ಭಾರತೀಯ ಜೀವ ವಿಮಾ ನಿಗಮ ಎಲ್ಐಸಿಯಲ್ಲಿ (LIC) ವಿವಿಧ ರೀತಿಯಲ್ಲಿ ವಿವಿಧ ಜನರ ಅಗತ್ಯಗಳಿಗೆ ತಕ್ಕಂತಹ ಪಾಲಿಸಿಗಳಿವೆ. ಹಿರಿಯ ನಾಗರಿಕರಿಗೆಂದು (Senior Citizens) ಸರ್ಕಾರದಿಂದಲೇ ಕೆಲವಾರು ಮುಖ್ಯ ಯೋಜನೆಗಳಿವೆ. ಎಲ್ಐಸಿಯಲ್ಲೂ ವೃದ್ಧರಿಗೆಂದು ಅಥವಾ ವೃದ್ಧಾಪ್ಯದ ಜೀವನಭದ್ರತೆಗೆಂದು ಸ್ಕೀಮುಗಳಿವೆ. ಅಂಥ ಪಾಲಿಸಿಗಳಲ್ಲಿ ಪ್ರಧಾನ ಮಂತ್ರಿ ವಯ ವಂದನ ಯೋಜನೆ (PM VVY) ಪ್ರಮುಖವಾದದು. 2017ರಲ್ಲಿ ಎಲ್ಐಸಿ ಆರಂಭಿಸಿದ ಈ ಸ್ಕೀಮ್ನಲ್ಲಿ ಭರವಸೆ ಕೊಡಲಾಗಿರುವ ಪಿಂಚಣಿ ಹಣಕ್ಕೆ ಸರ್ಕಾರದ ಖಾತ್ರಿ ಇದೆ. ಹೀಗಾಗಿ, ಯಾವುದೇ ನಾಗರಿಕರು ತಮ್ಮ ಹಣ ಕಳೆದುಕೊಳ್ಳುವ ಚಿಂತೆ ಇಲ್ಲದೇ ಈ ಪಾಲಿಸಿಯಲ್ಲಿ ತೊಡಗಿಸಿಕೊಳ್ಳಬಹುದು.
ಈ ಸ್ಕೀಮು ಸದ್ಯಕ್ಕೆ 2023 ಮಾರ್ಚ್ 31ರವರೆಗೆ ಮಾತ್ರ ಲಭ್ಯ ಇದೆ. ಅಂದರೆ ಮಾರ್ಚ್ 31ರವರೆಗೆ ಪಾಲಿಸಿ ಖರೀದಿಸಲು ಸಮಯ ಇದೆ. ಆದರೆ, ಈ ಸಮಯ ವಿಸ್ತರಣೆ ಆಗಬಹುದು, ಅಥವಾ ನಿರಂತರವಾಗಿ ಮುಂದುವರಿಯಬಹುದು. ಈ ಬಗ್ಗೆ ಸರ್ಕಾರ ಮಾರ್ಚ್ 31ರೊಳಗೆ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ.
ಪಿಎಂ ವಯ ವಂದನ ಯೋಜನೆಯಲ್ಲಿ ವಯ ಹಿಂದಿ ಪದವಾಗಿದ್ದು, ವಯಸ್ಸು ಅಥವಾ ವಯೋವೃದ್ಧ ಎಂದರ್ಥ. 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಇರುವ ಯೋಜನೆಯಾಗಿದೆ. ಒಮ್ಮೆಗೆ ಪ್ರೀಮಿಯಮ್ ಕಟ್ಟಿದರೆ, ನಿಮ್ಮ ಪ್ರೀಮಿಯಮ್ ಮೊತ್ತಕ್ಕೆ ಅನುಗುಣವಾಗಿ 10 ವರ್ಷದವರೆಗೆ ನಿರ್ದಿಷ್ಟ ಪಿಂಚಣಿ ನಿಮಗೆ ಸಿಗುತ್ತಾ ಹೋಗುತ್ತದೆ.
ಇದನ್ನೂ ಓದಿ: Crorepati: ವರ್ಷಕ್ಕೆ ಶೇ. 15 ವೃದ್ಧಿ; 15 ವರ್ಷದಲ್ಲಿ 1.38 ಕೋಟಿ ಹಣ ನಿಮ್ಮದಾಗಿಸಿಕೊಳ್ಳಿ; ಇದು ಹೇಗೆ ಸಾಧ್ಯ?
ಪ್ರೀಮಿಯಮ್ ಮೊತ್ತ ಕನಿಷ್ಠ 1,56,658 ರೂ ಇದೆ. 2018ರಲ್ಲಿ ಗರಿಷ್ಠ ಪ್ರೀಮಿಯಮ್ ಅನ್ನು 7.5 ಲಕ್ಷದಿಂದ 15ಲಕ್ಷಕ್ಕೆ ಏರಿಸಲಾಗಿದೆ. ಈ ಪಾಲಿಸಿಯಲ್ಲಿ ತಿಂಗಳಿಗೆ ಕನಿಷ್ಠ 1,000 ರೂನಿಂದ ಗರಿಷ್ಠ 9,250 ರುಪಾಯಿಯವರೆಗೂ ಪಿಂಚಣಿಯನ್ನು 10 ವರ್ಷದವರೆಗೆ ಪಡೆಯಬಹುದು. ನೀವು ಪಾವತಿಸುವ ಪ್ರೀಮಿಯಮ್ ಹಣಕ್ಕೆ ಸರ್ಕಾರ ಶೇ. 7.40ಯಿಂದ ಶೇ. 7.66ರವರೆಗೆ ಬಡ್ಡಿ ಕೊಡುತ್ತದೆ. ಮಾಸಿಕ ಪಿಂಚಣಿಯಾದರೆ ಶೇ. 7.40 ಬಡ್ಡಿ ಸಿಗುತ್ತದೆ. ವಾರ್ಷಿಕ ಪಿಂಚಣಿಯಾದರೆ ಗರಿಷ್ಠ ಶೇ. 7.66ರಷ್ಟು ಬಡ್ಡಿ ಬರುತ್ತದೆ. ಪಿಂಚಣಿಯನ್ನು ಮಾಸಿಕವಾಗಿಯೂ ಬರುವಂತೆ ಮಾಡಬಹುದು. ಅಥವಾ 3 ತಿಂಗಳಿಗೊಮ್ಮೆಯೋ, ಆರು ತಿಂಗಳಿಗೊಮ್ಮೆಯೋ ಸಿಗುವಂತೆ ಮಾಡಬಹುದು.
ಕನಿಷ್ಠ ಮೊತ್ತಕ್ಕೆ ನೀವು ಪಾಲಿಸಿ ಖರೀದಿಸುವುದಾದರೆ 1,56,658 ರುಪಾಯಿಯಿಂದ ಆರಂಭವಾಗುತ್ತದೆ. ಈ ಮೊತ್ತಕ್ಕೆ ವಾರ್ಷಿಕವಾಗಿ 12,000 ರೂ ಪಿಂಚಣಿ ಬರುತ್ತದೆ. ಅರ್ಧವರ್ಷಕ್ಕೆ ಪಿಂಚಣಿ ಬೇಕೆಂದರೆ ಪಾಲಿಸಿ ಪ್ರೀಮಿಯಮ್ ಮೊತ್ತ 1,59,574 ರು ಆಗುತ್ತದೆ. ತಿಂಗಳಿಗೆ ಪಿಂಚಣಿ ಬೇಕೆಂದರೆ ಪ್ರೀಮಿಯಮ್ 1,62,162 ರು ಕಟ್ಟಬೇಕಾಗುತ್ತದೆ.
ಇದನ್ನೂ ಓದಿ: Mutual Fund: ಮ್ಯೂಚುವಲ್ ಫಂಡ್ಗಳಿಗೆ ನೆಚ್ಚಿನ ಮತ್ತು ಲಾಭದ ಕುದುರೆಗಳಾಗಿರುವ ಷೇರುಗಳಿವು…
ಇನ್ನು ಗರಿಷ್ಠ ಮೊತ್ತದ ಪಾಲಿಸಿ ಖರೀದಿಸುವುದಿದ್ದರೆ 15 ಲಕ್ಷ ರೂ ಆಗುತ್ತದೆ. ಇದರಲ್ಲಿ ತಿಂಗಳಿಗೆ 9,250 ರುಪಾಯಿ ಪಿಂಚಣಿ ಬರುತ್ತದೆ. 14,49,086 ರು ಪ್ರೀಮಿಯಮ್ ಕಟ್ಟಿದರೆ ವರ್ಷಕ್ಕೆ 1.1 ಲಕ್ಷ ರು ಪಿಂಚಣಿ ಪ್ರಾಪ್ತವಾಗುತ್ತಾ ಹೋಗುತ್ತದೆ.
ಒಂದು ವೇಳೆ ನಿಮ್ಮಲ್ಲಿ 15ಲಕ್ಷ ರೂ ಇದ್ದು ಅದನ್ನು ನಿಶ್ಚಿತ ಠೇವಣಿಯಲ್ಲಿ ಇರಿಸಿದರೂ ಬಹಳಷ್ಟು ರಿಟರ್ನ್ಸ್ ಸಿಗುತ್ತದೆ. ಈಗ ಎಲ್ಲಾ ಬ್ಯಾಂಕುಗಳಲ್ಲೂ ಹಿರಿಯ ನಾಗರಿಕರಿಗೆ ಗರಿಷ್ಠ ಬಡ್ಡಿ ನೀಡುತ್ತವೆ. ಕೆಲ ಬ್ಯಾಂಕುಗಳು ಹಿರಿಯರ ಠೇವಣಿಗಳಿಗೆ ಶೇ. 8.8ರವರೆಗೂ ಬಡ್ಡಿ ಕೊಡುತ್ತವೆ. ನಿಮ್ಮ 15 ಲಕ್ಷ ರು ಠೇವಣಿಗೆ ಶೇ. 8.8ರಷ್ಟು ಬಡ್ಡಿ ಸಿಕ್ಕರೆ ಅದು ವರ್ಷಕ್ಕೆ 1.32 ಲಕ್ಷ ರುಪಾಯಿ ಆಗುತ್ತದೆ. ಹಾಗೆ ನೋಡಿದರೆ ಪಿಎಂ ವಯ ವಂದನ ಯೋಜನೆಗಿಂತ ಹೆಚ್ಚು ರಿಟರ್ನ್ಸ್ ತಂದುಕೊಡುತ್ತವೆ ಕೆಲ ನಿಶ್ಚಿತ ಠೇವಣಿಗಳು. ಆದರೆ, ಪಿಎಂ ವಿವಿವೈ ಸ್ಕೀಮ್ಗೆ ಸರ್ಕಾರದ ಖಾತ್ರಿ ಇರುವುದರಿಂದ ಹಣ ಸುರಕ್ಷಿತವಾಗಿರುತ್ತದೆ.
Published On - 5:02 pm, Wed, 15 March 23