ಇಂಟ್ರಾಡೇ ಟ್ರೇಡಿಂಗ್ ಸೀಕ್ರೆಟ್..! ವಿವಾಹಿತ ಪುರುಷರು, ಹಿರಿಯರು, ಕಿರಿಯರು, ಮಹಿಳೆಯರಲ್ಲಿ ಹೆಚ್ಚು ಲಾಭ ಮಾಡೋದು ಯಾರು?

Stock Market intraday trading interesting things: ಷೇರು ಮಾರುಕಟ್ಟೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಇಂಟ್ರಾಡೇ ಟ್ರೇಡಿಂಗ್​ನಲ್ಲಿ ಹೆಚ್ಚು ನಷ್ಟ ಅನುಭವಿಸುತ್ತಿರುವುದು 20 ವರ್ಷದೊಳಗಿನ ವಯಸ್ಸಿನವರೇ ಅಂತೆ. ವಿವಾಹಿತ ಪುರುಷರು ಅವಿವಾಹಿತರಿಗಿಂತ ಹೆಚ್ಚು ಲಾಭ ಮಾಡುತ್ತಾರೆ. ಪುರುಷರಿಗಿಂತ ಮಹಿಳೆಯರು ಹೆಚ್ಚು ಯಶಸ್ವಿ ಟ್ರೇಡರ್​​ಗಳಂತೆ. ಹಾಗಂತ ಸೆಬಿ ನಡೆಸಿದ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಇಂಟ್ರಾಡೇ ಟ್ರೇಡಿಂಗ್ ಸೀಕ್ರೆಟ್..! ವಿವಾಹಿತ ಪುರುಷರು, ಹಿರಿಯರು, ಕಿರಿಯರು, ಮಹಿಳೆಯರಲ್ಲಿ ಹೆಚ್ಚು ಲಾಭ ಮಾಡೋದು ಯಾರು?
ಷೇರು ಮಾರುಕಟ್ಟೆ
Follow us
|

Updated on: Jul 29, 2024 | 10:45 AM

ನವದೆಹಲಿ, ಜುಲೈ 29: ಷೇರು ಮಾರುಕಟ್ಟೆಯಲ್ಲಿ ಬಹಳ ಹೆಚ್ಚುತ್ತಿರುವ ಇಂಟ್ರಾಡೇ ಟ್ರೇಡಿಂಗ್​ನಲ್ಲಿ ಲಾಭ ಮಾಡುವ ಟ್ರೇಡರ್​​ಗಳ ಸಂಖ್ಯೆ ಬಹಳ ಕಡಿಮೆ. ಈ ಕಡಿಮೆ ಮಂದಿಯಲ್ಲೇ ಹೆಚ್ಚಿನವರು ವಿವಾಹಿತರೇ ಆಗಿದ್ದಾರಂತೆ. ಮದುವೆಯಾಗದೇ ಉಳಿದಿರುವ ಬ್ಯಾಚಲರ್ ಹುಡುಗರು ಮತ್ತು ಹುಡುಗಿಯರು ಅತಿಹೆಚ್ಚು ನಷ್ಟ ಅನುಭವಿಸುತ್ತಿದ್ದಾರಂತೆ. ಹಾಗಂತ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ ಹೇಳಿದೆ. ಇಂಟ್ರಾಡೇ ಟ್ರೇಡಿಂಗ್ ಯಾರೆಲ್ಲಾ ಮಾಡುತ್ತಾರೆ, ಹೇಗೆಲ್ಲಾ ಮಾಡುತ್ತಾರೆ ಎಂದು ಸೆಬಿ ಬಹಳಷ್ಟು ವಿಸ್ತೃತವಾಗಿ ವಿಶ್ಲೇಷಣೆ ನಡೆಸಿದ್ದು ಅದರಲ್ಲಿ ಹಲವು ವಿಶೇಷ ಅಂಶಗಳು ಗೋಚರಿಸಿವೆ. ಈ ಪೈಕಿ ವೈವಾಹಿಕ ಸ್ಥಿತಿಗತಿಗೂ ಟ್ರೇಡಿಂಗ್​ನಲ್ಲಿ ಗಳಿಸುವ ಲಾಭ ನಷ್ಟಕ್ಕೂ ಒಂದು ರೀತಿಯ ಸಂಬಂಧವನ್ನು ಸೆಬಿ ಗುರುತಿಸಿದೆ.

ವಿವಾಹಿತ ಪುರುಷರಿಗೆ ಹೆಚ್ಚು ಲಾಭ

2018-19, 2021-22 ಮತ್ತು 2022-23ರವರೆಗೆ ಈ ಮೂರು ಹಣಕಾಸು ವರ್ಷಗಳಲ್ಲಿ ಟ್ರೇಡಿಂಗ್ ನಡೆಸಿದವರಲ್ಲಿ ವಿವಾಹಿತರಾದ ಪುರುಷರು ಮತ್ತು ಮಹಿಳೆಯರು ಬಹಳಷ್ಟು ಟ್ರೇಡಿಂಗ್ ಮೆಟ್ರಿಕ್​ಗಳಲ್ಲಿ ಅವಿವಾಹಿತರಿಗಿಂತ ಹೆಚ್ಚು ಯಶಸ್ಸು ಕಂಡಿದ್ದಾರೆ. ನಷ್ಟ ಕಾಣುವವರ ಸಂಖ್ಯೆಯೂ ಅವಿವಾಹಿತರಿಂತ ವಿವಾಹಿತ ಟ್ರೇಡರ್​ಗಳಲ್ಲಿ ಕಡಿಮೆ.

ಗಮನಿಸಬೇಕಾದ ಅಂಶವೆಂದರೆ ಇಂಟ್ರಾಡೇ ಟ್ರೇಡಿಂಗ್​ನಲ್ಲಿ ವಿವಾಹಿತರೇ ಇರಲಿ, ಅವಿವಾಹಿತರೇ ಇರಲಿ ನಷ್ಟಕ್ಕಿಂತ ಹೆಚ್ಚು ಲಾಭ ಮಾಡಿದವರು ಯಾರೂ ಇಲ್ಲ. ಎಲ್ಲರೂ ನಷ್ಟ ಅನುಭವಿಸುವವರೇ. ಆದರೆ, ಕಡಿಮೆ ನಷ್ಟ ಅನುಭವಿಸಿರುವುದು ವಿವಾಹಿತರೇ ಎಂಬುದು ಸಾರಾಂಶ. ಸೆಬಿ ವರದಿ ಪ್ರಕಾರ 2022-23ರ ವರ್ಷದಲ್ಲಿ ಶೇ. 75ರಷ್ಟು ಅವಿವಾಹಿತ ಟ್ರೇಡರ್​ಗಳು ನಷ್ಟ ಕಂಡಿದ್ದಾರೆ. ವಿವಾಹಿತರಲ್ಲಿ ಈ ಪ್ರಮಾಣ ಶೇ. 67 ಇದೆ.

ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನ; ಡೆಡ್​ಲೈನ್ ವಿಸ್ತರಣೆ ಸಾಧ್ಯತೆ ಕಡಿಮೆ

ಮತ್ತೊಂದು ಕುತೂಹಲ ಸಂಗತಿ ಎಂದರೆ, ಇಂಟ್ರಾಡೇ ಟ್ರೇಡಿಂಗ್​ನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಟ್ರೇಡಿಂಗ್ ನಡೆಸುವುದರಲ್ಲೂ ವಿವಾಹಿತರೇ ಮುಂದಿದ್ದಾರಂತೆ.

ಪುರುಷರಿಗಿಂತ ಮಹಿಳೆಯರು ಹೆಚ್ಚು ಯಶಸ್ವಿ..!

ಇದು ಇನ್ನೊಂದು ಕುತೂಹಲಕಾರಿ ಅಂಶ. ಅಧ್ಯಯನ ನಡೆಸಲಾದ ಮೂರು ವರ್ಷದಲ್ಲೂ ಪುರುಷ ಟ್ರೇಡರ್​ಗಳಿಗಿಂತ ಮಹಿಳೆಯರು ಲಾಭ ಮಾಡಿರುವುದು ಹೆಚ್ಚು.

2022-23ರಲ್ಲಿ ಒಂದು ವರ್ಷದಲ್ಲಿ ಒಂದು ಕೋಟಿ ರೂನಷ್ಟು ಇಂಟ್ರಾಡೇ ಟರ್ನೋವರ್ ಮಾಡುವ ಪುರುಷ ಟ್ರೇಡರ್​ಗಳು ಸರಾಸರಿಯಾಗಿ 38,570 ರೂನಷ್ಟು ನಷ್ಟ ಅನುಭವಿಸಿದ್ದಾರೆ. ಅದೇ ಮಹಿಳಾ ಟ್ರೇಡರ್​ಗಳು ಇದೇ ಮೆಟ್ರಿಕ್​ನಲ್ಲಿ 22,153 ರೂನಷ್ಟು ಸರಾಸರಿ ನಷ್ಟ ಅನುಭವಿಸಿರುವುದು ತಿಳಿದುಬಂದಿದೆ.

ಕಿರಿಯ ವಯಸ್ಸಿನವರಿಗೆ ಹೆಚ್ಚು ನಷ್ಟ

2022-23ರ ಹಣಕಾಸು ವರ್ಷದಲ್ಲಿ ನಡೆದ ಇಂಟ್ರಾಡೇ ಟ್ರೇಡಿಂಗ್​ನಲ್ಲಿ ಹದಿಹರೆಯದ ಯುವಕರು ಅತಿಹೆಚ್ಚು ನಷ್ಟ ಅನುಭವಿಸಿದ್ದಾರೆ. ಹಿರಿಯರು ಕಡಿಮೆ ನಷ್ಟ ಅನುಭವಿಸಿದ್ದಾರೆ. ನಷ್ಟ ಕಂಡವರಲ್ಲಿ 60 ವರ್ಷಕ್ಕಿಂತ ಹಿರಿಯ ವಯಸ್ಸಿನ ಜನರ ಪ್ರಮಾಣ ಶೇ. 53 ಇದ್ದರೆ, 20 ವರ್ಷದೊಳಗಿನವರ ಪ್ರಮಾಣ ಶೇ 81ರಷ್ಟಿದೆ.

ಇದನ್ನೂ ಓದಿ: ಬಿಎಸ್ಸೆನ್ನೆಲ್ 365 ದಿನ ವ್ಯಾಲಿಡಿಟಿ ಪ್ಲಾನ್ 321 ರೂನಿಂದ ಶುರು; ಇಲ್ಲಿದೆ ಜಿಯೊ, ಏರ್ಟೆಲ್, ಬಿಎಸ್​ಎನ್​ಎಲ್ ಮಧ್ಯೆ ಹೋಲಿಕೆ

ಅದೇನೇ ಆದರೂ ಇಂಟ್ರಾಡೇ ಟ್ರೇಡಿಂಗ್​ನಲ್ಲಿ ಮುಕ್ಕಾಲು ಪಾಲು ಜನರು ನಷ್ಟ ಅನುಭವಿಸುತ್ತಿರುವುದಂತೂ ವಾಸ್ತವದ ಸಂಗತಿ. ಆದರೂ ಕೂಡ ಭಾರತದಲ್ಲಿ ಇಂಟ್ರಾಡೇ ಟ್ರೇಡಿಂಗ್​ನಲ್ಲಿ ನಿರತರಾಗಿರುವವರ ಸಂಖ್ಯೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ