EPF: ಆರು ವರ್ಷದಲ್ಲಿ ಹೊಸದಾಗಿ ಇಪಿಎಫ್, ಇಎಸ್ಐ, ಎನ್ಪಿಎಸ್ ಪಡೆದವರ ಸಂಖ್ಯೆ 15 ಕೋಟಿಗೂ ಹೆಚ್ಚು
New Subscribers For EPF, ESI and NPS: 2017ರ ಸೆಪ್ಟೆಂಬರ್ನಿಂದ 2023ರ ಜೂನ್ವರೆಗೆ ಭಾರತದಲ್ಲಿ ಹೊಸದಾಗಿ ಇಪಿಎಫ್ ಸಬ್ಸ್ಕ್ರೈಬ್ ಆದವರ ಸಂಖ್ಯೆ 6.72 ಕೋಟಿಯಷ್ಟಿದೆ. ಹೊಸದಾಗಿ ಇಎಸ್ಐ ಮತ್ತು ಎನ್ಪಿಎಸ್ ಪಡೆದವರು ಕ್ರಮವಾಗಿ 8.60 ಕೋಟಿ ಮತ್ತು 44 ಲಕ್ಷ ಮಂದಿ ಇದ್ದಾರೆ. ಈ ಬಗ್ಗೆ ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಅಂಕಿ ಅಂಶ ಬಿಡುಗಡೆ ಮಾಡಿದೆ.
ನವದೆಹಲಿ, ಆಗಸ್ಟ್ 25: ಭಾರತದಲ್ಲಿ ಸಂಘಟಿತ ಕ್ಷೇತ್ರಗಳಲ್ಲಿ ಉದ್ಯೋಗ ಪ್ರಮಾಣದ ಸೂಚಕವೆಂದು ಪರಿಗಣಿಸಲಾದ ಇಪಿಎಫ್, ಇಎಸ್ಐ ಮತ್ತು ಎನ್ಪಿಎಸ್ ಸಬ್ಸ್ಕ್ರೈಬರ್ಗಳ ಡತ್ತಾಂಶವನ್ನು ಸರ್ಕಾರ ಬಿಡುಗಡೆ ಮಾಡಿದೆ. ಅದರ ಪ್ರಕಾರ 2017ರ ಸೆಪ್ಟೆಂಬರ್ನಿಂದ 2023ರ ಜೂನ್ವರೆಗೆ, ಸುಮಾರು 6 ವರ್ಷದ ಅವಧಿಯಲ್ಲಿ 6,72,10,123 ಹೊಸ ಇಪಿಎಫ್ ಸಬ್ಸ್ಕ್ರೈಬರ್ಗಳು (New EPF Subscribers) ಸೇರ್ಪಡೆಯಾಗಿದ್ದಾರೆ. ಅಂದರೆ ಈ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಪಿಎಫ್ ಖಾತೆ ಪಡೆದವರ ಸಂಖ್ಯೆ 6.72 ಕೋಟಿ ಇದೆ. ಇನ್ನು, ಇಪಿಎಫ್ ಸಬ್ಸ್ಕ್ರಿಪ್ಷನ್ ಬಿಟ್ಟವರ ಸಂಖ್ಯೆ 6,83,83,884 ಇದೆ. ಅಂದರೆ, ಈ ಅವಧಿಯಲ್ಲಿ 6.83 ಕೋಟಿ ಮಂದಿ ಕೆಲಸ ಬಿಟ್ಟಿರಬಹುದು. ಹಾಗೆಯೇ, ಇಪಿಎಫ್ ಸಬ್ಸ್ಕ್ರಿಪ್ಷನ್ ಬದಲಾಗಿರುವುದು 5,50,66,161 ಎನ್ನಲಾಗಿದೆ. ಅಂದರೆ ಕೆಲಸ ಬದಲಾಯಿಸಿದವರು ಸುಮಾರು 5.50 ಕೋಟಿ ಮಂದಿ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದಿಂದ ಬಿಡುಗಡೆಯಾದ ದತ್ತಾಂಶ ಇದಾಗಿದೆ.
ಇನ್ನು, ಎಂಪ್ಲಾಯೀ ಸ್ಟೇಟ್ ಇನ್ಷೂರೆನ್ಸ್ ಯೋಜನೆ, ಅಂದರೆ ಇಎಸ್ಐ ಯೋಜನೆಯಲ್ಲಿ 2017ರ ಸೆಪ್ಟೆಂಬರ್ನಿಂದ 2023ರ ಜೂನ್ವರೆಗೆ ಹೊಸದಾಗಿ ಸಬ್ಸ್ಕ್ರಿಪ್ಷನ್ ಪಡೆದವರ ಸಂಖ್ಯೆ 8,60,45,432 ಇದೆ. ಅಂದರೆ ಸುಮಅರು 8.61 ಕೋಟಿಯಷ್ಟು ಉದ್ಯೋಗಿಗಳು ಮೊದಲ ಬಾರಿಗೆ ಇಎಸ್ಐ ಚಂದಾದಾರಿಕೆ ಪಡೆದಿದ್ದಾರೆ. ಹಾಗೆಯೇ, ನ್ಯಾಷನಲ್ ಪೆನ್ಷನ್ ಸ್ಕೀಮ್ನಲ್ಲಿ ಹೊಸದಾಗಿ ಚಂದಾದಾರರಾದವರ ಸಂಖ್ಯೆ 44.7 ಲಕ್ಷ ಎಂದು ಹೇಳಲಾಗಿದೆ.
2017ರ ಸೆಪ್ಟೆಂಬರ್ನಿಂದ 2023ರ ಜೂನ್ವರೆಗಿನ ಅವಧಿಯಲ್ಲಿ ಮೊದಲ ಬಾರಿಗೆ ಪೆನ್ಷನ್ ಸ್ಕೀಮ್ ಪಡೆದವರ ಸಂಖ್ಯೆ:
- ಇಪಿಎಫ್ನ ಹೊಸ ಸಬ್ಸ್ಕ್ರೈಬರ್ಸ್: 6,72,10,123
- ಇಎಸ್ಐನ ಹೊಸ ಸಬ್ಸ್ಕ್ರೈಬರ್ಸ್: 8,60,45,432
- ಎನ್ಪಿಎಸ್ನ ಹೊಸ ಸಬ್ಸ್ಕ್ರೈಬರ್ಸ್: 44,74,303
- ಒಟ್ಟು: 15,72,29,858
ಇಪಿಎಫ್, ಇಎಸ್ಐ, ಎನ್ಪಿಎಸ್ ಹೀಗೆ ಉದ್ಯೋಗಿಗಳ ಪೆನ್ಷನ್ ಮತ್ತು ಇನ್ಷೂರೆನ್ಸ್ ಸ್ಕೀಮ್ಗಳನ್ನು ಕಳೆದ 6 ವರ್ಷದಲ್ಲಿ ಮೊದಲ ಬಾರಿಗೆ ಪಡೆದವರ ಸಂಖ್ಯೆ 15 ಕೋಟಿಗೂ ಹೆಚ್ಚಿರುವುದು ತಿಳಿದುಬಂದಿದೆ.
M/o Statistics & Programme Implementation released Employment Outlook of country covering the period September, 2017 to June, 2023 based on administrative records available with selected govt agencies to assess the progress in certain dimensions Details: https://t.co/CfnoeZhtqc pic.twitter.com/g0nHwagB5J
— PIB_MOSPI (@PibMospi) August 25, 2023
ಏನಿದು ಇಪಿಎಫ್ ಸ್ಕೀಮ್?
ಇದು ಉದ್ಯೋಗಿಗಳಿಗೆ ಪಿಂಚಣಿ ಭದ್ರತೆ ಒದಗಿಸುವ ಕೇಂದ್ರ ಸರ್ಕಾರದ ಯೋಜನೆ. 20ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿ ಕಡ್ಡಾಯವಾಗಿ ಇಪಿಎಫ್ ಅನ್ನು ಅಳವಡಿಸಿಕೊಳ್ಳಬೇಕು. ವೇತನ ಮಿತಿ 15,000 ರೂ ಎಂದು ನಿಗದಿಯಾಗಿದ್ದರೂ ಇದಕ್ಕಿಂತ ಹೆಚ್ಚಿನ ವೇತನ ಪಡೆಯುತ್ತಿರುವವರೂ ಇಪಿಎಫ್ಗೆ ಸಬ್ಸ್ಕ್ರೈಬ್ ಆಗಬಹುದು. ವೇತನದ ಶೇ. 12ರಷ್ಟು ಭಾಗವನ್ನು ಇಪಿಎಫ್ ಖಾತೆಗೆ ಹಾಕಲಾಗುತ್ತದೆ. ಕಂಪನಿ ವತಿಯಿಂದಲೂ ಇಷ್ಟೇ ಮೊತ್ತದ ಹಣ ಈ ಖಾತೆಗೆ ವರ್ಗಾವಣೆ ಆಗುತ್ತದೆ. ಸರ್ಕಾರ ಈ ಖಾತೆಯ ಹಣಕ್ಕೆ ಪ್ರತೀ ವರ್ಷ ನಿರ್ದಿಷ್ಟ ದರದಲ್ಲಿ ಬಡ್ಡಿ ಹಣ ತುಂಬಿಸುತ್ತದೆ.
ಏನಿದು ಇಎಸ್ಐ ಸ್ಕೀಮ್?
ಇದು ಕಡಿಮೆ ವೇತನದ ಉದ್ಯೋಗಿಗಳಿಗೆ ನೀಡಲಾಗುವ ವಿಮಾ ಯೋಜನೆಯಾಗಿದೆ. 10ಕ್ಕೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಂಪನಿಗಳು ಈ ಸ್ಕೀಮ್ ಅನ್ನು ಅಳವಡಿಸುವುದು ಕಡ್ಡಾಯವಾಗಿದೆ. ಈ ಯೋಜನೆಗೆ ವೇತನಮಿತಿ 21,000 ರೂ ಇದೆ.
ಇದನ್ನೂ ಓದಿ: 2023ರ ವರ್ಷದಲ್ಲಿ ಭಾರತದ ಮೊದಲ ಯೂನಿಕಾರ್ನ್ ಸಂಸ್ಥೆ ಎನಿಸಿದ ಝೆಪ್ಟೋ; ಯೂನಿಕಾರ್ನ್ ಅಂದರೇನು?
ನ್ಯಾಷನಲ್ ಪೆನ್ಷನ್ ಸ್ಕೀಮ್ ಬಗ್ಗೆ
ಇದು ಸರ್ಕಾರಿ ಉದ್ಯೋಗಿಗಳಿಗೆ ನೀಡಲಾಗುವ ಪಿಂಚಣಿ ಸ್ಕೀಮ್. ಕೇಂದ್ರ ಮತ್ತು ಬಹುತೇಕ ರಾಜ್ಯ ಸರ್ಕಾರಗಳು ಎನ್ಪಿಎಸ್ ಅಥವಾ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಅಳವಡಿಸಿಕೊಂಡಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:07 pm, Fri, 25 August 23