AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm: ಫೆ. 29ರ ನಂತರ ಪೇಟಿಎಂನಲ್ಲಿ ನೀವು ಏನು ಬಳಸಬಹುದು, ಯಾವುದು ಸಾಧ್ಯವಿಲ್ಲ? ಇಲ್ಲಿದೆ ಡೀಟೇಲ್ಸ್

Paytm Services After Feb 29th: ಪೇಟಿಎಂ ಬಗ್ಗೆ ಸಾಕಷ್ಟು ಸುದ್ದಿಗಳು ಬಂದಿವೆ. ಆದರೂ ಪೇಟಿಎಂನಲ್ಲಿ ಯಾವ ಸೇವೆಗಳು ಫೆ. 29 ಬಳಿಕ ನಿಲ್ಲುತ್ತವೆ ಎಂಬ ಗೊಂದಲ ಉಳಿದಿದೆ. ಆರ್​ಬಿಐ ನಿರ್ಬಂಧ ವಿಧಿಸಿರುವುದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಮಾತ್ರ ಎಂಬುದು ಎಲ್ಲರೂ ತಿಳಿಯಬೇಕು. ಪೇಮೆಂಟ್ಸ್ ಬ್ಯಾಂಕ್​ಗೆ ಜೋಡಿತವಾದ ಸೇವೆಗಳನ್ನು ಬಳಸಲು ಆಗುವುದಿಲ್ಲ. ಅಂತೆಯೇ ಗ್ರಾಹಕರು ಹಾಗೂ ಪೇಟಿಎಂ ಸೋದರ ಸಂಸ್ಥೆಗಳು ಪೇಮೆಂಟ್ಸ್ ಬ್ಯಾಂಕ್​ನಿಂದ ಹೊರಬಂದರೆ ಸಮಸ್ಯೆ ಇಲ್ಲ.

Paytm: ಫೆ. 29ರ ನಂತರ ಪೇಟಿಎಂನಲ್ಲಿ ನೀವು ಏನು ಬಳಸಬಹುದು, ಯಾವುದು ಸಾಧ್ಯವಿಲ್ಲ? ಇಲ್ಲಿದೆ ಡೀಟೇಲ್ಸ್
ಪೇಟಿಎಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 04, 2024 | 10:43 AM

Share

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐ ನಿರ್ಬಂಧ ವಿಧಿಸಿ ಕೆಲವಾರು ದಿನಗಳಾದರೂ ಪೇಟಿಎಂ ಭವಿಷ್ಯದ ಬಗ್ಗೆ ಬಹಳಷ್ಟು ಮಂದಿಗೆ ಈಗಲೂ ಗೊಂದಲಗಳಿವೆ. ಅದಕ್ಕೆ ಕಾರಣ ಪೇಟಿಎಂ ಮತ್ತು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ನಡುವಿನ ಗಾಢ ಬೆಸುಗೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಫೆಬ್ರುವರಿ 29ರ ನಂತರ ಯಾವುದೇ ಹೊಸ ಡೆಪಾಸಿಟ್ ಪಡೆಯುವಂತಿಲ್ಲ. ಪೇಟಿಎಂ ಪೇಮೆಂಟ್ಸ್ ಸರ್ವಿಸಸ್, ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆಗಳು ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಹೊಂದಿರುವ ನೋಡಲ್ ಖಾತೆಗಳನ್ನು ಬೇರೆ ಬ್ಯಾಂಕೊಂದಕ್ಕೆ ಫೆ. 29ರೊಳಗೆ ವರ್ಗಾಯಿಸುವಂತೆ ಆರ್​ಬಿಐ ನಿರ್ದೇಶನ ನೀಡಿದೆ. ಈ ಮಧ್ಯೆ ಪೇಟಿಎಂನ ಯಾವೆಲ್ಲಾ ಸೇವೆಗಳು ಸ್ಥಗಿತಗೊಳ್ಳಬಹುದು ಎಂಬ ಗೊಂದಲ ಮಾತ್ರ ಸ್ವಲ್ಪ ಉಳಿದುಕೊಂಡಿದೆ.

ಪೇಟಿಎಂ ಆ್ಯಪ್​ನಲ್ಲಿ ಹಲವು ಸೇವೆಗಳಿವೆ. ಬ್ಯಾಂಕ್, ಷೇರು ವಹಿವಾಟು, ಸಾಲ, ಇನ್ಷೂರೆನ್ಸ್, ವ್ಯಾಲಟ್, ಬಿಲ್ ಪಾವತಿ, ಒಎನ್​ಡಿಸಿ, ಫಾಸ್​ಟ್ಯಾಗ್ ಇತ್ಯಾದಿ ನಾನಾ ರೀತಿಯ ಸೇವೆಗಳನ್ನು ಪೇಟಿಎಂ ಒದಗಿಸುತ್ತದೆ. ಈಗ ನಿರ್ಬಂಧ ಇರುವುದು ಪೇಟಿಎಂ ಪೇಮೆಂಟ್ ಬ್ಯಾಂಕ್​ಗೆ ಮಾತ್ರ. ಪೇಟಿಎಂನ ಯಾವೆಲ್ಲಾ ಸೇವೆಗಳು ಪೇಮೆಂಟ್ ಬ್ಯಾಂಕ್​​ಗೆ ತಳುಕು ಹಾಕಿಕೊಂಡಿವೆಯೋ ಅವೆಲ್ಲವೂ ಬಾಧಿತವಾಗುತ್ತವೆ. ಆರ್​ಬಿಐ ನಿರ್ದೇಶನದಂತೆ ಪೇಟಿಎಂ ಪೇಮೆಂಟ್ ಸರ್ವಿಸ್ ಮತ್ತು ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆಗಳು ಪೇಮೆಂಟ್ ಬ್ಯಾಂಕ್​ನಲ್ಲಿರುವ ತಮ್ಮ ನೋಡಲ್ ಅಕೌಂಟ್​ಗಳನ್ನು ಬೇರೆ ಬ್ಯಾಂಕುಗಳ ಕಡೆ ವರ್ಗಾಯಿಸಿದರೆ ಯಾವ ಸಮಸ್ಯೆಯೂ ಇರುವುದಿಲ್ಲ. ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಹೇಳಿದಂತೆ ಫೆ. 29ರ ಬಳಿಕವೂ ಪೇಟಿಎಂ ಯಥಾ ಪ್ರಕಾರ ಮುಂದುವರಿಯುತ್ತದೆ.

ಇದನ್ನೂ ಓದಿ: ಪೇಟಿಎಂ ಫಾಸ್​ಟ್ಯಾಗ್, ವ್ಯಾಲಟ್ ಬಳಕೆ ನಿಲ್ಲಿಸಬೇಕಿಲ್ಲ; ಅಷ್ಟಕ್ಕೂ ಆರ್​ಬಿಐ ನಿರ್ಬಂಧ ಹಾಕಿದ್ದು ಯಾಕೆ, ಡೀಟೇಲ್ಸ್ ನೋಡಿ

ಪೇಟಿಎಂ ಆರ್​ಬಿಐ ನಿರ್ದೇಶನಗಳನ್ನು ಚಾಚೂತಪ್ಪದೇ ಪಾಲಿಸುವುದಾಗಿ ಹೇಳಿದೆ. ಅಂತೆಯೇ ಬೇರೆ ಬ್ಯಾಂಕುಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಹೀಗಾಗಿ, ಪೇಟಿಎಂ ಬಳಕೆದಾರರು ಹೆಚ್ಚು ಚಿಂತೆ ಪಡುವ ಅವಶ್ಯಕತೆ ಇರುವುದಿಲ್ಲ. ಈ ಕೆಳಗಿನ ಪೇಟಿಎಂ ಸೇವೆಗಳು ಏನಾಗಬಹುದು ನೋಡಿ…

  • ಪೇಟಿಎಂ ವ್ಯಾಲಟ್ ಅನ್ನು ಫೆ. 29ರ ನಂತರವೂ ಮುಂದುವರಿಸಲು ಅಡ್ಡಿ ಇಲ್ಲ. ಬೇರೆ ಬ್ಯಾಂಕ್ ಖಾತೆಗಳಿಂದ ಪೇಟಿಎಂ ವ್ಯಾಲಟ್​ಗೆ ಹಣ ತುಂಬಿಸಿ ಬಳಕೆ ಮಾಡಬಹುದು.
  • ಪೇಟಿಎಂ ಫಾಸ್​ಟ್ಯಾಗ್ ಅನ್ನು ಬಳಸಬಹುದು. ಆದರೆ, ಫಾಸ್​ಟ್ಯಾಗ್​ಗಾಗಿ ಪೇಟಿಎಂ ಸಂಸ್ಥೆ ಪೇಮೆಂಟ್ ಬ್ಯಾಂಕ್ ಬದಲು ಎಚ್​ಡಿಎಫ್​ಸಿ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ, ಪೇಟಿಎಂ ಫಾಸ್​ಟ್ಯಾಗ್ ಹೊಂದಿರುವವರು ಎಚ್​ಡಿಎಫ್​ಸಿಯ ಫಾಸ್​ಟ್ಯಾಗ್ ಪಡೆಯಬಹುದು.
  • ಪೇಟಿಎಂ ಮನಿ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರಿಗೆ ಯಾವ ಭಯ ಇರಬೇಕಿಲ್ಲ. ಪೇಟಿಎಂ ಮನಿ ಸೆಬಿ ನಿಯಂತ್ರಣಕ್ಕೆ ಒಳಪಟ್ಟಿದೆ. ಅಲ್ಲಿ ನಿಮ್ಮ ಮ್ಯುಚುವಲ್ ಫಂಡ್ ಇತ್ಯಾದಿ ಹೂಡಿಕೆಗಳು ಸುರಕ್ಷಿತವಾಗಿರುತ್ತವೆ.
  • ಪೇಟಿಎಂನಲ್ಲಿ ನಮ್ಮ ಅನೇಕ ಮಾಸಿಕ ಬಿಲ್​ಗಳನ್ನು ಜೋಡಿಸಿರುತ್ತೇವೆ. ವಿದ್ಯುತ್ ಬಿಲ್, ನೀರಿನ ಬಿಲ್, ಮೊಬೈಲ್ ಬಿಲ್ ಇತ್ಯಾದಿ ಹಲವು ಬಿಲ್ ಸೇವೆಗಳನ್ನು ಪೇಟಿಎಂ ನೀಡುತ್ತದೆ. ಪೇಮೆಂಟ್ ಬ್ಯಾಂಕ್​ಗೆ ಲಿಂಕ್ ಆಗಿದ್ದರೆ ಮಾತ್ರವೇ ಇವುಗಳ ಬಳಕೆ ಆಗುವುದಿಲ್ಲ. ಬೇರೆ ಬ್ಯಾಂಕ್ ಖಾತೆ ಲಿಂಕ್ ಆಗಿದ್ದರೆ ಸಮಸ್ಯೆ ಇರುವುದಿಲ್ಲ. ಯಥಾ ಪ್ರಕಾರ ಪೇಟಿಎಂ ಬಳಸಬಹುದು.
  • ಪೇಟಿಎಂನಿಂದ ಯುಪಿಐ ಮೂಲಕ ಹಣ ವರ್ಗಾವಣೆ, ಹಣ ಪಾವತಿಯನ್ನು ಮುಂದುವರಿಸಬಹುದು. ಆದರೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಖಾತೆ ಲಿಂಕ್ ಆಗಿರಬಾರದು ಅಷ್ಟೇ.

ಇದನ್ನೂ ಓದಿ: ಫ್ರಾನ್ಸ್‌ನಲ್ಲಿ ಯುಪಿಐ ಬಳಕೆಗೆ ಚಾಲನೆ, ಭಾರತೀಯರು UPI ಮೂಲಕ ಪೇ ಮಾಡಬಹುದು!

ಒಟ್ಟಾರೆ ಸಾರಾಂಶ ಇಷ್ಟು…

ಕೊನೆಯದಾಗಿ ಸ್ಪಷ್ಟವಾಗಿ ಹೇಳುವುದಾದರೆ, ನೀವು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದರೆ ಫೆಬ್ರುವರಿ 29ರ ಒಳಗೆ ಅದರಿಂದ ಹೊರಗೆ ಬನ್ನಿ. ನಿಮ್ಮ ಎಲ್ಲಾ ಹಣವನ್ನು ವರ್ಗಾಯಿಸಿಕೊಳ್ಳಿ. ಪೇಟಿಎಂಗೆ ಬೇರೆ ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲದೇ ಇದ್ದರೆ ಮೊದಲು ಆ ಕೆಲಸ ಮಾಡಿ. ಇನ್ನುಳಿದಂತೆ ನೀವು ಪೇಟಿಎಂ ಅನ್ನು ಯಥಾ ಪ್ರಕಾರ ಬಳಕೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More