ರಾಬರ್ಟ್ ಹಾಲ್, ಮೈಕೆಲ್ ವುಡ್​ಫೋರ್ಡ್ ಅವರಿಗೆ 2026ರ ಆರ್ಥಿಕ ನೊಬೆಲ್ ಪ್ರಶಸ್ತಿ; ಆರ್ಥಿಕತೆಗೆ ಸ್ಥಿರತೆ ತರುವ ಮಾದರಿ ರೂಪಿಸಿದ ಸಾಧಕರು ಇವರು

ರಾಯಲ್ ಸ್ವೀಡಿಶ್ ಅಕಾಡೆಮಿ ನೀಡುವ ಆರ್ಥಿಕ ವಿಜ್ಞಾನಗಳ ನೊಬೆಲ್ ಪ್ರಶಸ್ತಿ ಈ ವರ್ಷ (2026) ಇಬ್ಬರು ಅರ್ಥಶಾಸ್ತ್ರಜ್ಞರಿಗೆ ಸಿಕ್ಕಿದೆ. ಅಮೆರಿಕ ಮೂಲದ ರಾಬರ್ಟ್ ಇ ಹಾಲ್ ಮತ್ತು ಮೈಕೇಲ್ ವುಡ್​ಫೋರ್ಡ್ ಅವರು 2026ರ ಸಾಲಿನ ಆರ್ಥಿಕ ನೊಬೆಲ್ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಆರ್ಥಿಕತೆ ಬೆಳವಣಿಗೆಯಾಗುವಾಗ ಮತ್ತು ಕುಂಠಿತಗೊಳ್ಳುವಾಗ ಸ್ಥಿರತೆ ತರುವಂತಹ ಮ್ಯಾಕ್ರೊ ಎಕನಾಮಿಕ್ ಮಾಡಲ್​ಗಳನ್ನು ಅವರು ರೂಪಿಸಿದ್ದರು.

ರಾಬರ್ಟ್ ಹಾಲ್, ಮೈಕೆಲ್ ವುಡ್​ಫೋರ್ಡ್ ಅವರಿಗೆ 2026ರ ಆರ್ಥಿಕ ನೊಬೆಲ್ ಪ್ರಶಸ್ತಿ; ಆರ್ಥಿಕತೆಗೆ ಸ್ಥಿರತೆ ತರುವ ಮಾದರಿ ರೂಪಿಸಿದ ಸಾಧಕರು ಇವರು
2026ರ ಆರ್ಥಿಕ ನೊಬೆಲ್ ಪ್ರಶಸ್ತಿ ವಿಜೇತರು
Image Credit source: X @nobelprize

Updated on: Oct 12, 2026 | 5:00 PM

ಸ್ವೀಡನ್, ಅಕ್ಟೋಬರ್ 12: ಅಮೆರಿಕ ಮೂಲದ ಆರ್ಥಿಕಶಾಸ್ತ್ರಜ್ಞರಾದ ರಾಬರ್ಟ್ ಇ ಹಾಲ್ ಮತ್ತು ಮೈಕೇಲ್ ವುಡ್​ಫೋರ್ಡ್ ಅವರಿಬ್ಬರಿಗೆ 2026ರ ನೊಬೆಲ್ ಪ್ರಶಸ್ತಿ ಹಂಚಿಕೆಯಾಗಿದೆ. ಆರ್ಥಿಕತೆಯಲ್ಲಿ ಸ್ಥಿರತೆ ತರಲು ಸಾಧ್ಯವಾಗಿಸುವಂತಹ ಸ್ಥೂಲ ಆರ್ಥಿಕ ಮಾದರಿಗಳನ್ನು (Macroeconomic Models) ನಿರ್ಮಿಸಿದ ಸಾಧನೆಗಾಗಿ ಈ ಈರ್ವರನ್ನು ಆರ್ಥಿಕ ವಿಜ್ಞಾನಗಳ ನೊಬೆಲ್ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.

ಆರ್ಥಿಕತೆ ಬಹಳ ವೇಗವಾಗಿ ಅಭಿವೃದ್ಧಿಯಾಗುತ್ತಿರುವಾಗ ಅಥವಾ ವೇಗವಾಗಿ ಕುಸಿಯುತ್ತಿರುವಾಗ ಆರ್ಥಿಕ ಅಲುಗಾಟ ಹೆಚ್ಚಿರುತ್ತದೆ. ಸಕಾಲಿಕವಾಗಿರುವ ಹಣಕಾಸು ನೀತಿ ಕ್ರಮಗಳನ್ನು ತರುವುದರಿಂದ ಈ ಆರ್ಥಿಕ ತುಮುಲಗಳನ್ನು ತಗ್ಗಿಸಿ, ಆರ್ಥಿಕತೆಗೆ ಒಂದು ಸ್ಥಿರತೆ ತರಬಹುದಾದಂತಹ ಮಾದರಿಗಳನ್ನು ಇವರಿಬ್ಬರು ರೂಪಿಸಿದ್ದಾರೆ. ಅವರ ಈ ಕೆಲಸಕ್ಕಾಗಿ ನೊಬೆಲ್ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ.

ಇದನ್ನೂ ಓದಿ: Nobel Peace Prize 2026: ಭಾರತ ಮೂಲದ ನ್ಯಾಯಶಾಸ್ತ್ರಜ್ಞೆ ನವಿ ಪಿಳ್ಳೈಗೆ 2026ರ ನೊಬೆಲ್ ಶಾಂತಿ ಪುರಸ್ಕಾರ: ಡೊನಾಲ್ಡ್ ಟ್ರಂಪ್‌ಗೆ ಮತ್ತೊಮ್ಮೆ ನಿರಾಸೆ

ಆರ್ಥಿಕತೆಯ ವೇಗ ಹಾಗೂ ಕುಸಿತದ ವೇಳೆ ಅದು ಸರಾಗವಾಗಿ ಸಾಗುವಂತಾಗಲು ಈ ನೊಬೆಲ್ ಬಹುಮಾನ ಪುರಸ್ಕೃತರು ನೆರವಾಗಿದ್ದಾರೆ ಎಂದು ನೊಬೆಲ್ ಪ್ರಶಸ್ತಿ ದಯಪಾಲಿಸಿದ ರಾಯಲ್ ಸ್ವೀಡಿಷ್ ಅಕಾಡೆಮಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇವರಿಬ್ಬರ ಆರ್ಥಿಕ ಮಾದರಿಗಳನ್ನು ವಿಶ್ವಾದ್ಯಂತ ಹಲವು ಸರ್ಕಾರಗಳು ಹಾಗೂ ಸೆಂಟ್ರಲ್ ಬ್ಯಾಂಕುಗಳು ಬಳಸುತ್ತಿವೆ. ಇಂಧನ ಬಿಕ್ಕಟ್ಟು ಇತ್ಯಾದಿ ಬೆಳವಣಿಗೆಯಾದಾಗ, ಅಥವಾ ಒಂದು ದೇಶದ ಆಂತರಿಕ ಅನುಭೋಗಗಳಲ್ಲಿ ದಿಢೀರ್ ಬದಲಾವಣೆಯಾದಾಗ, ಇಂಥ ಏರುಪೇರು ಪರಿಸ್ಥಿತಿಯಲ್ಲಿ ಆರ್ಥಿಕತೆಗೆ ಆಗುವ ಆಘಾತವನ್ನು ಎದುರಿಸಲು ಹೆಚ್ಚು ಸುಲಭವಾಗುತ್ತದೆ ಎಂದು ಆರ್ಥಿಕ ವಿಜ್ಞಾನಗಳ ನೊಬೆಲ್ ಪ್ರಶಸ್ತಿ ಸಮಿತಿಯ ಛೇರ್ಮನ್ ಜಾನ್ ಹ್ಯಾಸ್ಲರ್ ಹೇಳಿದ್ದಾರೆ.

ಇದನ್ನೂ ಓದಿ: ವಿಜ್ಞಾನಿಗಳಾದ ಹೆನ್ರಿ ಬಿ. ಕಗನ್, ಕೆನ್ಸೊ ಸೊವಾಯಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ

1969ರಿಂದ ಆರ್ಥಿಕ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ. ಈವರೆಗೆ 57 ಬಾರಿ ಪ್ರಶಸ್ತಿ ನೀಡಲಾಗಿದೆ. 99 ವ್ಯಕ್ತಿಗಳು ಪ್ರಶಸ್ತಿ ಪಡೆದಿದ್ದಾರೆ. ಇಬ್ಬರು ಭಾರತೀಯರು ಈ ಪ್ರಶಸ್ತಿಗೆ ಬಾಜನರಾಗಿದ್ದಾರೆ. 1998ರಲ್ಲಿ ಅಮರ್ತ್ಯ ಸೇನ್, ಮತ್ತು 2019ರಲ್ಲಿ ಅಭಿಜಿತ್ ಬ್ಯಾನರ್ಜಿ ಅವರು ಆರ್ಥಿಕ ನೊಬೆಲ್ ಪುರಸ್ಕಾರ ಪಡೆದ ಭಾರತೀಯರಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us