ಷೇರುಪೇಟೆಯ ದೈತ್ಯ ಪ್ರದರ್ಶನ; ಜಾಗತಿಕ ಷೇರುಮಾರುಕಟ್ಟೆಗಳು ನೆಲಕಚ್ಚಿದರೂ ಭಾರತೀಯ ಷೇರುಬಜಾರು ದಾಖಲೆ; ಕಾರಣಗಳಿವು…

ಭಾರತದ ಷೇರು ಮಾರುಕಟ್ಟೆಯ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ಇವತ್ತು ಶುಕ್ರವಾರ ಶೇ. 2ರಷ್ಟು ಏರಿಕೆ ಆಗಿವೆ. ಈ ವಾರ ಈ ಪ್ರಮುಖ ಸೂಚ್ಯಂಕಗಳು ಶೇ. 8ಕ್ಕಿಂತ ಹೆಚ್ಚು ಏರಿಕೆ ಆಗಿವೆ. ಸೆನ್ಸೆಕ್ಸ್ 81,000 ಅಂಕಗಳ ಗಡಿ ದಾಟಿದರೆ, ನಿಫ್ಟಿ 24,500 ಅಂಕಗಳನ್ನು ಮುಟ್ಟಿದೆ. ಕೆಲವಾರು ವರ್ಷಗಳಿಂದ ಇವು ಈ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಇದೇ ಮೊದಲು.

ಷೇರುಪೇಟೆಯ ದೈತ್ಯ ಪ್ರದರ್ಶನ; ಜಾಗತಿಕ ಷೇರುಮಾರುಕಟ್ಟೆಗಳು ನೆಲಕಚ್ಚಿದರೂ ಭಾರತೀಯ ಷೇರುಬಜಾರು ದಾಖಲೆ; ಕಾರಣಗಳಿವು...
ಷೇರುಮಾರುಕಟ್ಟೆ
Image Credit source: PTI

Updated on: Nov 06, 2026 | 6:27 PM

ನವದೆಹಲಿ, ನವೆಂಬರ್ 6: ಭಾರತೀಯ ಷೇರು ಮಾರುಕಟ್ಟೆಗೆ ಈ ದಿನ ಗುಡ್ ಫ್ರೈಡೆ. ಈ ವಾರ ಬಹಳ ಶುಭವಾರ. ಮಾರುಕಟ್ಟೆಯಲ್ಲಿ ದೀಪಾವಳಿ ಧಮಾಕಾ ನಡೆಯುತ್ತಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿಗಳಿಗೆ ಹಬ್ಬವೋ ಹಬ್ಬ. ಪ್ರಮುಖ ಸೂಚ್ಯಂಕಗಳು ಶೇ. 2ಕ್ಕಿಂತ ಹೆಚ್ಚು ಉಬ್ಬಿಹೋಗಿವೆ. ಸೆನ್ಸೆಕ್ಸ್ ಬಹಳ ಅಪರೂಪಕ್ಕೆ 1,718 ಅಂಕಗಳಷ್ಟು ಜಿಗಿದು 81,000 ಅಂಕಗಳ ಗಡಿ ದಾಟಿ 81,028.02 ಮಟ್ಟದಲ್ಲಿದೆ. ನಿಫ್ಟಿ ಕೂಡ 25,000 ಅಂಕಗಳ ಗಡಿ ದಾಟಿ ಮೇಲೆ ಹೋಗಿದೆ.

ಸೆನ್ಸೆಕ್ಸ್ ಈ ವಾರ ಶೇ. 8.8ರಷ್ಟು ಹೆಚ್ಚಳ ಕಂಡಿದೆ. ನಿಫ್ಟಿ ಶೇ. 8.6ರಷ್ಟು ಏರಿದೆ. ಸೆನ್ಸೆಕ್ಸ್ ಕಳೆದ 6 ವರ್ಷದಲ್ಲಿ ಯಾವುದೇ ವಾರದಲ್ಲಿ ಇಷ್ಟು ಹೆಚ್ಚಳ ಕಂಡಿದ್ದಿಲ್ಲ. ನಿಫ್ಟಿ ಕೂಡ 2021ರ ನಂತರ ಇಷ್ಟು ಏರಿಕೆ ಕಂಡಿದ್ದು ಇದೇ ಮೊದಲು.

Loading...

ಇದನ್ನೂ ಓದಿ: ಭಾರತದ ಉಕ್ಕಿನ ಕಥೆ… ಕಚ್ಚಾ ಉಕ್ಕು ಉತ್ಪಾದನೆಯಲ್ಲಿ ಅಮೆರಿಕ, ಜಪಾನ್ ಎರಡನ್ನೂ ಮೀರಿಸಿದ ಭಾರತ

ಜಾಗತಿಕವಾಗಿ ಮಾರುಕಟ್ಟೆಗಳ ಪತನ: ಭಾರತದ ಷೇರು ಮಾರುಕಟ್ಟೆಯ ಶುಕ್ರವಾರದ ಅದ್ವಿತೀಯ ಸಾಧನೆ ಸಾಧಾರಣವಲ್ಲ. ಅಮೆರಿಕದ ನಾಸ್ಡಾಕ್ ಕಾಂಪೊಸಿಟ್, ಎಸ್ ಅಂಡ್ ಪಿ 500, ಡೋವ್ ಜೋನ್ಸ್ ಸೂಚ್ಯಂಕಗಳು ಶೇ. 3.44 ರೀಂದ 5.52ರವರೆಗೆ ಕುಸಿತ ಕಂಡಿವೆ. ದಕ್ಷಿಣ ಕೊರಿಯಾ, ಜಪಾನ್ ಇತ್ಯಾದಿ ಇನ್ನೂ ಹಲವು ಮಾರುಕಟ್ಟೆಗಳು ತೀವ್ರ ಹಿನ್ನಡೆ ಕಂಡಿವೆ. ಇದರ ನಡುವೆ ಭಾರತದ ಮಾರುಕಟ್ಟೆ ಇವತ್ತು ಹೊಳಪು ಕಂಡಿದ್ದು ನಿಜಕ್ಕೂ ಗಮನಾರ್ಹ ಸಂಗತಿ.

ಜಾಗತಿಕ ಮಾರುಕಟ್ಟೆ ಬೀಳಲು ಏನು ಕಾರಣ?

ಸೆಮಿಕಂಡಕ್ಟರ್, ಎಐ ಸಂಬಂಧಿತ ಕಂಪನಿಗಳಿಗೆ ಷೇರುಮಾರುಕಟ್ಟೆಯಲ್ಲಿ ರಕ್ತದೋಕುಳಿ ಆಗುತ್ತಿದೆ. ಎಐ ಟೆಕ್ನಾಲಜಿಯು ಬಕಾಸುರನಂತೆ ಹಣ ತಿಂದು ತೇಗುತ್ತಿದೆ. ಅದರಿಂದ ನಿರೀಕ್ಷಿತ ಲಾಭ ಸಿಗುತ್ತಿಲ್ಲ ಎನ್ನುವ ಅಭಿಪ್ರಾಯ ಇದೆ. ಹೀಗಾಗಿ, ಎಐ ಸ್ಟಾಕ್​ಗಳಿಂದ ಹೂಡಿಕೆದಾರರು ನಿರ್ಗಮಿಸುತ್ತಿರುವುದು ಮುಂದುವರಿದಿದೆ.

ಇದನ್ನೂ ಓದಿ: ನಿಮ್ಮ ಏರಿಯಾದ ಮೊಬೈಲ್, ಬ್ರಾಡ್​ಬ್ಯಾಂಡ್ ನೆಟ್ವರ್ಕ್ ಗುಣಮಟ್ಟ ಪರಿಶೀಲನೆಗೆ ಟ್ರಾಯ್​ನಿಂದ ನೆಟ್ವರ್ಕ್ ಅನುಭವ್ ಪ್ಲಾಟ್​ಫಾರ್ಮ್

ಭಾರತದ ಷೇರು ಮಾರುಕಟ್ಟೆಯ ಉತ್ತಮ ಓಟಕ್ಕೆ ಏನು ಕಾರಣ?

ವಿದೇಶೀ ಸಾಂಸ್ಥಿಕ ಹೂಡಿಕೆದಾರರು (ಎಫ್​ಐಐ) ಕಳೆದ ಕೆಲ ದಿನಗಳಿಂದ ಭಾರತದ ಮಾರುಕಟ್ಟೆಯಲ್ಲಿ ನಿರಂತರವಾಗಿ ಹೂಡಿಕೆ ಮಾಡುತ್ತಿದ್ದಾರೆ. ಅದು ಇವತ್ತೂ ಮುಂದುವರಿದಿದೆ. ಹೀಗಾಗಿ, ಈ ವಾರಾದ್ಯಂತ ಭಾರತದ ಷೇರುಪೇಟೆ ಉತ್ತಮವಾಗಿ ಏರಿಕೆಯಾಗಿದೆ. ಇದರ ಜೊತೆಗೆ, ಕಚ್ಚಾ ತೈಲ ಕಡಿಮೆಗೊಂಡಿರುವುದು, ಮತ್ತು ಪಶ್ಚಿಮ ಏಷ್ಯಾದ ಯುದ್ಧ ವಾತಾವರಣ ಮುಂದಿನ ದಿನಗಳಲ್ಲಿ ತಿಳಿಗೊಳ್ಳಬಹುದು ಎನ್ನುವ ಒಂದು ನಿರೀಕ್ಷೆಯು ಮಾರುಕಟ್ಟೆಯ ಉತ್ಸಾಹ ಹೆಚ್ಚಿಸಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us