AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಜಂಟಿ ಹೇಳಿಕೆ ಬಿಡುಗಡೆ: ಟ್ರೇಡ್ ಡೀಲ್​ನಲ್ಲಿ ಏನೇನಿದೆ ಗೊತ್ತಾ?

ಭಾರತ ಮತ್ತು ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ. ಇದು ಭವಿಷ್ಯದ ದ್ವಿಪಕ್ಷೀಯ ವ್ಯಾಪಾರಕ್ಕೆ ಭದ್ರ ಬುನಾದಿ ಎಂದು ಉಲ್ಲೇಖಿಸಲಾಗಿದ್ದು, ಅಮೆರಿಕ ಉತ್ಪನ್ನಗಳ ಸುಂಕ ಕಡಿತಕ್ಕೆ ಭಾರತ ಒಪ್ಪಿದರೆ, ಭಾರತೀಯ ವಸ್ತುಗಳ ಮೇಲಿನ ಸುಂಕವನ್ನು ಅಮೆರಿಕ ಶೇ 18ಕ್ಕೆ ಇಳಿಸಿದೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಜಂಟಿ ಹೇಳಿಕೆ ಬಿಡುಗಡೆ: ಟ್ರೇಡ್ ಡೀಲ್​ನಲ್ಲಿ ಏನೇನಿದೆ ಗೊತ್ತಾ?
ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ಮೋದಿ
Ganapathi Sharma
|

Updated on: Feb 07, 2026 | 11:02 AM

Share

ನವದೆಹಲಿ/ವಾಷಿಂಗ್ಟನ್: ಮಧ್ಯಂತರ ವ್ಯಾಪಾರ ಒಪ್ಪಂದದ ಬಗ್ಗೆ (Interim Agreement) ಅಮೆರಿಕ ಹಾಗೂ ಭಾರತ ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ. ಈ ಒಪ್ಪಂದವು ಭವಿಷ್ಯದ ದ್ವಿಪಕ್ಷೀಯ ವ್ಯಾಪಾರ (Bilateral Trade Agreement – BTA) ಮಾತುಕತೆಗಳಿಗೆ ಬಲ ನೀಡುವ ಮಹತ್ವದ ಹೆಜ್ಜೆಯಾಗಿದೆ ಎಂದು ಎರಡೂ ದೇಶಗಳು ಬಣ್ಣಿಸಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ 2025ರ ಫೆಬ್ರವರಿ 13ರಂದು ಆರಂಭಿಸಿದ್ದ ವ್ಯಾಪಾರ ಮಾತುಕತೆಗಳ ಮುಂದುವರಿದ ಭಾಗವಾಗಿ ಈ ಮಧ್ಯಂತರ ಒಪ್ಪಂದ ಏರ್ಪಟ್ಟಿದೆ. ಪರಸ್ಪರ ಹಿತಾಸಕ್ತಿಯ ಆಧಾರದ ಮೇಲೆ ಸಮಾನ ಮತ್ತು ಸಮತೋಲಿತ ವ್ಯಾಪಾರ ಸಂಬಂಧ ಬೆಳೆಸುವ ಉದ್ದೇಶದಿಂದ ಈ ಒಪ್ಪಂದ ರೂಪಿಸಲಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಂಟಿ ಹೇಳಿಕೆಯ ಪ್ರತಿಯನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪೀಯೂಷ್ ಗೋಯಲ್ ಎಕ್ಸ್ ಹ್ಯಾಂಡಲ್​ನಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಣಾಯಕ ನಾಯಕತ್ವದಲ್ಲಿ, ಭಾರತವು ಅಮೆರಿಕದೊಂದಿಗೆ ಮಧ್ಯಂತರ ಒಪ್ಪಂದಕ್ಕೆ ತಲುಪಿದೆ. ಇದು ಭಾರತೀಯ ರಫ್ತುದಾರರಿಗೆ, ವಿಶೇಷವಾಗಿ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು, ರೈತರು ಮತ್ತು ಮೀನುಗಾರರಿಗೆ 30 ಟ್ರಿಲಿಯನ್ ಡಾಲರ್ ಮಾರುಕಟ್ಟೆಯನ್ನು ತೆರೆದಿಡಲಿದೆ. ರಫ್ತು ಹೆಚ್ಚಳವು ನಮ್ಮ ಮಹಿಳೆಯರು ಮತ್ತು ಯುವಕರಿಗೆ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪೀಯೂಷ್ ಗೋಯಲ್ ಹೇಳಿದ್ದಾರೆ.

ಪೀಯೂಷ್ ಗೋಯಲ್ ಎಕ್ಸ್ ಸಂದೇಶ

ಅಮೆರಿಕ ಉತ್ಪನ್ನಗಳಿಗೆ ಸುಂಕ ಕಡಿತ

ಮಧ್ಯಂತರ ವ್ಯಾಪಾರ ಒಪ್ಪಂದದ ಪ್ರಕಾರ ಭಾರತವು ಅಮೆರಿಕಾದ ಕೈಗಾರಿಕಾ ವಸ್ತುಗಳ ಮೇಲಿನ ಸುಂಕಗಳನ್ನು ಕಡಿಮೆ ಅಥವಾ ರದ್ದುಪಡಿಸುವುದಕ್ಕೆ ಒಪ್ಪಿಕೊಂಡಿದೆ. ಜೊತೆಗೆ ಪಶು ಆಹಾರ, ಕಾಯಿ, ಹಣ್ಣು, ಸೋಯಾಬಿನ್ ಎಣ್ಣೆ, ವೈನ್ ಸೇರಿದಂತೆ ಹಲವಾರು ಕೃಷಿ ಉತ್ಪನ್ನಗಳಿಗೆ ಭಾರತೀಯ ಮಾರುಕಟ್ಟೆ ಪ್ರವೇಶ ಸುಗಮವಾಗಲಿದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತದ ಉತ್ಪನ್ನಗಳ ಮೇಲಿನ ಆಮದು ಸುಂಕ ಶೇ 18ಕ್ಕೆ ಇಳಿಕೆ

ಭಾರತದಿಂದ ಆಗುವ ವಸ್ತುಗಳ ಮೇಲಿನ ಆಮದು ಸುಂಕವನ್ನು ಅಮೆರಿಕಾ ಶೇ 18 ಕ್ಕೆ ಇಳಿಕೆ ಮಾಡಿದೆ. ಒಪ್ಪಂದ ಅಂತಿಮಗೊಂಡ ಬಳಿಕ ಜವಳಿ, ಚರ್ಮ, ಪಾದರಕ್ಷೆ, ಯಂತ್ರೋಪಕರಣ, ರತ್ನ-ವಜ್ರ, ಜನರಿಕ್ ಔಷಧಿಗಳು ಸೇರಿದಂತೆ ಹಲವು ವಸ್ತುಗಳ ಮೇಲಿನ ಸುಂಕಗಳನ್ನು ಹಂತ ಹಂತವಾಗಿ ತೆಗೆದುಹಾಕುವ ಯೋಜನೆ ಬಗ್ಗೆ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.

ವಿಮಾನ, ಆಟೋ, ಔಷಧ ಕ್ಷೇತ್ರಕ್ಕೆ ಉತ್ತೇಜನ

ಭಾರತದ ವಿಮಾನ ಬಿಡಿ ಭಾಗಗಳು, ಆಟೋಮೊಬೈಲ್ ಪಾರ್ಟ್ಸ್‌ಗಳಿಗೆ ವಿಶೇಷ ಸುಂಕ ವಿನಾಯಿತಿಗಳನ್ನು ನೀಡಲು ಅಮೆರಿಕಾ ಒಪ್ಪಿಕೊಂಡಿದೆ. ಜೊತೆಗೆ ಜನರಿಕ್ ಔಷಧಿಗಳ ಕ್ಷೇತ್ರದಲ್ಲಿ ಸಹಭಾಗಿತ್ವ ಹೆಚ್ಚಿಸಲು ಮಾತುಕತೆ ಮುಂದುವರಿಯಲಿದೆ.

ಆಮದು ನಿರ್ಬಂಧಗಳನ್ನು ಕಡಿಮೆ ಮಾಡಲು ಸಮ್ಮತಿ

ವೈದ್ಯಕೀಯ ಸಾಧನಗಳು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ವಸ್ತುಗಳ ಮೇಲೆ ಇರುವ ಆಮದು ನಿರ್ಬಂಧಗಳನ್ನು ಕಡಿಮೆ ಮಾಡಲು ಭಾರತ ಒಪ್ಪಿಕೊಂಡಿದೆ. ಕೃಷಿ ಮತ್ತು ಆಹಾರ ಉತ್ಪನ್ನಗಳ ವ್ಯಾಪಾರದಲ್ಲಿರುವ ದೀರ್ಘಕಾಲದ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಎರಡೂ ರಾಷ್ಟ್ರಗಳು ಕಾರ್ಯನಿರ್ವಹಿಸಲಿವೆ.

ಒಪ್ಪಂದದ ಲಾಭವು ಭಾರತ ಮತ್ತು ಅಮೆರಿಕಾ ಎರಡಕ್ಕೂ ಸಿಗುವಂತೆ ‘ರೂಲ್ಸ್ ಆಫ್ ಒರಿಜಿನ್’ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಡಿಜಿಟಲ್ ವ್ಯಾಪಾರದಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಿ ಭದ್ರ ಮತ್ತು ಪಾರದರ್ಶಕ ನಿಯಮಗಳನ್ನು ರೂಪಿಸಲು ಸಹ ಒಪ್ಪಂದದಲ್ಲಿ ಒತ್ತು ನೀಡಲಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಮೆರಿಕದಿಂದ 500 ಬಿಲಿಯನ್ ಡಾಲರ್ ಖರೀದಿಗೆ ಪ್ಲಾನ್

ಮುಂದಿನ ಐದು ವರ್ಷಗಳಲ್ಲಿ ಭಾರತವು ಅಮೆರಿಕಾದಿಂದ 500 ಬಿಲಿಯನ್ ಡಾಲರ್ ಮೌಲ್ಯದ ಇಂಧನ, ವಿಮಾನ ಮತ್ತು ಅವುಗಳ ಭಾಗಗಳು, ಅಮೂಲ್ಯ ಲೋಹಗಳು, ತಂತ್ರಜ್ಞಾನ ಉತ್ಪನ್ನಗಳು ಹಾಗೂ ಕಲ್ಲಿದ್ದಲು ಖರೀದಿಸುವ ಉದ್ದೇಶ ಹೊಂದಿರುವ ಬಗ್ಗೆ ವ್ಯಾಪಾರ ಒಪ್ಪಂದದಲ್ಲಿ ಪ್ರಸ್ತಾಪಿಸಲಾಗಿದೆ. ಜೊತೆಗೆ ಡೇಟಾ ಸೆಂಟರ್‌ಗಳಿಗೆ ಅಗತ್ಯವಿರುವ ಜಿಪಿಯು ಸೇರಿದಂತೆ ತಂತ್ರಜ್ಞಾನ ವಸ್ತುಗಳ ವ್ಯಾಪಾರವನ್ನು ಹೆಚ್ಚಿಸಲು ಯೋಜಿಸಲಾಗಿದೆ.

ಪೂರೈಕೆ ಸರಪಳಿ, ಹೂಡಿಕೆ ಸಹಕಾರ

ಪೂರೈಕೆ ಸರಪಳಿಗಳನ್ನು ಬಲಪಡಿಸಲು, ಹೂಡಿಕೆ ಮತ್ತು ತಂತ್ರಜ್ಞಾನ ಸಹಭಾಗಿತ್ವ ವಿಸ್ತರಿಸಲು ಹಾಗೂ ಜಾಗತಿಕ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಎರಡೂ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿವೆ.

ಇದನ್ನೂ ಓದಿ: ಭಾರತ-ಅಮೆರಿಕಕ್ಕೆ ಗ್ರೇಟ್ ನ್ಯೂಸ್: ಟ್ರೇಡ್ ಡೀಲ್ ಬಗ್ಗೆ ಪ್ರಧಾನಿ ಮೋದಿ ಹರ್ಷ, ಟ್ರಂಪ್ ಬಗ್ಗೆ ಮೆಚ್ಚುಗೆ ಮಾತು

ಈ ಮಧ್ಯಂತರ ಒಪ್ಪಂದವನ್ನು ಶೀಘ್ರ ಜಾರಿಗೆ ತಂದು, ಪರಸ್ಪರ ಲಾಭದಾಯಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವತ್ತ ಭಾರತ ಮತ್ತು ಅಮೆರಿಕಾ ಮುಂದುವರಿಯಲಿವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ