ಈ ದಿನದಿಂದ (ಜುಲೈ 1, 2021) ಹಲವು ಬದಲಾವಣೆಗಳಿಗೆ ನೀವು ತಯಾರಗಬೇಕಿದೆ. ಈ ಪೈಕಿ ಯಾವ್ಯಾವ ಬದಲಾವಣೆ ನಿಮಗೆ ವೈಯಕ್ತಿಕವಾಗಿ ಪರಿಣಾಮ ಬೀರಲಿದೆ ಎಂಬುದನ್ನು ನೋಡಿಕೊಳ್ಳಿ. ಡ್ರೈವಿಂಗ್ ಲೈಸೆನ್ಸ್ನಿಂದ ತೆರಿಗೆ ವಿಚಾರದ ತನಕ ಆಗಲಿರುವ ಈ ನಾಲ್ಕು ಬದಲಾವಣೆ ನಿಮ್ಮ ಗಮನದಲ್ಲಿರಲಿ. ಸರ್ಕಾರದ ಮಾರ್ಗದರ್ಶಿ ಸೂತ್ರದ ಪ್ರಕಾರವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್ಬಿಐ) ಸೇವಾ ಶುಲ್ಕದಲ್ಲಿ ಬದಲಾವಣೆ ಆಗಲಿದೆ. ಎಲ್ಪಿಜಿ ದರದಲ್ಲಿ ಪರಿಷ್ಕರಣೆ ನಿರೀಕ್ಷಿಸಬಹುದು. ಈಗ ಒಂದೊಂದಾಗಿ ಬದಲಾವಣೆಗಳನ್ನು ಗಮನಿಸುವುದಾದರೆ ಅವು ಹೀಗಿವೆ:
1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಖಾತೆಗಳಿಗೆ ಅನ್ವಯ ಆಗುವಂತೆ ಸೇವಾ ಶುಲ್ಕಗಳನ್ನು ಪರಿಷ್ಕರಣೆ: ಈ ಶುಲ್ಕಗಳು ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ (ಬಿಎಸ್ಬಿಡಿ)ಗಳಿಗೆ ಅನ್ವಯ ಆಗಲಿದೆ. ಎಟಿಎಂ ವಿಥ್ಡ್ರಾವಲ್, ಚೆಕ್ಬುಕ್, ಹಣ ವರ್ಗಾವಣೆ ಮತ್ತು ಇತರ ವಹಿವಾಟುಗಳಿಗೆ ಸಂಬಂಧಿಸಿದಂತೆ ಬದಲಾವಣೆಗಳಾಗಲಿವೆ. ಶಾಖೆಗಳಲ್ಲಿ ಮತ್ತು ಎಟಿಎಂ ಎರಡೂ ಸೇರಿಕೊಂಡು ಒಂದು ತಿಂಗಳಿಗೆ ನಾಲ್ಕು ವಹಿವಾಟು ಮಾತ್ರ ಉಚಿತ ಇದೆ. ಆ ಮಿತಿಯ ನಂತರದಲ್ಲಿ ಗ್ರಾಹಕರು ಪ್ರತಿ ವಹಿವಾಟಿಗೆ ಶುಲ್ಕವಾಗಿ ರೂ. 15+ ಜಿಎಸ್ಟಿ ನೀಡಬೇಕಾಗುತ್ತದೆ. ಈ ಖಾತೆಗಳಿಗೆ ಕನಿಷ್ಠ ಇಷ್ಟೇ ಮೊತ್ತವನ್ನು ನಿರ್ವಹಣೆ ಮಾಡಬೇಕು ಎಂಬ ನಿಯಮ ಏನಿಲ್ಲ. ಆದ್ದರಿಂದ ಇದರ ಮಿನಿಮಮ್ ಬ್ಯಾಲೆನ್ಸ್ ಶೂನ್ಯ. ಈ ಖಾತೆದಾರರಿಗೆ ರುಪೇ ಎಟಿಎಂ ಕಮ್ ಡೆಬಿಟ್ ಕಾರ್ಡ್ ದೊರೆಯುತ್ತದೆ.
2. ಎಲ್ಪಿಜಿ ದರಗಳ ಪರಿಷ್ಕರಣೆ: ಎಲ್ಪಿಜಿ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆಯಲ್ಲಿ ಜುಲೈ 1ರಿಂದ ಅನ್ವಯ ಆಗುವಂತೆ ಪರಿಷ್ಕರಣೆ ಆಗಬಹುದು. ಮಾರುಕಟ್ಟೆಯಲ್ಲಿನ ಬದಲಾವಣೆಗೆ ಅನುಗುಣವಾಗಿ ತೈಲ ಮಾರ್ಕೆಟಿಂಗ್ ಕಂಪೆನಿಗಳು ಕೂಡ ಎಲ್ಪಿಜಿ ದರಗಳ ಪರಿಷ್ಕರಣೆ ಮಾಡುತ್ತವೆ.
3. ಮನೆಗೇ ಡ್ರೈವಿಂಗ್ ಲೈಸೆನ್ಸ್: ಹೊಸ ನಿಯಮಾವಳಿಯ ಅನುಸಾರವಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್ಟಿಒ) ಭೇಟಿ ನೀಡಿಯೇ ತಮ್ಮ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಅಂತೇನೂ ಇಲ್ಲ. ನಿರ್ದಿಷ್ಟ ಡ್ರೈವಿಂಗ್ ಸ್ಕೂಲ್ಗಳಲ್ಲಿ ಕೋರ್ಸ್ ಸಂಪೂರ್ಣಗೊಳಿಸಿದ್ದಲ್ಲಿ, ಅಗತ್ಯ ಮಾನದಂಡಗಳನ್ನು ಪೂರ್ತಿಗೊಳಿಸಿದರೆ ಶಾಶ್ವತ ಡಿ.ಎಲ್. ಸಿಗುತ್ತದೆ.
4. ತೆರಿಗೆ ನಿಯಮಮಾವಳಿ ವಿವಾದ್ ಸೇ ವಿಶ್ವಾಸ್: ಜೂನ್ 30ಕ್ಕೆ ಕೊನೆ ಎಂದಿದ್ದ ವಿವಾದ ಸೇ ವಿಶ್ವಾಸ್ ಯೋಜನೆಯನ್ನು ಎರಡು ತಿಂಗಳು, ಅಂದರೆ ಆಗಸ್ಟ್ 31ರ ತನಕ ವಿಸ್ತರಿಸಲಾಗಿದೆ. ಯಾವುದೇ ಬಡ್ಡಿ ವಿಧಿಸುವುದಿಲ್ಲ. ಸಿಬಿಬಿಟಿಯ ಪ್ರಕಾರ, ನೇರ ತೆರಿಗೆಯ ವಿವಾದ್ ಸೇ ವಿಶ್ವಾಸ್ ಕಾಯ್ದೆ, 2020ರ ಅಡಿಯಲ್ಲಿ ಬಾಕಿ ಮೊತ್ತ ಪಾವತಿಗೆ ಆಗಸ್ಟ್ 31ರ ತನಕ ಗಡುವು ವಿಸ್ತರಣೆ ಆಗಿದೆ. ಬಾಕಿ ಉಳಿದಿರುವ ಪ್ರಕರಣಗಳು ಶೇ 100 ವ್ಯಾಜ್ಯದ ತೆರಿಗೆ ಮತ್ತು ಶೇ 25 ವ್ಯಾಜ್ಯದ ದಂಡ ಪಾವತಿಸಿ ಬಗೆಹರಿಸಿಕೊಳ್ಳಬಹುದು.
ಇದನ್ನೂ ಓದಿ: ಯಾವುದೇ ಠೇವಣಿ ಮೇಲೆ ಎಷ್ಟೇ ಬಡ್ಡಿ ಬರಲಿ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್ಗಳಿಗೆ ಸುತ್ತೋಲೆ
(Here are the 4 finance changes expect from July 1st 2021)
Published On - 10:22 am, Thu, 1 July 21