Recurring Deposits: ಸಣ್ಣ ಉಳಿತಾಯ ಯೋಜನೆ ರೆಕರಿಂಗ್ ಡೆಪಾಸಿಟ್ ಮೇಲಿನ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ರೆಕರಿಂಗ್ ಡೆಪಾಸಿಟ್ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸುವವರಿಗೆ ಬಹಳ ಮುಖ್ಯವಾದ ಸುದ್ದಿ ಇದು.
ಆರ್‌ಡಿ ಅಥವಾ ರೆಕರಿಂಗ್ ಡೆಪಾಸಿಟ್ (Recurring Deposits) ಎಂಬುದು ಅಲ್ಪಾವಧಿಯಿಂದ ಮಧ್ಯಮಾವಧಿ ಹಾಗೂ ದೀರ್ಘಾವಧಿ ಉದ್ದೇಶ ಇಟ್ಟುಕೊಂಡು ಉಳಿತಾಯ ಮಾಡುವವರಿಗೆ ಬಹಳ ಒಳ್ಳೆಯ ಯೋಜನೆ. ತಿಂಗಳಿಗೆ ಇಂತಿಷ್ಟು ಮೊತ್ತ ಅಂತ ಕಟ್ಟುತ್ತಾ ಸಾಗಿದಲ್ಲಿ ಆ ಅವಧಿಯ ನಂತರ ಜಮೆ ಮಾಡಿದ ಅಸಲಿಗೆ ಉತ್ತಮ ಬಡ್ಡಿ ದರ ಸೇರಿಸಿ ಮೆಚ್ಯೂರಿಟಿ ಸಮಯದಲ್ಲಿ ನೀಡಲಾಗುತ್ತದೆ. ಮಕ್ಕಳ ವಿದ್ಯಾಭ್ಯಾಸವೂ ಒಳಗೊಂಡಂತೆ ನಿರ್ದಿಷ್ಟ ಕಾರಣಗಳಿಗಾಗಿ ಈ ಉಳಿತಾಯ ಮಾಡುವುದನ್ನು ತಜ್ಞರು ಪ್ರೋತ್ಸಾಹಿಸುತ್ತಾರೆ. ಅಪಾಯ ಇಲ್ಲದ, ನಿಶ್ಚಿತ ರಿಟರ್ನ್ ನೀಡುವಂಥ ಸಣ್ಣ ಉಳಿತಾಯ ಯೋಜನೆ ಇದು. ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಸಂಚಿತ ಠೇವಣಿಗಳ (RD) ಬಡ್ಡಿದರಗಳನ್ನು ಹೆಚ್ಚಿಸಿದೆ. ಈ ದರಗಳು ಜೂನ್ 14ರಿಂದ ಜಾರಿಗೆ ಬಂದಿವೆ. ಕನಿಷ್ಠ ರೂ. 100 ಠೇವಣಿಗೆ ನೀವು ಎಸ್‌ಬಿಐನಲ್ಲಿ ಆರ್‌ಡಿ ತೆರೆಯಬಹುದು. ಆರ್‌ಡಿ ಖಾತೆಯನ್ನು 12 ತಿಂಗಳಿಂದ 10 ವರ್ಷಗಳ ಮಧ್ಯದ ಅವಧಿಗೆ ತೆರೆಯಬಹುದು. ನಿಶ್ಚಿತ ಠೇವಣಿ (Fixed Deposits)ಯಂತೆಯೇ ಹಿರಿಯ ನಾಗರಿಕರಿಗೆ ಎಲ್ಲ ಅವಧಿಗಳಲ್ಲಿ ಹೆಚ್ಚುವರಿ ಬಡ್ಡಿಯನ್ನು ನೀಡಲಾಗುತ್ತದೆ.
ಎಸ್‌ಬಿಐ ಆರ್‌ಡಿ ಬಡ್ಡಿ ದರಗಳು ಸಾಮಾನ್ಯ ಜನರಿಗೆ ಶೇ 5.3ರಿಂದ ಶೇ 5.5ರ ಮಧ್ಯೆ ಬದಲಾಗುತ್ತವೆ ಮತ್ತು ಹಿರಿಯ ನಾಗರಿಕರಿಗೆ 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚುವರಿ ಬಡ್ಡಿ ದರ ಏರಿಕೆ ಆಗುತ್ತದೆ. ಒಂದು ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ಆರ್‌ಡಿ ಮೇಲಿನ ಬಡ್ಡಿ ದರವು ಶೇ 5.3 ಆದಲ್ಲಿ, ಎರಡು ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮೇಲಿನ ಬಡ್ಡಿ ದರವು ಹಿಂದಿನ ಶೇ 5.20ರಿಂದ 15 ಬೇಸಿಸ್ ಪಾಯಿಂಟ್‌ಗಳಿಂದ ಶೇ 5.35ಕ್ಕೆ ಹೆಚ್ಚಿಸಲಾಗಿದೆ. ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ ಅವಧಿಯವರೆಗೆ ದರವು ಶೇ 5.45 ಆಗಿದೆ. ಐದು ವರ್ಷದಿಂದ 10 ವರ್ಷಗಳ ಅವಧಿಗೆ ಬಡ್ಡಿ ದರ ಶೇ 5.50 ಆಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರ್‌ಡಿ ದರಗಳು 14 ಜೂನ್ 2022ರಿಂದ ಈ ಕೆಳಕಂಡಂತಿವೆ:
1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಗೆ – ಶೇ 5.30
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಗೆ – ಶೇ 5.35
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಗೆ – ಶೇ 5.45
5 ವರ್ಷಗಳು ಮತ್ತು 10 ವರ್ಷಗಳವರೆಗೆ – ಶೇ 5.5
ಭಾರತೀಯ ರಿಸರ್ವ್ ಬ್ಯಾಂಕ್ನಿಂದ ರೆಪೊ ದರ ಹೆಚ್ಚಳದ ನಂತರ ಎಸ್‌ಬಿಐ ತನ್ನ ಠೇವಣಿ ಮತ್ತು ಸಾಲದ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಆಯ್ದ ಅವಧಿಗಳಿಗಾಗಿ ರೂ. 2 ಕೋಟಿಗಿಂತ ಕಡಿಮೆ ಇರುವ ದೇಶೀಯ ಟರ್ಮ್ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಶೇಕಡಾ 0.20ರಷ್ಟು ಹೆಚ್ಚಿಸಲಾಗಿದೆ ಎಂದು ಎಸ್‌ಬಿಐ ಹೇಳಿದೆ. ರೀಟೇಲ್ ದೇಶೀಯ ಟರ್ಮ್ ಡೆಪಾಸಿಟ್ಗಳ (ರೂ. 2 ಕೋಟಿಗಿಂತ ಕಡಿಮೆ) ಪರಿಷ್ಕೃತ ಬಡ್ಡಿದರಗಳು ಜೂನ್ 14, 2022ರಿಂದ ಜಾರಿಗೆ ಬರುತ್ತವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಎಸ್‌ಬಿಐ ಈ ಹಿಂದೆ ನೀಡುತ್ತಿದ್ದ ಶೇಕಡಾ 4.40ರ ಬಡ್ಡಿ ದರಕ್ಕೆ ಹೋಲಿಸಿದರೆ ಈಗ ಶೇ 4.60 ಬಡ್ಡಿದರ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಈ ಹಿಂದೆ ಶೇಕಡಾ 4.90ರ ಬಡ್ಡಿದರ ನೀಡುತ್ತಿದ್ದದ್ದು ಈಗ ಶೇಕಡಾ 5.10 ಬಡ್ಡಿಯನ್ನು ನೀಡಲಾಗುವುದು.
ಅದೇ ರೀತಿ, 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ದೇಶೀಯ ಟರ್ಮ್ ಡೆಪಾಸಿಟ್ಗಳಿಗೆ ಗ್ರಾಹಕರು ಶೇಕಡಾ 5.30ರ ಬಡ್ಡಿಯನ್ನು ಗಳಿಸಬಹುದು, ಶೇಕಡಾ 0.20ರಷ್ಟು ಹೆಚ್ಚಾಗುತ್ತದೆ. ಹಿರಿಯ ನಾಗರಿಕರಿಗೆ ಬಡ್ಡಿದರವು ಶೇಕಡಾ 5.80ಗೆ ಹೆಚ್ಚಾಗಿರುತ್ತದೆ. 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಟರ್ಮ್ ಮೇಲೆ ಎಸ್‌ಬಿಐ ಬಡ್ಡಿ ದರವನ್ನು ಶೇ 5.20ರಿಂದ ಶೇ 5.35ಕ್ಕೆ ಹೆಚ್ಚಿಸಿದೆ. ಆದರೆ ಹಿರಿಯ ನಾಗರಿಕರಿಗೆ ಈ ಹಿಂದೆ ನೀಡುತ್ತಿದ್ದ ಶೇಕಡಾ 5.70ಗೆ ಹೋಲಿಸಿದರೆ ಶೇಕಡಾ 5.85 ಬಡ್ಡಿ ಗಳಿಸಬಹುದು.
ಎಸ್ಬಿಐನಿಂದ ರೂ. 2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ದೇಶೀಯ ಬೃಹತ್ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಆಯ್ದ ಅವಧಿಗೆ ಶೇಕಡಾ 0.75ರಷ್ಟು ಪರಿಷ್ಕರಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಳೆದ ವಾರ ರೆಪೊ ದರವನ್ನು ಶೇ 0.50 ಹೆಚ್ಚಿಸಿ, ಶೇ 4.90ಗೆ ಏರಿಕೆ ಮಾಡಿತ್ತು. ರೆಪೋ ಎನ್ನುವುದು ಬ್ಯಾಂಕ್‌ಗಳಿಗೆ ಆರ್ಬಿಐನಿಂದ ನೀಡುವ ಅಲ್ಪಾವಧಿ ಸಾಲದ ದರವಾಗಿದೆ.
ಜೂನ್ 15, 2022ರಿಂದ ಜಾರಿಗೆ ಬರುವಂತೆ ಎಸ್‌ಬಿಐ ಮಾರ್ಜಿನಲ್ ಕಾಸ್ಟ್ ಲೆಂಡಿಂಗ್ ರೇಟ್ (MCLR) ಆಧಾರಿತ ಸಾಲದ ದರಗಳ ಮಾರ್ಜಿನಲ್ ವೆಚ್ಚದ ಶೇ 0.20ರಷ್ಟು ಪರಿಷ್ಕರಿಸಿದೆ. ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿರುವ ಪ್ರಕಾರ, ಜೂನ್ 15, 2022ರಿಂದ ಜಾರಿಗೆ ಬರುವಂತೆ ರೆಪೊ ಲಿಂಕ್ಡ್ ಲೆಂಡಿಂಗ್ ದರವನ್ನು (RLLR) ಹೆಚ್ಚಿಸಿದೆ. ಜೂನ್ 8ರಂದು ಆರ್‌ಬಿಐ ರೆಪೊ ದರ ಪರಿಷ್ಕರಣೆ ಮಾಡಿದ ನಂತರ ಹಲವಾರು ಬ್ಯಾಂಕ್‌ಗಳು ದರಗಳನ್ನು ಹೆಚ್ಚಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Electric Car Loan: ಎಸ್ಬಿಐನಿಂದ ಎಲೆಕ್ಟ್ರಿಕ್ ಕಾರು ಸಾಲ ಶೇ 7.25 ಬಡ್ಡಿ ದರದಿಂದ ಆರಂಭ