ನವದೆಹಲಿ, ಏಪ್ರಿಲ್ 26: ಕೇರಳದ ತಿರುವನಂತಪುರಂನಲ್ಲಿರುವ ವಿಳಿಂಜಮ್ ಬಂದರನ್ನು (vizhinjam port) ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ ಆಗಿ ಕಾರ್ಯಾಚರಿಸಲು ಬಂದರು ಸಚಿವಾಲಯ ಒಪ್ಪಿಗೆ ನೀಡಿದೆ. ಅದಾನಿ ಗ್ರೂಪ್ ಈ ಪೋರ್ಟ್ ಅನ್ನು ನಿರ್ಮಿಸಿದೆ. ಪೋರ್ಟ್ನ ವ್ಯವಹಾರಗಳನ್ನೂ ಅದಾನಿ ಕಂಪನಿ ನಿರ್ವಹಿಸಲಿದೆ. ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ ಆಗಿ ನಿರ್ವಹಿಸಲು ಸಚಿವಾಲಯದ ಒಪ್ಪಿಗೆ ಸಿಕ್ಕಿರುವುದರಿಂದ ಈಗ ಸುಂಕ ಇಲಾಖೆ ವಿಳಿಂಜಮ್ ಪೋರ್ಟ್ನಲ್ಲಿ ಕಚೇರಿ ಸ್ಥಾಪಿಸಲು ಅನುವು ಆಗುತ್ತದೆ. ಮುಂದಿನ ಮೂರು ತಿಂಗಳೊಳಗೆ ಕೇಂದ್ರೀಯ ನೇರ ತೆರಿಗೆ ಮತ್ತು ಸುಂಕ ಮಂಡಳಿ (CBIC) ಒಪ್ಪಿಗೆ ಸಿಗುವ ನಿರೀಕ್ಷೆ ಇದೆ ಎಂದು ಇಕಾನಿಮಿಕ್ ಟೈಮ್ಸ್ ಪತ್ರಿಕೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಉಲ್ಲೇಖಿಸಿ ವರದಿ ಮಾಡಿದೆ.
ಅದಾನಿ ಗ್ರೂಪ್ಗೆ ಸೇರಿದ ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಕಂಪನಿ 2015ರಲ್ಲಿ ವಿಳಿಂಜಮ್ನಲ್ಲಿ ಅಂತಾರಾಷ್ಟ್ರೀಯ ಟ್ರಾನ್ಸ್ಶಿಪ್ಮೆಂಟ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿತ್ತು. ನಾಲ್ಕು ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಬೇಕಿತ್ತು. ಐದು ವರ್ಷ ವಿಳಂಬವಾಗಿ ಇದು ಕಾರ್ಯಾರಂಭಿಸಲು ಸಿದ್ಧವಾಗಿದೆ.
ಇದನ್ನೂ ಓದಿ: ತಲೆ ನೋವಾಗಿದ್ದ ನೌಕರಿ ಬಿಟ್ಟ ಬಳಿಕ ಡೋಲು ಬಡಿಯುತ್ತಾ, ಬಾಸ್ ಎದುರು ಡ್ಯಾನ್ಸ್ ಮಾಡಿ ಹೊರಟ ಸಿಬ್ಬಂದಿ
ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ ಎಂದರೆ ಒಂದು ರೀತಿಯಲ್ಲಿ ಹಡಗು ನಿಲ್ದಾಣ. ಒಂದು ಹಡಗಿನಿಂದ ಇನ್ನೊಂದು ಹಡಗಿಗೆ ಸರಕುಗಳನ್ನು ರವಾನಿಸಲು ಫೀಡರ್ ಸರ್ವಿಸ್ ರೀತಿ ಈ ಪೋರ್ಟ್ ಅನ್ನು ಬಳಸಲಾಗುತ್ತದೆ. ಉದಾಹರಣೆಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸರಕುಗಳನ್ನು ಸಾಗಿಸಲು ಕೆಲವೊಮ್ಮೆ ನೇರ ಹಡಗು ಸಂಚಾರ ಇರುವುದಿಲ್ಲ. ಬೇರೆ ಬೇರೆ ಹಡಗುಗಳ ಮೂಲಕ ಸರಕು ಸಾಗಿಸಬೇಕಾಗುತ್ತದೆ. ಉದಾಹರಣೆಗೆ, ಬೆಂಗಳೂರಿನಿಂದ ನಿಮ್ಮ ಊರಿಗೆ ಬಸ್ಸಿನಲ್ಲಿ ಹೋಗಬೇಕಾದರೆ ನಿಮ್ಮ ಏರಿಯಾದಿಂದ ಬಸ್ ಹತ್ತಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೋಗಬೇಕು. ಅಲ್ಲಿಂದ ನಿಮ್ಮ ಊರಿನ ಬಸ್ ಹತ್ತಬೇಕು. ಸಮೀಪದ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ಅಲ್ಲಿಂದ ನಿಮ್ಮ ಊರಿಗೆ ಇನ್ನೊಂದು ಬಸ್ ಅಥವಾ ವಾಹನದಲ್ಲಿ ಹೋಗಬೇಕು. ಈ ರೀತಿಯಲ್ಲಿ ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ಗಳು ಕೆಲಸ ಮಾಡುತ್ತವೆ.
ಭಾರತದಲ್ಲಿ ಸಾಕಷ್ಟು ಸರಕುಗಳು ಹಡಗುಗಳ ಮೂಲಕ ಸಾಗಾಟ ಆಗುತ್ತಿರುತ್ತವಾದರೂ ಇಷ್ಟು ವರ್ಷ ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ ಇರಲಿಲ್ಲ. ಹೆಚ್ಚಿನ ಸರಕುಗಳು ಶ್ರೀಲಂಕಾದ ಕೊಲಂಬೋಗೆ ಹೋಗಿ ಅಲ್ಲಿಂದ ಕೈ ಬದಲಾಯಿಸಬೇಕಿತ್ತು. ಈಗ ವಿಳಿಂಜಮ್ ಭಾರತದ ಮೊದಲ ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ ಆಗಿದೆ.
ಕೇರಳದ ಕೊಚ್ಚಿ ಬಂದರು ಹಾಗೂ ನಿಕೋಬಾರ್ ದ್ವೀಪದ ಗ್ಯಾಲಾದಿಯಾ ಬೇ ಪೋರ್ಟ್ ಭಾರತದಲ್ಲಿ ಟ್ರಾನ್ಸ್ಶಿಪ್ಮೆಂಟ್ ಕಾರ್ಯಾಚರಣೆಗೆ ಸಿದ್ಧವಾಗುತ್ತಿರುವ ಇತರ ಎರಡು ಪೋರ್ಟ್ಗಳಾಗಿವೆ.
ಇದನ್ನೂ ಓದಿ: ಚೀನಾ ಅವಲಂಬನೆ ತಪ್ಪಿಸಲು ಟಾಟಾದಿಂದ ಮಹತ್ವದ ಹೆಜ್ಜೆ; ಭಾರತದಲ್ಲೇ ಹೈಟೆಕ್ ಮೆಷಿನ್ ತಯಾರಿಕೆ
ಸರಕು ಸಾಗಣೆಯ ಸಮಯ ಮತ್ತು ವೆಚ್ಚ ಎರಡೂ ಉಳಿತಾಯ ಆಗುತ್ತದೆ. ಉದಾಹರಣೆಗೆ, ಬಾಂಗ್ಲಾದೇಶ ಭಾರತದಿಂದ ಸಾಕಷ್ಟು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಬಾಂಗ್ಲಾದೇಶಕ್ಕೆ ಈ ಸರಕುಗಳನ್ನು ಸಾಗಿಸಬೇಕಾದರೆ ಅವುಗಳನ್ನು ಮುಂದ್ರಾ, ಕೊಚ್ಚಿ, ತೂತ್ತುಕುಡಿ ಅಥವಾ ಚೆನ್ನೈ ಪೋರ್ಟ್ಗೆ ಕಳುಹಿಸಿ ಅಲ್ಲಿಂದ ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ ಇರುವ ಕೊಲಂಬೋ ಅಥವಾ ಸಿಂಗಾಪುರಕ್ಕೆ ಕಳುಹಿಸಿ, ಅಲ್ಲಿಂದ ಬಾಂಗ್ಲಾದೇಶದ ಚಿತ್ತಗಾಂಗ್ಗೆ ಬೇರೆ ಹಡಗುಗಳಿಗೆ ಸರಕುಗಳನ್ನು ಹಾಕಿ ಕಳುಹಿಸಬೇಕು. ಇದರಿಂದ ಬಾಂಗ್ಲಾದೇಶಕ್ಕೆ ಆಮದು ವೆಚ್ಚ ಹೆಚ್ಚಾಗುತ್ತದೆ. ಹೀಗಾಗಿ, ಭಾರತದ ಉತ್ಪನ್ನಕ್ಕೆ ಬೇಡಿಕೆ ಕಡಿಮೆ ಆಗಬಹುದು. ಹೀಗಾಗಿ, ಭಾರತದಲ್ಲೇ ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ ಇದ್ದರೆ ಒಂದಷ್ಟು ಸಾಗಣೆ ವೆಚ್ಚ ಕಡಿಮೆ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ