UPI Payment: ತಪ್ಪಾಗಿ ಯಾರಿಗೋ ಹಣ ಕಳುಹಿಸಿಬಿಟ್ಟಿದ್ದೀರಾ? ಯುಪಿಐನಲ್ಲಿ ಹಣ ಹಿಂಪಡೆಯುವ ಕ್ರಮ ಇದು
Recovering money wrongly sent to different UPI ID: ಯುಪಿಐನಲ್ಲಿ ಹಣ ಪಾವತಿ ಮಾಡುವಾಗ ತಪ್ಪಾಗಿ ಬೇರಾರಿಗೂ ಹಣ ವರ್ಗಾವಣೆ ಮಾಡುವ ಸಾಧ್ಯತೆ ಇರುತ್ತದೆ. ಅಕಸ್ಮಾತ್ ಆಗಿ ತಪ್ಪಾದ ಯುಪಿಐ ಐಡಿಗೆ ನೀವು ಹಣ ಕಳುಹಿಸಿದ್ದರೆ ಅದನ್ನು ಮರಳಿ ಪಡೆಯುವ ಸಾಧ್ಯತೆ ಇರುತ್ತದೆ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ನ ವೆಬ್ಸೈಟ್ನಲ್ಲಿ ನೀವು ದೂರು ದಾಖಲಿಸಬಹುದು.
ಹಣ ಪಾವತಿಗೆ ಡಿಜಿಟಲ್ ಪೇಮೆಂಟ್ ಈಗ ಬಹಳ ಹೆಚ್ಚು ಬಳಕೆಯಲ್ಲಿದೆ. ಅದರಲ್ಲೂ ಫೋನ್ ಪೆ, ಪೇಟಿಎಂ, ಗೂಗಲ್ ಪೇ ಇತ್ಯಾದಿ ಮೂಲಕ ಯುಪಿಐನಲ್ಲಿ ಹಣ ಪಾವತಿಸುವುದು ಸರ್ವೇ ಸಾಮಾನ್ಯದ ಸಂಗತಿ. ಇಂಥ ವಹಿವಾಟು ವೇಳೆ ತಪ್ಪಾಗಿ ಹಣ ಕಳುಹಿಸಿದ ಸಂದರ್ಭ ಬರಬಹುದು. ಯಾರಿಗೋ ಹಣ ಕಳುಹಿಸಲು ಹೋಗಿ ಇನ್ಯಾರಿಗೋ ಕಳುಹಿಸುವ ಯಡವಟ್ಟುಗಳಾಗಬಹುದು. ಇಂಥ ಸಂದರ್ಭದಲ್ಲಿ ಆ ವ್ಯಕ್ತಿಗೆ ನೀವು ಹಣ ಮರಳಿಸಲು ಮೆಸೇಜ್ ಮೂಲಕವೇ ಕೇಳಿಕೊಳ್ಳಬಹುದು. ಅದಕ್ಕೆ ಸ್ಪಂದನೆ ಸಿಗದಿದ್ದರೆ ನಿಮಗೆ ಇನ್ನೂ ಒಂದು ದಾರಿ ಇರುತ್ತದೆ. ಅದುವೇ ಎನ್ಪಿಸಿಐನಲ್ಲಿ ದೂರು ದಾಖಲಿಸುವುದು.
ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ನಲ್ಲಿ ದೂರು ದಾಖಲಿಸುವ ಕ್ರಮ
ನೀವು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಇತ್ಯಾದಿ ಯಾವುದೇ ಯುಪಿಐ ಪ್ಲಾಟ್ಫಾರ್ಮ್ನಲ್ಲಿ ತಪ್ಪಾಗಿ ಹಣ ಪಾವತಿಸಿದ್ದರೆ, ಈ ಯುಪಿಐ ಅನ್ನು ಅಭಿವೃದ್ದಿಪಡಿಸಿದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (ಎನ್ಪಿಸಿಐ) ಸಂಸ್ಥೆ ಬಳಿ ದೂರು ದಾಖಲಿಸಬಹುದು. ಈ ಮೂಲಕ ನಿಮ್ಮ ಹಣ ಮರಳಿ ಪಡೆಯುವ ಅವಕಾಶ ಇರುತ್ತದೆ.
- ಎನ್ಪಿಸಿಐನ ವೆಬ್ಸೈಟ್ ವಿಳಾಸ: www.npci.org.in/ ಇಲ್ಲಿಗೆ ಭೇಟಿ ನೀಡಿ
- ಈ ವೆಬ್ಸೈಟ್ನಲ್ಲಿ ಮುಖ್ಯ ಮೆನುಗಳ ಪೈಕಿ ಕೊನೆಯಲ್ಲಿರುವ ‘ಗೆಟ್ ಇನ್ ಟಚ್’ ಅಡಿಯಲ್ಲಿ ‘ಯುಪಿಐ ಕಂಪ್ಲೇಂಟ್’ ಅನ್ನು ಕ್ಲಿಕ್ ಮಾಡಿ
- ಯುಪಿಐ ಡಿಸ್ಪೂಟ್ ರೀಡ್ರೆಸಲ್ ಮೆಕ್ಯಾನಿಸಂ ಪುಟ ತೆರೆಯುತ್ತದೆ. ಈ ಪುಟಕ್ಕೆ ನೇರವಾಗಿ ಹೋಗುವ ಲಿಂಕ್ ಇಲ್ಲಿದೆ: www.npci.org.in/what-we-do/upi/dispute-redressal-mechanism
- ಇಲ್ಲಿ ಪುಟದ ಮಧ್ಯಭಾಗದಲ್ಲಿ ಕಂಪ್ಲೇಂಟ್ ಸೆಕ್ಷನ್ ಕಾಣಬಹುದು. ಇಲ್ಲಿ ವಿವಿಧ ರೀತಿಯ ದೂರುಗಳಿಗೆ ಆಯ್ಕೆಗಳಿವೆ. ಈ ಪೈಕಿ ನಿಮ್ಮ ಯುಪಿಐ ಹಣ ಹಿಂಪಡೆಯಲು ‘ಟ್ರಾನ್ಸಾಕ್ಷನ್’ ಮುಂದಿರುವ ಪ್ಲಸ್ ಮಾರ್ಕ್ ಅನ್ನು ಕ್ಲಿಕ್ ಮಾಡಿ.
- ಇದರಲ್ಲಿ ನೇಚರ್ ಆಫ್ ಟ್ರಾನ್ಸಾಕ್ಷನ್ ಯಾವುದೆಂದು ಆಯ್ಕೆ ಮಾಡಿ
- ಮುಂದಿನ ಟ್ಯಾಬ್ನಲ್ಲಿ ಸಮಸ್ಯೆ ಯಾವುದೆಂದು ಆಯ್ಕೆ ಮಾಡಿ. ತಪ್ಪಾಗಿ ಒಂದು ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ಆಯ್ಕೆ ಮಾಡಿ.
- ಬಳಿಕ ಕಮೆಂಟ್ ಬರೆಯುವುದಿದ್ದರೆ ಬರೆಯಬಹುದು.
- ಟ್ರಾನ್ಸಾಕ್ಷನ್ ರೆಫರೆನ್ಸ್ ನಂಬರ್ ಹಾಕಿರಿ
- ಹಣ ಕಳುಹಿಸಲಾದ ನಿಮ್ಮ ಬ್ಯಾಂಕ್ ಹೆಸರು ಆಯ್ಕೆ ಮಾಡಿ
- ಯುಪಿಐ ಐಡಿ ನಮೂದಿಸಿ
- ಎಷ್ಟು ಹಣ ಕಳುಹಿಸಿದ್ದೀರಿ ಎಂದು ನಿಖರವಾಗಿ ನಮೂದಿಸಿ
- ಹಣ ಕಳುಹಿಸಲಾದ ದಿನಾಂಕ ಆಯ್ಕೆ ಮಾಡಿ
- ನಿಮ್ಮ ಇಮೇಲ್ ಐಡಿ ಮತ್ತು ನೊಂದಾಯಿತ ಮೊಬೈಲ್ ನಂಬರ್ ನಮೂದಿಸಿ.
- ಇದಾದ ಬಳಿಕ ಹಣ ಕಡಿತಗೊಂಡಿದ್ದಕ್ಕೆ ಸಾಕ್ಷಿಯಾಗಿ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಅಪ್ಲೋಡ್ ಮಾಡಿರಿ.
- ಇದಾದ ಬಳಿಕ ಅಂತಿಮವಾಗಿ ‘ಸಬ್ಮಿಟ್’ ಕ್ಲಿಕ್ ಮಾಡಿ.
ಇದನ್ನೂ ಓದಿ: ಬಿಎಸ್ಸೆನ್ನೆಲ್ನಿಂದ 5ಜಿ ಬೆಂಬಲಿತ ಒಟಿಎ ಮತ್ತು ಯುಸಿಮ್ ಪ್ಲಾಟ್ಫಾರ್ಮ್ ಅನಾವರಣ; ಎಲ್ಲಿ ಬೇಕಾದರೂ ಸಿಮ್ ಸ್ವಾಪಿಂಗ್
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ನೀವು ಸಾಧ್ಯವಾದಷ್ಟೂ ಬೇಗ, ಅಂದರೆ ತಪ್ಪಾಗಿ ಹಣ ವರ್ಗಾವಣೆ ಆಗಿದ್ದು ಗಮನಕ್ಕೆ ಬಂದ ಕೂಡಲೇ ಈ ದೂರು ಸಲ್ಲಿಸಲು ಯತ್ನಿಸಿ. ಇದರಿಂದ ಹಣ ಮರಳಿ ಬರುವ ಅವಕಾಶ ಹೆಚ್ಚಿರುತ್ತದೆ.
ಇದೇ ಕಂಪ್ಲೇಂಟ್ ವಿಭಾಗದಲ್ಲಿ ನಿಮಗೆ ಟ್ರಾನ್ಸಾಕ್ಷನ್ ಮಾತ್ರವಲ್ಲ ಬೇರೆ ಸಮಸ್ಯೆಗಳಿಗೂ ದೂರು ಕೊಡುವ ಅವಕಾಶಗಳಿವೆ. ಪಿನ್ ನಂಬರ್ ಸಮಸ್ಯೆ, ಅಕೌಂಟ್ ನಂಬರ್ ಸಮಸ್ಯೆ ಇದ್ದರೆ, ನೊಂದಣಿ ಸಾಧ್ಯವಾಗುತ್ತಿಲ್ಲವಾದಲ್ಲಿ, ಎಸ್ಸೆಮ್ಮೆಸ್ ಬರುತ್ತಿಲ್ಲವಾದಲ್ಲಿ, ಲಾಗಿನ್ ಸಮಸ್ಯೆ ಇದ್ದಲ್ಲಿ ದೂರು ಕೊಡಲು ವಿವಿಧ ಆಯ್ಕೆಗಳಿರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Mon, 12 August 24