ಜನರು ಆನ್‌ಲೈನ್ ಶಾಪಿಂಗ್ (Online Shopping) ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಂತೆಯೇ ವಂಚಕರೂ ಆನ್‌ಲೈನ್ ತಾಣಗಳ ಮೂಲಕ ಹೊಸ ವಿಧಾನಗಳೊಂದಿಗೆ ಮೋಸಗೊಳಿಸಲು (Online Frauds) ಹೊಂಚುಹಾಕುತ್ತಿರುತ್ತಾರೆ. ವೈಯಕ್ತಿಕ ಮಾಹಿತಿ ಕಳವು ಹಾಗೂ ಇನ್ನಿತರ ಹಲವು ವಿಧಾನಗಳನ್ನು ಬಳಸಿಕೊಂಡು ಗ್ರಾಹಕರ ಖಾತೆಗಳಿಗೆ ಕನ್ನ ಹಾಕುತ್ತಾರೆ. ಹಾಗೆಂದು ಇವುಗಳಿಗೆ ಹೆದರಿ ಆನ್‌ಲೈನ್ ವಹಿವಾಟು ಅಥವಾ ಶಾಪಿಂಗ್ ಅನ್ನೇ ನಿಲ್ಲಿಸುವುದು ಸರಿಯಾದ ಕ್ರಮವಾಗದು. ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸುವ ಮೂಲಕ ಸುರಕ್ಷಿತವಾಗಿ ಆನ್‌ಲೈನ್ ವಹಿವಾಟನ್ನು ನಡೆಸಬಹುದು.
ಬಯೋಮೆಟ್ರಿಕ್ ಲಾಗಿನ್ಗೆ ಆದ್ಯತೆ ನೀಡಿ
ಪಾಸ್ವರ್ಡ್ಗಳನ್ನು ಬಳಸಿ ವಹಿವಾಟು ನಡೆಸುವ ಬದಲು ಬಯೋಮೆಟ್ರಿಕ್ ಆಧಾರಿತ ವ್ಯವಹಾರ ನಡೆಸುವುದು ಒಳ್ಳೆಯದು ಎಂದಿದ್ದಾರೆ ಸೈಬರ್ ಭದ್ರತೆ ತಜ್ಞರು. ಪಾಸ್ವರ್ಡ್ಗಳನ್ನು ಹ್ಯಾಕ್ ಮಾಡುವುದು ಸುಲಭ. ಪದೇ ಪದೇ ಪಾಸ್ವರ್ಡ್ ಬದಲಾಯಿಸಿಕೊಂಡು ಕಷ್ಟಪಡುವ ಬದಲು ಬಯೋಮೆಟ್ರಿಕ್ ಮತ್ತು ಇ-ಸಿಗ್ನೇಚರ್ನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಗ್ರಾಹಕರಿಗೆ ರಿಯಲ್ಟೈಂ ರಕ್ಷಣೆಯನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಪಾಸ್‌ವರ್ಡ್ ದೃಢೀಕರಣಕ್ಕೆ ಕಡಿಮೆ ಆದ್ಯತೆ ನೀಡಲು ಬ್ಯಾಂಕುಗಳು ಆದ್ಯತೆ ನೀಡಬೇಕಾದ ಸಮಯವಿದು ಎಂದು ಅವರು ಹೇಳಿದ್ದಾರೆ.
ಮಲ್ಟಿ ಫ್ಯಾಕ್ಟರ್ ಅಥಂಟಿಕೇಷನ್ ಆಯ್ದುಕೊಳ್ಳಿ
ಆನ್‌ಲೈನ್ ವಹಿವಾಟಿಗೆ ಬಹು ಅಂಶ ದೃಢೀಕರಣ ಅಥವಾ ಮಲ್ಟಿ ಫ್ಯಾಕ್ಟರ್ ಅಥಂಟಿಕೇಷನ್ ಆಯ್ಕೆಯನ್ನು ಬ್ಯಾಂಕ್ಗಳು ಗ್ರಾಹಕರಿಗೆ ಹೆಚ್ಚೆಚ್ಚು ನೀಡಬೇಕಿದೆ. ಗ್ರಾಹಕರೂ ಇಂಥ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಯಾಕೆಂದರೆ, ಮಲ್ಟಿ ಫ್ಯಾಕ್ಟರ್ ಅಥಂಟಿಕೇಷನ್ ಇರುವ ಸಂದರ್ಭದಲ್ಲಿ ವಂಚಕರು ಒಂದು ಪಾಸ್ವರ್ಡ್ ಅನ್ನು ಹ್ಯಾಕ್ ಮಾಡಿದರೂ ಅಷ್ಟಕ್ಕೇ ನಿಮ್ಮ ಹಣ ದೋಚಲು ಸಾಧ್ಯವಾಗದು. ಮತ್ತೊಂದು ಹಂತದ ದೃಢೀಕರಣದ ಆಯ್ಕೆ ನಿಮ್ಮ ಬಳಿ ಇರುತ್ತದೆ. ಪ್ರಸಕ್ತ ಕಾಲಘಟ್ಟದಲ್ಲಿ ಅನೇಕ ಬ್ಯಾಂಕ್ಗಳು ಮಲ್ಟಿ ಫ್ಯಾಕ್ಟರ್ ಅಥಂಟಿಕೇಷನ್ ಆಯ್ಕೆಗಳನ್ನು ಗ್ರಾಹಕರಿಗೆ ನೀಡುತ್ತಿವೆ. ಇದನ್ನು ಬಳಸಿಕೊಳ್ಳಿ.
ಇದನ್ನೂ ಓದಿ: Online fraud: ಷೇರ್ ಮಾರ್ಕೆಟ್ನಲ್ಲಿ ಬಂಪರ್ ಲಾಭದ ಆಸೆ ತೋರಿಸಿ, ಆನ್ಲೈನ್ನಲ್ಲಿ ಸೈಬರ್ ದೋಖಾ
ರಿಮೋಟ್ ಆಕ್ಸೆಸ್ ನೀಡಬೇಡಿ
ಯಾರಿಗಾದರೂ ರಿಮೋಟ್ ಆಕ್ಸೆಸ್ ನೀಡಿದರೆ ಅವರು ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ಸ್ಕ್ರೀನ್ನ ಎಲ್ಲ ಚಲನವಲನಗಳನ್ನು ಗಮನಿಸುವುದು ಸಾಧ್ಯವಾಗುತ್ತದೆ. ನಿಮ್ಮ ಅರಿವಿಗೇ ಬಾರದಂತೆ ನಿಮ್ಮ ವೈಯಕ್ತಿಕ ವಿವರ, ಬ್ಯಾಂಕ್ ಖಾತೆ ವಿವರ, ಯೂಸರ್ನೇಮ್, ಪಾಸ್ವರ್ಡ್ ಎಲ್ಲವೂ ವಂಚಕರ ಪಾಲಾಗಬಹುದು. ವಂಚಕರು ನಿಮ್ಮ ಫೋನ್ ಅನ್ನೇ ಬ್ಲಾಕ್ ಮಾಡಿ ಹಣ ಎಗರಿಸಬಹುದು. ಇದನ್ನು ತಪ್ಪಿಸಲು ಅಪರಿಚಿತ ಆ್ಯಪ್ಗಳನ್ನು ಡೌನ್ಲೋಡ್ ಮಾಡಬೇಡಿ. ಬೇರೆಯವರಿಗೆ ರಿಮೋಟ್ ಆ್ಯಕ್ಸೆಸ್ ನೀಡಬೇಡಿ.
ಒಟಿಪಿ ಹಂಚಿಕೊಳ್ಳಬೇಡಿ
ಆನ್‌ಲೈನ್ ವಹಿವಾಟಿನ ಸಂದರ್ಭದಲ್ಲಿ ಬರುವ ಒಟಿಪಿಯನ್ನು ಯಾರ ಜತೆಗೂ, ಆನ್ಲೈನ್ನಲ್ಲಂತೂ ಹಂಚಿಕೊಳ್ಳಲೇಬೇಡಿ. ವಂಚಕರು ಹಲವು ಸುಳ್ಳು ನೆಪಗಳನ್ನು ಹೇಳಿ, ಗ್ರಾಹಕರು ನಂಬುವಂತೆ ಮಾಡಿ ಒಟಿಪಿ ತಿಳಿಯಲು ಯತ್ನಿಸುತ್ತಾರೆ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳು, ಪಿನ್, ಒಟಿಪಿಯನ್ನು ಯಾವುದೇ ಕಾರಣಕ್ಕೂ ಯಾರ ಜತೆಗೂ ಹಂಚಿಕೊಳ್ಳಬೇಡಿ.
ಸಾರ್ವಜನಿಕ ಅಥವಾ ಉಚಿತ ವೈಫೈ ಬಳಸುವಾಗ ಎಚ್ಚರ
ಸಾರ್ವಜನಿಕ ಮತ್ತು ಉಚಿತವಾಗಿ ಸಿಗುವ ವೈಫೈ ಸಂಪರ್ಕ ಪಡೆಯುವುದು ಒಳ್ಳೆಯದಲ್ಲ. ಇಂಥ ವೈಫೈಗಳು ಗೌಪ್ಯ ಮಾಹಿತಿ ಕದಿಯುವ ಸಾಧ್ಯತೆ ಇದೆ. ಆನ್‌ಲೈನ್ ವಹಿವಾಟಿಗೆ ನಿಮ್ಮದೇ ಡಿವೈಸ್ ಹಾಗೂ ನೆಟ್ವರ್ಕ್ ಬಳಸಿ.
ಆನ್‌ಲೈನ್ ವಹಿವಾಟುಗಳು ದೈನಂದಿನ ಜೀವನದ ಅನಿವಾರ್ಯ ಭಾಗವಾಗಿರುವುದರಿಂದ, ಸೈಬರ್ ವಂಚನೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸೂಕ್ತ ಮುನ್ನೆಚ್ಚರಿಕೆ ವಹಿಸುವ ಮೂಲಕ ನಮ್ಮ ಹಣವನ್ನು, ದತ್ತಾಂಶಗಳನ್ನು ರಕ್ಷಿಸಿಕೊಳ್ಳಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ