ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕವೇ ಅಗ್ರಗಣ್ಯ: 2025-26ನೇ ಹಣಕಾಸು ವರ್ಷದಲ್ಲಿ 173 ಬಿಲಿಯನ್ ಡಾಲರ್‌ ವಹಿವಾಟು

2025-26ನೇ ಹಣಕಾಸು ವರ್ಷದಲ್ಲಿ 173 ಬಿಲಿಯನ್ ಡಾಲರ್‌ ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತು ಮಾಡುವ ಮೂಲಕ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಒಟ್ಟು ರಫ್ತಿನಲ್ಲಿ ಶೇ. 41ರಷ್ಟು ಪಾಲು ಹೊಂದಿದೆ. ಈ ಕುರಿತ ಮಾಹಿತಯ್ನು ಸ್ವತಃ ಸಿಎಂ ಡಿ.ಕೆ. ಶಿವಕುಮಾರ್ ಅವರೇ ಹಂಚಿಕೊಂಡಿದ್ದು, ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಉತ್ಪಾದನಾ ಕ್ಷೇತ್ರ, ಏರೋಸ್ಪೇಸ್, ಸಂಶೋಧನೆ ಹಾಗೂ ನವೋದ್ಯಮಗಳಲ್ಲಿ ಕರ್ನಾಟಕದ ಶಕ್ತಿ ಅಡಗಿದೆ ಎಂದು ಅವರು ತಿಳಿಸಿದ್ದಾರೆ.

ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕವೇ ಅಗ್ರಗಣ್ಯ: 2025-26ನೇ ಹಣಕಾಸು ವರ್ಷದಲ್ಲಿ 173 ಬಿಲಿಯನ್ ಡಾಲರ್‌ ವಹಿವಾಟು
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jun 17, 2026 | 7:20 AM

ಬೆಂಗಳೂರು, ಜೂನ್​​ 17: ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕವು ದೇಶದ ಅಗ್ರ ರಾಜ್ಯ ಎಂಬ ತನ್ನ ಸ್ಥಾನವನ್ನು ಮತ್ತೊಮ್ಮೆ ಉಳಿಸಿಕೊಂಡಿದೆ. ಈ ಕುರಿತ ಮಾಹಿತಯ್ನು ಸ್ವತಃ ಸಿಎಂ ಡಿ.ಕೆ. ಶಿವಕುಮಾರ್ ಅವರೇ ಎಕ್ಸ್​​ ಪೋಸ್ಟ್​​ ಮೂಲಕ ಹಂಚಿಕೊಂಡಿದ್ದು, 2025-26ನೇ ಹಣಕಾಸು ವರ್ಷದಲ್ಲಿ ಸುಮಾರು 173 ಬಿಲಿಯನ್ ಡಾಲರ್‌ (ಸುಮಾರು ₹19.7 ಲಕ್ಷ ಕೋಟಿ) ಮೌಲ್ಯದ ರಫ್ತು ದಾಖಲಿಸಿದೆ. ಇದರ ಜೊತೆಗೆ 34 ಬಿಲಿಯನ್ ಡಾಲರ್‌ ಮೌಲ್ಯದ ಸರಕು (Merchandise) ರಫ್ತಿನೊಂದಿಗೆ ಕರ್ನಾಟಕ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.

ಶೇ. 9.3ರಷ್ಟು ಬೆಳವಣಿಗೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಾಗೂ ಡೈರೆಕ್ಟರೇಟ್ ಜನರಲ್ ಆಫ್ ಕಮರ್ಷಿಯಲ್ ಇಂಟೆಲಿಜೆನ್ಸ್ ಅಂಡ್ ಸ್ಟಾಟಿಸ್ಟಿಕ್ಸ್ (DGCIS) ಅಂಕಿಅಂಶಗಳ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ರಾಜ್ಯದ ಸಾಫ್ಟ್‌ವೇರ್, ಸೇವೆ ಹಾಗೂ ಸರಕು ರಫ್ತುಗಳಲ್ಲಿ ಶೇ. 9.3ರಷ್ಟು ಬೆಳವಣಿಗೆ ದಾಖಲಾಗಿದೆ. ಭಾರತದ ಪ್ರಮುಖ ಸಾಫ್ಟ್‌ವೇರ್ ಮತ್ತು ಸೇವಾ ರಫ್ತು ರಾಜ್ಯವಾಗಿ ಕರ್ನಾಟಕ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಉತ್ಪಾದನಾ ಕ್ಷೇತ್ರ, ಏರೋಸ್ಪೇಸ್, ಸಂಶೋಧನೆ ಹಾಗೂ ನವೋದ್ಯಮಗಳಲ್ಲಿ ಕರ್ನಾಟಕದ ಶಕ್ತಿ ಅಡಗಿದೆ. ವಿಶ್ವಮಟ್ಟದ ಪ್ರತಿಭೆ, ಚೈತನ್ಯಮಯ ಆರ್ಥಿಕತೆ ಹಾಗೂ ಉದ್ಯಮಶೀಲತೆಯ ಮನೋಭಾವವೇ ರಾಜ್ಯದ ಯಶಸ್ಸಿನ ಮೂಲ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ಕೆಲವೇ ಎಐ ಮಾಡಲ್​ಗಳು ಇಡೀ ಉದ್ಯಮವನ್ನೇ ನುಂಗಿ ನೀರು ಕುಡಿಯಲು ಬಿಡಬಾರದು; ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ದೇಶದ ಸಾಫ್ಟ್‌ವೇರ್ ರಫ್ತಿನಲ್ಲಿ ಕರ್ನಾಟಕದ ಪ್ರಾಬಲ್ಯ

2025-26ನೇ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಸಾಫ್ಟ್‌ವೇರ್ ಮತ್ತು ಸೇವಾ ರಫ್ತಿನ ಶೇ. 41ರಷ್ಟು ಪಾಲು ಕರ್ನಾಟಕದ್ದಾಗಿದೆ.

ಇತರೆ ಪ್ರಮುಖ ರಾಜ್ಯಗಳ ಪಾಲು

  • ಮಹಾರಾಷ್ಟ್ರ – ಶೇ. 16
  • ತಮಿಳುನಾಡು – ಶೇ. 12.5
  • ಉತ್ತರ ಪ್ರದೇಶ – ಶೇ. 5
  • ಆಂಧ್ರ ಪ್ರದೇಶ – ಶೇ. 1
  • ಗುಜರಾತ್ – ಶೇ. 0.9

ಕರ್ನಾಟಕದ ಉತ್ಪನ್ನಗಳು, ಸೇವೆಗಳು ಮತ್ತು ಆಲೋಚನೆಗಳು ಜಾಗತಿಕ ಮಾರುಕಟ್ಟೆ ತಲುಪುತ್ತಿರುವ ಸಂದರ್ಭದಲ್ಲಿ ಹೂಡಿಕೆ, ಕೈಗಾರಿಕೆ, ಉದ್ಯಮಶೀಲತೆ ಹಾಗೂ ಉದ್ಯೋಗ ಸೃಷ್ಟಿಗೆ ಇನ್ನಷ್ಟು ಅವಕಾಶಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಗುರಿ ಎಂದು ಮುಖ್ಯಮಂತ್ರಿಗಳು ತಿಳಿಸಿರುವುದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:19 am, Wed, 17 June 26

Follow Us