ಸತತ ಆರನೇ ದಿನ ಷೇರು ಮಾರುಕಟ್ಟೆ ಕುಸಿತ; ಹೂಡಿಕೆದಾರರಿಗೆ 17 ಲಕ್ಷ ಕೋಟಿ ರೂ ನಷ್ಟ
Indian Stock Market crash, 3pc down in 6 trading sessions: ಭಾರತೀಯ ಷೇರುಪೇಟೆ ಕಳೆದ ಆರು ಸೆಷನ್ಗಳಿಂದ ನಿರಂತರವಾಗಿ ಹಿನ್ನಡೆ ಕಾಣುತ್ತಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ. 3ರಷ್ಟು ಅಂಕಗಳನ್ನು ಕಳೆದುಕೊಂಡಿವೆ. ಹೂಡಿಕೆದಾರರು ವಾರದಲ್ಲಿ ಅನುಭವಿಸಿರುವ ನಷ್ಟ 17 ಲಕ್ಷ ಕೋಟಿ ರೂ. ಷೇರು ಮಾರುಕಟ್ಟೆ ಇಷ್ಟು ಹಿನ್ನಡೆ ಕಾಣಲು ಸಂಭಾವ್ಯ ಕಾರಣಗಳ ಬಗ್ಗೆ ವರದಿ ಇಲ್ಲಿದೆ.

ನವದೆಹಲಿ, ಜನವರಿ 12: ಭಾರತದ ಷೇರು ಮಾರುಕಟ್ಟೆ (Stock Market) ಸತತವಾಗಿ ಕುಸಿಯುತ್ತಿದೆ. ಆರು ಟ್ರೇಡಿಂಗ್ ದಿನಗಳಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಭಾರೀ ನಷ್ಟ ಕಂಡಿವೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಆರು ಸೆಷನ್ಗಳಲ್ಲಿ 2,700 ಅಂಕಗಳನ್ನು ಕಳೆದುಕೊಂಡಿದೆ. ಅದು ಕಂಡ ನಷ್ಟ ಶೇ. 3. ಇನ್ನು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ ಸೂಚ್ಯಂಕ ಕೂಡ ಈ ಆರು ಸೆಷನ್ನಲ್ಲಿ ಶೇ. 3 ಹಿನ್ನಡೆ ಕಂಡಿದೆ. ಈ ಅವಧಿಯಲ್ಲಿ ಹೂಡಿಕೆದಾರರಿಗೆ 16-17 ಲಕ್ಷ ಕೋಟಿ ರೂ ನಷ್ಟವಾಗಿದೆ. ಭಾರತದ ಷೇರು ಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿರುವುದು ಯಾಕೆ? ಸಂಭಾವ್ಯ ಕಾರಣಗಳು ಈ ಕೆಳಕಂಡಂತಿವೆ:
ಅಮೆರಿಕದೊಂದಿಗೆ ಇನ್ನೂ ಕೈಗೂಡದ ಟ್ರೇಡ್ ಡೀಲ್
ಅಮೆರಿಕ ಮತ್ತು ಭಾರತದ ನಡುವೆ ವ್ಯಾಪಾರ ಒಪ್ಪಂದಕ್ಕಾಗಿ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಆದರೂ ಕೂಡ ಅಂತಿಮಗೊಳ್ಳಲು ಸಾಧ್ಯವಾಗಿಲ್ಲ. ಶೇ 50 ಟ್ಯಾರಿಫ್ ಅನ್ನು ಸಹಿಸಿಕೊಳ್ಳಲು ಭಾರತಕ್ಕೆ ಹೆಚ್ಚು ದಿನ ಸಾಧ್ಯವಾಗದು. ಗಾಯದ ಮೇಲೆ ಬರೆ ಎಂಬಂತೆ ಅಮೆರಿಕವು ರಷ್ಯಾ ನಿಷೇಧ ಮಸೂದೆ ತರುತ್ತಿದೆ. ಇದು ಜಾರಿಯಾದರೆ ಭಾರತಕ್ಕೆ ವಿಧಿಸುವ ಟ್ಯಾರಿಫ್ ಶೇ. 500ಕ್ಕೆ ಏರಬಹುದು. ಇದು ಭಾರತೀಯ ಮಾರುಕಟ್ಟೆಯ ಉತ್ಸಾಹವನ್ನು ಕುಂದಿಸಲು ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್ನಲ್ಲಿ ಪ್ರಧಾನಿ ಮೋದಿ ಹೇಳಿಕೆ
ವಿದೇಶೀ ಹೂಡಿಕೆಗಳ ನಿರಂತರ ಹೊರಹರಿವು
ಎಫ್ಐಐ ಅಥವಾ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಕಳೆದ ಆರೇಳು ತಿಂಗಳಿಂದ ಹೊರಬೀಳುತ್ತಿರುವ ಟ್ರೆಂಡ್ ಇದೆ. 2025ರ ಜುಲೈನಿಂದ ಡಿಸೆಂಬರ್ವರೆಗೆ ಎಫ್ಐಐಗಳ ಹೊರಹರಿವು ಬರೋಬ್ಬರಿ 1.85 ಲಕ್ಷ ಕೋಟಿ ರೂ. ಜನವರಿಯಲ್ಲಿ ಈಗಾಗಲೇ 12,000 ಕೋಟಿ ರೂ ವಿದೇಶೀ ಹೂಡಿಕೆಗಳು ಹೊರಹೋಗಿವೆ. ಅಂದರೆ, ಆರೇಳು ತಿಂಗಳಲ್ಲಿ ಬಹುತೇಕ 2 ಲಕ್ಷ ಕೋಟಿ ರೂ ವಿದೇಶೀ ಹೂಡಿಕೆಗಳು ಷೇರು ಮಾರುಕಟ್ಟೆಯಿಂದ ಹೊರಹೋಗಿವೆ.
ಜಾಗತಿಕ ರಾಜಕೀಯ ಅನಿಶ್ಚಿತತೆ
ರಷ್ಯಾ ಉಕ್ರೇನ್ ಯುದ್ಧ, ಇಸ್ರೇಲ್ ಇರಾನ್ ಸಂಘರ್ಷದ ನಂತರ ಈಗ ಅಮೆರಿಕದ ಆಕ್ರಮಣಕಾರಿ ವರ್ತನೆ ವಿಶ್ವವನ್ನು ತಲ್ಲಣಗೊಳಿಸುತ್ತಿದೆ. ವೆನಿಜುವೆಲಾದ ಅಧ್ಯಕ್ಷರನ್ನು ಸೆರೆ ಹಿಡಿದು, ಆ ದೇಶದ ನಿಯಂತ್ರಣ ತೆಗೆದುಕೊಳ್ಳಲು ಯತ್ನಿಸಿದೆ ಟ್ರಂಪ್ ಸರ್ಕಾರ. ಇದರ ಬೆನ್ನಲ್ಲೇ ಗ್ರೀನ್ ಲ್ಯಾಂಡ್ ಅನ್ನು ವಶಪಡಿಸಿಕೊಳ್ಳಲು ಹೊರಟಿದೆ. ಇರಾನ್ ಮೇಲೂ ದಾಳಿ ನಡೆಸಲು ಯೋಜಿಸಿದೆ. ಇದು ಮಾರುಕಟ್ಟೆಯನ್ನು ಭಯಗೊಳಿಸಿರಬಹುದು.
ಇದನ್ನೂ ಓದಿ: ಶೇ 4.4ರ ವಿತ್ತೀಯ ಕೊರತೆ ಗುರಿ ಮುಟ್ಟುವುದು ಸರ್ಕಾರಕ್ಕೆ ಸಲೀಸು: ಏಜೆನ್ಸಿ ವರದಿ
ಈ ಜಾಗತಿಕ ರಾಜಕೀಯ ಅಭದ್ರ ಸ್ಥಿತಿ ಸಂದರ್ಭದಲ್ಲಿ ಹೂಡಿಕೆದಾರರು ಚಿನ್ನ, ಬೆಳ್ಳಿಯಂತಹ ಅಮೂಲ್ಯ ಲೋಹಗಳ ಮೇಲೆ ಹೂಡಿಕೆ ಮಾಡುವುದುಂಟು. ಅಂತೆಯೇ, ಚಿನ್ನ, ಬೆಳ್ಳಿ ಬೆಲೆ ಸಿಕ್ಕಾಪಟ್ಟೆ ಏರಲು ಇದೇ ಪ್ರಮುಖ ಕಾರಣ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




