ಡ್ರೈಫ್ರೂಟ್ಸ್ ಧಾರಣೆ ಏರಿಕೆ ನಿರೀಕ್ಷಿತ: ಭಾರತದೊಂದಿಗೆ ಆಮದು-ರಫ್ತು ವಹಿವಾಟಿಗೆ ತಾಲಿಬಾನ್ ನಿರ್ಬಂಧ
ಅಫ್ಘಾನಿಸ್ತಾನದೊಂದಿಗೆ ವಹಿವಾಟು ಸ್ಥಗಿತಗೊಂಡಿರುವುದರಿಂದ ಭಾರತದಲ್ಲಿ ಮುಂದಿನ ದಿನಗಳಲ್ಲಿ ಒಣಹಣ್ಣುಗಳ ಧಾರಣೆ ಏರಿಕೆಯಾಗಬಹುದು ಎಂದು ರಫ್ತು ಸಂಸ್ಥೆಯು ಅಭಿಪ್ರಾಯಪಟ್ಟಿದೆ.
ದೆಹಲಿ: ಭಾರತದೊಂದಿಗೆ ಎಲ್ಲ ರೀತಿಯ ಆಮದು-ರಫ್ತು ವ್ಯವಹಾರಗಳನ್ನು ನಿರ್ಬಂಧಿಸಿರುವುದಾಗಿ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲಿಬಾನ್ ಆಡಳಿತ ಹೇಳಿದೆ. ಈ ಬಗ್ಗೆ ಭಾರತೀಯ ರಫ್ತ ಮಂಡಳಿಯ (Federation of Indian Export Organisation – FIEO) ಮಹಾ ನಿರ್ದೇಶಕ ಡಾ.ಅಜಯ್ ಸಹಾಯ್ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದ ಮೂಲಕ ರಸ್ತೆ ಮಾರ್ಗವಾಗಿ ಬರುತ್ತಿದ್ದ ಸರಕುಗಳನ್ನು ತಾಲಿಬಾನ್ ನಿರ್ಬಂಧಿಸಿದೆ ಎಂದು ಅವರು ಹೇಳಿದ್ದಾರೆ.
ಅಫ್ಘಾನಿಸ್ತಾನದ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಫ್ಘಾನಿಸ್ತಾನದಿಂದ ಭಾರತಕ್ಕೆ ಪಾಕಿಸ್ತಾನ ಮಾರ್ಗವಾಗಿ ಸರಕುಗಳು ಬರುತ್ತಿದ್ದವು. ಆದರೆ ಈಗ ತಾಲಿಬಾನ್ ಪಾಕಿಸ್ತಾನದ ಮಾರ್ಗವಾಗಿ ಸರಕು ಸಾಗಣೆಯನ್ನು ನಿರ್ಬಂಧಿಸಿದೆ. ಹೀಗಾಗಿ ಎಲ್ಲ ಬಗೆಯ ಆಮದು ನಿಂತುಹೋಗಿದೆ ಎಂದು ಅವರು ವಿವರಿಸಿದ್ದಾರೆ.
ಅಫ್ಘಾನಿಸ್ತಾನದೊಂದಿಗೆ ಭಾರತವು ಹಲವು ವರ್ಷಗಳಿಂದ ವ್ಯಾಪಾರ ಮತ್ತು ಹೂಡಿಕೆ ವಹಿವಾಟನ್ನು ನಡೆಸುತ್ತಿದೆ. ಅಫ್ಘಾನಿಸ್ತಾನವು ದೊಡ್ಡ ಪ್ರಮಾಣದಲ್ಲಿ ಭಾರತದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. 2021ರಲ್ಲಿ ಈವರೆಗೆ ₹ 83 ಕೋಟಿಯಷ್ಟು ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದ್ದೇವೆ. ಅಲ್ಲಿಂದ ₹ 51 ಕೋಟಿ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದ್ದೇವೆ. ಅಫ್ಘಾನಿಸ್ತಾನದಲ್ಲಿ ಭಾರತೀಯರ ಹೂಡಿಕೆಯೂ ಗಮನಾರ್ಹ ಪ್ರಮಾಣದಲ್ಲಿದೆ. ಸುಮಾರು 400 ಯೋಜನೆಗಳಿಗಾಗಿ ಭಾರತವು ₹ 22,000 ಕೋಟಿ ಮೌಲ್ಯದ ಹೂಡಿಕೆ ಮಾಡಿದೆ. ಈ ಪೈಕಿ ಕೆಲ ಕಾಮಗಾರಿಗಳು ಇನ್ನೂ ಅನುಷ್ಠಾನದ ಹಂತದಲ್ಲಿವೆ ಎಂದು ಸಹಾಯ್ ಹೇಳಿದ್ದಾರೆ.
ಕೆಲ ಸಾಮಗ್ರಿಗಳನ್ನು ಉತ್ತರ-ದಕ್ಷಿಣ ಸರಕು ಸಾಗಣೆ ಮಾರ್ಗದಲ್ಲಿ ಕಳುಹಿಸಿಕೊಡಲಾಗುತ್ತಿದೆ. ಕೆಲವೊಂದಿಷ್ಟು ಸರಕುಗಲು ದುಬೈ ಮಾರ್ಗದಲ್ಲಿಯೂ ಸಾಗುತ್ತಿವೆ ಎಂದು ತಿಳಿಸಿದ್ದಾರೆ. ಅಫ್ಘಾನಿಸ್ತಾನದೊಂದಿಗೆ ಭಾರತವು ಉತ್ತಮ ವ್ಯಾಪಾರ ಸಂಬಂಧ ಹೊಂದಿದೆ. ಪ್ರಸ್ತುತ ಭಾರತವು ಸಕ್ಕರೆ, ಔಷಧ, ಬಟ್ಟೆ, ಟೀ, ಕಾಫಿ, ಸಾಂಬಾರ ಪದಾರ್ಥಗಳು ಮತ್ತು ಟ್ರಾನ್ಸ್ಮಿಷನ್ ಟವರ್ಗಳನ್ನು ರಫ್ತ ಮಾಡುತ್ತಿದೆ. ಅಫ್ಘಾನಿಸ್ತಾನದಿಂದ ಭಾರತಕ್ಕೆ ಒಣಹಣ್ಣುಗಳು, ಅಂಟು ಮತ್ತು ಈರುಳ್ಳಿ ಆಮದಾಗುತ್ತಿದೆ.
ಮುಂದಿನ ಕೆಲ ದಿನಗಳಲ್ಲಿ ಅಫ್ಘಾನಿಸ್ತಾನದ ಆಡಳಿತಕ್ಕೆ ಆರ್ಥಿಕತೆಯು ದೇಶದ ಅಭಿವೃದ್ಧಿಗೆ ಅನಿವಾರ್ಯ ಎಂಬ ಸಂಗತಿ ಅರ್ಥವಾಗಬಹುದು. ಅನಂತರ ಎರಡೂ ದೇಶಗಳ ನಡುವಣ ವ್ಯಾಪಾರ ವಹಿವಾಟು ಮುಂದುವರಿಯಲಿದೆ. ರಾಜಕೀಯ ಮಾನ್ಯತೆಯನ್ನೂ ಹೊಸ ಆಡಳಿತ ನಿರೀಕ್ಷಿಸುತ್ತಿದೆ. ಇದನ್ನು ಸಾಧಿಸಲು ಅವರಿಗೆ ಭಾರತದ ನೆರವು ಬೇಕು. ಅದೂ ಸಹ ವ್ಯಾಪಾರಕ್ಕೆ ಪೂರಕ ಎಂದು ಅವರು ವಿಶ್ಲೇಷಿಸಿದರು.
ಭಾರತದಲ್ಲಿ ಮುಂದಿನ ದಿನಗಳಲ್ಲಿ ಒಣಹಣ್ಣುಗಳ ಧಾರಣೆ ಏರಿಕೆಯಾಗಬಹುದು ಎಂದು ರಫ್ತು ಸಂಸ್ಥೆಯು ಅಭಿಪ್ರಾಯಪಟ್ಟಿದೆ. ಪ್ರಸ್ತುತ ಭಾರತವು ಶೇ 85ರಷ್ಟು ಒಣಹಣ್ಣುಗಳನ್ನು ಅಫ್ಘಾನಿಸ್ತಾನದಿಂದ ತರಿಸಿಕೊಳ್ಳುತ್ತಿದೆ.
(No business with India says Taliban Dry fruits rate may go up)
ಇದನ್ನೂ ಓದಿ: ತಾಲಿಬಾನಿಗಳ ವಿರುದ್ಧ ಶಸ್ತ್ರ ಹಿಡಿದಿದ್ದ ಅಫ್ಘಾನಿಸ್ತಾನದ ಮಹಿಳಾ ಗವರ್ನರ್ ಬಂಧನ