ರಾಜಸ್ಥಾನ, ಛತ್ತೀಸ್ಗಡ, ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನು (OPS) ಮರಳಿ ಜಾರಿಗೊಳಿಸುವುದಾಗಿ ಹೇಳಿವೆ. ಪಂಜಾಬ್ ಸರ್ಕಾರ ಕೂಡ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಇತ್ತೀಚೆಗೆ ಹೇಳಿದೆ. ಕರ್ನಾಟಕದಲ್ಲಿಯೂ (Karnataka) ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ಜಾರಿಗೊಳಿಸಬೇಕು ಎಂಬ ಆಗ್ರಹ ಸರ್ಕಾರಿ ನೌಕರ ವೃಂದದಿಂದ (Government Employees) ಕೇಳಿಬಂದಿದೆ. ಈ ವಿಚಾರವಾಗಿ ಮುಷ್ಕರ ನಡೆಸಲೂ ನೌಕರರು ಮುಂದಾಗಿದ್ದಾರೆ. ಆದರೆ, ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರಳಿ ಜಾರಿ ಮಾಡಿದರೆ ಸರ್ಕಾರ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗಬಹುದು ಎಂದು ಆರ್ಥಿಕ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರವು ನೌಕರರಿಗೆ ವೇತನ ನೀಡಲು ವ್ಯಯಿಸುವ ಮೊತ್ತಕ್ಕಿಂತಲೂ ಹೆಚ್ಚು ಪಿಂಚಣಿಗೇ ಖರ್ಚಾಗುತ್ತಿರುವುದು ಇತ್ತೀಚಿನ ಅಂಕಿಅಂಶಗಳಿಂದ ತಿಳಿದುಬಂದಿದೆ. ಹಾಗಾದರೆ, ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ಜಾರಿಗೊಳಿಸಬೇಕೆಂದು ನೌಕರ ವರ್ಗ ಆಗ್ರಹಿಸಲು ಕಾರಣವೇನು? ಹಳೆಯ ಪಿಂಚಣಿ ಯೋಜನೆ ಹೇಗಿತ್ತು? ರಾಷ್ಟ್ರೀಯ ಅಥವಾ ಹೊಸ ಪಿಂಚಣಿ ಯೋಜನೆ (NPS) ಮುಂದುವರಿಸುವುದೇ ಸೂಕ್ತ ಎಂಬ ಕೇಂದ್ರ ಸರ್ಕಾರದ ನಿಲುವಿಗೆ ಕಾರಣವೇನು? ಈ ಎರಡು ಪಿಂಚಣಿ ಯೋಜನೆಗಳ ನಡುವಣ ವ್ಯತ್ಯಾಸಗಳ ಬಗ್ಗೆ ವಿಸ್ತೃತ ವಿವರ ಇಲ್ಲಿದೆ.
ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ ನೌಕರರು ನಿವೃತ್ತಿಯ ಸಂದರ್ಭದಲ್ಲಿ ಹೊಂದಿದ್ದ ಮೂಲ ವೇತನದ ಶೇಕಡಾ 50ರಷ್ಟು ಮತ್ತು ಇದರ ಜತೆಗೆ ತುಟ್ಟಿಭತ್ಯೆ ಅಥವಾ ಸೇವಾ ಅವಧಿಯ ಕೊನೆಯ 10 ತಿಂಗಳ ಸರಾಸರಿ ಗಳಿಕೆ, ಈ ಎರಡರಲ್ಲಿ ಯಾವುದು ಹೆಚ್ಚೋ ಅದನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಗೆ ಮಾನ್ಯರಾಗಲು ನೌಕರರು ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಹಳೆ ಪಿಂಚಣಿ ಯೋಜನೆಯಲ್ಲಿ ಉದ್ಯೋಗಿಗಳು ಪಿಂಚಣಿಗೆ ಕೊಡುಗೆ ನೀಡಬೇಕಾಗಿಲ್ಲ. ಇದು ಸರ್ಕಾರಿ ಉದ್ಯೋಗಿಗಳಿಗೆ ಬಹುದೊಡ್ಡ ಪ್ರಯೋಜನ ಮಾಡಿಕೊಟ್ಟಿದ್ದಲ್ಲದೆ, ನಿವೃತ್ತಿಯ ಬಳಿಕ ಕುಟುಂಬಕ್ಕೆ ಪಿಂಚಣಿಯ ಖಾತರಿ ದೊರೆಯುತ್ತಿತ್ತು. ಒಂದು ವೇಳೆ ನಿವೃತ್ತ ನೌಕರರು ಮೃತಪಟ್ಟರೂ ಅವರ ಅವಲಂಬಿತರಿಗೆ ಪಿಂಚಣಿ ಮುಂದುವರಿಯುತ್ತದೆ. ಆದರೆ, ಸರ್ಕಾರದ ಬೊಕ್ಕಸಕ್ಕೆ ಮಾತ್ರ ಈ ಯೋಜನೆ ಹೊರೆಯಾಗಿ ಪರಿಣಮಿಸಿತ್ತು.
ಎನ್ಪಿಎಸ್ ಎಂಬುದು ರಾಷ್ಟ್ರೀಯ ಅಥವಾ ಹೊಸ ಪಿಂಚಣಿ ಯೋಜನೆಯಾಗಿದ್ದು, ಪಿಂಚಣಿ ಮತ್ತು ಹೂಡಿಕೆಗಳ ಸಂಯೋಜನೆಯಾಗಿದೆ. ಈ ಯೋಜನೆಯಲ್ಲಿ ಸರ್ಕಾರಿ ಉದ್ಯೋಗಿ ಕೂಡ ಮೂಲ ವೇತನದ ಶೇಕಡಾ 10ರಷ್ಟನ್ನು ನಿವೃತ್ತಿ ನಿಧಿಗೆ ಕೊಡುಗೆಯಾಗಿ ನೀಡಬೇಕು. ಉದ್ಯೋಗದಾತರು ಮೂಲ ವೇತನದ ಶೇಕಡಾ 14ರಷ್ಟನ್ನು ಕೊಡುಗೆಯಾಗಿ ನೀಡಬೇಕಾಗುತ್ತದೆ. ಈ ಯೋಜನೆಯ ದೊಡ್ಡ ಪ್ರಯೋಜನವೆಂದರೆ, ಖಾಸಗಿ ಕ್ಷೇತ್ರದ ಉದ್ಯೋಗಿಗೂ ಸೇರಿಕೊಳ್ಳಲು ಅವಕಾಶವಿದೆ. ನಿವೃತ್ತಿಯ ನಂತರ ನಾಗರಿಕರಿಗೆ ಹಣಕಾಸು ಭದ್ರತೆಯನ್ನು ಒದಗಿಸುವುದಕ್ಕಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತಿದೆ. ಪಿಎಫ್ಆರ್ಡಿಎ ಸ್ಥಾಪಿಸಿರುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್ (NPST) ಎನ್ಪಿಎಸ್ನ ಅಧಿಕೃತ ಮಾಲೀಕತ್ವ ಹೊಂದಿದೆ.
ಪಿಂಚಣಿ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಅವಲೋಕನ ನಡೆಸಲು 2003ರಲ್ಲಿ ರಚಿಸಲಾದ ಹಣಕಾಸು ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಅಸ್ತಿತ್ವದಲ್ಲಿದ್ದ ಪಿ೦ಚಣಿ ವ್ಯವಸ್ಥೆಯನ್ನು ಮುಂದುವರಿಸುವುದರಿಂದ ಸರ್ಕಾರಕ್ಕೆ ಎದುರಾಗಬಹುದಾದ ಅಪಾಯದ ಬಗ್ಗೆ ಎಚ್ಚರಿಕೆ ನೀಡಿತ್ತು. 1980-81ರಲ್ಲಿ ರಾಜ್ಯಗಳ ಪಿ೦ಚಣಿ ಪಾವತಿ ಅವುಗಳ ಒಟ್ಟು ಆದಾಯದ ಶೇಕಡಾ 2.1 ಇತ್ತು. 2001-02 ರ ವೇಳೆಗೆ ಇದು ಶೇಕಡಾ 11ಕ್ಕೆ ಏರಿದೆ ಮತ್ತು 2020-21ರ ವೇಳೆಗೆ ಶೇಕಡಾ 20 ತಲುಪುವ ನಿರೀಕ್ಷೆಯಿದೆ. ಇದರಿಂದ ಸರ್ಕಾರಕ್ಕೆ ಹೊರೆಯಾಗಲಿದೆ ಎ೦ದು ಸಮಿತಿ ಎಚ್ಚರಿಕೆ ನೀಡಿತ್ತು. ಪರಿಣಾಮವಾಗಿ ಹಳೆ ಪಿಂಚಣಿ ಯೋಜನೆಯನ್ನು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ 2003ರ ಡಿಸೆಂಬರ್ನಲ್ಲಿ ಸ್ಥಗಿತಗೊಳಿಸಿತ್ತು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಅಂದಿನ ಸರ್ಕಾರ 2004ರ ಏಪ್ರಿಲ್ 1ರಿಂದ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿತ್ತು. ಸರ್ಕಾರದ ಬೊಕ್ಕಸಕ್ಕೆ ಅತಿಯಾದ ವೆಚ್ಚವಾಗುತ್ತಿರುವುದನ್ನು ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿತ್ತು. ನಂತರ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿತು.
ಎನ್ಪಿಎಸ್ನಲ್ಲಿ ಪ್ರಮುಖವಾಗಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳು ತೊಡಗಿಕೊಂಡಿವೆ. ಸಶಸ್ತ್ರ ಪಡೆಗಳ ಸಿಬ್ಬಂದಿ ಹೊರತುಪಡಿಸಿ ಕೇಂದ್ರ ಸರ್ಕಾರಿ ನೌಕರರು ಎನ್ಪಿಎಸ್ಗೆ ಕೊಡುಗೆ ನೀಡುತ್ತಿದ್ದಾರೆ. ಅದಕ್ಕನುಗುಣವಾಗಿ ಸರ್ಕಾರವೂ ಪಿಂಚಣಿ ಹೂಡಿಕೆಗೆ ಕೊಡುಗೆ ನೀಡುತ್ತಿದೆ. ರಾಜ್ಯ ಸರ್ಕಾರಗಳು ಸಹ ವಿವಿಧ ಹಂತಗಳಲ್ಲಿ ಎನ್ಪಿಎಸ್ ಅನ್ನು ಜಾರಿಗೊಳಿಸಿವೆ. ಕೇಂದ್ರದ ಮಾದರಿಯಲ್ಲಿಯೇ ರಾಜ್ಯ ಸರ್ಕಾರದ ನೌಕರರು ಕೂಡ ಎನ್ಪಿಎಸ್ನಲ್ಲಿ ಹೂಡಿಕೆ ಅಥವಾ ಉಳಿತಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ: National Pension Scheme: ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್; 65 ವರ್ಷ ಮೇಲ್ಪಟ್ಟವರೂ ಎನ್ಪಿಎಸ್ನಲ್ಲಿ ಹೂಡಿಕೆ ಮಾಡಬಹುದು
ಇನ್ನು ಖಾಸಗಿ ಕ್ಷೇತ್ರದ ಅನೇಕ ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಎನ್ಪಿಎಸ್ ಅಡಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಿವೆ. 2009ರ ಮಾರ್ಚ್ 1ರಿಂದ ಎಲ್ಲ ನಾಗರಿಕರಿಗೂ ಎನ್ಪಿಎಸ್ನಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಇತರ ಪಿಂಚಣಿ ಯೋಜನೆಗಳಿಗೆ ಹೋಲಿಸಿದರೆ ಎನ್ಪಿಎಸ್ನಲ್ಲಿ ಕೆಲವೊಂದು ಪ್ರಯೋಜನಗಳಿವೆ. ಅವುಗಳು ಹೀಗಿವೆ;
ಭಾರತದ ನಾಗರಿಕರು ಯಾರು ಬೇಕಾದರೂ ಎನ್ಪಿಎಸ್ ಯೋಜನೆಗೆ ಸೇರಬಹುದು. ಅನಿವಾಸಿ ಭಾರತೀಯರಿಗೂ ಯೋಜನೆಯಡಿ ಖಾತೆ ತೆರೆಯಲು ಅವಕಾಶವಿದೆ. 18ರಿಂದ 70 ವರ್ಷ ವಯಸ್ಸಿನವರೆಗೆ ಯಾರು ಬೇಕಾದರೂ ಎನ್ಪಿಎಸ್ ಖಾತೆ ತೆರೆಯಬಹುದು. ಇತ್ತೀಚೆಗಷ್ಟೇ ನಿಯಮಗಳಲ್ಲಿ ತುಸು ಬದಲಾವಣೆ ಮಾಡಿದ್ದ ಪಿಎಫ್ಆರ್ಡಿಎ, 70 ವರ್ಷ ವಯಸ್ಸಿನ ವರೆಗೆ ಹೂಡಿಕೆ ಮಾಡಲು ಅವಕಾಶ ನೀಡಿದ್ದು, ನಂತರ ಅದನ್ನು 75 ವರ್ಷ ವಯಸ್ಸಿನ ವರೆಗೆ ವಿಸ್ತರಿಸಲು ಅವಕಾಶ ನೀಡಿದೆ. ವಯಸ್ಸಿನ ಅರ್ಹತೆಯ ಕಾರಣಕ್ಕಾಗಿ ಈಗಾಗಲೇ ಖಾತೆಯನ್ನು ಕ್ಲೋಸ್ ಮಾಡಿದವರು ಮತ್ತೊಮ್ಮೆ ಖಾತೆ ತೆರೆಯಬಹುದು ಎಂದೂ ಹೇಳಿದೆ.
ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಎನ್ಪಿಎಸ್ ಖಾತೆ ತೆರೆಯುವಂತಿಲ್ಲ. ಅದೇ ರೀತಿ ಸಂಗಾತಿ, ಮಕ್ಕಳು, ಸಂಬಂಧಿಕರ ಜತೆ ಜಂಟಿ ಖಾತೆ ತೆರೆಯಲೂ ಅವಕಾಶ ಇರುವುದಿಲ್ಲ.
ಖಾತೆ ತೆರೆದ ನಂತರ ಖಾತೆದಾರನಿಗೆ ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ (PRAN) ನೀಡಲಾಗುತ್ತದೆ. ಪಿಆರ್ಎಎನ್ ಸಂಖ್ಯೆ ದೊರೆತ ಬಳಿಕ ನೋಂದಾಯಿತ ಇ-ಮೇಲ್ ಐಡಿಗೆ ಮತ್ತು ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ನಿವೃತ್ತಿ ಅವಧಿಯ ಪಿಂಚಣಿಗಾಗಿ ಖಾತೆದಾರರು ನಿಯಮಿತವಾಗಿ ಎನ್ಪಿಎಸ್ನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
ಎನ್ಪಿಎಸ್ನಿಂದ ಹಣ ವಾಪಸ್ ಪಡೆಯಬೇಕಾದ ಸಂದರ್ಭದ ಬಂದರೆ ಅದಕ್ಕೆ ಕೆಲವು ನಿಯಮಗಳು ಹಾಗೂ ಷರತ್ತುಗಳಿವೆ ಎಂಬುದನ್ನು ಗಮನಿಸಬೇಕು. ಎನ್ಪಿಎಸ್ನಲ್ಲಿ ಹೂಡಿಕೆ ಆರಂಭಿಸಿ 5 ವರ್ಷ ಆಗುವ ಮುನ್ನ ಹಣ ಹಿಂಪಡೆಯಲಾಗದು. ಒಂದು ವೇಳೆ ಹಿಂಪಡೆಯಲೇಬೇಕು ಎಂದಿದ್ದಲ್ಲಿ ಭಾಗಶಃ ಮೊತ್ತವನ್ನು ಮಾತ್ರ ವಿತ್ಡ್ರಾ ಮಾಡಬಹುದು. ನಿರ್ದಿಷ್ಟ ಮೊತ್ತಕ್ಕಿಂತ ಕಡಿಮೆ ಇದ್ದರೆ ಮಾತ್ರ ಪೂರ್ತಿ ವಿತ್ಡ್ರಾ ಮಾಡಬಹುದಾಗಿದೆ.
ಇದನ್ನೂ ಓದಿ: NPS: ಎನ್ಪಿಎಸ್ ಖಾತೆಯಿಂದ ಹಣ ವಾಪಸ್ ಪಡೆಯುವುದು ಹೇಗೆ? ಷರತ್ತು, ನಿಯಮಗಳ ಪೂರ್ಣ ವಿವರ ಇಲ್ಲಿದೆ
ಎನ್ಪಿಎಸ್ನಲ್ಲಿ 2.5 ಲಕ್ಷ ರೂ.ಗಿಂತ ಕಡಿಮೆ ಹಣ ಇದ್ದರೆ, ಯಾವುದೇ ಕಡಿತವಿಲ್ಲದೇ ಪೂರ್ತಿ ಹಣ ವಾಪಸ್ ದೊರೆಯಲಿದೆ. ಒಂದು ವೇಳೆ, ಎನ್ಪಿಎಸ್ ಖಾತೆಯಲ್ಲಿ 2.5 ಲಕ್ಷ ರೂ.ಗಿಂತಲೂ ಹೆಚ್ಚು ಹಣ ಇದ್ದು, ಅವಧಿಗೆ ಮುಂಚೆ ವಾಪಸ್ ಪಡೆಯುತ್ತೇವೆ ಎಂದಾದರೆ ಆಗ 80-20ರ ನಿಯಮ ಜಾರಿ ಆಗುತ್ತದೆ. ಅಂದರೆ, ಒಟ್ಟು ಠೇವಣಿಯ ಕೇವಲ ಶೇ 20ರಷ್ಟನ್ನು ಮಾತ್ರ ಇಡುಗಂಟಾಗಿ ಪಡೆಯಬಹುದಾಗಿದೆ. ಉಳಿದ ಶೇಕಡಾ 80ರಷ್ಟು ಮೊತ್ತಕ್ಕೆ ಆನ್ಯುಯಿಟಿ ಪ್ಲಾನ್, ಅಂದರೆ ವರ್ಷಾಶನ ಯೋಜನೆಯನ್ನು ಕೊಳ್ಳಬೇಕಾಗುತ್ತದೆ. ಉಳಿದಂತೆ ಮಕ್ಕಳ ಉನ್ನತ ಶಿಕ್ಷಣಕ್ಕೆ, ಮಕ್ಕಳ ವಿವಾಹಕ್ಕೆ, ಸ್ವಂತ ಮನೆ ನಿರ್ಮಾಣಕ್ಕೆ ಅಥವಾ ಫ್ಲ್ಯಾಟ್ ಕೊಳ್ಳಲು, ಗಂಭೀರ ಕಾಯಿಲೆಗಳ ಚಿಕಿತ್ಸೆಗೆ, ಅಪಘಾತಗಳ ಸಂದರ್ಭಗಳಲ್ಲಿ, ಅಧ್ಯಯನ ಅಥವಾ ಉದ್ಯೋಗ/ವ್ಯವಹಾರಗಳಿಗಾಗಿ ಭಾಗಶಃ ಮೊತ್ತ ಹಿಂಪಡೆಯಲು ಅವಕಾಶವಿದೆ.
ಈಗಾಗಲೇ ಹೇಳಿರುವಂತೆ ಹಳೆ ಪಿಂಚಣಿ ಯೋಜನೆಯಲ್ಲಿ ನೌಕರರು ಹೂಡಿಕೆ ಮಾಡಬೇಕಿರುವುದಿಲ್ಲ. ನೌಕರರ ದೃಷ್ಟಿಯಿಂದ ನೋಡಿದರೆ ಹಳೆ ಪಿಂಚಣಿ ಯೋಜನೆಯಲ್ಲಿ ಪ್ರಯೋಜನಗಳು ಹಲವಾರು. ಕೇವಲ 10 ವರ್ಷ ಸೇವೆ ಸಲ್ಲಿಸಿದರೂ ಪಿಂಚಣಿಗೆ ಅರ್ಹರಾಗಿರುತ್ತಾರೆ. ಹೀಗಾಗಿ ನೌಕರ ವರ್ಗದಿಂದ ಹಳೆ ಪಿಂಚಣಿ ಯೋಜನೆಯ ಮರು ಜಾರಿಗೆ ಕೂಗು ಕೇಳಿಬಂದಿದೆ. ಆದರೆ, ಒಪಿಎಸ್ ಜಾರಿಗೆ ಬಂದರೆ ಈಗಾಗಲೇ ಎನ್ಪಿಎಸ್ನಲ್ಲಿ ಹೂಡಿಕೆ ಮಾಡುತ್ತಿರುವವರು ಹಲವು ವರ್ಷಗಳಿಂದ ತಾವು ಮಾಡಿರುವ ಹೂಡಿಕೆಯ ಮೊತ್ತದಷ್ಟನ್ನೇ ಸರ್ಕಾರ ಮತ್ತೆ ನೀಡಬೇಕೆಂಬ ಆಗ್ರಹ ವ್ಯಕ್ತಪಡಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಹೀಗಾದಲ್ಲಿ ಸರ್ಕಾರಕ್ಕೆ ದುಪ್ಪಟ್ಟು ಹೊರೆಯಾಗಲಿದೆ. ಈಗಾಗಲೇ ವೇತನಕ್ಕಿಂತ ಹೆಚ್ಚು ಪಿಂಚಣಿ ಬಿಲ್ಗೆ ವೆಚ್ಚವಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಈ ಎಲ್ಲದರ ನಡುವೆ, ಹಲವು ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಒಪಿಎಸ್ ಮರು ಜಾರಿಯ ಭರವಸೆ ನೀಡಿವೆ. ಆದರೆ, ಇದರ ಹೊರೆ ಹೊಸದಾಗಿ ಅಧಿಕಾರಕ್ಕೆ ಬಂದ ಸರ್ಕಾರಗಳ ಮೇಲಿರುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
Published On - 1:53 pm, Thu, 22 December 22