ಆತ್ಮಹತ್ಯೆ ಯತ್ನಿಸಿದವನಿಗೆ ಆಸ್ಪತ್ರೆ ಸಿಬ್ಬಂದಿಗಳಿಂದ ನರಕ ದರ್ಶನ; ಕತ್ತಲ ಕೊಣೆಯೊಳಗೆ ಶಿಕ್ಷೆ!
ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಬೆಂಗಳೂರಿನ ಆಸ್ಪತ್ರೆಯೊಂದರ ಸಿಬ್ಬಂದಿಗಳು ನಕರ ದರ್ಶನ ಮಾಡಿದ್ದು, ಕತ್ತಲೆ ಕೋಣೆಯಲ್ಲಿ ಹಲವು ದಿನಗಳವರೆಗೆ ಕೂಡಿಹಾಕಿ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.
ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಆಸ್ಪತ್ರೆ ಸಿಬ್ಬಂದಿಗಳು ನಕರ ದರ್ಶನ ಮಾಡಿದ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದಲ್ಲದೆ ಕತ್ತಲ ಕೋಣೆಯೊಳಗೆ ರೋಗಿಯನ್ನು ಇರಿಸಿ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದು, ಹೆಬಿಯಸ್ ಕಾರ್ಪಸ್ ದಾಖಲಿಸಿದ ಬಳಿಕ ಪೊಲೀಸರು ರೋಗಿಯನ್ನು ಆಸ್ಪತ್ರೆಯಿಂದ ಹೊರತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕೆಂಗೇರಿಯ ಸುಜಯ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿ ಆರ್.ಆರ್. ನಗರದ ಒಲಂಪಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದು, ಇಲ್ಲಿನ ಸಿಬ್ಬಂದಿಗಳು ಈತನಿಗೆ ಚಿತ್ರಹಿಂಸೆ ನೀಡಿದ ಆರೋಪ ಮಾಡಲಾಗಿದೆ. 3 ಲಕ್ಷ 75 ಸಾವಿರ ಬಿಲ್ ಪಾವತಿ ಮಾಡುವಂತೆ ಆಸ್ಪತ್ರೆ ಸಿಬ್ಬಂದಿಗಳು ಸುಜಯ್ಗೆ ಒತ್ತಾಯಿಸಿದ್ದು, ಕತ್ತಲ ಕೋಣೆಯಲ್ಲಿ 18 ದಿನಗಳ ಕಾಲ ಕೂಡಿಹಾಕಿ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾಗಿ ಆರೋಪಿಸಲಾಗಿದೆ.
ತನಗೆ ಚಿತ್ರಹಿಂಸೆ ನೀಡುತ್ತಿರುವ ಬಗ್ಗೆ ಆರಂಭದಲ್ಲಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದರೂ ಪೊಲೀಸರು ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಚಿತ್ರಹಿಂಸೆ ಅನುಭವಿಸುತ್ತಿರುವ ಬಗ್ಗೆ ಸೆಲ್ಫಿ ವಿಡಿಯೋ ಮಾಡಿದ ಸುಜಯ್, ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ, ನಗರ ಪೊಲೀಸ್ ಆಯುಕ್ತಿಗೆ ಇ-ಮೇಲ್ ಮಾಡಿದ್ದಾನೆ. ಹೆಬಿಯಸ್ ಕಾರ್ಪಸ್ ದಾಖಲಿಸಿದ ಬಳಿಕ ಪೊಲೀಸರು ಸುಜಯ್ನನ್ನು ಆಸ್ಪತ್ರೆಯಿಂದ ಹೊರತಂದು ನ್ಯಾಯಾಲಯಕ್ಕೆ ಹಾಜರು ಮಾಡಿದ್ದಾರೆ. ಸದ್ಯ ಸುಜಯ್ ಕತ್ತಲಕೋನೆಯೊಳಗೆ ಕಂಗಲಾಗಿ ಮಾಡಿದ ವಿಡಿಯೋ ಟಿವಿ9ಗೆ ಲಭ್ಯವಾಗಿದೆ.
ಆರೋಪದ ಬಗ್ಗೆ ಆಸ್ಪತ್ರೆ ಸಂಯೋಜಕರಿಂದ ಸ್ಪಷ್ಟನೆ
ಆರ್ಆರ್ ನಗರ ಒಲಂಪಸ್ ಆಸ್ಪತ್ರೆಯಲ್ಲಿ ಸುಜಯ್ ಅಕ್ರಮ ಬಂಧನ ಆರೋಪ ಸಂಬಂಧ ಟಿವಿ9ಗೆ ಸ್ಪಷ್ಟಟನೆ ನೀಡಿದ ಒಲಂಪಸ್ ಆಸ್ಪತ್ರೆ ಸಂಯೋಜಕ ಅಭಿಷೇಕ್, ಒಲಂಪಸ್ ಆಸ್ಪತ್ರೆ ಸಿಬ್ಬಂದಿ ಯಾವುದೇ ರೀತಿಯಲ್ಲಿ ಸುಜಯ್ ಮೇಲೆ ಹಲ್ಲೆ ಮಾಡಿಲ್ಲ. ಅಕ್ರಮ ಬಂಧನದಲ್ಲಿ ಇರಿಸಲೂ ಇಲ್ಲ. ಆಸ್ಪತ್ರೆಯಿಂದ ತೆರಳುವಂತೆ ಸೂಚಿಸಿದ್ದರೂ ಆತ ತೆರಳಿಲ್ಲ. ಆತನ ಪೋಷಕರಿಗೆ ಹಲವು ಬಾರಿ ಕರೆದೋಯ್ಯುವಂತೆ ತಿಳಿಸಲಾಗಿದೆ. ಅವರು ಕೂಡ ಕರೆದೊಯ್ಯಲಿಲ್ಲ. ಶೆಲ್ಟರ್ ಅನ್ನು ರಾತ್ರಿ ವೇಳೆ ಕ್ಲೋಸ್ ಮಾಡುತ್ತಿದ್ದೆವು. ಇದಕ್ಕೆ ಕಾರಣ ಆತ್ಮಹತ್ಯೆ ಯತ್ನ ಮಾಡಿರುವ ಹಿನ್ನೆಲೆ ಟೆರೆಸ್ಗೆ ತೆರಳಬಹುದಾದ ಸಾಧ್ಯತೆ ಇತ್ತು. ಈ ಹಿನ್ನಲೆ ಶೆಲ್ಟರ್ ಕ್ಲೋಸ್ ಮಾಡುತ್ತಿದ್ದೆವು ಎಂದರು.
ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತೇವೆ. ಹಾಗಿದ್ದರೂ ಸುಜಯ್ ನಮಗೆ ಯಾವುದೇ ಬಿಪಿಎಲ್ ಪಡಿತರ ಚೀಟಿಯನ್ನು ನೀಡಿಲ್ಲ. ಆತ ಆಸ್ಪತ್ರೆಗೆ ದಾಖಲಾದ ಕೂಡಲೇ 7 ದಿನಗಳಕಾಲ ತೀವ್ರನಿಘಾ ಘಟಕದಲ್ಲಿ ಚಿಕಿತ್ಸೆ ನೀಡಿದ್ದೇವೆ. ಸಮರ್ಪಕ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದೇವೆ ಎಂದರು.
ಮತ್ತಷ್ಟು ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:09 am, Sat, 17 September 22