ಸೆ. 22ರಿಂದ ಜಿಎಸ್ಟಿ ಕಡಿತ; ಈಗಾಗಲೇ ಮಾರುಕಟ್ಟೆಯಲ್ಲಿರುವ ಔಷಧಗಳ ಬೆಲೆಯೂ ಕಡಿಮೆ ಆಗುತ್ತಾ?
GST rate cup effect: 56ನೇ ಜಿಎಸ್ಟಿ ಕೌನ್ಸಿಲ್ ಬಹುತೇಕ ಎಲ್ಲಾ ವಸ್ತುಗಳ ಮೇಲಿನ ಜಿಎಸ್ಟಿಯನ್ನು ಕಡಿಮೆ ಮಾಡಿದೆ. ಔಷಧಗಳು ಹಾಗೂ ವೈದ್ಯಕೀಯ ಸಾಧನಗಳ ಮೇಲೆ ಶೇ. 18ರಷ್ಟಿದ್ದ ಜಿಎಸ್ಟಿಯನ್ನು ಶೇ 5ಕ್ಕೆ ಇಳಿಸಲಾಗಿದೆ. ಸೆ. 22ರಿಂದ ಹೊಸ ಜಿಎಸ್ಟಿ ಜಾರಿಗೆ ಬರುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಔಷಧಗಳ ಬೆಲೆಯೂ ಇಳಿಯುತ್ತಾ?

ನವದೆಹಲಿ, ಸೆಪ್ಟೆಂಬರ್ 16: ಸೆಪ್ಟೆಂಬರ್ 22ರಿಂದ ಹೊಸ ಜಿಎಸ್ಟಿ ದರಗಳು (GST) ಚಾಲನೆಗೆ ಬರಲಿವೆ. ಹೆಚ್ಚಿನ ವಸ್ತುಗಳ ಮೇಲೆ ಜಿಎಸ್ಟಿ ಕಡಿಮೆಗೊಳ್ಳಲಿದ್ದು, ಅದರ ಪರಿಣಾಮವಾಗಿ ಬೆಲೆಗಳೂ ತಗ್ಗಲಿವೆ. ಜಿಎಸ್ಟಿ ದರ ಕಡಿತದ ಪರಿಣಾಮ ಜನಸಾಮಾನ್ಯರಿಗೂ ತಲುಪಬೇಕು ಎಂಬುದು ಸರ್ಕಾರದ ಆಶಯ. ಈಗಾಗಲೇ ಮಾರಾಟವಾಗದೇ ಇರುವ ಸರಕುಗಳಿಗೆ ಎಂಆರ್ಪಿ ದರವನ್ನು ಪರಿಷ್ಕರಿಸಲು ಸರ್ಕಾರ ಅನುಮತಿ ನೀಡಿದೆ. ಈ ರೀತಿ ದರ ಪರಿಷ್ಕರಣೆಗೆ ಡಿಸೆಂಬರ್ 31ರವರೆಗೂ ಅವಕಾಶ ನೀಡಲಾಗಿದೆ.
ಇದೇ ವೇಳೆ, ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ಔಷಧಗಳು ಹಾಗೂ ವೈದ್ಯಕೀಯ ಸಲಕರಣೆಗಳ ಬೆಲೆಗಳನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊರ್ಳಳಲಾಗಿದೆ. ಈ ಔಷಧಗಳನ್ನು ಹಿಂಪಡೆದು ಹೊಸ ಲೇಬಲ್ನೊಂದಿಗೆ ಮತ್ತೆ ಬಿಡುಗಡೆ ಮಾಡುವ ಅವಶ್ಯಕತೆ ಇಲ್ಲ ಎಂದೂ ಔಷಧ ಬೆಲೆ ಪ್ರಾಧಿಕಾರವು (ಎನ್ಪಿಪಿಎ- ನ್ಯಾಷನಲ್ ಫಾರ್ಮಾಸ್ಯೂಟಿಕಲ್ ಪ್ರೈಸಿಂಗ್ ಅಥಾರಿಟಿ) ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಸೃಜನಶೀಲ ಮನಸ್ಸಿದ್ದರೆ ಸಾಕು..! ಕೇರಳದ ರಾಮಚಂದ್ರನ್ 17,000 ಕೋಟಿ ರೂ ಬ್ಯುಸಿನೆಸ್ ಸಾಮ್ರಾಜ್ಯ ಕಟ್ಟಿದ ಕಥೆ
ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಆಗಿರುವ ಉತ್ಪನ್ನಗಳನ್ನು ಹಿಂಪಡೆಯುವುದು, ಲೇಬಲ್ ಬದಲಿಸುವುದು ಇತ್ಯಾದಿ ಕೆಲಸ ಕಡ್ಡಾಯವೇನಿಲ್ಲ. ಆದರೆ, ಈ ಉತ್ಪನ್ನಗಳ ತಯಾರಕರು ಮತ್ತು ಮಾರ್ಕೆಟಿಂಗ್ ಕಂಪನಿಗಳು ರೀಟೇಲ್ ಮಟ್ಟದಲ್ಲಿ ಪರಿಷ್ಕೃತ ದರದಲ್ಲಿ ಮಾರಾಟ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಎನ್ಪಿಪಿಎ ಹೇಳಿದೆ.
ಜಿಎಸ್ಟಿ ಕೌನ್ಸಿಲ್ ಎಲ್ಲಾ ಔಷಧ ಮತ್ತು ವೈದ್ಯಕೀಯ ಸಾಧನಗಳ ಮೇಲಿನ ಜಿಎಸ್ಟಿಯನ್ನು ಶೇ. 18ರಿಂದ ಶೇ. 5ಕ್ಕೆ ಇಳಿಸಿದೆ. ಇದರಿಂದ ಔಷಧಗಳ ಬೆಲೆ ಕನಿಷ್ಠವೆಂದರೂ ಶೇ. 10ರಷ್ಟು ಇಳಿಯಬೇಕು. ಜಿಎಸ್ಟಿ ದರ ಕಡಿತವು ಸೆಪ್ಟೆಂಬರ್ 22ರಿಂದಲೇ ಜಾರಿಯಾಗಬೇಕು. ಅದಕ್ಕೆ ಮುಂಚೆ ಮಾರುಕಟ್ಟೆ ಬಂದಿರುವ ವಸ್ತುಗಳಿಗೂ ಜಿಎಸ್ಟಿ ಕಡಿತ ಅನ್ವಯ ಆಗುವುದರಿಂದ, ಅವುಗಳ ಬೆಲೆಯೂ ಕಡಿಮೆಗೊಳ್ಳಬೇಕು ಎನ್ನುವುದು ಸರ್ಕಾರದ ಇರಾದೆ.
ಇದನ್ನೂ ಓದಿ: ಜಿಎಸ್ಟಿ ಕಡಿತದ ಎಫೆಕ್ಟ್; ಮದರ್ ಡೈರಿ ಹಾಲು ಬೆಲೆ 2 ರೂ, ತುಪ್ಪದ ಬೆಲೆ 30 ರೂ ಇಳಿಕೆ
ಎಲ್ಲಾ ಔಷಧ ತಯಾರಕರು ಮತ್ತು ಮಾರ್ಕೆಟಿಂಗ್ ಕಂಪನಿಗಳು ಹೊಸ ಜಿಎಸ್ಟಿ ದರಕ್ಕೆ ಅನುಗುಣವಾಗಿ ಔಷಧಗಳ ಮೇಲಿನ ಗರಿಷ್ಠ ರೀಟೇಲ್ ದರ ಅಥವಾ ಎಂಆರ್ಪಿಯನ್ನು ಪರಿಷ್ಕರಿಸಬೇಕು. ಡೀಲರ್ಸ್ ಮತ್ತು ರೀಟೇಲರ್ಸ್ಗೆ ನೀಡುವ ಫಾರ್ಮ್ 5 ಮತ್ತು 6 ಮೂಲಕ ಪರಿಷ್ಕೃತ ದರಪಟ್ಟಿಯನ್ನು ಕಂಪನಿಗಳು ಒದಗಿಸಬೇಕು ಎಂದು ಎನ್ಪಿಪಿಎ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




