ನಿಮ್ಮ ವಾರ್ಷಿಕ ಆದಾಯ 12 ಲಕ್ಷ ರೂಗಿಂತ ತುಸು ಹೆಚ್ಚಿದ್ದರೆ ಏನಾಗುತ್ತೆ? ಮಾರ್ಜಿನಲ್ ರಿಲೀಫ್ ಲೆಕ್ಕಾಚಾರ
Income tax and Marginal relief: 12 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ಯಾವುದೇ ಟ್ಯಾಕ್ಸ್ ಕಟ್ಟಬೇಕಿಲ್ಲ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಅಂದರೆ, ಈ ಮೊತ್ತಕ್ಕೆ ಟ್ಯಾಕ್ಸ್ ರಿಬೇಟ್ ಸಿಗುತ್ತದೆ. ಇದರಿಂದ ಶೂನ್ಯ ತೆರಿಗೆ ಬಾಧ್ಯತೆ ಇರುತ್ತದೆ. ಅಕಸ್ಮಾತ್, ನಿಮ್ಮ ಆದಾಯವು 12 ಲಕ್ಷ ರೂಗಿಂತ ಹೆಚ್ಚಿದ್ದಲ್ಲಿ ಏನಾಗುತ್ತೆ? ಮಾರ್ಜಿನಲ್ ರಿಲೀಫ್ ಎನ್ನುವ ಸೌಲಭ್ಯವನ್ನು ಬಳಸಬಹುದು.

ನವದೆಹಲಿ, ಫೆಬ್ರುವರಿ 3: ಕೇಂದ್ರ ಬಜೆಟ್ನಲ್ಲಿ ಆದಾಯ ತೆರಿಗೆ ದರದಲ್ಲಿ ಗಮನಾರ್ಹ ಬದಲಾವಣೆ ತರಲಾಗಿದೆ. ಹೊಸ ಟ್ಯಾಕ್ಸ್ ರಿಜೈಮ್ನಲ್ಲಿ 12 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ಸಿಗುತ್ತದೆ. ಅಂದರೆ, ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಹಾಗಿದ್ದರೆ, 12 ಲಕ್ಷ ರೂಗಿಂತ ತುಸು ಹೆಚ್ಚು ಆದಾಯ ಇದ್ದರೆ ಏನು ಕಥೆ…? ಇಂಥ ಸಂದಿಗ್ಧ ಸಂದರ್ಭಕ್ಕೆ ಸರ್ಕಾರ ಒಂದು ಪರಿಹಾರ ಹುಡುಕಿದೆ. ಅದುವೇ ಮಾರ್ಜಿನಲ್ ರಿಲೀಫ್. ಟ್ಯಾಕ್ಸ್ ರಿಬೇಟ್ ಸಿಗುವ ಮಿತಿಗಿಂತ ತುಸು ಹೆಚ್ಚು ಆದಾಯ ಹೊಂದಿರುವವರು ಟ್ಯಾಕ್ಸ್ ಸ್ಲ್ಯಾಬ್ ದರಗಳಷ್ಟು ತೆರಿಗೆ ಪಾವತಿಸಬೇಕಾಗುವುದಿಲ್ಲ. ತೆರಿಗೆ ಹಣ ಸ್ವಲ್ಪ ಕಡಿಮೆ ಆಗುತ್ತದೆ.
ಇನ್ಕಮ್ ಟ್ಯಾಕ್ಸ್ ಸೆಕ್ಷನ್ 115ಬಿಎಸಿ (1ಎ) ಅಡಿಯಲ್ಲಿ ಸರ್ಕಾರವು ಮಾರ್ಜಿನಲ್ ರಿಲೀಫ್ ಸೌಲಭ್ಯ ನೀಡಿದೆ. ಈ ಮಾರ್ಜಿನಲ್ ರಿಲೀಫ್ ಹೇಗೆ ಕೆಲಸ ಮಾಡುತ್ತದೆ ಎಂದು ನಿದರ್ಶನದ ಮೂಲಕ ತಿಳಿಯಲು ಯತ್ನಿಸೋಣ. ಒಬ್ಬ ವ್ಯಕ್ತಿಯ ಒಂದು ವರ್ಷದ ವಾರ್ಷಿಕ ಆದಾಯದಲ್ಲಿ ಡಿಡಕ್ಷನ್ ಕಳೆದು ಉಳಿಯುವ ಟ್ಯಾಕ್ಸಬಲ್ ಇನ್ಕಮ್ 12,00,000 ರೂ ಇದ್ದರೆ ಟ್ಯಾಕ್ಸ್ ರಿಬೇಟ್ ಅನ್ವಯ ಆಗುತ್ತದೆ. ತೆರಿಗೆ ಪಾವತಿಸಬೇಕಿಲ್ಲ. ಆದರೆ, ಒಂದು ವೇಳೆ ಈ ಆದಾಯವು 12,10,000 ರೂ ಆಗಿದ್ದರೆ, ಅಂದರೆ 12 ಲಕ್ಷ ರೂ ಮಿತಿಯಿಂದ 10,000 ರೂ ಹೆಚ್ಚಿದ್ದರೆ ಆಗ ಏನಾಗುತ್ತದೆ?
ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಹೂಡಿಕೆ; ಯುಪಿಐ ಪಾವತಿ ಮಿತಿ 2 ಲಕ್ಷದಿಂದ 5 ಲಕ್ಷ ರೂಗೆ ಏರಿಕೆ
ಇಂಥ ಸಂದರ್ಭದಲ್ಲಿ ಮಾರ್ಜಿನಲ್ ರಿಲೀಫ್ ನಿಯಮಗಳ ಪ್ರಕಾರ ಆ ಹೆಚ್ಚುವರಿ ಮೊತ್ತವನ್ನು ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. ಅಂದರೆ ಈ ಮೇಲಿನ ನಿದರ್ಶನದಲ್ಲಿ ಆ ವ್ಯಕ್ತಿ ಪಾವತಿಸಬೇಕಾದ ತೆರಿಗೆ 10,000 ರೂ.
ಒಂದು ವೇಳೆ ಮಾರ್ಜಿನಲ್ ರಿಲೀಫ್ ಅವಕಾಶ ಇಲ್ಲದೇ ಹೋಗಿದ್ದರೆ ಆಗ ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ ತೆರಿಗೆಯ ಹೊರೆ ಬೀಳುತ್ತಿತ್ತು. ಅಂದರೆ 61,500 ರೂ ತೆರಿಗೆ ಪಾವತಿಸಬೇಕಾಗುತ್ತಿತ್ತು.
ಮತ್ತೊಂದು ನಿದರ್ಶನದಲ್ಲಿ ನಿಮ್ಮ ಆದಾಯ 12,50,000 ರೂ ಇದೆ ಎಂದಿಟ್ಟುಕೊಳ್ಳಿ. ಆಗ ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ ನೀವು ಪಾವತಿಸುವ ತೆರಿಗೆ 67,500 ರೂ ಇರುತ್ತದೆ. ಅದೇ ಮಾರ್ಜಿನಲ್ ರಿಲೀಫ್ ಬಳಸಿದರೆ ನಿಮ್ಮ ತೆರಿಗೆ ಬಾಧ್ಯತೆ 50,000 ರೂ ಆಗಿರುತ್ತದೆ. 12 ಲಕ್ಷ ರೂ ಮಿತಿ ದಾಟಿ ಹಣದ ಪ್ರಮಾಣ ಹೆಚ್ಚಿದಂತೆಲ್ಲಾ ನಿಮಗೆ ತೆರಿಗೆ ಉಳಿತಾಯ ಕಡಿಮೆ ಆಗುತ್ತಾ ಹೋಗುತ್ತದೆ. ಈ ರೀತಿಯ ಮಾರ್ಜಿನಲ್ ರಿಲೀಫ್ ಸೌಕರ್ಯವು 12,700 ರೂವರೆಗಿನ ಆದಾಯಕ್ಕೆ ವರ್ಕೌಟ್ ಆಗುತ್ತದೆ. ಅದಕ್ಕೂ ಮೇಲ್ಪಟ್ಟ ಆದಾಯಕ್ಕೆ ಯಾವ ರಿಯಾಯಿತಿಯೂ ಸಿಗುವುದಿಲ್ಲ.
ಇದನ್ನೂ ಓದಿ: ಎಸ್ಬಿಐ ಹೊಸ ಆರ್ಡಿ ಸ್ಕೀಮ್ ಹರ್ ಘರ್ ಲಖಪತಿ; ಎಫ್ಡಿಯಷ್ಟೇ ಸಿಗುತ್ತೆ ರಿಟರ್ನ್ಸ್
ಗಮನಿಸಬೇಕಾದ ಸಂಗತಿ ಎಂದರೆ, ಸಂಬಳದ ಆದಾಯ ಹೊಂದಿರುವವರಿಗೆ 75,000 ರೂಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಸೌಲಭ್ಯ ಇದೆ. ಹೀಗಿದ್ದಾಗ ನಿಮ್ಮ ವಾರ್ಷಿಕ ಆದಾಯ 12,75,000 ರೂವರೆಗೂ ಯಾವುದೇ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ