ಇನ್ಫೋಸಿಸ್ ನಾರಾಯಣಮೂರ್ತಿಯಿಂದ ಐಐಎಂಎಗೆ 20 ವರ್ಷದ ಸ್ಕಾಲರ್​​ಶಿಪ್ ಸ್ಕೀಮ್; ವಿದ್ಯಾರ್ಥಿಯ ಸರ್ವ ವೆಚ್ಚವೂ ಮೂರ್ತಿಗಳದ್ದೇ

Professor Jaswant G Krishnayya Merit Scholarship for IIMA toppers: ಅಹ್ಮದಾಬಾದ್​ನ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್​ನಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣಮೂರ್ತಿ ಅವರು ಸ್ಕಾಲರ್​​ಶಿಪ್ ಸ್ಕೀಮ್ ಪ್ರಕಟಿಸಿದ್ದಾರೆ. ಪ್ರೊಫೆಸರ್ ಕೃಷ್ಣಯ್ಯ ಮೆರಿಟ್ ಸ್ಕಾಲರ್​​ಶಿಪ್ ಹೆಸರಿನ ಈ ಯೋಜನೆಯಲ್ಲಿ ಟಾಪ್ಪರ್ ವಿದ್ಯಾರ್ಥಿಯ ಎಲ್ಲಾ ಶಿಕ್ಷಣ ವೆಚ್ಚವನ್ನು ಭರಿಸಲಾಗುತ್ತದೆ. ಮೊದಲ ವರ್ಷದ ಪೋಸ್ಟ್ ಗ್ರಾಜುಯೇಟ್ ಪ್ರೋಗ್ರಾಮ್​​ನಲ್ಲಿ ಟಾಪ್ಪರ್ ಆದ ವಿದ್ಯಾರ್ಥಿಯ ಎರಡು ವರ್ಷದ ಎಲ್ಲಾ ವೆಚ್ಚವನ್ನೂ ಈ ಸ್ಕೀಮ್​​ನಲ್ಲಿ ಭರಿಸಬಹುದು.

ಇನ್ಫೋಸಿಸ್ ನಾರಾಯಣಮೂರ್ತಿಯಿಂದ ಐಐಎಂಎಗೆ 20 ವರ್ಷದ ಸ್ಕಾಲರ್​​ಶಿಪ್ ಸ್ಕೀಮ್; ವಿದ್ಯಾರ್ಥಿಯ ಸರ್ವ ವೆಚ್ಚವೂ ಮೂರ್ತಿಗಳದ್ದೇ
ನಾರಾಯಣಮೂರ್ತಿ

Updated on: Jun 18, 2025 | 3:29 PM

ಬೆಂಗಳೂರು, ಜೂನ್ 18: ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಪ್ರತಿಷ್ಠಿತ ಐಐಎಂಎನಲ್ಲಿ ಓದುವ ಜಾಣ ವಿದ್ಯಾರ್ಥಿಗಳಿಗೆ 20 ವರ್ಷದ ಸ್ಕಾಲರ್​​ಶಿಪ್ ಸ್ಕೀಮ್​​ವೊಂದನ್ನು ಘೋಷಿಸಿದ್ದಾರೆ. ಬಹಳ ದುಬಾರಿ ಎನಿಸುವ ಐಐಎಂಎ (IIM- Ahmedabad) ಓದಿನ ವೆಚ್ಚವನ್ನು ಮೂರ್ತಿಗಳೇ ಪೂರ್ಣವಾಗಿ ಭರಿಸಲಿದ್ದಾರೆ. ತಮ್ಮ ಕುಟುಂಬದ ಹೂಡಿಕೆ ಸಂಸ್ಥೆಯಾದ ಕಟಮರನ್ ವೆಂಚರ್ಸ್ (Catamaran Ventures) ಮೂಲಕ ಅವರು ಈ ಸ್ಕೀಮ್ ನಡೆಸಲಿದ್ದಾರೆ. ಮೊದಲಿಗೆ ಅವರು ಇದಕ್ಕಾಗಿ 12 ಕೋಟಿ ರೂ ತೆಗೆದಿರಿಸಲು ಬದ್ಧವಾಗಿದ್ದಾರೆ.

ಏನಿದು ನಾರಾಯಣಮೂರ್ತಿ ಅವರ ಈ ಐಐಎಂಎ ಸ್ಕಾಲರ್​​ಶಿಪ್ ಸ್ಕೀಮ್?

ಅಹ್ಮದಾಬಾದ್​​ನ ಇಂಡಿಯನ್ ಇನ್ಸ್​​ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಎಂಬಿಎ ಓದುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್​​ಶಿಪ್ ಸ್ಕೀಮ್​​ಗೆ ಪ್ರೊಫೆಸರ್ ಜಸ್ವಂತ್ ಜಿ ಕೃಷ್ಣಯ್ಯ ಮೆರಿಟ್ ಸ್ಕಾಲರ್​​ಶಿಪ್ ಎಂದು ಹೆಸರಿಡಲಾಗಿದೆ. ನಾರಾಯಣಮೂರ್ತಿ ಅವರು ಐಐಎಂಎನಲ್ಲಿ ಮುಖ್ಯ ಸಿಸ್ಟಂ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾಗ ಅವರಿಗೆ ಮಾರ್ಗದರ್ಶಕರಂತಿದ್ದವರು ಪ್ರೊ. ಜೆಜಿ ಕೃಷ್ಣಯ್ಯ ಅವರೆಯೇ. ಅವರ ಸ್ಮರಣಾರ್ಥವಾಗಿ ಅವರ ಹೆಸರಿನಲ್ಲಿ ಸ್ಕಾಲರ್​​ಶಿಪ್ ನಡೆಸಲಾಗುತ್ತಿದೆ.

ಇದನ್ನೂ ಓದಿ: ಈ ಕಂಪನಿ ಮೇಲೆ ಮಾಡಿದ 500 ಕೋಟಿ ರೂ ಹೂಡಿಕೆಯಿಂದ ಅಂಬಾನಿಗೆ ಸಿಕ್ಕ ಲಾಭ 9,000 ಕೋಟಿ ರೂ

ಈ ಯೋಜನೆಯಲ್ಲಿ ಎಂಬಿಎ ಕೋರ್ಸ್​​ನ ಮೊದಲ ವರ್ಷದಲ್ಲಿ ಪೋಸ್ಟ್ ಗ್ರಾಜುಯೇಟ್ ಪ್ರೋಗ್ರಾಮ್​​ನಲ್ಲಿ (PGP-1) ಮೊದಲ ಸ್ಥಾನ ಪಡೆಯುವ ವಿದ್ಯಾರ್ಥಿಗೆ ಸ್ಕಾಲರ್​​ಶಿಪ್ ಸಿಗುತ್ತದೆ. ಎರಡು ವರ್ಷದ ಕೋರ್ಸ್ ಓದಲು ವಿದ್ಯಾರ್ಥಿಗೆ ಆಗುವ ಎಲ್ಲಾ ವೆಚ್ಚವನ್ನೂ ಈ ಪ್ರೋಗ್ರಾಮ್​​ನಲ್ಲಿ ಭರಿಸಲಾಗುತ್ತದೆ.

ಎಲ್ಲಾ ವೆಚ್ಚ ಎಂದರೆ, ತರಗತಿ, ಹಾಸ್ಟೆಲ್, ಊಟ, ಕೋರ್ಸ್ ಮೆಟೀರಿಯಲ್, ಜೀವನ ವೆಚ್ಚ ಇತ್ಯಾದಿ ಎಲ್ಲವೂ ಒಳಗೊಂಡಿರುತ್ತದೆ.

20 ವರ್ಷ ಕಾಲ ನಾರಾಯಣಮೂರ್ತಿ ಅವರು ಈ ಸ್ಕಾಲರ್​​ಶಿಪ್ ಪ್ರೋಗ್ರಾಮ್ ನಡೆಸಲು ಉದ್ದೇಶಿಸಿದ್ದಾರೆ. ಈ ಸ್ಕೀಮ್​​ಗೆ 12 ಕೋಟಿ ರೂ ನೀಡಲು ಬದ್ಧರಾಗಿದ್ದಾರೆ. ಸದ್ಯ ಐಐಎಂಎನಲ್ಲಿ ಎರಡು ವರ್ಷದ ಎಂಬಿಎ ಪಿಡಿಪಿ ಕೋರ್ಸ್ ಓದಲು 28 ಲಕ್ಷ ರೂ ವೆಚ್ಚವಾಗುತ್ತದೆ. ಮುಂದಿನ ದಿನಗಳಲ್ಲಿ ಕೋರ್ಸ್ ವೆಚ್ಚ ಏರುತ್ತಲೇ ಇರಬಹುದು. 20 ವರ್ಷದ ಬಳಿಕ ಕೋರ್ಸ್ ವೆಚ್ಚ ಒಂದು ಕೋಟಿ ಆಗುವ ನಿರೀಕ್ಷೆ ಇದೆ. ವೆಚ್ಚ ಎಷ್ಟಿದ್ದರೂ ಸ್ಕಾಲರ್​​ಶಿಪ್ ಸ್ಕೀಮ್​​ನಲ್ಲಿ ಎಲ್ಲವನ್ನೂ ಭರಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಇದನ್ನೂ ಓದಿ: ಗಮನಿಸಿ, ಐಸಿಐಸಿಐ ಬ್ಯಾಂಕ್​​ನ ಎಟಿಎಂ ಟ್ರಾನ್ಸಾಕ್ಷನ್, ಕ್ಯಾಷ್ ಡೆಪಾಸಿಟ್ ಇತ್ಯಾದಿ ಶುಲ್ಕಗಳಲ್ಲಿ ಬದಲಾವಣೆ

ಮನಿಕಂಟ್ರೋಲ್ ವೆಬ್​​ಸೈಟ್​​ಗೆ ನೀಡಿದ ಸಂದರ್ಶನದಲ್ಲಿ ನಾರಾಯಣಮೂರ್ತಿ ಈ ವಿಷಯ ತಿಳಿಸಿದ್ದಾರೆ. ಹಿಂದೆ ತಾನು ಹಾಗೂ ತಮ್ಮ ಪತ್ನಿ ಸುಧಾ ಮೂರ್ತಿ ಅವರು ಐಐಟಿ ಕಾನಪುರ್ ಮತ್ತು ಐಐಎಸ್​​​ಸಿ ಶಿಕ್ಷಣ ಸಂಸ್ಥೆಗಳಿಗೆ ಇನ್ಫೋಸಿಸ್ ಷೇರುಗಳನ್ನು ನೀಡಲು ಯತ್ನಿಸಿದ್ದು, ಅದು ಸ್ವೀಕೃತವಾಗದೇ ಹೋಗಿದ್ದು ಇವೆಲ್ಲವನ್ನೂ ಸ್ಮರಿಸಿದ್ಧಾರೆ. ಈ ಷೇರುಗಳು ಸಿಕ್ಕಿದ್ದರೆ ಇವತ್ತು ಅವುಗಳ ಮೌಲ್ಯ ಸಾವಿರಾರು ಕೋಟಿ ರೂ ಆಗಿರುತ್ತಿತ್ತು. ಹತ್ತಾರು ಕೋಟಿ ರೂನಷ್ಟು ಡಿವಿಡೆಂಡ್​​ಗಳೇ ಬರುತ್ತಿದ್ದವು ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Wed, 18 June 25