
ನವದೆಹಲಿ, ಏಪ್ರಿಲ್ 30: ಇಂಡಸ್ಇಂಡ್ ಬ್ಯಾಂಕ್ನ (IndusInd Bank) ಸಿಇಒ ಹಾಗು ಎಂಡಿಯಾಗಿದ್ದ ಸುಮಂತ್ ಕಠಪಾಲಿಯಾ (Sumant Kathpalia) ಅವರು ನಿನ್ನೆ ಸಂಜೆ ದಿಢೀರ್ ರಾಜೀನಾಮೆ ನೀಡಿದ ಕಂಪನಿಯ ನಾಯಕತ್ವದಿಂದ ಹೊರಬಂದಿದ್ದಾರೆ. ಇದೇ ವೇಳೆ, ಹಿಂದೂಜಾ ಕುಟುಂಬ ಬೆಂಬಲಿದ ಈ ಬ್ಯಾಂಕ್ನ ಹೊಸ ಮಧ್ಯಂತರ ನಾಯಕತ್ವದ (Interim leadership team) ತಂಡ ರಚನೆಗೆ ಆರ್ಬಿಐ ಅನುಮೋದನೆ ನೀಡಿದೆ. ಹೊಸ ತಂಡ ರಚನೆಯ ವಿಚಾರವನ್ನು ಇಂಡಸ್ಇಂಡ್ ಬ್ಯಾಂಕ್ ಇಂದು ಬುಧವಾರ ತನ್ನ ರೆಗ್ಯುಲೇಟರಿ ಫೈಲಿಂಗ್ನಲ್ಲಿ ತಿಳಿಸಿದೆ.
ಹೊಸ ಸಿಇಒ ನೇಮಕ ಆಗುವವರೆಗೂ ಇಂಡಸ್ ಇಂಡ್ ಬ್ಯಾಂಕ್ನ ಆಡಳಿತ ನಿರ್ವಹಣೆ ಮಾಡಲು ಕಾರ್ಯವಾಹಕರ ಸಮಿತಿ ರಚನೆಗೆ ಆರ್ಬಿಐ ಏಪ್ರಿಲ್ 29ರಂದು ಬರೆದ ಪತ್ರದಲ್ಲಿ ಅಧಿಕೃತವಾಗಿ ಒಪ್ಪಿಗೆ ನೀಡಿದೆ. ಈ ಮಧ್ಯಂತರ ಎಕ್ಸಿಕ್ಯೂಟಿವ್ ತಂಡದಲ್ಲಿ ಸೌಮಿತ್ರ ಸೇನ್ ಮತ್ತು ಅನಿಲ್ ರಾವ್ ಅವರಿದ್ದಾರೆ. ಸೌಮಿತ್ರ ಸೇನ್ ಅವರು ಕನ್ಸೂಮರ್ ಬ್ಯಾಂಕಿಂಗ್ ವಿಭಾಗದ ಮುಖ್ಯಸ್ಥರಾಗಿದ್ದರೆ, ಅನಿಲ್ ರಾವ್ ಅವರು ಮುಖ್ಯ ಆಡಳಿತ ಅಧಿಕಾರಿಯಾಗಿದ್ದಾರೆ. ಇವರಿಬ್ಬರೂ ಕೂಡ ತಾತ್ಕಾಲಿಕ ಅವಧಿಯವರೆಗೆ ಸಿಇಒ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ.
ಇದನ್ನೂ ಓದಿ: ಐಪಿಎಲ್ಗೆ ಟ್ಯಾಕ್ಸ್ ಹಾಕಿದ್ರೆ 10 ಹೊಸ ಐಐಟಿ: ಹೀಗೊಂದು ಸಲಹೆ ನೀಡಿದ ಬೆಂಗಳೂರಿನ ಪ್ರೊಫೆಸರ್
ಇಂಡಸ್ಇಂಡ್ ಬ್ಯಾಂಕ್ ಇತ್ತೀಚೆಗೆ ಡಿರೈವೇಟಿವ್ಸ್ ವಿಚಾರದಲ್ಲಿ ವಿವಾದದ ಮಸಿ ಮೆತ್ತಿಕೊಂಡಿದೆ. ಇದರ ನೈತಿಕ ಹೊಣೆ ಹೊತ್ತು ಸುಮಂತ್ ಕಥಪಾಲಿಯಾ ಅವರು ರಾಜೀನಾಮೆ ನೀಡಿದ್ದಾರೆ. ಹಾಗೆಂದು ಅವರು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ಬ್ಯಾಂಕ್ನ ಡಿರೈವೇಟಿವ್ ಪೋರ್ಟ್ಫೋಲಿಯೋದಲ್ಲಿ (ಎಫ್ ಅಂಡ್ ಒ ಟ್ರೇಡಿಂಗ್, ಫೋರೆಕ್ಸ್ ಟ್ರೇಡಿಂಗ್, ಸ್ಪೆಕ್ಯೂಲೇಶನ್ ಇತ್ಯಾದಿ) ಲೆಕ್ಕದ ಅಂದಾಜು ತಪ್ಪಿರುವುದರಿಂದ ಬ್ಯಾಂಕ್ನ ಮೌಲ್ಯವನ್ನು ಡಿಸೆಂಬರ್ ತಿಂಗಳಲ್ಲಿ ಶೇ. 2.35ರಷ್ಟು ಕಡಿಮೆ ಮಾಡಿದೆ ಎಂದು ಇಂಡ್ಇಂಡ್ ಬ್ಯಾಂಕ್ ಹೇಳಿತ್ತು. ಇದು ಬಹಿರಂಗಗೊಂಡ ಬಳಿಕ ಒಂದೇ ದಿನದಲ್ಲಿ ಅದರ ಷೇರುಬೆಲೆ ಶೇ. 26ರಷಟು ಕುಸಿದುಹೋಗಿತ್ತು.
ನಂತರ, ಆರ್ಬಿಐ ಇಂಡಸ್ಇಂಡ್ ಬ್ಯಾಂಕ್ನ ಸಿಇಒ ಅವರಿಗೆ ಗರಿಷ್ಠ 1 ವರ್ಷದವರೆಗೆ ಮಾತ್ರ ಮುಂದುವರಿಸಲು ಅವಕಾಶ ನೀಡಿತು. ಬ್ಯಾಂಕ್ ಮೂರು ವರ್ಷ ಸಿಇಒಗೆ ಅವಕಾಶ ನೀಡುವಂತೆ ಮಾಡಿದ ಮನವಿಯನ್ನು ರಿಸರ್ವ್ ಬ್ಯಾಂಕ್ ಪುರಸ್ಕರಿಸಲಿಲ್ಲ.
ಇದನ್ನೂ ಓದಿ: ಇಪಿಎಫ್ ಟ್ರಾನ್ಸ್ಫರ್ ಈಗ ತ್ವರಿತ, ಸರಳ; ಫಾರ್ಮ್ 13ರಲ್ಲಿ ತುಸು ಬದಲಾವಣೆ
ಈಗ ಸಿಇಒ ಸುಮಂತ್ ಕಥಪಾಲಿಯಾ ರಾಜೀನಾಮೆ ನೀಡಿದ ಬಳಿಕ ರಚನೆಯಾಗಿರುವ ಎಕ್ಸಿಕ್ಯೂಟಿವ್ ಕಮಿಟಿ ಮೂರು ತಿಂಗಳ ಕಾಲ ಆಡಳಿತ ನಿರ್ವಹಣೆ ಮಾಡಲಿದೆ. ಅಷ್ಟರಲ್ಲಿ ಬ್ಯಾಂಕ್ಗೆ ಹೊಸ ಸಿಇಒ ನೇಮಕವಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ