ಟೆಲಿಗ್ರಾಮ್ ಸಿಇಒ ಆದರೂ ಮೊಬೈಲ್ ಮುಟ್ಟಲ್ಲ, ಒಂದೂ ಚಟ ಹೊಂದಿಲ್ಲ; ಪಾವೆಲ್ ದುರೋವ್ ಕಥೆ ಇದು…

Telegram CEO Pavel Durov don't use mobile: ಟೆಲಿಗ್ರಾಂ ಸಂಸ್ಥಾಪಕರು ಮತ್ತು ಸಿಇಒ ಪಾವೆಲ್ ದುರೋವ್ ಅವರಿಗೆ ಒಂದೂ ಚಟ ಇಲ್ಲ. ಇವರು ಸಿಗರೇಟ್ ಸೇದಲ್ಲ, ಹೆಂಡ ಕುಡಿಯಲ್ಲ, ಕಾಫಿ ಸೇವನೆಯೂ ಮಾಡಲ್ಲ, ಡ್ರಗ್ಸಂತೂ ದೂರವೇ ದೂರ. ತಮ್ಮ ಆ್ಯಪ್​ನ ಫೀಚರ್ ಟೆಸ್ಟ್ ಮಾಡುವಾಗ ಬಿಟ್ಟರೆ ಬೇರಾವಾಗಲೂ ಇವರು ಮೊಬೈಲ್ ನೋಡುವುದೇ ಇಲ್ಲವಂತೆ.

ಟೆಲಿಗ್ರಾಮ್ ಸಿಇಒ ಆದರೂ ಮೊಬೈಲ್ ಮುಟ್ಟಲ್ಲ, ಒಂದೂ ಚಟ ಹೊಂದಿಲ್ಲ; ಪಾವೆಲ್ ದುರೋವ್ ಕಥೆ ಇದು...
ಪಾವೆಲ್ ದುರೋವ್

Updated on: Oct 14, 2025 | 12:19 PM

ನವದೆಹಲಿ, ಅಕ್ಟೋಬರ್ 14: ವಾಟ್ಸಾಪ್​ಗೆ ಪರ್ಯಾಯವಾಗಿರುವ ಟೆಲಿಗ್ರಾಂ (Telegram) ಮೆಸೇಜಿಂಗ್ ಪ್ಲಾಟ್​ಫಾರ್ಮ್​ನ ಸಿಇಒ ಮತ್ತು ಅದರ ಸಂಸ್ಥಾಪಕ ಪಾವೆಲ್ ದುರೋವ್ (Pavel Durov) ಸಾಕಷ್ಟು ವಿಚಾರಗಳಿಗೆ ಕುತೂಹಲ ಮೂಡಿಸುವ ವ್ಯಕ್ತಿ. ಇವರ ಜೀವನಶೈಲಿ ಬಹಳ ಆಕರ್ಷಕ ಮತ್ತು ವಿಚಿತ್ರವೂ ಹೌದು. ರಷ್ಯಾ ಮೂಲದ ಪಾವೆಲ್ ಅವರ ಆಸ್ತಿಮೌಲ್ಯ 17 ಬಿಲಿಯನ್ ಡಾಲರ್. ದುಬೈ ನಗರದ ಅತಿ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.

ಮಕ್ಕಳ ವಿಚಾರದಲ್ಲಿ ಇಲಾನ್ ಮಸ್ಕ್​ಗಿಂತ ಒಂದು ಹೆಜ್ಜೆ ಮುಂದು. ಪಾವೆಲ್ ದುರೋವ್ ನೂರಕ್ಕೂ ಹೆಚ್ಚು ಮಕ್ಕಳಿಗೆ ‘ಅಪ್ಪ’ ಎನಿಸಿದ್ದಾರೆ. 15ಕ್ಕೂ ಹೆಚ್ಚು ವರ್ಷಗಳಿಂದ ಇವರು ವೀರ್ಯದಾನ ಮಾಡುತ್ತಾ ಬಂದಿದ್ದಾರೆ. ಇವರ ವೀರ್ಯದಿಂದ ಗರ್ಭವತಿಯಾದ ಮಹಿಳೆಯರು ಹಡೆದ ಮಕ್ಕಳ ಸಂಖ್ಯೆಯೇ 100ಕ್ಕೂ ಹೆಚ್ಚು. ಇವರೊಂದಿಗೆ ಲೈಂಗಿಕ ಮಿಲನದೊಂದಿಗೆ ಮೂವರು ಮಹಿಳೆಯರು ಆರು ಮಕ್ಕಳನ್ನು ಹಡೆದಿದ್ದಾರೆ. 12 ದೇಶಗಳಲ್ಲಿ ಇವರ ಸಂತಾನ ಹರಡಿದೆ.

ಇದನ್ನೂ ಓದಿ: ಸಾಲಕ್ಕೆ ಹೆದರಿ ಕವಡೆಕಾಸಿಗೆ ಆ್ಯಪಲ್ ಷೇರು ಮಾರಿದ್ದ ವಾಯ್ನೆ; ಇವತ್ತು ಷೇರುಮೌಲ್ಯ 26 ಲಕ್ಷ ಕೋಟಿ ರೂ

ಚಟಕ್ಕೆ ದಾಸರಾಗದ ದುರೋವ್

ಪಾವೆಲ್ ದುರೋವ್ ಅವರು ಕಳೆದ 20 ವರ್ಷಗಳಿಂದ ಒಮ್ಮೆಯೂ ಮದ್ಯ, ತಂಬಾಕು, ಕಾಫಿ, ಮಾದಕ ವಸ್ತುಗಳನ್ನು ಸೇವಿಸಿಯೇ ಇಲ್ಲವಂತೆ. ಇತ್ತೀಚೆಗೆ ಪ್ರಸಾರವಾದ ಲೆಕ್ಸ್ ಫ್ರಿಡ್​ಮ್ಯಾನ್ (Lix Fridman podcast) ಅವರ ಪೋಡ್​ಕ್ಯಾಸ್ಟ್​ನಲ್ಲಿ ಮಾತನಾಡುತ್ತಾ ದುರೋವ್ ಅವರು, ತಾನು ಚಟಕ್ಕೆ ದಾಸರಾಗುವುದಿಲ್ಲ ಎಂದಿದ್ದಾರೆ.

‘ನಿಮ್ಮ ಸಾಮರ್ಥ್ಯ ಪೂರ್ಣವಾಗಿ ತಲುಪಬೇಕೆಂದರೆ ತಲೆಯಲ್ಲಿ ಸ್ಪಷ್ಟತೆ ಇರಬೇಕು. ಚಟ ಉಂಟು ಮಾಡುವ ವಸ್ತುಗಳಿಂದ ದೂರ ಇರಬೇಕು’ ಎನ್ನುತ್ತಾರೆ.

ಇದನ್ನೂ ಓದಿ: ವಿಶ್ವದ ಐದು ಅತಿಪುರಾತನ ಕಂಪನಿಗಳು ಒಂದೇ ದೇಶದಲ್ಲಿ… ಭಾರತದ ಅತಿಹಳೆಯ 10 ಕಂಪನಿಗಳ ಪಟ್ಟಿ

‘ನೀವು ಆಲ್ಕೋಹಾಲ್ ಸೇವಿಸಿದಾಗ ಮಿದುಳಿನ ಕೋಶಗಳು ನಿಷ್ಕ್ರಿಯಗೊಳ್ಳುತ್ತವೆ. ಅಕ್ಷರಶಃ ಝಾಂಭೀಗಳಾಗಿಬಿಡುತ್ತವೆ. ಪಾರ್ಟಿ ಮುಗಿದ ಬಳಿಕ ಮರುದಿನ ಆ ಕೆಲ ಮಿದುಳು ಕೋಶಗಳು ಸತ್ತು ಹೋಗುತ್ತವೆ. ನಿಮ್ಮ ಯಶಸ್ಸಿನ ಹಾದಿಯಲ್ಲಿ ನಿಮಗಿರುವ ಅತ್ಯುತ್ತಮ ಸಾಧನವೆಂದರೆ ಮಿದುಳು. ತಾತ್ಕಾಲಿಕ ಸುಖಕ್ಕೋಸ್ಕರ ಇಂಥ ಅಮೂಲ್ಯ ಸಾಧನವನ್ನು ಯಾಕೆ ನಾಶ ಮಾಡುತ್ತೀರಿ?’ ಎಂದು ದುರೋವ್ ಅವರು ಕೇಳುತ್ತಾರೆ.

ಫೋನ್ ಬಳಸದ ಟೆಲಿಗ್ರಾಂ ಮಾಲೀಕ

ಪಾವೆಲ್ ದುರೋವ್ ಅವರು ಟೆಲಿಗ್ರಾಂ ಸಿಇಒ ಆಗಿಯೂ ಫೋನ್ ಬಳಕೆ ತೀರಾ ನಗಣ್ಯವಂತೆ. ಟೆಲಿಗ್ರಾಂನ ಹೊಸ ಫೀಚರ್​ಗಳನ್ನು ಪರೀಕ್ಷಿಸಲಷ್ಟೇ ಅವರು ಫೋನ್ ಬಳಸುತ್ತಾರಂತೆ. ವಿದ್ಯಾರ್ಥಿ ದೆಸೆಯಿಂದಲೂ ಅವರು ಫೋನ್​ನಿಂದ ದೂರವೆ ಇರುತ್ತಾರೆ. ಫೋನ್ ನೋಡಿದರೆ ನಿಮ್ಮ ಗುರಿಯಿಂದ ವಿಮುಖರಾಗುತ್ತೀರಿ ಎಂಬುದು ಪಾವೆಲ್ ದುರೋವ್ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ