ಮಾಮ್ಮೀಸ್ ಕಿಚನ್; ಈ ಮುಂಬೈ ಅಮ್ಮನ ಕೈರುಚಿಯ ಪೀಜ್ಜಾಗೆ ಮನಸೋಲದ ಸೆಲಬ್ರಿಟಿಗಳೇ ಇಲ್ಲ; ಬೆಂಗಳೂರಲ್ಲೂ ಇದೆ ಫ್ರಾಂಚೈಸಿ
Pratibha Kanoi's Mommies Kitchen: ಬಿಸಿನೆಸ್ ಆರಂಭಿಸಲು ವಯಸ್ಸಿನ ಮಿತಿ ಏನಿಲ್ಲ ಎಂಬುದನ್ನು ತೋರಿಸಿಕೊಟ್ಟ ಪ್ರತಿಭಾ ಕನೋಯಿ 67ನೇ ವಯಸ್ಸಿನಲ್ಲಿ ಪೀಜ್ಜಾ ಬಿಸಿನೆಸ್ ಆರಂಭಿಸಿದರು. ಗಂಡ, ಮನೆ, ಮಕ್ಕಳು, ಅಡುಗೆಗೆ ಸೀಮಿತವಾಗಿದ್ದ ಪ್ರತಿಭಾ 2020ರಲ್ಲಿ ಮಾಮ್ಮೀಸ್ ಕಿಚನ್ ಎಂಬ ಪೀಜ್ಜಾ ಅಂಗಡಿ ಆರಂಭಿಸಿದರು. ಅಮಿತಾಭ್ ಬಚ್ಚನ್ ಸೇರಿದಂತೆ ಮುಂಬೈನ ಸಾಕಷ್ಟು ಸೆಲಬ್ರಿಟಿಗಳು ಮಾಮ್ಮೀಸ್ ಕಿಚನ್ನ ಪೀಜ್ಜಾದ ಅಭಿಮಾನಿಗಳಾಗಿದ್ದಾರೆ.
ಇವರ ವಯಸ್ಸು 70 ವರ್ಷ. ಮಲೇಷ್ಯಾದ ಬ್ಯಾಂಕಾಕ್ನಲ್ಲಿ ಓದಿದ ನಂತರ ಮದುವೆಯಾದ ಇವರು ಮುಂಬೈನಲ್ಲಿ ಬಹಳ ಕಾಲ ವಾಸವಿದ್ದರು. ಗಂಡನ ಆಫೀಸಿಗೆ, ಮಕ್ಕಳ ಶಾಲೆಗೆ ಟಿಫಿನ್ ಮಾಡುವುದಕ್ಕಷ್ಟೇ ಜೀವನ ಸೀಮಿತವಾಗಿತ್ತು. ಅದರ ಆಚೆಗೆ ಇನ್ನೇನಾದರೂ ಮಾಡಬೇಕೆಂದುಕೊಂಡಿದ್ದರೂ ಸಮಯ ಸಿಗಲಿಲ್ಲ. ಆದರೆ ಏನಾದರೂ ಮಾಡಬೇಕೆಂಬ ತುಡಿತ ಇತ್ತು. ಇಳಿ ವಯಸ್ಸಿನ ಈ ಯೌವ್ವನೆಯ ಹೆಸರು ಪ್ರತಿಭಾ ಕನೋಯಿ (Pratibha Kanoi). ಬಿಸಿನೆಸ್ ಆರಂಭಿಸಲು ಎಳೆಯ ವಯಸ್ಸೇ ಆಗಬೇಕು ಎಂಬ ಭಾವನೆ ತಪ್ಪು ಕಲ್ಪನೆ ಎಂಬುದನ್ನು ತೋರಿಸಿಕೊಟ್ಟವರು.
‘ಅದೆಷ್ಟೋ ಮಹಿಳೆಯರು ತಿಂಗಳಿಗೆ ಕನಿಷ್ಠ 10 ಸಾವಿರ ರೂಪಾಯಿಯಾದರೂ ಸಂಪಾದಿಸುತ್ತಿದ್ದಾರೆ, ನಾನು ಸುಮ್ಮನೆ ಕುಳಿತು ತಿನ್ನುತ್ತಿದ್ದೇನೆ’ ಎಂದು ಮುಂಬೈನಲ್ಲಿ ತಮ್ಮ ಮನೆಯಲ್ಲಿ ಕೂತು ಪ್ರತಿಭಾ ಯೋಚಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಪತಿ ತೀರಿಕೊಂಡರು. ಆಗ ಪ್ರತಿಭಾ ಅವರಿಗೆ ವಯಸ್ಸು 60ರ ಗಡಿ ದಾಟಿ ಹೋಗಿತ್ತು. ತನ್ನ ಬದುಕು ಹೀಗಾಗುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲ. ಮಕ್ಕಳಿದ್ದರಿಂದ ಆರ್ಥಿಕವಾಗಿ ಹತಾಶ ಸ್ಥಿತಿ ಏನಿರಲಿಲ್ಲ. ಆದರೆ, ವರ್ಷಾನುಗಟ್ಟಲೆ ಮಡುಗಟ್ಟಿದ್ದ ಕೆಲಸದ ತುಡಿತ ಅವರನ್ನು ಏನಾದರೂ ಮಾಡಬೇಕೆಂದು ಬಡಿದೆಬ್ಬಿಸಿತ್ತು. ತಮ್ಮ 67 ನೇ ವಯಸ್ಸಿನಲ್ಲಿ ಸ್ವಂತ ಉದ್ಯಮವನ್ನು ಪ್ರಾರಂಭಿಸಿದರು. ಈಗ ಅವರು 70ನೇ ವಯಸ್ಸಿನಲ್ಲಿ 70 ಮಿಲಿಯನ್ ರೂಪಾಯಿ ಮೌಲ್ಯದ ಬಿಸಿನೆಸ್ ಒಡತಿಯಾಗಿದ್ದಾರೆ.
4 ಮಕ್ಕಳ ತಾಯಿಯಾದ ಪ್ರತಿಭಾ ಕನೋಯಿ ಯಾವಾಗಲೂ ಅಡುಗೆಯ ಬಗ್ಗೆ ಒಲವು ಹೊಂದಿದ್ದವರು. ಪೀಜ್ಜಾ ಸೇರಿದಂತೆ ಅವರ ಕೈಯಿಂದ ಮಾಡುತ್ತಿದ್ದ ಖಾದ್ಯಗಳು ಸ್ವಾದಿಷ್ಟವಾಗಿರುತ್ತಿದ್ದರು. ತಾವು ತಯಾರಿಸಿದ ಪಿಜ್ಜಾಗಳನ್ನು ಎಲ್ಲರೂ ಇಷ್ಟೊಂದು ಇಷ್ಟ ಪಡುತ್ತಾರೆ ಎಂದು ಅವರು ಯಾವತ್ತೂ ಯೋಚಿಸಿರಲಿಲ್ಲ. ಕೋವಿಡ್ ಸಮಯದಲ್ಲಿ ಪ್ರತಿಭಾ ದೇವಿ ಅವರ ಜೀವನವು ಹಠಾತ್ ತಿರುವು ಪಡೆಯಿತು. ಆ ಸಮಯದಲ್ಲಿ ಅವರ ಕುಟುಂಬದವರೆಲ್ಲರೂ ಹೊರಗಿನಿಂದ ಖರೀದಿಸಿದ ಯಾವುದನ್ನೂ ತಿನ್ನಬಾರದು ಎಂದು ನಿರ್ಧರಿಸಿದರು. ಈ ನಡುವೆ ಸೊಸೆಯ ಹುಟ್ಟು ಹಬ್ಬದ ನಿಮಿತ್ತ ತನ್ನ ಮಕ್ಕಳು, ಮೊಮ್ಮಕ್ಕಳಿಗೆ ಮನೆಯಲ್ಲಿಯೇ ಪಿಜ್ಜಾ ಮಾಡುತ್ತಾರೆ ಪ್ರತಿಭಾ.
ಅಂದು ಅವರು ಮಾಡಿದ ಪೀಜ್ಜಾಗಳಂತೂ ರುಚಿಕರವಾಗಿದ್ದು ಎಲ್ಲರ ಶ್ಲಾಘನೆಗೆ ಪಾತ್ರವಾಯಿತು. ಅವರ ಮಕ್ಕಳು ಪೀಜ್ಜಾ ಬಿಸಿನೆಸ್ ಮಾಡುವ ಐಡಿಯಾ ಕೊಟ್ಟರು. ಈ ಐಡಿಯಾ ಹಾಗೇ ವಾಸ್ತವದಲ್ಲಿ ಜಾರಿಗೆ ಬರತೊಡಗಿತು. ‘ಮಾಮ್ಮೀಸ್ ಕಿಚನ್’ (Mommy’s Kitchen) ಅನ್ನು ಮೇ 2020 ರಲ್ಲಿ ಸ್ಥಾಪಿಸಲಾಯಿತು. ಸಮಯ ಕಳೆದಂತೆ ವ್ಯಾಪಾರ ಮತ್ತು ಗ್ರಾಹಕರ ಸಂಖ್ಯೆಯೂ ಹೆಚ್ಚಾಯಿತು. ಆರ್ಡರ್ಗಳ ಮೇಲೆ ಆರ್ಡರ್ಗಳು ಬರತೊಡಗಿದವು. ಪೀಜ್ಜಾ ತಯಾರಿಸಲು ಮತ್ತು ಸರಬರಾಜು ಮಾಡಲು ಒಂದು ಟೀಮ್ ಮಾಡಬೇಕಾಯಿತು.
ಇದನ್ನೂ ಓದಿ: Tips: ನಿವೃತ್ತಿಗೆ ಹಣ ಹೊಂದಿಸಬೇಕೆ? ಎಲ್ಲೆಲ್ಲಿ ಹೂಡಿಕೆ ಮಾಡಬೇಕು, ಈ ಸಲಹೆ ನಿಮಗೆ ಉಪಯುಕ್ತ ಎನಿಸಬಹುದು
ಆರಂಭದಲ್ಲಿ ಅವರು ತಮ್ಮ ಗ್ರಾಹಕರನ್ನು ಒಂದು ದಿನ ಮುಂಚಿತವಾಗಿ ಪ್ರಿ-ಆರ್ಡರ್ ಮಾಡಲು ಕೇಳುತ್ತಿದ್ದರು. ಆದರೆ ಈಗ ಅವರು ಬೇಡಿಕೆಯ ಮೇರೆಗೆ ಆರ್ಡರ್ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಮಾರ್ಗರಿಟಾ, ಪ್ರಿಮಾವೇರಾ, ಡಯಟ್ ಪಿಜ್ಜಾ ಹೀಗೆ ಅವರು ತಮ್ಮ ಮೆನುವಿನಲ್ಲಿ ಎಲ್ಲವನ್ನೂ ಹೊಂದಿದ್ದಾರೆ. ಪೀಜ್ಜಾಗೆ ಬಳಸುವ ಹಿಟ್ಟು, ಸಾಸ್ ಸೇರಿದಂತೆ ಎಲ್ಲವನ್ನೂ ತಾವೇ ತಯಾರಿಸುತ್ತಾರೆ. ಅಡುಗೆ ಮಾಡುವಾಗ ಶುಚಿತ್ವದ ಬಗ್ಗೆ ಅವರು ಹೆಚ್ಚಿನ ಕಾಳಜಿ ವಹಿಸುತ್ತಾರೆ.
ಪ್ರತಿಭಾರ ಕೈರುಚಿಗೆ ಫಿದಾ ಆದ ಸೆಲಬ್ರಿಟಿಗಳು
ಪ್ರತಿಭಾ ಕನೋಯಿ ಅವರ ಕ್ಲೈಂಟ್ ಪಟ್ಟಿಯಲ್ಲಿ ಬಚ್ಚನ್ ಕುಟುಂಬ ಇದೆ. ಬಚ್ಚನ್ ಮಾತ್ರವಲ್ಲದೆ ಮುಂಬೈನ ಅನೇಕ ಪ್ರಮುಖ ವ್ಯಕ್ತಿಗಳಿಗೆ ಮಾಮ್ಮೀಸ್ ಕಿಚನ್ನ ಪೀಜ್ಜಾ ಬಲು ಪ್ರಿಯ. ಅಕ್ಷಯ್ ಕುಮಾರ್, ದೇವೇಂದ್ರ ಫಡ್ನವೀಸ್, ಪ್ರಫುಲ್ ಪಟೇಲ್, ಸೋನಾಲಿ ಬೇಂದ್ರೆ, ಮಧುರ್ ಭಂಡಾರ್ಕರ್, ಹರ್ಷ್ ಗೋಯಂಕಾ, ಆಯುಷ್ಮಾನ್ ಖುರಾನಾ ಮುಂತಾದವರೂ ಪ್ರತಿಭಾ ದೇವಿಯ ಪಿಜ್ಜಾ ಅಭಿಮಾನಿಗಳು.
ಪ್ರಸ್ತುತ ಅವರು ಮುಂಬೈ ಹೊರತುಪಡಿಸಿ ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಮಳಿಗೆಗಳನ್ನು ಹೊಂದಿದ್ದಾರೆ. ಕೇವಲ 4-5 ಲಕ್ಷ ರೂಪಾಯಿ ಬಂಡವಾಳದಲ್ಲಿ ಉದ್ಯಮ ಆರಂಭಿಸಿದ್ದೆ ಎಂದು ಪ್ರತಿಭಾ ದೇವಿ ಹೇಳಿದ್ದಾರೆ. ಇಂದು ಅವರ ಮಾಮ್ಮೀಸ್ ಕಿಚನ್ನ ಬಿಸಿನೆಸ್ ಕೋಟಿಗಟ್ಟಲೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ