
ಮುಂಬೈ, ಅಕ್ಟೋಬರ್ 15: ರಿಲಯನ್ಸ್ ಜಿಯೋ ಪ್ಲಾಟ್ಫಾರ್ಮ್ಸ್ನ (Jio Platforms) ಬೃಹತ್ ಐಪಿಒ ಬಿಡುಗಡೆಯ ಪ್ರಕಟಣೆಯು ಭಾರತೀಯ ಕಾರ್ಪೊರೇಟ್ ಇತಿಹಾಸದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ಖ್ಯಾತ ಬ್ಯಾಂಕರ್ ಉದಯ್ ಕೋಟಕ್ (Uday Kotak) ಬಣ್ಣಿಸಿದ್ದಾರೆ. ಭಾರತದ ಡಿಜಿಟಲ್ ಪರಿವರ್ತನೆ ಮತ್ತು ದೀರ್ಘಕಾಲದ ಪರಿಶ್ರಮಕ್ಕೆ ಇದು ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಿಯೋ ಪ್ಲಾಟ್ಫಾರ್ಮ್ಸ್ನ ಈ ಸಾರ್ವಜನಿಕ ಷೇರು ಬಿಡುಗಡೆಯು (IPO) ಭಾರತದ ಮಾರುಕಟ್ಟೆ ಇತಿಹಾಸದಲ್ಲೇ ಇದುವರೆಗಿನ ಅತಿ ದೊಡ್ಡ ಐಪಿಒ ಆಗಿ ಹೊರಹೊಮ್ಮಲಿದೆ ಎಂದು ಉದಯ್ ಕೋಟಕ್ ತಿಳಿಸಿದ್ದಾರೆ.
1977ರಲ್ಲಿ ಧೀರೂಭಾಯಿ ಅಂಬಾನಿ ಅವರು ಸಾಮಾನ್ಯ ಜನರನ್ನು ರಿಲಯನ್ಸ್ನ ಬೆಳವಣಿಗೆಯಲ್ಲಿ ಪಾಲುದಾರರನ್ನಾಗಿ ಮಾಡಲು ಆರಂಭಿಸಿದ ಐತಿಹಾಸಿಕ ಪಯಣದ ಮುಂದುವರಿದ ಭಾಗವೇ ಇಂದಿನ ಜಿಯೋ ಯಶಸ್ಸು ಎಂದು ಬ್ಯಾಂಕಿಂಗ್ ಉದ್ಯಮಿಯಾದ ಉದಯ್ ಕೋಟಕ್ ಅವರು ಸ್ಮರಿಸಿದ್ದಾರೆ. ಭಾರತವನ್ನು ಡಿಜಿಟಲ್ ಯುಗದಲ್ಲಿ ಮುಂಚೂಣಿಗೆ ತರಲು ಜಿಯೋ ನಡೆಸಿರುವ ಸಾಹಸಯಾತ್ರೆ ಮತ್ತು ನಿರಂತರ ಪರಿಶ್ರಮವು ದೇಶದ ಆರ್ಥಿಕತೆಗೆ ದೊಡ್ಡ ಶಕ್ತಿ ತುಂಬಿದೆ ಎಂದು ಅವರು ಶ್ಲಾಘಿಸಿದ್ದಾರೆ.
‘ಸ್ವಂತವಾಗಿ ನಿರ್ಮಿಸಲಾದ ಎಂಡ್-ಟು-ಎಂಡ್ ಡಿಜಿಟಲ್ ಕನೆಕ್ಟಿವಿಟಿ ಸ್ಟ್ಯಾಕ್ ಹೊಂದಿರುವ ವಿಶ್ವದ ಏಕೈಕ ಟೆಲಿಕಾಂ ಕಂಪನಿ ಜಿಯೊ’ ಎಂದು ಉದಯ್ ಕೋಟಕ್ ಬಣ್ಣಿಸಿದ್ದಾರೆ.
ಇದನ್ನೂ ಓದಿ: ಅಂಬಾನಿ ಮತ್ತು ರಿಲಯನ್ಸ್ನ ಮೂರು ತಲೆಮಾರಿನ ಕಥೆ; ಗುರಿ, ಛಲ, ಕನಸುಗಳೊಂದಿಗೆ ಹೆಜ್ಜೆ
ರಿಲಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ಜಿಯೋ ಪ್ಲಾಟ್ಫಾರ್ಮ್ಸ್ ಸಂಸ್ಥೆಯ ಐಪಿಒ ಬಿಡುಗಡೆಯಾಗುತ್ತಿದ್ದು, ಇದೇ ಅಕ್ಟೋಬರ್ 21ರಿಂದ 23ರವರೆಗೆ ಸಾರ್ವಜನಿಕರ ಹೂಡಿಕೆಗೆ ಲಭ್ಯ ಇರುತ್ತದೆ. 30,000 ಕೋಟಿ ರೂಗೂ ಅಧಿಕ ಗಾತ್ರದ ಐಪಿಒ ಇದಾಗಿದ್ದು, ಭಾರತದ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಎನಿಸುತ್ತಿದೆ. ಈ ಐಪಿಒದ ಮುಖ್ಯ ನಿರ್ವಾಹಕ ಸಂಸ್ಥೆಗಳಲ್ಲಿ ಕೋಟಕ್ ಮಹೀಂದ್ರ ಕ್ಯಾಪಿಟಲ್ ಮೊದಲಾದವು ಇವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ