧ ಗಾಳಿ, ತ್ವರಿತ ನ್ಯಾಯಾಂಗ ಪ್ರಕ್ರಿಯೆ, ಉತ್ತಮ ಆಡಳಿತ ಸಾಮರ್ಥ್ಯ, ಉತ್ಪಾದನಾ ವಲಯದ ಬಲವರ್ಧನೆ ಮತ್ತು ಉದ್ಯೋಗ ಸೃಷ್ಟಿಯತ್ತ ಗಮನ ಹರಿಸಬೇಕಿದೆ ಎಂದು ವಿಶ್ಲೇಷಣೆಯಲ್ಲಿ ಒತ್ತಿಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ