ನವದೆಹಲಿ, ಫೆಬ್ರುವರಿ 6: ಈಗ ವಿಶ್ವದ ಹಲವು ಮಿಲಿಟರಿಗಳಿಗೆ ಕ್ಷಿಪಣಿಗಳ ರೀತಿಯಲ್ಲಿ ಡ್ರೋನ್ಗಳೂ ಕೂಡ ಪ್ರಮುಖ ಅಸ್ತ್ರಗಳಾಗಿವೆ. ಗುಪ್ತಚರ ಕಾರ್ಯಗಳಿಗೆ ಮಾತ್ರವಲ್ಲ, ಬಾಂಬ್ ದಾಳಿಗಳಿಗೂ ಈ ಡ್ರೋನ್ಗಳು ಸಹಾಯವಾಗುತ್ತವೆ. ಭಾರತೀಯ ಸೇನೆಯೂ ಕೂಡ ಸಾಕಷ್ಟು ಡ್ರೋನ್ಗಳನ್ನು ಖರೀದಿಸಿದೆ. ಭಾರತದಲ್ಲಿ ತಯಾರಾದ (ಮೇಡ್ ಇನ್ ಇಂಡಿಯಾ) ಡ್ರೋನ್ಗಳು ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯ ಮಿಲಿಟರಿ ಕೈ ಸೇರಿದೆ. ಸೇನೆಯ ಡ್ರೋನ್ ವಿಭಾಗ ಗಟ್ಟಿಯಾಯಿತು ಎನ್ನುವಷ್ಟರಲ್ಲಿ ಬೆಚ್ಚಿಬೀಳಿಸುವ ಘಟನೆಗಳು ನಡೆದಿವೆ. ಈ ಕೆಲ ಮೇಡ್ ಇನ್ ಇಂಡಿಯಾ ಡ್ರೋನ್ಗಳನ್ನು ಹ್ಯಾಕ್ ಮಾಡಿ ಹೈಜ್ಯಾಕ್ ಮಾಡಲಾಗಿರುವ ಘಟನೆಗಳು ಇವು. ಗಡಿಭಾಗದಲ್ಲಿ ಸರ್ವೇಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದ್ದ ಈ ಡ್ರೋನ್ಗಳನ್ನು ಶತ್ರುಗಳು ಹ್ಯಾಕ್ ಮಾಡಿ ಅವರ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಇದೊಂದು ರೀತಿಯಲ್ಲಿ ಭಾರತೀಯ ಸೇನೆಗೆ ಎಚ್ಚರಿಕೆಯ ಕರೆಗಂಟೆಯಂತಾಗಿದೆ.
ಭಾರತೀಯ ಸೇನೆ ಮೇಡ್ ಇನ್ ಇಂಡಿಯಾ ಡ್ರೋನ್ಗಳನ್ನೇ ಖರೀದಿ ಮಾಡಿರುವುದು ಹೌದು. ಆದರೆ, ಈ ಡ್ರೋನ್ಗಳು ಪೂರ್ಣ ಮೇಡ್ ಇನ್ ಇಂಡಿಯಾ ಅಲ್ಲ. ಪ್ರಮುಖ ಬಿಡಿಭಾಗಗಳನ್ನು ಚೀನಾದಿಂದ ತರಿಸಿ ಭಾರತದಲ್ಲಿ ಅಸೆಂಬ್ಲಿಂಗ್ ಮಾಡಲಾದಂತಹ ಡ್ರೋನ್ಗಳಿವು. ಈ ಬಿಡಿಭಾಗಗಳ ಸಹಾಯದಿಂದ ಶತ್ರುಗಳು ಈ ಡ್ರೋನ್ ಅನ್ನು ಹ್ಯಾಕ್ ಮಾಡಿರುವ ಶಂಕೆ ಇದೆ.
ಇದನ್ನೂ ಓದಿ: Viral: ಅಬ್ಬಬ್ಬಾ… ಹೇಗಿದೆ ನೋಡಿ ಚೀನಾದ ಹೈಟೆಕ್ ಫುಡ್ ಡೆಲಿವರಿ ವ್ಯವಸ್ಥೆ
ಡ್ರೋನ್ ಲೋಕಕ್ಕೆ ಚೀನಾ ದೇಶವೇ ಸಾಮ್ರಾಟ. ವಿಶ್ವದ ಶೇ. 80ರಷ್ಟು ಡ್ರೋನ್ ಭಾಗಗಳು ಚೀನಾದಿಂದಲೇ ಪೂರೈಕೆ ಆಗುತ್ತದೆ. ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ನಾಯಿಕೊಡೆಗಳಂತೆ ಡ್ರೋನ್ ಕಂಪನಿಗಳು ತಲೆ ಎತ್ತಿವೆ. ಹೆಚ್ಚಿನ ಕಂಪನಿಗಳು ಚೀನಾದಿಂದ ಕಡಿಮೆ ದರಕ್ಕೆ ಬಿಡಿಭಾಗಗಳನ್ನು ತರಿಸಿ ಇಲ್ಲಿಯೇ ಅಸೆಂಬಲ್ ಮಾಡುತ್ತವೆ. ಅದಕ್ಕೆ ಮೇಡ್ ಇನ್ ಇಂಡಿಯಾ ಲೇಬಲ್ ಹಾಕುತ್ತವೆ. ಎಂಜಿನ್, ಹೈಡ್ರೋ ಡ್ರೈವ್ ಸಿಸ್ಟಮ್ಸ್, ಎಲೆಕ್ಟ್ರಾನಿಕ್ಸ್, ಏರ್ಫ್ರೇಮ್ ಮತ್ತಿತರ ಪ್ರಮುಖ ಕಾಂಪೊನೆಂಟ್ಗಳನ್ನು ಭಾರತೀಯ ಕಂಪನಿಗಳಿಂದ ಪಡೆಯುವುದರ ಬದಲು ಚೀನೀ ಕಂಪನಿಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ಡ್ರೋನ್ ಬಿಡಿಭಾಗಗಳನ್ನು ಪೂರೈಸಿದ ಕಂಪನಿಯ ಬಳಿ ಈ ಡ್ರೋನ್ಗಳನ್ನು ಹ್ಯಾಕ್ ಮಾಡಬಲ್ಲ ದತ್ತಾಂಶ ಇರುತ್ತದೆ. ಡ್ರೋನ್ ಸಾಗುವ ಹಾದಿ ಇತ್ಯಾದಿಯನ್ನು ಈ ಕಾಂಪೊನೆಂಟ್ ಮೂಲಕ ನಿಯಂತ್ರಿಸಬಹುದು. ಒಂದು ಘಟನೆಯಲ್ಲಿ, ಪಾಕಿಸ್ತಾನದ ಗಡಿ ಬಹಳ ಪಹರೆ ಮಾಡುತ್ತಿದ್ದ ಡ್ರೋನ್ ವಿಚಿತ್ರವಾಗಿ ಭಾರತೀಯ ಸೈನಿಕರ ನಿಯಂತ್ರಣ ತಪ್ಪಿ ಗಡಿಯ ಆ ಬದಿಗೆ ಹೋಯಿತು. ಪಾಕಿಸ್ತಾನದ ಆ ಬದಿಯಿಂದ ಬೇರೆ ವ್ಯಕ್ತಿಗಳು ಈ ಡ್ರೋನ್ ಅನ್ನು ಹ್ಯಾಕ್ ಮಾಡಿ, ತಮ್ಮೆಡೆಗೆ ಬರುವಂತೆ ಮಾಡಿದ್ದರು.
ನೈಜ ಯುದ್ಧದ ಸಂದರ್ಭದಲ್ಲಿ ಇಂಥದ್ದು ನಡೆದರೆ ಏನಾಗಬಹುದು ಎಂದು ಊಹಿಸುವುದೂ ಕಷ್ಟ. ಭಾರತೀಯ ಸೇನೆಯು ಮೇಡ್ ಇನ್ ಇಂಡಿಯಾ ವಿಚಾರದಲ್ಲಿ ಒಂದಷ್ಟು ನಿಯಮಗಳನ್ನು ಹೊಂದಿದೆ. ಒಂದು ಉತ್ಪನ್ನದ ತಯಾರಿಕೆಯಲ್ಲಿ ಬಳಸಲಾಗುವ ಭಾಗಗಳಲ್ಲಿ ಅರ್ಧದಷ್ಟಾದರೂ ಭಾರತದಲ್ಲಿ ತಯಾರಾಗಿರಬೇಕು ಎನ್ನುವ ನೀತಿ ಇದೆ.
ಇದನ್ನೂ ಓದಿ: ಎನ್ಬಿಎಫ್ಸಿಗಳು ಸಾಲಕ್ಕೆ ಗರಿಷ್ಠ ಬಡ್ಡಿ ಎಷ್ಟೆಂದು ನಿರ್ದಿಷ್ಟಪಡಿಸಬೇಕು: ಆರ್ಬಿಐ ನಿರ್ದೇಶನ
ಇದೇ ವೇಳೆ, ಭಾರತೀಯ ಡ್ರೋನ್ ತಯಾರಿಕಾ ಕಂಪನಿಯಾದ ಐಡಿ ಡ್ರೋನ್ಸ್ಗೆ ಭಾರತೀಯ ಸೇನೆಯಿಂದ ಆರ್ಡರ್ ಸಿಕ್ಕಿದೆ. ದೇಶೀಯವಾಗಿ ಅಭಿವೃದ್ಧಿಯಾದ ವಿಡಿಒಎಲ್ ಮತ್ತು ಎಫ್ಪಿವಿ ಡ್ರೋನ್ಗಳನ್ನು ಪೂರೈಸುವಂತೆ ಈ ಕಂಪನಿಯೊಂದಿಗೆ ಸೇನೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಷರತ್ತೆಂದರೆ, ಈ ಡ್ರೋನ್ಗಳಿಗೆ ಯಾವುದೇ ಚೀನೀ ನಿರ್ಮಿತ ಬಿಡಿಭಾಗಗಳು ಇರಬಾರದು.
ಐಜಿ ಡ್ರೋನ್ಸ್ ಕಂಪನಿ ತಯಾರಿಸುವ ಡ್ರೋನ್ಗಳಲ್ಲಿ ಎಲ್ಲವೂ ದೇಶೀಯವಾಗಿ ನಿರ್ಮಿತವಾದುವಲ್ಲ. ಕ್ಯಾಮರಾದಂತಹ ಬಿಡಿಭಾಗಗಳನ್ನು ವಿದೇಶದಿಂದ ತರಿಸಲಾಗುತ್ತದೆ. ಆದರೆ, ಚೀನಾದಿಂದ ಯಾವ ಭಾಗವೂ ಸರಬರಾಜಾಗುವುದಿಲ್ಲ. ಈ ಕಾರಣಕ್ಕೆ ಐಜಿ ಡ್ರೋನ್ಸ್ ಕಂಪನಿಗೆ ಡ್ರೋನ್ಸ್ ಸರಬರಾಜು ಗುತ್ತಿಗೆಯನ್ನು ಸೇನೆ ನೀಡಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ