AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5,000 ಸ್ವಿಗ್ಗಿ ಉದ್ಯೋಗಿಗಳಿಗೆ 9,0000 ಕೋಟಿ ರೂ ಮೊತ್ತದ ಷೇರುಗಳು; ಕೋಟ್ಯಧಿಪತಿಗಳಾದ 500 ಮಂದಿ

Swiggy shares update: ಬೆಂಗಳೂರು ಮೂಲದ ಸ್ವಿಗ್ಗಿ ಸಂಸ್ಥೆ ತನ್ನ 9,000 ಕೋಟಿ ರೂ ಮೊತ್ತದ ಷೇರುಗಳನ್ನು 5,000 ಉದ್ಯೋಗಿಗಳಿಗೆ ಇಸಾಪ್​ಗಳಾಗಿ ಹಂಚಿಕೆ ಮಾಡುತ್ತಿದೆ. ಇದರಲ್ಲಿ 500 ಮಂದಿ ಉದ್ಯೋಗಿಗಳಿಗೆ ಕನಿಷ್ಠ ಒಂದು ಕೋಟಿ ರೂ ಮೊತ್ತದ ಇಸಾಪ್​ಗಳು ಸಿಗಲಿವೆ. ಸ್ವಿಗ್ಗಿ ಸಂಸ್ಥೆ 11,000 ಕೋಟಿ ರೂಗೂ ಅಧಿಕ ಮೊತ್ತವನ್ನು ಐಪಿಒ ಮೂಲಕ ಸಂಗ್ರಹಿಸಿದೆ. ಐಪಿಒದಲ್ಲಿ 390 ರೂ ಬೆಲೆ ಹೊಂದಿದ್ದ ಸ್ವಿಗ್ಗಿ ಷೇರು ಈಗ 413-420 ರೂಗೆ ಲಿಸ್ಟ್ ಆಗಿದೆ.

5,000 ಸ್ವಿಗ್ಗಿ ಉದ್ಯೋಗಿಗಳಿಗೆ 9,0000 ಕೋಟಿ ರೂ ಮೊತ್ತದ ಷೇರುಗಳು; ಕೋಟ್ಯಧಿಪತಿಗಳಾದ 500 ಮಂದಿ
ಸ್ವಿಗ್ಗಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 13, 2024 | 11:08 AM

Share

ಮುಂಬೈ, ನವೆಂಬರ್ 13: ಈ ವರ್ಷದ ಅತಿದೊಡ್ಡ ಐಪಿಒಗಳಲ್ಲಿ ಒಂದಾದ ಸ್ವಿಗ್ಗಿ ಶೇ. 8ರ ಪ್ರೀಮಿಯಮ್​ನಲ್ಲಿ ಲಿಸ್ಟಿಂಗ್ ಆಗಿದೆ. 371-390 ರೂ ಐಪಿಒ ಬೆಲೆ ಹೊಂದಿದ್ದ ಸ್ವಿಗ್ಗಿಯ ಷೇರು ಎನ್​ಎಸ್​ಇನಲ್ಲಿ 420 ರೂಗೆ ಲಿಸ್ಟ್ ಆಗಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಅದರ ಲಿಸ್ಟಿಂಗ್ ದರ 412 ರೂ ಇದೆ. ಐಪಿಒ ಬಿಡುಗಡೆಯಾದ ಆರಂಭದಲ್ಲಿ ಹೂಡಿಕೆದಾರರಿಂದ ನೀರಸ ಸ್ಪಂದನೆ ಪಡೆದಿದ್ದ ಈ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್, ಕೊನೆಯ ದಿನಂದು ಸಾಕಷ್ಟು ಹೂಡಿಕೆದಾರರನ್ನು ಆಕರ್ಷಿಸಿತು. ಮೈನಸ್ ದರದಲ್ಲಿ ಲಿಸ್ಟ್ ಆಗಬಹುದು ಎನ್ನುವ ನಿರೀಕ್ಷೆ ಇತ್ತಾದರೂ ಪಾಸಿಟಿವ್​ನಲ್ಲಿ ಅದು ಅಂತ್ಯಗೊಂಡಿದೆ. ಜೆಎಂ ಫೈನಾನ್ಷಿಯಲ್ ಸಂಸ್ಥೆ ಸ್ವಿಗ್ಗಿಗೆ 470 ರೂ ಟಾರ್ಗೆಟ್ ಪ್ರೈಸ್ ಇಟ್ಟಿದೆ. ಇದರಿಂದ ಹೂಡಿಕೆದಾರರ ಒಳಹರಿವು ಬರಲು ಸಾಧ್ಯವಾಯಿತು ಎನ್ನಲಾಗಿದೆ.

ಪ್ರಾಥಮಿಕ ಮಾರುಕಟ್ಟೆಯಿಂದ (ಐಪಿಒ) 11,000 ಕೋಟಿ ರೂಗೂ ಅಧಿಕ ಬಂಡವಾಳ ಕಲೆಹಾಕಿರುವ ಸ್ವಿಗ್ಗಿ ಸಂಸ್ಥೆ, ಬರೋಬ್ಬರಿ ಒಂಬತ್ತು ಸಾವಿರ ಕೋಟಿ ರೂ ಮೌಲ್ಯದ ಷೇರುಗಳನ್ನು ತನ್ನ ಸಾವಿರಾರು ಉದ್ಯೋಗಿಗಳಿಗೆ ಹಂಚಿಕೆ ಮಾಡಲಿದೆ. ವರದಿ ಪ್ರಕಾರ ಹಲವು ವರ್ಷಗಳಿಂದ ಸ್ವಿಗ್ಗಿಯಲ್ಲಿ ನಿಷ್ಠೆಯಿಂದ ದುಡಿದು ಉಳಿದುಕೊಂಡಿರುವ 5,000 ಉದ್ಯೋಗಿಗಳಿಗೆ ಇಸಾಪ್​ಗಳನ್ನು ಸ್ವಿಗ್ಗಿ ನೀಡಲಿದೆ.

ಇದನ್ನೂ ಓದಿ: ರತನ್ ಟಾಟಾ 10,000 ಕೋಟಿ ರೂ ಆಸ್ತಿಯಲ್ಲಿ ಬಟ್ಲರ್ ಸುಬ್ಬಯ್ಯಗೂ ಪಾಲು; ವಿಲ್​ನಲ್ಲಿಲ್ಲ ಇತರ ಫ್ಯಾಮಿಲಿ ಸದಸ್ಯರ ಹೆಸರು

ಈ 5,000 ಲಕ್ಕಿ ಉದ್ಯೋಗಿಗಳಲ್ಲಿ ಶೇ. 10ರಷ್ಟು ಮಂದಿ, ಅಂದರೆ ಸುಮಾರು 500 ಉದ್ಯೋಗಿಗಳು ಕೋಟ್ಯಧಿಪತಿಗಳಾಗಲಿದ್ದಾರೆ ಎನ್ನಲಾಗಿದೆ. ಈ ಐನ್ನೂರು ಉದ್ಯೋಗಿಗಳಿಗೆ ಕನಿಷ್ಠ ಒಂದು ಕೋಟಿ ರೂ ಮೌಲ್ಯದ ಸ್ವಿಗ್ಗಿ ಷೇರುಗಳು ಸಿಗಲಿವೆ.

ಈ ಹಿಂದೆ ಫ್ಲಿಪ್​ಕಾರ್ಟ್ ಸಂಸ್ಥೆ ಸುಮಾರು 12,000 ಕೋಟಿ ರೂ ಮೊತ್ತದ ಹಣವನ್ನು ತನ್ನ ಹಾಲಿ ಮತ್ತು ಮಾಜಿ ಉದ್ಯೋಗಿಗಳಿಗೆ ಇಸಾಪ್​ಗಳಾಗಿ ಹಂಚಿಕೆ ಮಾಡಿತ್ತು. ಸ್ವಿಗ್ಗಿನ ಪ್ರತಿಸ್ಪರ್ಧಿ ಸಂಸ್ಥೆಯಾದ ಜೊಮಾಟೊ ಕೂಡ ತನ್ನ ಉದ್ಯೋಗಿಗಳಿಗೆ ಇಸಾಪ್​ಗಳನ್ನು ನೀಡಿತ್ತು. ಇನ್ನೂ ಹಲವು ಕಂಪನಿಗಳು ಇಸಾಪ್ ಪರಿಪಾಟ ಬೆಳೆಸಿಕೊಂಡಿವೆ. ಭಾರತದ ಮಟ್ಟಿಗೆ ಸ್ವಿಗ್ಗಿ ಮತ್ತು ಫ್ಲಿಪ್​ಕಾರ್ಟ್ ಸಂಸ್ಥೆಗಳು ಅತಿಹೆಚ್ಚು ಇಸಾಪ್ ಹಂಚಿರುವ ದಾಖಲೆಯನ್ನಂತೂ ಮಾಡಿವೆ.

ಇದನ್ನೂ ಓದಿ: ಬೆಳ್ಳಿಯನ್ನೂ ಹಿಂದಿಕ್ಕಿದ ಬಿಟ್​ಕಾಯಿನ್; ಮಾರುಕಟ್ಟೆ ಬಂಡವಾಳದಲ್ಲಿ ವಿಶ್ವದ 8ನೇ ಅತಿದೊಡ್ಡ ಆಸ್ತಿ

ಇಸಾಪ್​ಗಳೆಂದರೆ ಏನು?

ಇಸಾಪ್ (ESOP) ಎಂದರೆ ಎಂಪ್ಲಾಯೀ ಸ್ಟಾಕ್ ಆಪ್ಷನ್. ಉದ್ಯೋಗಿಗಳಿಗೆ ಕಂಪನಿ ವತಿಯಿಂದ ನೀಡಲಾಗುವ ಷೇರುಗಳ ಕೊಡುಗೆ. ಉದ್ಯೋಗಿಯಾಗಿದ್ದುಕೊಂಡು ಕಂಪನಿಯ ಷೇರುದಾರರೂ ಆಗುವ ಅವಕಾಶ ಸಿಗುತ್ತದೆ. ಇದರಿಂದ ಉದ್ಯೋಗಿ ಕೆಲಸ ಮಾಡಲು ಹೆಚ್ಚು ಉತ್ತೇಜಿತನಾಗಬಹುದು. ಕಂಪನಿಗಳು ನೀಡುವ ಇಸಾಪ್​ಗಳಿಗೆ ಷರತ್ತುಗಳೂ ಇರಬಹುದು. ಕಂಪನಿಯಲ್ಲಿ ಕೆಲಸದಲ್ಲಿ ಇರುವಷ್ಟು ದಿನ ತನ್ನ ಪಾಲಿನ ಷೇರುಗಳನ್ನು ಆತ ಮಾರಲು ಸಾಧ್ಯವಾಗದೇ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ