ಷೇರು ಮಾರುಕಟ್ಟೆ ಇವತ್ತು ಕುಸಿದಿದ್ದು ಯಾಕೆ? ಇಲ್ಲಿವೆ ಸಂಭಾವ್ಯ ಕಾರಣಗಳು
Reasons for stock market crash: ಡಿಸೆಂಬರ್ 17, ಮಂಗಳವಾರ ಭಾರತೀಯ ಷೇರು ಮಾರುಕಟ್ಟೆ ಶೇ. 1ರ ಆಸುಪಾಸಿನಷ್ಟು ಕುಸಿತ ಕಂಡಿದೆ. ಎಲ್ಲಾ ನಿಫ್ಟಿ ಸೂಚ್ಯಂಕಗಳು ರೆಡ್ನಲ್ಲಿವೆ. ಬಿಎಸ್ಇನ ಸೆನ್ಸೆಕ್ಸ್ ಸೇರಿದಂತೆ ಎಲ್ಲವೂ ಕೂಡ ಪತನ ಕಂಡಿವೆ. ಈ ಪರಿ ಕುಸಿತಕ್ಕೆ ಹಲವು ಸಂಭಾವ್ಯ ಕಾರಣಗಳಿವೆ. ಈ ಬಗ್ಗೆ ಚಿಕ್ಕ ವರದಿ.
ನವದೆಹಲಿ, ಡಿಸೆಂಬರ್ 17: ಭಾರತದ ಷೇರು ಮಾರುಕಟ್ಟೆ ಇಂದು ಮಂಗಳವಾರ ಸಂಪೂರ್ಣವಾಗಿ ನಡುಗಿ ಹೋಗಿದೆ. ಸೆನ್ಸೆಕ್ಸ್, ನಿಫ್ಟಿ ಸೇರಿದಂತೆ ಬಿಎಸ್ಇ ಮತ್ತು ಎನ್ಎಸ್ಇಯ ಬಹುತೇಕ ಎಲ್ಲಾ ಸೂಚ್ಯಂಕಗಳು ಕೆಂಪು ಬಣ್ಣದೊಂದಿಗೆ ಅಂತ್ಯಗೊಂಡಿವೆ. ಬಿಎಸ್ಇ ಸೆನ್ಸೆಕ್ಸ್ 1,064 ಅಂಕಗಳಷ್ಟು ಕುಸಿತ ಕಂಡು 80,684 ಅಂಕಗಳ ಮಟ್ಟ ಮುಟ್ಟಿದೆ. ಸೆನ್ಸೆಕ್ಸ್ ಮಾತ್ರವಲ್ಲ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಎಲ್ಲಾ ಸೂಚ್ಯಂಕಗಳೂ ಇಳಿಕೆ ಕಂಡಿವೆ. ಟೆಲಿಕಾಂ ಸೆಕ್ಟರ್ನ ಇಂಡೆಕ್ಸ್ ಶೇ. 2ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ.
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ಪ್ರಧಾನ ಇಂಡೆಕ್ಸ್ ಆದ ನಿಫ್ಟಿ50 ಇಂದು 332 ಅಂಕಗಳನ್ನು ಕೈಬಿಟ್ಟಿದೆ. ಇತರ ಎಲ್ಲಾ ಸೂಚ್ಯಂಕಗಳೂ ಕೂಡ ನಷ್ಟ ಕಂಡಿವೆ. ಷೇರು ಮಾರುಕಟ್ಟೆಯ ಈ ಪೂರ್ಣ ಕುಸಿತಕ್ಕೆ ಬಹುಕಾರಣಗಳನ್ನು ಗುರುತಿಸಬಹುದು.
ಇದನ್ನೂ ಓದಿ: ಸೆಬಿ ನಿಯಮಕ್ಕೆ ತತ್ತರಿಸಿದ ಆಪ್ಷನ್ಸ್ ಟ್ರೇಡಿಂಗ್; ಡಿಸೆಂಬರ್ನಲ್ಲಿ ಟ್ರೇಡಿಂಗ್ ಪ್ರಮಾಣ ಗಣನೀಯ ಇಳಿಕೆ
ಡಿ. 17ರಂದು ಷೇರುಪೇಟೆ ಕುಸಿತಕ್ಕೆ ಸಂಭಾವ್ಯ ಕಾರಣಗಳು…
ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ನಾಳೆ ಬುಧವಾರ ಬಡ್ಡಿ ಇಳಿಸುವುದೋ ಬೇಡವೋ ಎಂಬ ನಿರ್ಧಾರವನ್ನು ಪ್ರಕಟಿಸಲಿದೆ. ಶೇ. 0.25ರಷ್ಟು ಬಡ್ಡಿ ಇಳಿಕೆ ಆಗಬಹುದು ಎಂಬುದು ಮಾರುಕಟ್ಟೆಯೊಳಗೆ ಮಾಡಿಕೊಳ್ಳಲಾಗಿರುವ ಅಂದಾಜು. ಇದರಲ್ಲೇನು ವ್ಯತ್ಯಯವಾದರೆ ಮಾರುಕಟ್ಟೆ ಕುಸಿಯಬಹುದು.
ಡಾಲರ್ ಎದುರು ಭಾರತೀಯ ರುಪಾಯಿ ನಿರಂತರವಾಗಿ ಕುಸಿಯುತ್ತಿದೆ. ಹೆಚ್ಚೂಕಡಿಮೆ ಡಾಲರ್ಗೆ 85 ರೂಪಾಯಿಯ ಹಂತಕ್ಕೆ ಬಂದುಬಿಟ್ಟಿದೆ. ಚಿನ್ನ ಖರೀದಿಸುವ ಭರಾಟೆಯಿಂದಾಗಿ ನವೆಂಬರ್ನಲ್ಲಿ ಟ್ರೇಡ್ ಡೆಫಿಸಿಟ್ ತೀವ್ರವಾಗಿತ್ತು. ಇದರಿಂದ ರುಪಾಯಿ ಮೌಲ್ಯ ಕುಸಿದಿತ್ತು. ಅದು ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿರಬಹುದು.
ಡಿಸೆಂಬರ್ ಮೊದಲಾರ್ಧದಲ್ಲಿ ವಿದೇಶೀ ಹೂಡಿಕೆದಾರರಿಂದ ಹೆಚ್ಚಿನ ಬಂಡವಾಳ ಹರಿದುಬಂದಿತ್ತು. ನಿನ್ನೆಯಿಂದ ಎಫ್ಐಐಗಳು ಭಾರತೀಯ ಈಕ್ವಿಟಿಗಳಿಂದ ಹೂಡಿಕೆ ಹೊರತೆಗೆದಿದ್ದೇ ಹೆಚ್ಚು.
ಇದನ್ನೂ ಓದಿ: ನವೆಂಬರ್ನಲ್ಲಿ ಭಾರತದಿಂದ 20,000 ಕೋಟಿ ರೂ ಮೌಲ್ಯದ ಸ್ಮಾರ್ಟ್ಫೋನ್ ರಫ್ತು
ರಿಲಾಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್ಟೆಲ್, ನೆಸ್ಲೆ, ಎಲ್ ಅಂಡ್ ಟಿ, ಬಜಾಜ್ ಫಿನ್ಸರ್ವ್, ಎಚ್ಡಿಎಫ್ಸಿ ಬ್ಯಾಂಕ್, ಟೈಟಾನ್ ಮೊದಲಾದ ದೊಡ್ಡ ದೊಡ್ಡ ಸ್ಟಾಕುಗಳು ಭಾರೀ ಪ್ರಮಾಣದಲ್ಲಿ ಮಾರಾಟ ಕಂಡಿವೆ. ಇದರಿಂದ ಮಾರುಕಟ್ಟೆ ಕುಸಿದಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ