ಒಂದು ಬ್ಯುಸಿನೆಸ್ ಶುರು ಮಾಡಲು ಇಂಥದ್ದೇ ನಿಯಮ ಎಂಬುದಿಲ್ಲ. ಯಾರು ಬೇಕಾದರೂ ಯಾವಾಗ ಬೇಕಾದರೂ ವ್ಯವಹಾರಕ್ಕಿಳಿಯಬಹುದು. ಇವತ್ತಿನ ಯುಗದಲ್ಲಿ ಯಾವ ವಯಸ್ಸಿನವರೂ ಬ್ಯುಸಿನೆಸ್ ಮಾಡುವಂತಹ ವಾತಾವರಣ, ಅವಕಾಶಗಳಿವೆ. ಯಾರ ತಲೆಗೆ ಹೊಸ ಐಡಿಯಾ (Business Idea) ಹೊಳೆಯುತ್ತೋ ಅವನೇ ಭವಿಷ್ಯದ ಉದ್ಯಮಿ. ಮಾರ್ಕ್ ಜುಕರ್ಬರ್ಗ್ ಕೇವಲ 19ರ ವಯಸ್ಸಿನಲ್ಲಿ ಫೇಸ್ಬುಕ್ ಆರಂಭಿಸಿದರು. ಇವತ್ತು ಅದು ಲಕ್ಷಲಕ್ಷ ಕೋಟಿ ಮೌಲ್ಯದ ಕಂಪನಿಯಾಗಿ ಬೆಳೆದಿದೆ. 25 ವರ್ಷದ ಅಸುಪಾಸಿನಲ್ಲಿ ಯಶಸ್ವಿ ಉದ್ಯಮಿಗಳಾದವರು ಹಲವರು ಉಂಟು. ಆದರೆ, ಯಾರಾದರೂ ಹೊಸ ವ್ಯವಹಾರ ಆರಂಭಿಸಬೇಕಾದರೆ 40 ವರ್ಷದ ಪ್ರಾಯ ದಾಟಿದ್ದರೆ ಅನುಕೂಲ ಎಂದು ತಿಳಿಮಾತು ಹೇಳುವುದನ್ನು ಕೇಳಿರಬಹುದು. ಹೊಸ ಸಾಹಸಕ್ಕಿಳಿಯಲು ಯುವ ಹುಮ್ಮಸ್ಸು ಮುಖ್ಯವಾದರೂ ಮಧ್ಯಪ್ರಾಯದಲ್ಲಿ ವ್ಯವಹಾರ ನಡೆಸುವುದು ಹೆಚ್ಚು ಸೂಕ್ತ ಎನ್ನುವುದೇಕೆ? ಪ್ರಬಲ ಕಾರಣಗಳೇನು?
ನೀವು ಯೌವ್ವನ ದಾಟಿ ಮಧ್ಯಪ್ರಾಯಕ್ಕೆ ಬರುವಷ್ಟರಲ್ಲಿ ಕೈಲಾದಷ್ಟು ಲೋಕಜ್ಞಾನ ಸಂಪಾದಿಸಬಹುದು. ನಿಮಗೆ ಯಾವ ಕ್ಷೇತ್ರದಲ್ಲಿ ಬ್ಯುಸಿನೆಸ್ ಮಾಡಬಹುದು ಎಂಬ ತಿಳಿವಳಿಕೆ ಬಂದಿರುತ್ತದೆ. 20ಕ್ಕೂ ಹೆಚ್ಚು ವರ್ಷಗಳ ಅನುಭವದಲ್ಲಿ ಹಲವು ಯಶಸ್ಸು, ವೈಫಲ್ಯಗಳನ್ನು ಕಂಡಿರುತ್ತೇವೆ. ಉದ್ದಿಮೆಯಾಗಿ ಏನು ಮಾಡಬೇಕು, ಏನು ಮಾಡಬಾರದು ಎಂದು ನಿರ್ಧಾರ ತೆಗೆದುಕೊಳ್ಳಲು ಈ ಅನುಭವಗಳೇ ನಮಗೆ ಸಹಾಯಕ್ಕೆ ಬರುತ್ತವೆ.
ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು ಸಾಂಘಿಕ ಅಂಶಗಳು ಬಹಳ ಮುಖ್ಯ. ಜನಸಂಪರ್ಕ ಹೆಚ್ಚು ಇದ್ದರೆ ಹೊಸ ವ್ಯವಹಾರ ಆರಂಭಿಸುವುದು ಮತ್ತು ವ್ಯವಹಾರ ವೃದ್ಧಿಸುವುದು ಸುಲಭ. ಮಧ್ಯವಯಸ್ಸಿಗೆ ಬರುವಷ್ಟರಲ್ಲಿ ನಿಮ್ಮ ಪರಿಚಿತರ ವಲಯ ಅಗಾಧವಾಗಿ ಬೆಳೆದಿರುತ್ತದೆ. ಯಾವ ಸಂಪರ್ಕ ಯಾವ ಕೆಲಸಕ್ಕೆ ಲಾಭ ತರುತ್ತೆ ಎಂದು ಕಲ್ಪಿಸಿಕೊಳ್ಳಲು ಆಗೊಲ್ಲ. ನೀವು ಇನ್ನೂ ಯುವಕರಾಗಿದ್ದರೆ ಸಾಧ್ಯವಾದಷ್ಟೂ ಜನಸಂಪರ್ಕ ಬೆಳೆಸಿಕೊಳ್ಳಿ. ಇದರಿಂದ ಹೊಸ ಬ್ಯುಸಿನೆಸ್ ಆರಂಭಿಸಲು ಸಹಾಯಕವಾಗಬಹುದು.
ಚಿಕ್ಕ ವಯಸ್ಸಿನಲ್ಲಿ ಉದ್ದಿಮೆ ಆರಂಭಿಸಬೇಕಾದರೆ ಹಣಕಾಸು ಹೊಂದಿಸುವುದು ಬಹಳ ಕಷ್ಟ. ಸಣ್ಣ ವಯಸ್ಸಿನವರಿಗೆ ಬ್ಯಾಂಕುಗಳು ಅಷ್ಟು ಸುಲಭಕ್ಕೆ ಸಾಲ ಕೊಡುವುದಿಲ್ಲ. ಅದೇ ಮಧ್ಯಪ್ರಾಯಕ್ಕೆ ಬರುವಷ್ಟರಲ್ಲಿ ತಕ್ಕಮಟ್ಟಿಗೆ ಹಣ ಸಂಪಾದನೆ ಮಾಡಿರುವ ಸಾಧ್ಯತೆ ಹೆಚ್ಚು. ಬ್ಯಾಂಕುಗಳಿಂದ ಸಾಲ ಸಿಗುವುದೂ ಕೂಡ ಸುಲಭ ಇರುತ್ತದೆ. ಇದರಿಂದ ಹೆಚ್ಚು ಚಿಂತೆ ಪಡದೆ ಹೊಸ ಉದ್ದಿಮೆ ಆರಂಭಿಸಬಹುದು.
ಇದನ್ನೂ ಓದಿ: Pod Taxi: ಭಾರತದ ಮೊದಲ ಚಾಲಕರಹಿತ ಪೋಡ್ ಟ್ಯಾಕ್ಸಿ; ಏನಿದರ ವಿಶೇಷತೆ, ಬೆಂಗಳೂರಿಗೆ ಯಾಕೆ ಬರಲಿಲ್ಲ ಈ ಪ್ರಾಜೆಕ್ಟ್?
ಇವಲ್ಲದೇ ಒಳ್ಳೆಯ ಬ್ಯುಸಿನೆಸ್ಮ್ಯಾನ್ನ ಗುಣಲಕ್ಷಣ ಎಂದರೆ ವೈಫಲ್ಯಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದು. ಈ ಮನೋಭಾವ ಅಷ್ಟು ಸುಲಭಕ್ಕೆ ಬರುವುದಿಲ್ಲ. ಒಂದು ವೈಫಲ್ಯದಿಂದ ಒಬ್ಬ ವ್ಯಕ್ತಿ ಮನಸು ಮಾಡಿದರೆ ಬಹಳಷ್ಟು ಪಾಠ ಕಲಿಯಬಹುದು. ಹೀಗಾಗಿ, ಸೋಲನ್ನು ಗೆಲುವಿನ ಮೆಟ್ಟಿಲಾಗಿ ಮಾಡಿಕೊಂಡು ಮೇಲೇರಿದವರ ನಿದರ್ಶನ ಹಲವುಂಟು.
ಕೆಲವೊಮ್ಮೆ ಯಾರಿಗಾದರೂ ಕೂಡ ಯಾರೂ ಪ್ರಯೋಗಿಸದಂತಹ ವಿನೂತನ ಬ್ಯುಸಿನೆಸ್ ಐಡಿಯಾ ಬರಬಹುದು. ಮಾರ್ಕ್ ಜುಕರ್ಬರ್ಗ್ ಅವರಿಗೆ 19ನೇ ವಯಸ್ಸಿನಲ್ಲಿ ಸೋಷಿಯಲ್ ಮೀಡಿಯಾದ ಐಡಿಯಾ ಹೊಳೆದಿತ್ತು. ತಮ್ಮ ವಯಸ್ಸು ಚಿಕ್ಕದಾಯಿತು, 10 ವರ್ಷ ಬಿಟ್ಟು ಶುರು ಮಾಡೋಣ ಎಂದು ಅವರು ಸುಮ್ಮನಾಗಿದ್ದರೆ ಬೇರೆ ಯಾರಾದರ ತಲೆಗೆ ಆ ಐಡಿಯಾ ಬಂದು ಕಾರ್ಯಗತವಾಗಿರುತ್ತಿತ್ತು. ಫೇಸ್ಬುಕ್ ಇಷ್ಟು ಅಗಾಧವಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲವೇನೋ… ಹೀಗಾಗಿ, ಬ್ಯುಸಿನೆಸ್ ಮಾಡುವ ಇಚ್ಛೆ ಇರುವವರು ಕಣ್ಣು, ಕಿವಿ, ಬುದ್ಧಿ ಎಲ್ಲವನ್ನೂ ಜಾಗೃತವಾಗಿಟ್ಟುಕೊಂಡಿರಬೇಕು.