RBI: 2,000 ರೂ ನೋಟು ಹಿಂಪಡೆದದ್ದರಿಂದ ಯಾರಿಗೆ ಲಾಭ? ಇಲ್ಲಿದೆ ಒಂದು ರಿಪೋರ್ಟ್
Benefits Of Withdrawing Rs 2,000 Notes: ಸರಕಾರ 2,000 ರೂ ನೋಟನ್ನು ಹಿಂಪಡೆದ ಬಳಿಕ ಜನರು ಚಿನ್ನ ಖರೀದಿಸಲು ಆಸಕ್ತಿ ತೋರುತ್ತಿರುವುದು ಬೆಳಕಿಗೆ ಬಂದಿದೆ. ಹಾಗೆಯೇ, ಸರ್ಕಾರದ ಕ್ರಮದಿಂದ ಹಣಕಾಸು ಸಂಸ್ಥೆಗಳಿಗೆ ಹಣದ ಹರಿವು ಹೆಚ್ಚುವ ನಿರೀಕ್ಷೆ ಇದೆ.
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ 2,000 ರೂ ಮುಖಬೆಲೆಯ ನೋಟುಗಳನ್ನು (Rs 2,000 Note) ಚಲಾವಣೆಯಿಂದ ಹಿಂಪಡೆಯುವ ಮೂಲಕ ಹಲವು ಮಂದಿಗೆ ಅಚ್ಚರಿ ಹುಟ್ಟಿಸಿದೆ. ನಾಳೆಯಿಂದ ಸೆಪ್ಟಂಬರ್ 30ರವರೆಗೂ ಈ ನೋಟುಗಳನ್ನು ಅದಲುಬದಲು ಮಾಡಲು ಅವಕಾಶ ಕೊಡಲಾಗಿದೆ. ಆರ್ಬಿಐನ ಕ್ಲೀನ್ ನೋಟ್ ಪಾಲಿಸಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 2016ರಲ್ಲಿ ಕೇಂದ್ರ ಸರ್ಕಾರ ಮಾಡಿದ್ದ ನೋಟ್ ಬ್ಯಾನ್ ಕ್ರಮಕ್ಕೂ ಈಗ ತೆಗೆದುಕೊಳ್ಳಲಾಗಿರುವ ಕ್ರಮಕ್ಕೂ ಒಂದಷ್ಟು ಸಾಮ್ಯತೆ ಇದೆಯಾದರೂ ವಾಸ್ತವ ಅದಲ್ಲ. ಈಗ 2,000 ರೂ ನೋಟನ್ನು ನಿಷೇಧಿಸಲಾಗಿಲ್ಲ. ಚಲಾವಣೆಯಿಂದ ಹಿಂಪಡೆಯಲಾಗಿದೆ ಅಷ್ಟೇ. ಈ ನೋಟು ಸೆಪ್ಟಂಬರ್ 30ರ ನಂತರವೂ ಕಾನೂನಾತ್ಮಕ ನೋಟಾಗಿ ಮುಂದುವರಿಯುತ್ತದೆ.
2,000ರೂ ನೋಟು ಹಿಂಪಡೆಯಲು ಇವು ಕಾರಣಗಳು
- ಆರ್ಬಿಐನ ಸ್ವಚ್ಛ ನೋಟು ನೀತಿ
- 2,000 ರೂ ನೋಟುಗಳ ಅಗತ್ಯತೆ ತೀರಾ ಕಡಿಮೆ ಆಗಿರುವುದು
- 2,000ರೂ ನೋಟುಗಳ ಜೀವಿತಾವಧಿ ಮುಗಿಯುತ್ತಾ ಬಂದಿರುವುದು
- 2018ರಲ್ಲೇ ಈ ನೋಟುಗಳ ಮುದ್ರಣ ನಿಲ್ಲಿಸಿರುವುದು
2,000 ರೂ ನೋಟು ಹಿಂಪಡೆದಿದ್ದರಿಂದ ಏನು ಲಾಭ?
ಸರ್ಕಾರ 2,000 ರೂ ನೋಟನ್ನು ಮುದ್ರಿಸಿ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲವಾಗಿದೆ. ಬ್ಯಾಂಕುಗಳೂ ಕೂಡ ಬಹುತೇಕ 2,000 ರೂ ನೋಟಿನ ಚಲಾವಣೆ ನಿಲ್ಲಿಸಿದ್ದು ಹೌದು. ಆದರೂ 1.8 ಲಕ್ಷ ಕೋಟಿ ರೂ ಮೌಲ್ಯದ 2,000 ರೂ ನೋಟುಗಳು ಮಾರುಕಟ್ಟೆಯಲ್ಲಿವೆ. ಈಗ ಅಧಿಕೃತವಾಗಿ 2,000 ರೂ ನೋಟನ್ನು ಹಿಂಪಡೆಯುವುದರಿಂದ ಇದರಲ್ಲಿ ಹೆಚ್ಚಿನ ಪಾಲು ಹಣ ಮತ್ತೆ ಬ್ಯಾಂಕುಗಳಿಗೆ ಬರಬಹುದು. ಇದರಿಂದ ಹಣದ ಹರಿವು ಹೆಚ್ಚಾಗುವ ನಿರೀಕ್ಷೆ ಇದೆ. ನಿರೀಕ್ಷಿಸಿದ ರೀತಿಯಲ್ಲಿ ಹಣ ಬಂದಲ್ಲಿ ಬ್ಯಾಂಕುಗಳಿಗೆ ಅನುಕೂಲವಾಗುತ್ತದೆ.
ಚಿನ್ನಕ್ಕೆ ಮುಗಿಬೀಳುತ್ತಿದ್ದಾರಾ ಜನರು?
ಬ್ಯಾಂಕುಗಳಲ್ಲಿ ಜಮೆ ಮಾಡದೇ ಕ್ಯಾಷ್ ರೂಪದಲ್ಲಿ 2,000 ರೂ ಇಟ್ಟುಕೊಂಡ ಹಲವರು ಈಗ ತಮ್ಮ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವ ಬಗ್ಗೆ ಸುದ್ದಿಗಳಿವೆ. ಬಹಳಷ್ಟು ಮಳಿಗೆಗಳಲ್ಲಿ ಒಡವೆ ಕೊಳ್ಳಲು 2,000 ರೂ ನೋಟು ಸ್ವೀಕರಿಸುವಿರಾ ಎಂದು ವಿಚಾರಿಸಿಕೊಂಡು ಹೋಗುತ್ತಿರುವವರ ಸಂಖ್ಯೆ ಹೆಚ್ಚಿದೆ ಎಂದು ಭಾರತದ ಆಭರಣ ಉದ್ಯಮದ ಸಂಘಟನೆ ಜಿಜೆಸಿ ಛೇರ್ಮನ್ ಸೈಯಾಂ ಮೆಹ್ರಾ ನಿನ್ನೆ ಹೇಳಿದ್ದರು. ಇದರಿಂದ ಆಭರಣ ಉದ್ಯಮಕ್ಕೆ ಅನುಕೂಲಕವಾಗಬಹುದು.
ಇದನ್ನೂ ಓದಿ: Please Note: 2,000 ರೂ ನೋಟು ಸೆಪ್ಟಂಬರ್ 30ರ ಬಳಿಕ ಅಮಾನ್ಯಗೊಳ್ಳುತ್ತಾ? ಇಲ್ಲಿದೆ ಕೆಲ ವಾಸ್ತವ ಸಂಗತಿಗಳು
ಜನರು ತಮ್ಮ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಗಿಬಿದ್ದರೆ ಚಿನ್ನದ ಬೆಲೆ ಸಹಜವಾಗಿ ಏರುತ್ತದೆ. ಅದು ಇನ್ನೊಂದು ರೀತಿ ಸಮಸ್ಯೆ. ಆದರೆ, ಇದೇ ಹೊತ್ತಲ್ಲಿ ಸರ್ಕಾರ 2,000 ರೂ ನೋಟುಗಳ ವಿನಿಮಯಕ್ಕೆ 4 ತಿಂಗಳು ಗಡುವು ನೀಡುವುದರಿಂದ ಜನರು ಆತುರಾತುರವಾಗಿ ನಿರ್ಧಾರ ಕೈಗೊಳ್ಳುವುದನ್ನು ತಡೆಯಬಹುದು.