
ಕೇಂದ್ರ ಸರ್ಕಾರವು 2026ರ ಜುಲೈ 1 ರಿಂದ ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ VB-G RAM G (Viksit Bharat – Guarantee for Rozgar and Ajeevika Mission – Gramin) Act, 2025 ಅನ್ನು ಜಾರಿಗೆ ತಂದಿದೆ. ಎರಡು ದಶಕಗಳಿಂದ ಇದ್ದ ನರೇಗಾ (MGNREGA) ಯೋಜನೆ ಬದಲು ಜಿ ರಾಮ್ ಜಿ ಯೋಜನೆಯನ್ನು ಅಳವಡಿಸಲಾಗಿದೆ. ಹಿಂದಿನ ಸ್ಕೀಮ್ಗಿಂತ ಇದು ಹೆಚ್ಚು ದಿನ ಕೆಲಸ ಮತ್ತು ಹೆಚ್ಚು ವೇತನ ನೀಡುತ್ತದೆ. ಹಳೆಯ ನರೇಗಾ ಯೋಜನೆಯಡಿ (MNREGA) ವರ್ಷಕ್ಕೆ 100 ದಿನಗಳ ಉದ್ಯೋಗ ನೀಡಲಾಗುತ್ತಿತ್ತು. ಆದರೆ ಹೊಸ VB-G RAM G ಕಾಯ್ದೆಯಡಿ, ಪ್ರತಿ ಗ್ರಾಮೀಣ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 125 ದಿನಗಳ ದೈಹಿಕ ಶ್ರಮದ (ಅಕುಶಲ) ಕೆಲಸದ ಕಾನೂನುಬದ್ಧ ಖಾತರಿಯನ್ನು ನೀಡಲಾಗುತ್ತದೆ.
ಪ್ರಸ್ತುತ ಇ-ಕೆವೈಸಿ (e-KYC) ಆಗಿರುವ ಹಳೆಯ ನರೇಗಾ ಜಾಬ್ ಕಾರ್ಡ್‌ಗಳು ಹೊಸ ಕಾರ್ಡ್ ಸಿಗುವವರೆಗೆ ಮಾನ್ಯತೆ ಹೊಂದಿರುತ್ತವೆ. ಹೊಸದಾಗಿ ನೋಂದಾಯಿಸಲು (How to Register) ಅಥವಾ ಕಾರ್ಡ್ ನವೀಕರಿಸಲು ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಬೇಕು.
ಕುಟುಂಬದ 18 ವರ್ಷ ಮೇಲ್ಪಟ್ಟ, ಅಕುಶಲ ದೈಹಿಕ ಕೆಲಸ ಮಾಡಲು ಸಿದ್ಧರಿರುವ ಎಲ್ಲಾ ಸದಸ್ಯರ ವಿವರಗಳು ಮತ್ತು ಆಧಾರ್ ಸಂಖ್ಯೆಯನ್ನು ನೀಡಿ ಅರ್ಜಿ ಸಲ್ಲಿಸಬೇಕು.
ಗ್ರಾಮೀಣ ಉದ್ಯೋಗ ಖಾತರಿ ಕಾರ್ಡ್ (Gramin Rozgar Guarantee Card): ಯಶಸ್ವಿ ನೋಂದಣಿಯ ನಂತರ ಹೊಸ ಡಿಜಿಟಲ್ ಕಾರ್ಡ್ ಅನ್ನು ನೀಡಲಾಗುತ್ತದೆ. ಇದರ ಮೂಲಕ ನೀವು ಕೆಲಸಕ್ಕಾಗಿ ಬೇಡಿಕೆ ಇಡಬಹುದು.
ಜಿ ರಾಮ್ ಜಿ ಯೋಜನೆಯಲ್ಲಿ ಒಂದು ದಿನದ ಕೂಲಿ 300 ರೂನಿಂದ 450 ರೂವರೆಗೆ ಇರುತ್ತದೆ. ಕರ್ನಾಟಕದಲ್ಲಿ ದಿನಕ್ಕೆ 385 ರೂ ವೇತನ ನಿಗದಿಯಾಗಿದೆ. ಅಂದರೆ, ವರ್ಷಕ್ಕೆ 125 ದಿನದ ಕೆಲಸಕ್ಕೆ ಕನಿಷ್ಠ 48,000 ರೂ ಸಂಪಾದಿಸುವ ಅವಕಾಶ ಇರುತ್ತದೆ. ಒಂದು ಕುಟುಂಬಕ್ಕೆ ಒಂದೇ ಜಾಬ್ ಕಾರ್ಡ್ ಸಿಗುವುದು. ಕುಟುಂಬದಲ್ಲಿ ಕೆಲಸ ಮಾಡುವ ಜನರ ಸಂಖ್ಯೆ ಹೆಚ್ಚು ಇದ್ದರೂ ಕನಿಷ್ಠ ಉದ್ಯೋಗ ದಿನಗಳು 125 ದಿನ ಮಾತ್ರವೇ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಹಾಗೆಯೇ, ಕೃಷಿ ಕೆಲಸಗಳು ಇಲ್ಲದ ದಿನಗಳಲ್ಲಿ ಉದ್ಯೋಗಗಳು ಇರುತ್ತವೆ. ಹೀಗಾಗಿ, ಕೃಷಿ ಆದಾಯದ ಜೊತೆಗೆ ಇದು ಹೆಚ್ಚುವರಿ ಆದಾಯವಾಗಿರುತ್ತದೆ.
ಇದನ್ನೂ ಓದಿ: ವಿಬಿ-ಜಿ-ರಾಮ್ ಜಿ ಜಾರಿ: 125 ದಿನ ಕೆಲಸದ ಗ್ಯಾರಂಟಿ ಜೊತೆ ವೇತನ ಹೆಚ್ಚಳ, ಕರ್ನಾಟಕದಲ್ಲಿ ಎಷ್ಟು?
ಬಿತ್ತನೆ ಮತ್ತು ಕೊಯ್ಲು ಮಾಡುವ ಗರಿಷ್ಠ ಕೃಷಿ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಮಿಕರ ಕೊರತೆಯಾಗದಂತೆ ತಡೆಯಲು ವರ್ಷದಲ್ಲಿ ಗರಿಷ್ಠ 60 ದಿನಗಳ ಕಾಲ ಈ ಯೋಜನೆಯ ಕೆಲಸಗಳಿಗೆ ವಿರಾಮ (Agriculture Pause) ನೀಡಲು ರಾಜ್ಯಗಳಿಗೆ ಅವಕಾಶವಿದೆ. ಆದರೆ, ಉಳಿದ 305 ದಿನಗಳಲ್ಲಿ ಕಾರ್ಮಿಕರಿಗೆ ಪೂರ್ಣ 125 ದಿನಗಳ ಕೆಲಸವನ್ನು ಖಚಿತಪಡಿಸಲಾಗುತ್ತದೆ.
ಈ ಯೋಜನೆಯು ಸಂಪೂರ್ಣವಾಗಿ ಬೇಡಿಕೆ ಆಧಾರಿತವಾಗಿದೆ (Demand-driven). ಅಂದರೆ ನೀವು ಕೆಲಸ ಕೇಳಿದ 15 ದಿನಗಳ ಒಳಗಾಗಿ ಸರ್ಕಾರ ನಿಮಗೆ ಕೆಲಸ ನೀಡಲೇಬೇಕು.
ನಿರುದ್ಯೋಗ ಭತ್ಯೆ: ಒಂದು ವೇಳೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಸರ್ಕಾರ ಕೆಲಸ ನೀಡಲು ವಿಫಲವಾದರೆ, ಕಾರ್ಮಿಕರಿಗೆ ದೈನಂದಿನ ನಿರುದ್ಯೋಗ ಭತ್ಯೆಯನ್ನು (Daily Unemployment Allowance) ನೀಡಲಾಗುತ್ತದೆ. ಇದರ ಸಂಪೂರ್ಣ ಆರ್ಥಿಕ ಹೊರೆಯನ್ನು ಆಯಾ ರಾಜ್ಯ ಸರ್ಕಾರಗಳು ಹೊರಬೇಕಾಗುತ್ತದೆ.
ವೇತನ ವಿಳಂಬಕ್ಕೆ ಪರಿಹಾರ: ಕೆಲಸ ಮುಗಿದ 15 ದಿನಗಳ ಒಳಗಾಗಿ ಅಥವಾ ವಾರಕ್ಕೊಮ್ಮೆ ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ (DBT ಮೂಲಕ) ಜಮಾ ಮಾಡಬೇಕು. ಒಂದು ವೇಳೆ ವೇತನ ಪಾವತಿ ವಿಳಂಬವಾದರೆ, ಅದಕ್ಕೆ ಕಾನೂನುಬದ್ಧವಾಗಿ ಬಡ್ಡಿ ಸಮೇತ ವಿಳಂಬ ಪರಿಹಾರವನ್ನು (Delay Compensation) ಕಾರ್ಮಿಕರಿಗೆ ಪಾವತಿಸಬೇಕಾಗುತ್ತದೆ.
ಕೆಲಸದ ಸ್ಥಳವು ನಿಮ್ಮ ವಾಸಸ್ಥಳದಿಂದ 5 ಕಿಮೀ ವ್ಯಾಪ್ತಿಯೊಳಗೆ ಇರಬೇಕು. ಒಂದು ವೇಳೆ, 5 ಕಿಮೀಗಿಂತ ಹೆಚ್ಚು ದೂರ ಇದ್ದರೆ ಶೇ. 10ರಷ್ಟು ಹೆಚ್ಚು ವೇತನ ನೀಡಲಾಗುತ್ತದೆ.
ನೀವು ಕೆಲಸಕ್ಕೆ ಅರ್ಜಿ ಸಲ್ಲಿಸಿ 15 ದಿನದೊಳಗೆ ನಿಮಗೆ ಕೆಲಸ ನಿಯೋಜನೆಯಾಗುತ್ತದೆ. ಆ ರೀತಿ ಸಿಕ್ಕ ಕೆಲಸಕ್ಕೆ ಹೋಗದಿದ್ದರೆ ಅದನ್ನು ಗೈರು ಎಂದು ಪರಿಗಣಿಸಲಾಗುತ್ತದೆ. ನೀವು ಎಷ್ಟು ದಿನ ಆ ರೀತಿ ಗೈರಾಗಿರುತ್ತೀರಿ, ಅಷ್ಟು ದಿನಕ್ಕೆ ನಿರುದ್ಯೋಗ ಭತ್ಯೆ ಅಥವಾ ಪರಿಹಾರವನ್ನು ಕ್ಲೇಮ್ ಮಾಡಲು ಆಗುವುದಿಲ್ಲ.
ಇದನ್ನೂ ಓದಿ: ಹೊಸ ಉದ್ಯೋಗ ಖಾತ್ರಿ ಸ್ಕೀಮ್; ಮನ್ರೇಗಾ ಬದಲು ವಿ ಬಿ ಜಿ ರಾಮ್ ಜಿ ಇಂದಿನಿಂದ ಅಧಿಕೃತ ಜಾರಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Fri, 3 July 26