Aryan Khan: ಉದ್ಯಮ ಕ್ಷೇತ್ರಕ್ಕೆ ಶಾರುಖ್ ಖಾನ್ ಮಗ; ವೋಡ್ಕಾ ಬ್ರ್ಯಾಂಡ್ ಬಿಡುಗಡೆ ಮಾಡಲಿದ್ದಾರೆ ಆರ್ಯನ್ ಖಾನ್
‘ಸ್ಲ್ಯಾಬ್ ವೆಂಚರ್ಸ್’ ಎಂಬ ಕಂಪನಿಯೊಂದನ್ನು ಆರ್ಯನ್ ಖಾನ್ ಈಗಾಗಲೇ ಆರಂಭಿಸಿದ್ದಾರೆ. ಈ ಕಂಪನಿಯು ವಿತರಣೆ ಮತ್ತು ಮಾರುಕಟ್ಟೆ ಉದ್ದೇಶಗಳಿಗಾಗಿ ವಿಶ್ವದ ಅತಿದೊಡ್ಡ ಮದ್ಯ ತಯಾರಿಕಾ ಕಂಪನಿ ಎಬಿ ಇನ್ಬಿವ್ ಜತೆ ಸಹಭಾಗಿತ್ವ ಹೊಂದಿದೆ.
ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಮಗ ಆರ್ಯನ್ ಖಾನ್ (Aryan Khan) ಸಿನಿಮಾ ನಂತರ ಇದೀಗ ಉದ್ಯಮ ಕ್ಷೇತ್ರಕ್ಕೂ ಕಾಲಿಡುವುದಾಗಿ ಘೋಷಿಸಿದ್ದಾರೆ. ವಿಶ್ವದ ಅತಿದೊಡ್ಡ ಮದ್ಯ ತಯಾರಿಕಾ ಕಂಪನಿ ಜತೆ ಕೈಜೋಡಿಸಿ ಭಾರತದಲ್ಲಿ ಪ್ರೀಮಿಯಂ ವೋಡ್ಕಾ (Premium Vodka) ಬ್ರ್ಯಾಂಡ್ ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಬಂಟಿ ಸಿಂಗ್ ಹಾಗೂ ಲೆಟಿ ಬ್ಲಾಗೋವಾ ಸಹಭಾಗಿತ್ವದಲ್ಲಿ ಪ್ರೀಮಿಯಂ ವೋಡ್ಕಾ ಬ್ರ್ಯಾಂಡ್ ಬಿಡುಗಡೆ ಮಾಡಲಿದ್ದಾರೆ ಆರ್ಯನ್ ಖಾನ್. ನಂತರ ದೇಶದಾದ್ಯಂತ ಮಾರುಕಟ್ಟೆಯನ್ನು ವಿಸ್ತರಿಸುವ ಬಗ್ಗೆ ಅವರು ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
‘ಸ್ಲ್ಯಾಬ್ ವೆಂಚರ್ಸ್’ ಎಂಬ ಕಂಪನಿಯೊಂದನ್ನು ಅವರು ಈಗಾಗಲೇ ಆರಂಭಿಸಿದ್ದಾರೆ. ಈ ಕಂಪನಿಯು ವಿತರಣೆ ಮತ್ತು ಮಾರುಕಟ್ಟೆ ಉದ್ದೇಶಗಳಿಗಾಗಿ ವಿಶ್ವದ ಅತಿದೊಡ್ಡ ಮದ್ಯ ತಯಾರಿಕಾ ಕಂಪನಿ ಎಬಿ ಇನ್ಬಿವ್ (AB InBev) ಜತೆ ಸಹಭಾಗಿತ್ವ ಹೊಂದಿದೆ ಎಂದು ‘ಲೈವ್ಮಿಂಟ್’ ವರದಿ ಉಲ್ಲೇಖಿಸಿದೆ. ಪ್ರಸ್ತುತ ಮಾರುಕಟ್ಟೆ ಪ್ರದೇಶದಲ್ಲಿ ಒಂದು ನಿರ್ವಾತ ಪ್ರದೇಶ ಸೃಷ್ಟಿಯಾಗಿದೆ ಎಂದು ಭಾವಿಸುತ್ತೇನೆ. ಇದು ಒಂದು ಅವಕಾಶ. ಉದ್ಯಮ ಎಂಬುದು ಅವಕಾಶಕ್ಕೆ ಸಂಬಂಧಿಸಿದ್ದು ಎಂಬುದು ನನ್ನ ಭಾವನೆ ಎಂದು ಆರ್ಯನ್ ಖಾನ್ ಹೇಳಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: Aryan Khan: ಚಿತ್ರರಂಗಕ್ಕೆ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಎಂಟ್ರಿ; ಬ್ರೇಕಿಂಗ್ ನ್ಯೂಸ್ ನೀಡಿದ ಸ್ಟಾರ್ ಕಿಡ್
‘ಸ್ಲ್ಯಾಬ್ ವೆಂಚರ್ಸ್’ ದೇಶದ ಶ್ರೀಮಂತ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಿಸಲಿದೆ. ಕ್ರಮೇಣ ಆಲ್ಕೋಹಾಲ್ ಮತ್ತು ಆಲ್ಕೋಹಾಲ್ ರಹಿತ ಪಾನೀಯಗಳು, ಉಡುಪು ಮತ್ತು ಬಿಡಿಭಾಗಗಳಿಗೆ ಕಾರ್ಯಕ್ಷೇತ್ರವನ್ನು ವಿಸ್ತರಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಯುವ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉನ್ನತ ಗುಣಮಟ್ಟದ, ಒಂದೇ ಸೂರಿನಡಿ ಹೆಚ್ಚಿನ ವಸ್ತುಗಳನ್ನು ದೊರೆಯುವಂತೆ ಮಾಡಬೇಕೆಂಬುದು ಪ್ರಮುಖ ಉದ್ದೇಶವಾಗಿದೆ ಎಂದು ಆರ್ಯನ್ ಖಾನ್ ತಿಳಿಸಿದ್ದಾರೆ.
ನಿರ್ದೇಶಕನಾಗಿ ಬಾಲಿವುಡ್ಗೆ ಕಾಲಿಡುವುದಾಗಿ ಆರ್ಯನ್ ಖಾನ್ ಇತ್ತೀಚೆಗೆ ತಿಳಿಸಿದ್ದರು. ಅವರು ಮೊದಲ ಪ್ರಾಜೆಕ್ಟ್ಗೆ ಸ್ಕ್ರಿಪ್ಟ್ ಬರೆದು ಮುಗಿಸಿದ್ದು, ಈಗ ಆ್ಯಕ್ಷನ್-ಕಟ್ ಹೇಳುವ ಕಾತರದಲ್ಲಿದ್ದಾರೆ. ಶಾರುಖ್ ಖಾನ್ ಅವರ ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಸಂಸ್ಥೆ ಮೂಲಕ ಈ ಪ್ರಾಜೆಕ್ಟ್ ನಿರ್ಮಾಣ ಆಗಲಿದೆ. ಆದರೆ ಯಾರೆಲ್ಲ ನಟಿಸಲಿದ್ದಾರೆ? ತಾಂತ್ರಿಕ ವರ್ಗದಲ್ಲಿ ಯಾರು ಕೆಲಸ ಮಾಡಲಿದ್ದಾರೆ? ಇದು ಯಾವ ಪ್ರಕಾರದ ಸಿನಿಮಾ ಅಥವಾ ವೆಬ್ ಸಿರೀಸ್ ಆಗಿರಲಿದೆ? ಈ ಯಾವ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ