RBI MPC: ರೆಪೋ ದರ ಶೇ. 5.25, ಜಿಡಿಪಿ ದರ ಶೇ. 6.6, ಹಣದುಬ್ಬರ ಶೇ. 5.1 ಸಾಧ್ಯತೆ; ಆರ್​ಬಿಐ ಎಂಪಿಸಿ ಪ್ರಕಟಣೆ

RBI MPC announcements: ಆರ್​ಬಿಐ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು ಶೇ. 5.25ರಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಜೂನ್ 3ರಿಂದ ನಡೆದ ಎಂಪಿಸಿ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವರ್ಷ ಜಿಡಿಪಿ ಬೆಳವಣಿಗೆ ಶೇ. 6.9 ಅಲ್ಲ, ಶೇ. 6.6ರಷ್ಟು ಮಾತ್ರ ಬೆಳೆಯಬಹುದು. ಹಣದುಬ್ಬರ ಶೇ. 5.1ರಷ್ಟು ಇರಬಹುದು ಎಂದು ಆರ್​ಬಿಐ ಅಂದಾಜಿಸಿದೆ.

RBI MPC: ರೆಪೋ ದರ ಶೇ. 5.25, ಜಿಡಿಪಿ ದರ ಶೇ. 6.6, ಹಣದುಬ್ಬರ ಶೇ. 5.1 ಸಾಧ್ಯತೆ; ಆರ್​ಬಿಐ ಎಂಪಿಸಿ ಪ್ರಕಟಣೆ
ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ
Image Credit source: RBI Youtube

Updated on: Jun 05, 2026 | 10:43 AM

ನವದೆಹಲಿ, ಜೂನ್ 5: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು (Repo Rate) ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಮೊನ್ನೆಯಿಂದ ನಡೆದ ಎಂಪಿಸಿ ಸಭೆಯ ನಂತರ ಇವತ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ರೆಪೋ ದರವನ್ನು ಶೇ. 5.25ರಲ್ಲಿ ಮುಂದುವರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಎಸ್​ಟಿಎಫ್ ದರ ಶೇ. 5, ಎಂಎಸ್​ಎಫ್ ಮತ್ತು ಬ್ಯಾಂಕ್ ರೇಟ್ ಶೇ. 5.5 ನಲ್ಲಿ ಮುಂದುವರಿಯಲಿವೆ. ಹಾಗೆಯೇ, ಆರ್​ಬಿಐನ ಪಾಲಿಸಿ ತಟಸ್ಥ ನೀತಿಯಲ್ಲಿ (Neutral Stance) ಮುಂದುವರಿಯಲಿದೆ. ಅಂದರೆ, ಅಗತ್ಯಬಿದ್ದಾಗ ರೆಪೋ ದರ ಏರಿಸಬಹುದು, ಅಥವಾ ಇಳಿಸಬಹುದು.

ಆರ್ಥಿಕ ಬೆಳವಣಿಗೆ ನಿರೀಕ್ಷೆ ತಗ್ಗಿಸಿದ ಆರ್​ಬಿಐ

ಮಧ್ಯಪ್ರಾಚ್ಯ ಬಿಕ್ಕಟ್ಟು ಇತ್ಯಾದಿ ಕಾರಣಕ್ಕೆ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು ಎಂದು ಸಂಜಯ್ ಮಲ್ಹೋತ್ರಾ ತಿಳಿಸಿದರು. ಈ ವರ್ಷದ (2026-27) ಆರ್ಥಿಕ ಬೆಳವಣಿಗೆ ಶೇ. 6.9ರಷ್ಟು ಹೆಚ್ಚಬಹುದು ಎಂದು ಈ ಹಿಂದಿನ ಎಂಪಿಸಿ ಸಭೆಯಲ್ಲಿ ಅಂದಾಜಿಸಲಾಗಿತ್ತು. ಈಗ ಆ ನಿರೀಕ್ಷೆಯನ್ನು ಶೇ. 6.6ಕ್ಕೆ ತಗ್ಗಿಸಲಾಗಿದೆ. ಇದಕ್ಕೆ ಜಾಗತಿಕ ರಾಜಕೀಯದ ಪ್ರಕ್ಷುಬ್ದ ವಾತಾವರಣ ಕಾರಣವಿರಬಹುದು ಎಂದಿದ್ದಾರೆ.

ಇದನ್ನೂ ಓದಿ: ಅಮೆರಿಕಕ್ಕೆ ಹೋಗಿ ದೊಡ್ಡ ಉದ್ಯಮಗಳನ್ನು ಕಟ್ಟಿದ ವಲಸಿಗರಲ್ಲಿ ಭಾರತೀಯರೇ ಅತಿಹೆಚ್ಚು

ಜಿಡಿಪಿ ದರ ಅಂದಾಜು

2026-27ರಲ್ಲಿ ಜಿಡಿಪಿ ದರ ಶೇ. 6.6

  1. ಮೊದಲ ತ್ರೈಮಾಸಿಕದಲ್ಲಿ ಶೇ. 6.6
  2. ಎರಡನೇ ತ್ರೈಮಾಸಿಕದಲ್ಲಿ ಶೇ. 6.3
  3. ಮೂರನೇ ತ್ರೈಮಾಸಿಕದಲ್ಲಿ ಶೇ. 6.5
  4. ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 6.8

ಇಲ್ಲಿ ಮೊದಲ ತ್ರೈಮಾಸಿಕವೆಂದರೆ 2026ರ ಏಪ್ರಿಲ್​ನಿಂದ ಜೂನ್​ವರೆಗಿನ ಮೂರು ತಿಂಗಳ ಅವಧಿ. ನಾಲ್ಕನೇ ತ್ರೈಮಾಸಿಕ 2027ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಾಗಿರುತ್ತದೆ.

ಹಣದುಬ್ಬರ ಸ್ಥಿತಿಯಲ್ಲೂ ಪ್ರಕ್ಷುಬ್ದತೆ

ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಹಣದುಬ್ಬರದ ಮೇಲೆ ಒತ್ತಡ ಹೆಚ್ಚುತ್ತಿರುವುದನ್ನು ಗುರುತಿಸಿದ್ದಾರೆ. ಈ ವರ್ಷ ಹಣದುಬ್ಬರವು ಆರ್​ಬಿಐನ ಇನ್​ಫ್ಲೇಶನ್ ಟಾರ್ಗೆಟ್ ಅನ್ನು ಮೀರಿ ಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ ಈ ವರ್ಷ ಹಣದುಬ್ಬರ ದರ ಶೇ. 5.1ಕ್ಕೆ ಹೆಚ್ಚಬಹುದು. ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ ಮಾಡಲಾದ ಅಂದಾಜು ಪ್ರಕಾರ ಹಣದುಬ್ಬರ ಶೇ. 4.6ರಷ್ಟು ಇರಬಹುದು ಎನ್ನಲಾಗಿತ್ತು. ಈ ಬಾರಿ ಅದು ನಿರೀಕ್ಷೆ ಮೀರಿ ಹೆಚ್ಚಳವಾಗುತ್ತಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯೊಂದಿಗೆ ವೆನಿಜುವೆಲಾ ಅಧ್ಯಕ್ಷೆ ಮಾತುಕತೆ; ಪ್ರಸ್ತಾಪಿತ ಇಂಧನ ಒಪ್ಪಂದದಿಂದ ಭಾರತಕ್ಕೇನು ಲಾಭ?

ಈ ಹಣಕಾಸು ವರ್ಷದ ನಾಲ್ಕು ತ್ರೈಮಾಸಿಕಗಳಲ್ಲಿ ಹಣದುಬ್ಬರ ಕ್ರಮವಾಗಿ ಶೇ. 4.8, ಶೇ. 5.1, ಶೇ. 5.9 ಮತ್ತು ಶೇ. 5.4ರಷ್ಟು ಇರಬಹುದು ಎಂದು ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ಆರ್​ಬಿಐ ಹಣದುಬ್ಬರದ ಗುರಿಯನ್ನು ಶೇ. 4ಕ್ಕೆ ನಿಗದಿ ಮಾಡಿದೆ. ಆ ನಿಟ್ಟಿನಲ್ಲಿ ತಾಳಿಕೆ ಮಿತಿಯಾಗಿ ಶೇ. 2ರಿಂದ 6 ಅನ್ನು ನಿಗದಿ ಮಾಡಿದೆ. ಸದ್ಯ, ಈ ವರ್ಷದ ಹಣದುಬ್ಬರದ ಅಂದಾಜು ದರವು ಈ ತಾಳಿಕೆಯ ಮಿತಿಯೊಳಗೆಯೇ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:21 am, Fri, 5 June 26

Follow Us