PF Rules: ಇಪಿಎಫ್ ಅಕೌಂಟ್ ನಿಷ್ಕ್ರಿಯಗೊಳ್ಳುವುದು ಯಾವಾಗ? 40 ವರ್ಷಕ್ಕೆ ಕೆಲಸ ಬಿಟ್ಟರೂ ಬಡ್ಡಿ ಸಿಗುವುದು ಮುಂದುವರಿಯುತ್ತಾ?

ಇಪಿಎಫ್​ಒ ನಿಯಮಗಳ ಪ್ರಕಾರ ಇಪಿಎಫ್ ಅಕೌಂಟ್​ಗೆ ಮೂರು ವರ್ಷ ಉದ್ಯೋಗಿಯಿಂದ ಕೊಡುಗೆ ಬಂದಿಲ್ಲವಾದಲ್ಲಿ ನಿಷ್ಕ್ರಿಯ ಅಕೌಂಟ್ ಎನಿಸುತ್ತದೆ. ಆದರೆ, ಹಾಗಂತ ಆ ಇನಾಪರೇಟಿವ್ ಅಕೌಂಟ್​ಗೆ ಬಡ್ಡಿ ಸಂದಾಯ ನಿಲ್ಲುತ್ತದೆ ಎಂದಿಲ್ಲ. ಉದ್ಯೋಗಿಯ ವಯಸ್ಸು 58 ವರ್ಷ ಆಗುವವರೆಗೂ ಬಡ್ಡಿ ಪ್ರಾಪ್ತಿ ಆಗುತ್ತಲೇ ಇರುತ್ತದೆ.

PF Rules: ಇಪಿಎಫ್ ಅಕೌಂಟ್ ನಿಷ್ಕ್ರಿಯಗೊಳ್ಳುವುದು ಯಾವಾಗ? 40 ವರ್ಷಕ್ಕೆ ಕೆಲಸ ಬಿಟ್ಟರೂ ಬಡ್ಡಿ ಸಿಗುವುದು ಮುಂದುವರಿಯುತ್ತಾ?
ಇಪಿಎಫ್
Image Credit source: Getty Images

Updated on: Sep 04, 2026 | 7:00 PM

ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯು ದೇಶದ ಕಾರ್ಮಿಕರು ಮತ್ತು ಉದ್ಯೋಗಿಗಳಿಗೆ ಬಹಳ ಒಳ್ಳೆಯ ಸೇವಿಂಗ್ಸ್ ಮತ್ತು ದೀರ್ಘಕಾಲೀನ ಹೂಡಿಕೆ ಸ್ಕೀಮ್ ಎನಿಸಿದೆ. ಇಲ್ಲಿ ಉದ್ಯೋಗಿಗಳ ಮೂಲವೇತನದ ಶೇ. 12ರಷ್ಟು ಹಣ ಹಾಗು ಕಂಪನಿ ವತಿಯಿಂದ ಅಷ್ಟೇ ಹಣ, ಜೊತೆಗೆ ಸರ್ಕಾರದ ವತಿಯಿಂದ ವಾರ್ಷಿಕವಾಗಿ ಬಡ್ಡಿ ಸಿಗುತ್ತದೆ. ಈ ಮೂಲಕ ಇಪಿಎಫ್ ನಿಧಿಯಲ್ಲಿರುವ ಹಣ ದೊಡ್ಡ ಮೊತ್ತವಾಗಿ ಬೆಳೆಯುತ್ತದೆ. ಸದ್ಯ, ಸರ್ಕಾರದ ಉಳಿತಾಯ ಸ್ಕೀಮ್​ಗಳಲ್ಲಿ ಅತಿ ಹೆಚ್ಚು ಬಡ್ಡಿ ಇರುವ ಯೋಜನೆಗಳಲ್ಲಿ ಇಪಿಎಫ್ ಇದೆ. ಇದೇ ವೇಳೆ, ಇಪಿಎಫ್ ಅಕೌಂಟ್ ಕುರಿತು ಕೆಲವಿಷ್ಟು ತಪ್ಪು ತಿಳಿವಳಿಕೆಗಳು ಈಗಲೂ ಇವೆ. ಇವುಗಳಲ್ಲಿ ಇನಾಪರೇಟಿವ್ ಅಕೌಂಟ್​ನ ಕುರಿತಾದ ತಪ್ಪು ಮಾಹಿತಿಯೂ ಒಂದು.

ಇಪಿಎಫ್ ಅಕೌಂಟ್​ಗೆ ಉದ್ಯೋಗಿ ಮತ್ತು ಕಂಪನಿ ವತಿಯಿಂದ ಮೂರು ವರ್ಷಗಳಿಂದ ಕೊಡುಗೆ ಬರುತ್ತಿಲ್ಲವಾದಲ್ಲಿ ಅದು ಇನಾಪರೇಟಿವ್ ಅಥವಾ ನಿಷ್ಕ್ರಿಯ ಅಕೌಂಟ್ ಎನಿಸುತ್ತದೆ ಎನ್ನುವ ಒಂದು ಮಾತು ಸದಾ ಕೇಳಿಬರುತ್ತಿರುತ್ತದೆ. ಆದರೆ, ಇಪಿಎಫ್​ಒ ಸಂಸ್ಥೆಯ ಪ್ರಕಾರ, ಇದು ಅರ್ಧಸತ್ಯ ಮಾತ್ರ.

ಇದನ್ನೂ ಓದಿ: Post office MIS: ಕೆಲವೇ ಲಕ್ಷ ಹೂಡಿಕೆ, ತಿಂಗಳಿಗೆ 9,250 ರೂವರೆಗೆ ಆದಾಯ; ಇದು ಪೋಸ್ಟ್ ಆಫೀಸ್ MIS ಸ್ಕೀಮ್

ಇಪಿಎಫ್ ಸದಸ್ಯರ ವಯಸ್ಸು 58 ವರ್ಷ ಆಗುವವರೆಗೂ ಅವರ ಎಲ್ಲಾ ನಿಷ್ಕ್ರಿಯ ಮತ್ತು ಸಕ್ರಿಯ ಪಿಎಫ್ ಖಾತೆಗಳಿಗೆ ಸರ್ಕಾರದಿಂದ ಬಡ್ಡಿ ಹಣ ಸಂದಾಯ ಆಗುತ್ತಲೇ ಇರುತ್ತದೆ. ಒಂದು ವೇಳೆ ಒಬ್ಬ ಉದ್ಯೋಗಿ 40ನೇ ವಯಸ್ಸಿನಲ್ಲಿ ಕೆಲಸ ತೊರೆದು, ಮತ್ತೆ ಯಾವ ಕೆಲಸಕ್ಕೂ ಸೇರಿಕೊಳ್ಳದೇ ಹೋದಾಗಲೂ ಆತನ ಇಪಿಎಫ್ ಅಕೌಂಟ್​ಗೆ ಬಡ್ಡಿ ಡೆಪಾಸಿಟ್ ಆಗುತ್ತಿರುತ್ತದೆ.

ಒಂದು ವೇಳೆ, ನಿವೃತ್ತಿ ವಯಸ್ಸು 58 ಅಲ್ಲ, 60 ವರ್ಷ ಎಂದಾಗ, ಅಲ್ಲಿಯವರೆಗೂ ಅಕೌಂಟ್​ಗೆ ಬಡ್ಡಿ ಸಿಗುತ್ತಾ ಹೋಗುತ್ತದೆ.

ಈ ಮೂರು ವರ್ಷ ಕೊಡುಗೆರಹಿತ ಇಪಿಎಫ್ ಅಕೌಂಟ್ ಇನಾಪರೇಟಿವ್ ಆಗುವ ನಿಯಮ ಇರುವುದು ನಿಜವೇ. ಆದರೆ, 58 ವರ್ಷದವರೆಗೂ ಬಡ್ಡಿ ಪ್ರಾಪ್ತಿಯಾಗುವ ನಿಯಮವೂ ಒಟ್ಟಿಗೆ ಇದೆ. ಹೀಗಾಗಿ, ಸದ್ಯಕ್ಕೆ ಹಳೆಯ ಇಪಿಎಫ್ ಅಕೌಂಟ್​ಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇದ್ದಂತಿಲ್ಲ. ಆದರೂ ಕೂಡ ನಿಮ್ಮ ಹಳೆಯ ಇಪಿಎಫ್ ಅಕೌಂಟ್​ಗಳಿದ್ದಲ್ಲಿ, ಅವನ್ನು ಈಗಿರುವ ಸಕ್ರಿಯ ಅಕೌಂಟ್​ಗೆ ವಿಲೀನ ಮಾಡಿಸಿಕೊಳ್ಳುವುದು ಮುನ್ನೆಚ್ಚರಿಕೆಯ ಕ್ರಮವೆನಿಸೀತು.

ಇದನ್ನೂ ಓದಿ: ಸಾಲಕ್ಕೆ ಶೂರಿಟಿ ನೀಡುವುದರಿಂದ ಏನು ಸಮಸ್ಯೆ? ಸಾಲ ತೀರಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ?

ಇಪಿಎಫ್​ನಿಂದ ಕೋಟಿ ಕಾರ್ಪಸ್ ನಿರ್ಮಿಸುವುದು ಹೇಗೆ?

ನಿಮ್ಮ ಮೂಲವೇತನ 50,000 ರೂ ಇದ್ದು ನಿಮ್ಮ ವಯಸ್ಸು 30 ವರ್ಷ ಆಗಿದೆ ಎಂದಿಟ್ಟುಕೊಳ್ಳೋಣ. ಸಂಬಳ ವರ್ಷಕ್ಕೆ 5 ವರ್ಷ ಏರಿತು ಎಂದೂ ನಿರೀಕ್ಷಿಸೋಣ. ಆಗ ನೀವು 58 ವರ್ಷಕ್ಕೆ ನಿವೃತ್ತರಾದಾಗ ಇಪಿಎಫ್ ಕಾರ್ಪಸ್ ಬರೋಬ್ಬರಿ ಎರಡೂವರೆ ಕೋಟಿ ರೂ ಆಗಿರುತ್ತದೆ. ಅಂದರೆ 28 ವರ್ಷಗಳ ಕಾಲ ನಿರಂತರವಾಗಿ ಆದ ಹೂಡಿಕೆಯು ಬಹಳ ವಿಸ್ಮಯ ಎನಿಸುವ ರೀತಿಯಲ್ಲಿ ಸಂಪತ್ತು ಸೃಷ್ಟಿಸುತ್ತದೆ. ಒಂದು ವೇಳೆ, ವಾಲಂಟ್ರಿ ಪಿಎಫ್ ಸ್ಕೀಮ್​ನ ಉಪಯೋಗ ಮಾಡಿಕೊಂಡು ಶೇ. 12ಕ್ಕಿಂತಲೂ ಹೆಚ್ಚಿನ ಪ್ರಮಾಣದ ಹಣವನ್ನು ಇಪಿಎಫ್​ಗೆ ಸೇರಿಸಿದರೆ ಇನ್ನೂ ಹೆಚ್ಚಿನ ಮೊತ್ತದ ಕಾರ್ಪಸ್ ನಿಮ್ಮದಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us