SBI Quarter Results: ಎಸ್ಬಿಐ ನಿವ್ವಳ ಲಾಭದಲ್ಲಿ ಭಾರಿ ಹೆಚ್ಚಳ; ಆದಾಯದಲ್ಲಿಯೂ ಜಿಗಿತ
ಮರುಪಾವತಿಯಾಗದ ಸಾಲದ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಮತ್ತು ಹೆಚ್ಚಿನ ಬಡ್ಡಿ ಸ್ವೀಕೃತವಾಗಿರುವುದರಿಂದ ಲಾಭದಲ್ಲಿ ಹೆಚ್ಚಳವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ನವದೆಹಲಿ: 23ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿವ್ವಳ ಲಾಭದಲ್ಲಿ ಶೇಕಡಾ 74ರಷ್ಟು ಹೆಚ್ಚಾಗಿದ್ದು, 13,265 ಕೋಟಿ ರೂ. ಆಗಿದೆ. ಮರುಪಾವತಿಯಾಗದ ಸಾಲದ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಮತ್ತು ಹೆಚ್ಚಿನ ಬಡ್ಡಿ ಸ್ವೀಕೃತವಾಗಿರುವುದರಿಂದ ಲಾಭದಲ್ಲಿ ಹೆಚ್ಚಳವಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ 7,627 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.
ಒಟ್ಟು ಆದಾಯದಲ್ಲಿಯೂ ಹೆಚ್ಚಳ
ಬ್ಯಾಂಕ್ನ ಆದಾಯದಲ್ಲಿಯೂ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ 77,689.09 ಕೋಟಿ ರೂ. ಆದಾಯ ಗಳಿಸಿದ್ದರೆ ಈ ಬಾರಿ 88,734 ಕೋಟಿ ರೂ. ಆದಾಯ ಗಳಿಸಿದೆ.
ನಿವ್ವಳ ಬಡ್ಡಿ ಆದಾಯದಲ್ಲಿಯೂ ಶೇಕಡಾ 13ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 31,184 ಕೋಟಿ ರೂ. ನಿವ್ವಳ ಬಡ್ಡಿ ಆದಾಯ ದೊರೆತಿದ್ದರೆ ಈ ವರ್ಷ 35,183 ಕೋಟಿ. ರೂ. ದೊರೆತಿದೆ. ಬ್ಯಾಂಕ್ನ ಅನುತ್ಪಾದಕ ಆಸ್ತಿ ಶೇಕಡಾ 3.52ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ಇದು ಶೇಕಡಾ 4.90ರಷ್ಟಿತ್ತು ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: SBI Business Scheme: ಎಸ್ಬಿಐನಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿ ತಿಂಗಳಿಗೆ 70 ಸಾವಿರ ರೂ.ವರೆಗೆ ಗಳಿಸಲು ಹೀಗೆ ಮಾಡಿ
ಇನ್ನು ಎಸ್ಬಿಐ ಸಮೂಹದ ಒಟ್ಟು ಆದಾಯ 1,14,782 ಕೋಟಿ ರೂ. ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 1,01,143.26 ಕೋಟಿ ರೂ. ಇತ್ತು ಎಂದೂ ಬ್ಯಾಂಕ್ ತಿಳಿಸಿದೆ.
ಅಕ್ಟೋಬರ್ನಲ್ಲಿಯೂ ಬಡ್ಡಿ ದರ ಹೆಚ್ಚಿಸಿದ್ದ ಎಸ್ಬಿಐ
ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು ಅಕ್ಟೋಬರ್ 15ರಿಂದ ಅನ್ವಯವಾಗುವಂತೆ ಎಸ್ಬಿಐ 25 ಮೂಲಾಂಶಗಳಷ್ಟು ಹೆಚ್ಚಿಸಿತ್ತು. ಒಂದು ದಿನದಿಂದ ಮೂರು ತಿಂಗಳ ಅವಧಿಯ ಎಸ್ಬಿಐ ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು ಶೇಕಡಾ 7.60 ಯಿಂದ 7.35ಕ್ಕೆ ಹೆಚ್ಚಿಸಲಾಗಿತ್ತು. ಆರು ತಿಂಗಳ ಅವಧಿಯ ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು ಶೇಕಡಾ 7.65ರಿಂದ 7.90ಕ್ಕೆ ಹೆಚ್ಚಿಸಲಾಗಿತ್ತು. ಒಂದು ವರ್ಷ ಅವಧಿಯ ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು ಶೇಕಡಾ 7.7ರಿಂದ 7.95ಕ್ಕೆ ಹೆಚ್ಚಿಸಲಾಗಿತ್ತು. 2 ವರ್ಷ ಅವಧಿಯ ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು ಶೇಕಡಾ 7.9ರಿಂದ 8.15ಕ್ಕೆ ಮತ್ತು 3 ವರ್ಷ ಅವಧಿಯ ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು ಶೇಕಡಾ 8ರಿಂದ 8.25ಕ್ಕೆ ಹೆಚ್ಚಳ ಮಾಡಲಾಗಿತ್ತು. ಇದರಿಂದಾಗಿ ಮೂರನೇ ತ್ರೈಮಾಸಿಕ ಅವಧಿಯಲ್ಲಿಯೂ ಬ್ಯಾಂಕ್ನ ಆದಾಯ, ಲಾಭದಲ್ಲಿ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ