AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇತ್ತ ಅಧ್ಯಕ್ಷರ ಸೆರೆ, ಅತ್ತ ವೆನೆಜುವೆಲಾ ಮಾರುಕಟ್ಟೆ ಹಿಗ್ಗು; ಕುಸಿಯಬೇಕಿದ್ದ ಷೇರುಪೇಟೆ ಹಿರಿಹಿರಿ ಹಿಗ್ಗುತ್ತಿರುವುದೇಕೆ?

Venezuela stock market rise 17pc in one day: ಅಮೆರಿಕ ಕಳೆದ ವಾರ ವೆನೆಜುವೆಲಾ ಅಧ್ಯಕ್ಷರನ್ನು ಸೆರೆಹಿಡಿದು ತನ್ನ ದೇಶಕ್ಕೆ ಸಾಗಿಸಿದೆ. ಇದರ ಬೆನ್ನಲ್ಲೇ ಸೋಮವಾರದ ಟ್ರೇಡಿಂಗ್​ನಲ್ಲಿ ವೆನೆಜುವೆಲಾದ ಷೇರು ಮಾರುಕಟ್ಟೆ ಶೇ. 17ರಷ್ಟು ಏರಿಕೆ ಕಂಡಿದೆ. ಆಡಳಿತ ಬದಲಾವಣೆಯಾಗಿ, ದೇಶದ ಆರ್ಥಿಕತೆಯಲ್ಲೂ ಪರಿವರ್ತನೆ ಆಗಬಹುದು ಎನ್ನುವ ನಿರೀಕ್ಷೆ ಹುಟ್ಟಿದೆ.

ಇತ್ತ ಅಧ್ಯಕ್ಷರ ಸೆರೆ, ಅತ್ತ ವೆನೆಜುವೆಲಾ ಮಾರುಕಟ್ಟೆ ಹಿಗ್ಗು; ಕುಸಿಯಬೇಕಿದ್ದ ಷೇರುಪೇಟೆ ಹಿರಿಹಿರಿ ಹಿಗ್ಗುತ್ತಿರುವುದೇಕೆ?
ವೆನೆಜುವೆಲಾ ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 06, 2026 | 3:05 PM

Share

ನ್ಯೂಯಾರ್ಕ್, ಜನವರಿ 6: ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮೆಡುರೊರನ್ನು (Nicolas Maduro) ಅಮೆರಿಕ ಸೆರೆ ಹಿಡಿದ ಬೆನ್ನಲ್ಲೇ ಆ ದೇಶದ ಮಾರುಕಟ್ಟೆ ಜಿಗಿಜಿಗಿದಾಡತೊಡಗಿದೆ. ವೆನೆಜುವೆಲಾದ ಕ್ಯಾರಕಾಸ್ ಸ್ಟಾಕ್ ಎಕ್ಸ್​ಚೇಂಜ್ ಜನವರಿ 5ರಂದು ಒಂದೇ ದಿನ ಶೇ. 17ರಷ್ಟು ಏರಿದೆ. ಅಧ್ಯಕ್ಷರ ನಿರ್ಗಮನದ ಸುದ್ದಿಗೆ ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವಂತೆ ಕಾಣುತ್ತಿದೆ. ಜನವರಿ 5ರಂದು ಕ್ಯಾರಕಾಸ್ ಸ್ಟಾಕ್ ಎಕ್ಸ್​ಚೇಂಜ್​ನ (Carcas stock exchange) ಸೂಚ್ಯಂಕವು 2,597.7 ಅಂಕಗಳೊಂದಿಗೆ ಟ್ರೇಡಿಂಗ್ ಮುಗಿಸಿತು. ಒಂದು ದಿನದಲ್ಲಿ ಶೇ. 16.45ರಷ್ಟು ಏರಿಕೆ ಆಗಿದೆ. ಹಲವು ವರ್ಷಗಳಲ್ಲಿ ಒಂದು ದಿನದಲ್ಲಿ ಕಂಡ ಅತಿದೊಡ್ಡ ಹೆಚ್ಚಳ ಇದು.

ವೆನೆಜುವೆಲಾದ ಬಿವಿಸಿ (ಬೋಲ್ಸಾ ಡೀ ವೆಲೋರೆಸ್ ಡೀ ಕ್ಯಾರಕಾಸ್) ದಕ್ಷಿಣ ಅಮೆರಿಕದಲ್ಲೇ ಅತ್ಯಂತ ಚಿಕ್ಕ ಷೇರುಪೇಟೆ ಎನಿಸಿದೆ. ಇದರಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಸಂಖ್ಯೆ ಕೇವಲ 15 ಮಾತ್ರ. ಕಳೆದ ವರ್ಷದ ಅಂಕಿ ಅಂಶ ತೆಗೆದುಕೊಂಡರೆ ಇಲ್ಲಿ ದಿನಕ್ಕೆ ನಡೆಯುವ ಟ್ರೇಡಿಂಗ್ ಮೌಲ್ಯ 1 ಮಿಲಿಯನ್ ಡಾಲರ್ ಕೂಡ ಇಲ್ಲ. ಅಂದರೆ ಸುಮಾರು 9 ಕೋಟಿ ರೂನಷ್ಟು ಮಾತ್ರವೇ ಷೇರುಗಳ ಟ್ರೇಡಿಂಗ್ ಒಂದು ದಿನದಲ್ಲಿ ನಡೆಯುವುದು. ಆದರೂ ಕೂಡ ಒಂದು ದಿನದಲ್ಲಿ ಶೇ. 17ರಷ್ಟು ಏರಿಕೆ ಆಗಿರುವುದು ಗಮನಾರ್ಹ ಸಂಗತಿ.

ಇದನ್ನೂ ಓದಿ: ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್ ಹೊಂದಿರುವ ವಿಶ್ವದ ಮೊದಲ ಸೇನೆ ಭಾರತದ್ದು; ಏನಿದರ ವಿಶೇಷತೆ?

ವೆನೆಜುವಲಾ ಮಾರುಕಟ್ಟೆ ಖುಷಿಯಾಗಿದೆಯಾ?

ಅಸಮರ್ಪಕ ಆಡಳಿತ ನಿರ್ವಹಣೆ ಸೇರಿದಂತೆ ವಿವಿಧ ಕಾರಣಗಳಿಗೆ ವೆನಿಜುವೆಲಾದ ಆರ್ಥಿಕತೆ ಬಹಳ ಹೀನಾಯ ಸ್ಥಿತಿಯಲ್ಲಿದೆ. ಆದಾಯ ಹರಿವು ಸಂಕುಚಿತಗೊಂಡು, ಸಾಲ ಸೋಲ ವಿಪರೀತ ಮಾಡಿಕೊಂಡಿದೆ. ಅಮೆರಿಕದ ನಿರ್ಬಂಧದಿಂದಾಗಿ ಆ ದೇಶಕ್ಕೆ ಹೊಸ ಹೂಡಿಕೆಗಳು ವಿರಳವಾಗಿವೆ. ಬಾಂಡ್​ಗಳ ಹಣ (ಸಾಲ) ಮರುಪಾವತಿಸಲೂ ಸರ್ಕಾರಕ್ಕೆ ಹಣ ಇಲ್ಲದಂತಾಗಿದೆ.

ಇಂಥ ಪರಿಸ್ಥಿತಿಯಲ್ಲಿ, ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮೆಡುರೊರನ್ನು ಅಮೆರಿಕ ಸೆರೆ ಹಿಡಿದು ಕರೆದೊಯ್ದಿರುವ ಬೆಳವಣಿಗೆಯನ್ನು ಅಲ್ಲಿಯ ವ್ಯಾಪಾರ ವಲಯ ಸಕಾರಾತ್ಮಕವಾಗಿ ಪರಿಗಣಿಸಿರಬಹುದು. ಬೇರೆ ಆಡಳಿತ ಬಂದು, ನಿರ್ಬಂಧಗಳು ತೆರವುಗೊಂಡು, ಹೊಸ ಹೂಡಿಕೆಗಳು ಹರಿದು ಬಂದರೆ ಆರ್ಥಿಕತೆಗೆ ಪುಷ್ಟಿ ಸಿಗಬಹುದು ಎನ್ನುವ ನಿರೀಕ್ಷೆ ಉದ್ಯಮ ವಲಯದಲ್ಲಿದೆ.

ಇದನ್ನೂ ಓದಿ: ತೈಲಸಮೃದ್ಧ ವೆನಿಜುವೆಲಾ ಮೇಲೆ ಅಮೆರಿಕ ದಾಳಿ; ಭಾರತಕ್ಕೆ ಎಷ್ಟು ನಷ್ಟ?

ಅಪಾರ ತೈಲ ಸಂಪತ್ತಿದ್ದರೂ ವೆನೆಜುವೆಲಾಗೆ ಯಾಕೆ ಈ ದುಸ್ಥಿತಿ?

ವೆನೆಜುವೆಲಾದ ಆರ್ಥಿಕತೆಯು ತೈಲದಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಿದೆ. ಪರ್ಯಾಯ ಉದ್ಯಮಗಳನ್ನು ಬೆಳೆಸಲಿಲ್ಲ. ಸರ್ಕಾರ ವಿಪರೀತ ಖರ್ಚು ಮಾಡಿತು. ನೋಟುಗಳನ್ನು ಮನಬಂದಂತೆ ಪ್ರಿಂಟ್ ಮಾಡಿತು. ಪರಿಣಾಮವಾಗಿ ವಿಪರೀತ ಹಣದುಬ್ಬರವಾಯಿತು. ಖಾಸಗಿ ಕಂಪನಿಗಳಿಗೆ ಕಡಿವಾಣ ಹಾಕಿ, ಸರ್ಕಾರವೇ ಅವುಗಳನ್ನು ನಡೆಸತೊಡಗಿತು. ಉತ್ಪಾದನೆ ಕುಂಠಿತಗೊಂಡಿತು.

ತೈಲದಿಂದ ಬಂದ ಹಣವನ್ನು ಹೊಸ ತಂತ್ರಜ್ಞಾನ ಅಭಿವೃದ್ಧಿಗೂ ತೊಡಗಿಸಲಿಲ್ಲ. ಸಬ್ಸಿಡಿ ಮತ್ತಿತರ ಯೋಜನೆಗಳಿಗೆ ಹೆಚ್ಚಿನ ಹಣ ಹೋಯಿತು. ತೈಲ ಬೆಲೆ ಕಡಿಮೆ ಆಗತೊಡಗಿದಂತೆ ಅದರ ಆರ್ಥಿಕತೆ ತೀರಾ ಚಿಂತಾಜನಕ ಸ್ಥಿತಿ ತಲುಪಿತು. ಜೊತೆಗೆ, ಅಮೆರಿಕದ ನಿಷೇಧದ ಬರೆಯೂ ವೆನೆಜುವೆಲಾವನ್ನು ಜರ್ಝರಿತಗೊಳಿಸಿದೆ. ಈಗ ಅಲ್ಲಿಯ ಪರಿಸ್ಥಿತಿ ಬದಲಾವಣೆ ಆಗುವ ಸಾಧ್ಯತೆ ಕಾಣುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ