UPI: ಯುಪಿಐ ಟ್ರಾನ್ಸಾಕ್ಷನ್ಸ್​​ಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಹಾಕೋದಿಲ್ಲ: ಸರ್ಕಾರ ಸ್ಪಷ್ಟನೆ

No MDR on UPI transactions: ಯುಪಿಐ ಹಣಪಾವತಿ ಮೇಲೆ ಎಂಡಿಆರ್ ವಿಧಿಸಲು ಸರ್ಕಾರ ಯೋಜಿಸಿದೆ ಎನ್ನುವ ಸುದ್ದಿಯನ್ನು ಹಣಕಾಸು ಸಚಿವಾಲಯ ನಿರಾಕರಿಸಿದೆ. 3,000 ರೂಗಿಂತ ಹೆಚ್​ಚಿನ ಮೌಲ್ಯದ ಯುಪಿಐ ಪಾವತಿಗೆ ಎಂಡಿಆರ್ ಹಾಕುವ ಪ್ರಸ್ತಾಪ ಇದೆ ಎನ್ನುವ ಸುದ್ದಿ ಅದು. ಇದು ಆಧಾರ ರಹಿತ ಹಾಗೂ ಊಹಾಪೋಹದ ಸುದ್ದಿ. ಸರ್ಕಾರಕ್ಕೆ ಅಂಥ ಯಾವ ಆಲೋಚನೆ ಇಲ್ಲ ಎಂದು ಹಣಕಾಸು ಇಲಾಖೆ ತನ್ನ ಎಕ್ಸ್ಪೋಸ್ಟ್​​ನಲ್ಲಿ ತಿಳಿಸಿದೆ.

UPI: ಯುಪಿಐ ಟ್ರಾನ್ಸಾಕ್ಷನ್ಸ್​​ಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಹಾಕೋದಿಲ್ಲ: ಸರ್ಕಾರ ಸ್ಪಷ್ಟನೆ
ಯುಪಿಐ

Updated on: Jun 12, 2025 | 11:29 AM

ನವದೆಹಲಿ, ಜೂನ್ 12: ದೊಡ್ಡ ಮೊತ್ತದ ಯುಪಿಐ ವಹಿವಾಟು ಮೇಲೆ ಮರ್ಚಂಟ್ ಡಿಸ್ಕೌಂಟ್ ರೇಟ್ ಹೇರಲಾಗುತ್ತದೆ ಎನ್ನುವ ಸುದ್ದಿಯನ್ನು ಸರ್ಕಾರ ಅಲ್ಲಗಳೆದಿದೆ. ಆ ರೀತಿಯ ಯಾವ ಆಲೋಚನೆಯೂ ಸರ್ಕಾರಕ್ಕೆ ಇಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ. 3,000 ರೂಗಿಂತ ಹೆಚ್ಚು ಮೌಲ್ಯದ ಯುಪಿಐ ವಹಿವಾಟುಗಳಿಗೆ ಸರ್ಕಾರವು ಎಂಡಿಆರ್ ಹೇರಿಕೆ ಮಾಡುವ ಸಾಧ್ಯತೆ ಇದೆ. ಅಂಥದ್ದೊಂದು ಪ್ರಸ್ತಾಪ ಇದೆ ಎಂದು ಕೆಲ ಮಾಧ್ಯಮಗಳಲ್ಲಿ ನಿನ್ನೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ತನ್ನ ಎಕ್ಸ್ ಅಕೌಂಟ್​​ನಿಂದ ಪ್ರತಿಕ್ರಿಯಿಸಿ, ಸ್ಪಷ್ಟನೆ ಕೊಟ್ಟಿದೆ.

‘ಯುಪಿಐ ಟ್ರಾನ್ಸಾಕ್ಷನ್ಸ್ ಮೇಲೆ ಎಂಡಿಆರ್ ವಿಧಿಸಲಾಗುವುದು ಎಂದು ಹೇಳಲಾಗುತ್ತಿರುವುದು ಸಂಪೂರ್ಣ ಆಧಾರರಹಿತ, ಸುಳ್ಳು ಸುದ್ದಿ. ಈ ರೀತಿಯ ಊಹಾಪೋಹದ ಸುದ್ದಿಗಳು ನಮ್ಮ ನಾಗರಿಕರ ಮೇಲೆ ಅನಗತ್ಯ ಭಯ, ಶಂಕೆ ಮತ್ತು ಅನಿಶ್ಚಿತತೆ ತರುತ್ತವೆ. ಯುಪಿಐ ಡಿಜಿಟಲ್ ಪೇಮೆಂಟ್​ಗೆ ಬೆಂಬಲ ನೀಡಲು ಸರ್ಕಾರ ಪೂರ್ಣವಾಗಿ ಬದ್ಧವಾಗಿದೆ’ ಎಂದು ಹಣಕಾಸು ಸಚಿವಾಲಯವು ತನ್ನ ಎಕ್ಸ್ ಪೋಸ್ಟ್​​ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಬ್ಯಾಂಕುಗಳಿಗೆ ಹೊರೆ ತಗ್ಗಿಸಲು ಯುಪಿಐ ವಹಿವಾಟುಗಳಿಗೆ ಮತ್ತೆ ಎಂಡಿಆರ್ ದರ ಜಾರಿಗೆ ತರಲು ಸರ್ಕಾರ ಯೋಜನೆ

ಏನಿದು ಮರ್ಚಂಟ್ ಡಿಸ್ಕೌಂಟ್ ರೇಟ್?

ಮರ್ಚೆಂಟ್ ಡಿಸ್ಕೌಂಟ್ ರೇಟ್ ಎಂಬುದು ಕಾರ್ಡ್ ಪೇಮೆಂಟ್ ವೇಳೆ ವರ್ತಕರಿಗೆ ವಿಧಿಸಲಾಗುವ ದರವಾಗಿದೆ. ಬ್ಯಾಂಕುಗಳು ಹಾಗೂ ಪೇಮೆಂಟ್ ಪ್ರೋಸಸಿಂಗ್ ಕಂಪನಿಗಳು ಈ ದರವನ್ನು ವಿಧಿಸುತ್ತವೆ. ಟ್ರಾನ್ಸಾಕ್ಷನ್ ವೆಚ್ಚ ಭರಿಸಲು ಈ ಕ್ರಮ ಅನುಸರಿಸಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್​​ಗಳ ಮೂಲಕ ಮಾಡಲಾಗುವ ಹಣ ಪಾವತಿಗೆ ಈಗಲೂ ಕೂಡ ಎಂಡಿಆರ್ ದರದ ವ್ಯವಸ್ಥೆ ಇದೆ. ಯುಪಿಐ ಬಂದ ಬಳಿಕವೂ ಅದಕ್ಕೆ ಎಂಡಿಆರ್ ಹೇರಿಕೆ ಮಾಡಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಯುಪಿಐ ಪಾವತಿ ವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ಸರ್ಕಾರವು ಇದನ್ನು ತಡೆಯುತ್ತಾ ಬಂದಿದೆ.

ಯುಪಿಐ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 2023-24ರಲ್ಲಿ ಸರಾಸರಿಯಾಗಿ ದಿನಕ್ಕೆ 63.9 ಕೋಟಿ ವಹಿವಾಟು ನಡೆದಿತ್ತು. ವಿಶ್ವದ ಅತಿದೊಡ್ಡ ಪೇಮೆಂಟ್ ಪ್ರೋಸಸಿಂಗ್ ಕಂಪನಿ ಎನಿಸಿದ ವೀಸಾಗಿಂತಲೂ ಯುಪಿಐ ಅಧಿಕ ವಹಿವಾಟು ನಿಭಾಯಿಸಿದೆ. ಇಷ್ಟು ಅಗಾಧ ಪೇಮೆಂಟ್ ಅನ್ನು ನಿರ್ವಹಿಸಲು ವರ್ಷಕ್ಕೆ 10,000 ಕೋಟಿ ರೂ ವೆಚ್ಚವಾಗುತ್ತಿದೆ ಎನ್ನುವುದು ಉದ್ಯಮದ ಅಳಲು. ಈ ಹಿನ್ನೆಲೆಯಲ್ಲಿ ಯುಪಿಐ ವಹಿವಾಟಿನ ಮೇಲೆ ಎಂಡಿಆರ್ ವಿಧಿಸಿ ಎನ್ನುವ ಸಲಹೆಯನ್ನು ಸರ್ಕಾರಕ್ಕೆ ನೀಡಲಾಗಿದೆ.

ಇದನ್ನೂ ಓದಿ: ಕೈಯಲ್ಲಿ ಹಣ ನಿಲ್ಲೊಲ್ಲವಾ? ಹಣವಂತರಾಗಲು ಈ ಸಿಂಪಲ್ ಟ್ರಿಕ್ಸ್ ಉಪಯೋಗಿಸಿ

ಕ್ರೆಡಿಟ್ ಕಾರ್ಡ್ ಮೂಲಕ ಮಾಡಲಾಗುವ ಹಣ ಪಾವತಿ ಮೇಲೆ ಶೇ. 0.75ರಿಂದ ಶೇ. 2ರವರೆಗೆ ಎಂಡಿಆರ್ ದರ ಇದೆ. ದೊಡ್ಡ ಮೊತ್ತದ ಯುಪಿಐ ಟ್ರಾನ್ಸಾಕ್ಷನ್​​ಗೆ ಶೇ. 0.3ರಷ್ಟಾದರೂ ಎಂಡಿಆರ್ ಹೇರಿಕೆಗೆ ಅವಕಾಶ ಕೊಡಿ ಎಂಬುದು ಉದ್ಯಮದ ಬೇಡಿಕೆ ಆಗಿದೆ.

ಸರ್ಕಾರ ಈ ಬೇಡಿಕೆ ಮನ್ನಿಸಿ ಯುಪಿಐಗೆ ಎಂಡಿಆರ್ ವಿಧಿಸುವ ನಿರ್ಧಾರ ಮಾಡಿದೆ ಎಂದು ಮೊನ್ನೆಯಿಂದ ಸುದ್ದಿಗಳು ಬರುತ್ತಿವೆ. ಈಗ ಸರ್ಕಾರವು ಈ ಸುದ್ದಿಯನ್ನು ತಳ್ಳಿಹಾಕಿ ಯುಪಿಐ ಬಳಕೆದಾರರಿಗೆ ಮತ್ತು ವರ್ತಕರಿಗೆ ನಿರಾಳತೆ ತಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:28 am, Thu, 12 June 25