ಸೂಟ್‌ಕೇಸ್‌ನಲ್ಲಿ ಬಾಲಕಿ ಶವ ಕೇಸ್: ಬೆಂಗಳೂರು-ಬಿಹಾರ, ತನಿಖೆಯ ರೋಚಕತೆ ಬಿಚ್ಚಿಟ್ಟ SP
ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಬಾಲಕಿಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಬಿಹಾರ ಮೂಲದ ಏಳು ಮಂದಿಯನ್ನು ಬಂಧಿಸಲಾಗಿದೆ. ಪೊಲೀಸರು ಬಾಲಕಿಯ ತಂದೆಯ ಕರೆ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಅತ್ಯಾಚಾರ ಮತ್ತು ಕೊಲೆಯ ನಂತರ ಶವವನ್ನು ಸೂಟ್‌ಕೇಸ್‌ನಲ್ಲಿ ಎಸೆಯಲಾಗಿದೆ ಎಂದು ಬಹಿರಂಗವಾಗಿದೆ. ಆರೋಪಿಗಳು ಬಿಹಾರಕ್ಕೆ ಪರಾರಿಯಾಗಿದ್ದರೂ, ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಬೆಂಗಳೂರು, ಜೂನ್ 09: ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಹಳೇ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದ್ದ ಅಪರಿಚಿತ ಬಾಲಕಿಯ ಶವ ಪ್ರಕರಣವನ್ನು ಸೂರ್ಯನಗರ ಠಾಣಾ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಸೂರ್ಯನಗರ ಠಾಣಾ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ? ಬೆಂಗಳೂರು ಟು ಬಿಹಾರ ಪೊಲೀಸರ ಕಾರ್ಯಾಚರಣೆಗೆ ಹೇಗಿತ್ತು ಎಂಬುವುದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬಿಹಾರ ಮೂಲದ ಆರೋಪಿಗಳಾದ ಅಶಿಕ್ ಕುಮಾರ್ (22) ಮುಖೇಶ್ ರಾಜಬನ್ಶಿ (35), ಇಂದುದೇವಿ (32) ರಾಜರಾಮ್ ಕುಮಾರ್ (18) ಪಿಂಟು ಕುಮಾರ್ (18), ಕಾಲು ಕುಮಾರ್(17) ರಾಜು ಕುಮಾರ್(17) ಬಂಧಿತರು. ಪ್ರಕರಣದ ಎ1 ಅಶಿಕ್ ಕುಮಾರ್ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿದ್ದಾನೆ. ನಂತರ ಎಲ್ಲರೂ ಸೇರಿಕೊಂಡು ಬಾಲಕಿಯ ಶವವನ್ನು ಸೂಟಕೇಸ್ನಲ್ಲಿ ಹಾಕಿ ರೈಲ್ವೆ ಹಳಿ ಪಕ್ಕದಲ್ಲಿ ಎಸೆದು ಹೋಗಿದ್ದಾರೆ ಎಂಬುವುದನ್ನು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಬಾಲಕಿಯ ತಂದೆಯ ಪೋನ್ ಕಾಲ್ನಿಂದ ಆರೋಪಿಗಳು ಬಲೆಗೆ
“ಮೇ 21 ರಂದು ರೈಲ್ವೆ ಬ್ರಿಡ್ಜ್ ಬಳಿ ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಸೂಟ್‌ಕೇಸ್‌ನಲ್ಲಿ 17 ರಿಂದ 18 ವರ್ಷದ ಮಹಿಳೆಯ ಶವ ಎಂದು ಅಂದಾಜಿಸಲಾಯ್ತು. ರೈಲಿನಿಂದ ಸೂಟ್ ಕೇಸ್ ಬಿಸಾಡಿರಬಹುದೆಂಬ ಅನುಮಾನ ಇತ್ತು. ಆಗ, ಯುವತಿಯ ಗುರುತು ಪತ್ತೆ ಆಗಿರಲಿಲ್ಲ. ಈ ಪ್ರಕರಣದ ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿತ್ತು” ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ತಿಳಿಸಿದರು.
“ಮಹಿಳೆಯ ಶವ ಪತ್ತೆಯಾದ ಬಗ್ಗೆ ಎಲ್ಲ ರಾಜ್ಯಗಳಿಗೂ ಮಾಹಿತಿ ನೀಡಲಾಗಿತ್ತು. ಮೂರು ದಿನದ ಬಳಿಕ ಬಿಹಾರದಿಂದ ಮೃತ ಮಹಿಳೆಯ ತಂದೆಯ ಕರೆ ಬಂತು. ನಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ದೂರು ನೀಡಿದ್ದೇನೆ ಎಂದು ಹೇಳಿದರು. ಅವರನ್ನು ಬೆಂಗಳೂರಿಗೆ ಕರೆಸಿಕೊಂಡೆವು. ಬೆಂಗಳೂರಿಗೆ ಬಂದ ಅವರು ಮೃತಳ ಗುರುತು ಪತ್ತೆ ಹಚ್ಚಿದರು. ಪತ್ತೆಯಾದ ಶವ, ನನ್ನ ಮಗಳದ್ದು (17) ಅವರದ್ದು ಎಂದು ಗುರುತು ಹಿಡಿದರು” ಎಂದರು.
ಬಾಲಕಿಯನ್ನು ಅಪಹರಿಸಿಕೊಂಡು ಬಂದ ವ್ಯಕ್ತಿಯ ಹೆಸರು ಕೂಡ ಗೊತ್ತಾಗಿತ್ತು. ಆಕೆಯೇ ತನ್ನ ಪೋಷಕರಿಗೆ ಈ ವ್ಯಕ್ತಿ ಜೊತೆಗೆ ಬಂದಿರುವುದಾಗಿ ಹೇಳಿದ್ದರು. ಇನ್ನು, ಘಟನೆ ನಡೆದ ಬಳಿಕ ಎಲ್ಲ ಆರೋಪಿಗಳು ಬಿಹಾರಕ್ಕೆ ಹೋಗಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ನಮ್ಮ ಪೊಲೀಸರು ಬಿಹಾರಕ್ಕೆ ತೆರಳಿ ಏಳೂ ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ, ಇಬ್ಬರು ಆ ಬಾಲಕಿಯ ಅಕ್ಕ ಪಕ್ಕದ ಊರಿನವರು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸೂಟ್‌ಕೇಸ್‌ನಲ್ಲಿ ಬಾಲಕಿ ಶವ ಕೇಸ್: ಲೈಂಗಿಕ ಕ್ರಿಯೆಗೆ ಸಹಕರಿಸಿಲ್ಲವೆಂದು ಹತ್ಯೆ, ಆರೋಪಿಗಳ ಬಂಧನ
ವಿವಾಹವಾಗುತ್ತೇನೆ ಎಂದು ಬಾಲಕಿಯನ್ನು ಆರೋಪಿ ಅಶಿಕ್ ಕುಮಾರ್ ಬೆಂಗಳೂರಿಗೆ ಕರೆ ತಂದಿದ್ದಾನೆ. ಆದರೆ, ಈಗಾಗಲೇ ಮದುವೆ ಆಗಿ ಮಕ್ಕಳಿರುವ ವಿಚಾರ ಆ ಹುಡುಗಿಗೆ ವಿಚಾರ ಗೊತ್ತಾಗಿದೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಈ ವೇಳೆ ಆರೋಪಿ ಅಶಿಕ್ ಕುಮಾರ್, ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿ ಮೃತದೇಹವನ್ನು ಹಾಕಿದ್ದಾನೆ. ನಂತರ, ಎಲ್ಲರೂ ಸೇರಿಕೊಂಡು ರೈಲ್ವೆ ಹಳಿ ಬಳಿ ಮೃತದೇಹ ಬಿಸಾಡಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:18 pm, Mon, 9 June 25