ಹೊಸ ಉದ್ಯೋಗ ಖಾತ್ರಿ ಸ್ಕೀಮ್; ಮನ್ರೇಗಾ ಬದಲು ವಿ ಬಿ ಜಿ ರಾಮ್ ಜಿ ಇಂದಿನಿಂದ ಅಧಿಕೃತ ಜಾರಿ
VB G RAM G Replaces MGNREGA Scheme: ವಿಕಸಿತ ಭಾರತ ಉದ್ಯೋಗ ಖಾತ್ರಿ ಯೋಜನೆಯಾದ ವಿಬಿ ಜಿ ರಾಮ್ ಜಿ ಇಂದಿನಿಂದ (ಜುಲೈ 1) ಜಾರಿಗೆ ಬಂದಿದೆ. ಇದರೊಂದಿಗೆ 20 ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಮನ್ರೇಗಾ ಯೋಜನೆ ಮುಕ್ತಾಯಗೊಂಡಿದೆ. ಅದರ ಸುಧಾರಿತ ರೂಪವಾದ ಜಿ ರಾಮ್ ಜಿ ಯೋಜನೆಯಲ್ಲಿ ಕೆಲ ಪ್ರಮುಖ ಬದಲಾವಣೆಗಳಿವೆ.

ಮುಖ್ಯಾಂಶಗಳು
- ಉದ್ಯೋಗ ಖಾತ್ರಿ ಯೋಜನೆಯಾದ ವಿಬಿ ಜಿ ರಾಮ್ ಜಿ ಜುಲೈ 1 ಜಾರಿಗೆ ಬಂದಿದೆ.
- 20 ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಮನ್ರೇಗಾ ಯೋಜನೆ ಮುಕ್ತಾಯಗೊಂಡಿದೆ.
- ಅದರ ಸುಧಾರಿತ ರೂಪವಾದ ಜಿ ರಾಮ್ ಜಿ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳಿವೆ.
ನವದೆಹಲಿ, ಜುಲೈ 1: ಎರಡು ದಶಕಗಳ ಹಳೆಯ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (MGNREGA) ಸುಧಾರಿತ ರೂಪವಾದ ವಿಬಿ ಜಿ ರಾಮ್ ಜಿ ಕಾಯ್ದೆ ಇವತ್ತಿನಿಂದ (ಜುಲೈ 1) ಅಧಿಕೃತವಾಗಿ ಜಾರಿಗೆ ಬರುತ್ತಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಭಾರತ ಸರ್ಕಾರವು ಅತ್ಯಂತ ದೊಡ್ಡ ಬದಲಾವಣೆಗಳನ್ನು ತಂದಿದೆ. ಸುಮಾರು 20 ವರ್ಷಗಳ ಇತಿಹಾಸ ಹೊಂದಿರುವ ಮನರೇಗಾ (MGNREGA) ಯೋಜನೆಯ ಜಾಗಕ್ಕೆ ಈಗ ಜಿ ರಾಮ್ ಜಿ (VB- G RAM G – Viksit Bharat- Guarantee for Rozgar and Ajeevika Mission -Gramin) ಕಾಯ್ದೆ ಜಾರಿಗೆ ಬಂದಿದೆ.
ವಿಬಿ ಜಿ ರಾಮ್ ಜಿ ಮೂಲಕ ಮಾಡಲಾಗಿರುವ ಪ್ರಮುಖ ಬದಲಾವಣೆಗಳು
- ಉದ್ಯೋಗ ದಿನಗಳ ಹೆಚ್ಚಳ: ಗ್ರಾಮೀಣ ಕುಟುಂಬಗಳಿಗೆ ನೀಡಲಾಗುತ್ತಿದ್ದ ವಾರ್ಷಿಕ ಕಡ್ಡಾಯ ಉದ್ಯೋಗದ ಅವಧಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ.
- ಗ್ರಾಮ ಯೋಜನೆಗಳಿಗೆ ಆದ್ಯತೆ: ಈ ಹಿಂದೆ ಕಾರ್ಮಿಕರು ಕೆಲಸ ಕೇಳಿದಾಗ ನೀಡಲಾಗುತ್ತಿತ್ತು (Demand-driven). ಆದರೆ ಇನ್ನು ಮುಂದೆ ಉಪಗ್ರಹ ಆಧಾರಿತ ಮ್ಯಾಪಿಂಗ್ (Geospatial mapping) ಬಳಸಿ ಮೊದಲೇ ಸಿದ್ಧಪಡಿಸಲಾದ ಗ್ರಾಮ ಅಭಿವೃದ್ಧಿ ಯೋಜನೆಗಳ ಆಧಾರದ ಮೇಲೆ ಕೆಲಸ ನೀಡಲಾಗುತ್ತದೆ.
- ತಂತ್ರಜ್ಞಾನದ ಬಳಕೆ: ಯೋಜನೆಗಳನ್ನು ಗುರುತಿಸಲು ಮತ್ತು ಅವುಗಳ ಮೇಲ್ವಿಚಾರಣೆ ನಡೆಸಲು ಉಪಗ್ರಹ ಚಿತ್ರಗಳು, ಜಿಐಎಸ್ (GIS) ಮ್ಯಾಪಿಂಗ್ ಮತ್ತು ಡಿಜಿಟಲ್ ಪರಿಕರಗಳನ್ನು ಬಳಸಲಾಗುತ್ತದೆ.
- ಶಾಶ್ವತ ಆಸ್ತಿಗಳ ಸೃಷ್ಟಿ: ಕೇವಲ ತಾತ್ಕಾಲಿಕ ಕೆಲಸಗಳ ಬದಲಾಗಿ ರಸ್ತೆಗಳು, ನೀರಾವರಿ ವ್ಯವಸ್ಥೆಗಳು ಮತ್ತು ಜಲಸಂರಕ್ಷಣೆಯಂತಹ ದೀರ್ಘಕಾಲ ಬಾಳಿಕೆ ಬರುವ ಗ್ರಾಮೀಣ ಮೂಲಸೌಕರ್ಯಗಳನ್ನು ನಿರ್ಮಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ.
- ವಿವಿಧ ಯೋಜನೆಗಳ ಸಮ್ಮಿಲನ: ಒಂದೇ ರೀತಿಯ ಕೆಲಸಗಳು ಪುನರಾವರ್ತನೆಯಾಗುವುದನ್ನು ತಪ್ಪಿಸಲು ಮತ್ತು ದಕ್ಷತೆ ಹೆಚ್ಚಿಸಲು ಇದನ್ನು ಇತರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ಜೋಡಿಸಲಾಗುತ್ತದೆ (Convergence).
ಇದನ್ನೂ ಓದಿ: ನಯಾರದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಭರ್ಜರಿ ಇಳಿಕೆ; ವಿಮಾನ ಇಂಧನವೂ ಅಗ್ಗ
ರಾಜಕೀಯ ಚರ್ಚೆ ಮತ್ತು ಸವಾಲುಗಳು
ಕೇಂದ್ರ ಸರ್ಕಾರವು ಈ ಬದಲಾವಣೆಯಿಂದ ಗ್ರಾಮೀಣ ಆರ್ಥಿಕತೆ ಬಲಗೊಳ್ಳುತ್ತದೆ ಎನ್ನುತ್ತಿದ್ದರೆ, ವಿರೋಧ ಪಕ್ಷಗಳು ಮತ್ತು ಕೆಲವು ರಾಜ್ಯಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಹೊಸ ಕಾನೂನಿನ ಪ್ರಕಾರ ರಾಜ್ಯ ಸರ್ಕಾರಗಳು ವೆಚ್ಚದ ಹೆಚ್ಚಿನ ಪಾಲನ್ನು ಭರಿಸಬೇಕಾಗಬಹುದು, ಇದು ರಾಜ್ಯಗಳ ಆರ್ಥಿಕತೆಯ ಮೇಲೆ ಹೊರೆಯಾಗಬಹುದು ಎಂಬುದು ವಿರೋಧ ಪಕ್ಷಗಳ ವಾದವಾಗಿದೆ. ಅಲ್ಲದೆ, ಮುಂಗಾರು ಮಳೆಯ ಸಮಯದಲ್ಲಿ ಈ ಬದಲಾವಣೆ ತಂದಿರುವುದರಿಂದ ಆರಂಭದಲ್ಲಿ ಯೋಜನೆಗಳ ಅನುಮೋದನೆ ವಿಳಂಬವಾಗಬಹುದು ಎಂಬ ಆತಂಕವೂ ಇದೆ.
ಗ್ರಾಮೀಣ ಕಾರ್ಮಿಕರಿಗೆ ಈಗ 125 ದಿನಗಳ ಕೆಲಸದ ಗ್ಯಾರಂಟಿ ಸಿಗಲಿದೆ, ಆದರೆ ಕೆಲಸ ಸಿಗುವ ಮತ್ತು ಯೋಜನೆಗಳು ರೂಪಿತವಾಗುವ ವಿಧಾನ ಸಂಪೂರ್ಣ ಡಿಜಿಟಲ್ ಹಾಗೂ ವ್ಯವಸ್ಥಿತವಾಗಿ ಬದಲಾಗಲಿದೆ. ಹಿಂದಿನ ಮನ್ರೇಗಾ ಯೋಜನೆಯಲ್ಲಿ ಕೆಲಸದ ಖಾತ್ರಿ ಎಂಬ ಕಾರಣಕ್ಕೆ ಅನಗತ್ಯ ಕೆಲಸಗಳನ್ನು ಸೃಷ್ಟಿಸುವಂತಿತ್ತು ಎನ್ನುವ ಆರೋಪ ಇದೆ. ಆದರೆ, ಹೊಸ ಕಾಯ್ದೆಯು ಅಗತ್ಯ ಕೆಲಸಗಳನ್ನು ಆಧರಿಸಿ ಉದ್ಯೋಗಗಳನ್ನು ಹಂಚಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:23 pm, Wed, 1 July 26




