ಬಯಲಾಯ್ತು ಬೆಂಗಳೂರು ಮಹಾಲಕ್ಷ್ಮೀ ಕೊಲೆ ರಹಸ್ಯ: ಪ್ರಿಯಕರ ಮುಕ್ತಿರಂಜನ್ ಆಕೆಯ ದೇಹವನ್ನು 57 ಪೀಸ್ ಮಾಡಿದ್ದೇಕೆ?
Bengaluru Mahalaxmi Murder Case: ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಾಲಕ್ಷ್ಮೀಯನ್ನು ಬರ್ಬರವಾಗಿ ಕೊಲೆ ಮಾಡಿ, 57 ತುಂಡು ಮಾಡಿ ಪ್ರೀಜರ್ನಲ್ಲಿ ತುಂಬಲಾಗಿತ್ತು. ಮಹಾಲಕ್ಷ್ಮೀಯನ್ನು ಆರೋಪಿ ಮುಕ್ತಿರಂಜನ್ ರಾಯ್ ಕೊಲೆ ಮಾಡಲು ಕಾರಣವೇನು? ಇಲ್ಲಿದೆ ವಿವರ
ಬೆಂಗಳೂರು, ಅಕ್ಟೋರಬರ್ 05: ಬೆಂಗಳೂರಿನ ವೈಯಾಲಿಕಾವಲ್ ನಿವಾಸಿ ಮಹಾಲಕ್ಷ್ಮೀ ಕೊಲೆ (Bengaluru Mahalaxmi Murder Case) ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ಪ್ರಕರಣದ ತನಿಖೆ ನಡೆಸಿದ ಬೆಂಗಳೂರು ಪೊಲೀಸರು ಕೊಲೆ ಹಿಂದಿನ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ಹಾಗಿದ್ದರೆ, ಆರೋಪಿ ಮುಕ್ತಿರಂಜನ್ ರಾಯ್ ಮಹಾಲಕ್ಷ್ಮೀಯನ್ನು ಕೊಲೆ ಮಾಡಿದ್ದು ಏಕೆ? ಆಕೆಯ ದೇಹವನ್ನು ತುಂಡರಿಸಿದ್ದು ಏಕೆ? ಎಂಬ ಪ್ರಶ್ನೆಗಳಿಗೆ ತನಿಖೆಯಲ್ಲಿ ಉತ್ತರ ಸಿಕ್ಕಿದೆ.
ಮಹಾಲಕ್ಷ್ಮೀ ಎಂಟು ತಿಂಗಳ ಹಿಂದೆ ಪತಿಯ ಜೊತೆ ಜಗಳವಾಡಿ, ನೆಲಮಂಗಲ ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿ, ಕೆಲಸಕ್ಕೆ ಸೇರಿದ್ದಳು. ಮಹಾಲಕ್ಷ್ಮೀ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಮುಕ್ತಿರಂಜನ್ ರಾಯ್ ಫ್ಲೋರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದನು. ದಿನಗಳು ಕಳೆದಂತೆ ಇಬ್ಬರು ಸ್ನೇಹಿತರಾಗಿದ್ದಾರೆ. ಸ್ನೇಹದಲ್ಲಿ ಮುಕ್ತಿರಂಜನ್ ರಾಯ್ ಒಮ್ಮೊಮ್ಮೆ ಮಹಾಲಕ್ಷ್ಮಿಯನ್ನು ಮನೆವರೆಗು ಬಿಟ್ಟು ಹೋಗುತ್ತಿದ್ದನು. ಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿದೆ. ಆದರೆ, ಮಹಾಲಕ್ಷ್ಮೀ ಮಾತ್ರ ತನಗೆ ಈಗಾಗಲೆ ಒಂದು ಮದುವೆಯಾಗಿರುವ ಮತ್ತು ಮಗು ಇರುವ ಬಗ್ಗೆ ಮುಕ್ತಿರಂಜನ್ ರಾಯ್ಗೆ ಹೇಳಿರಲಿಲ್ಲ. ಮುಕ್ತಿರಂಜನ್ ರಾಯ್ ಮದುವೆ ಪ್ರಸ್ತಾಪವನ್ನು ಮಹಾಲಕ್ಷ್ಮೀ ಮುಂದೆ ಇಟ್ಟಿದ್ದಾನೆ. ಮಹಾಲಕ್ಷ್ಮಿಯೂ ಈ ಮದುವೆಗೆ ಒಪ್ಪಿಕೊಂಡಿದ್ದಾಳೆ.
ಇನ್ನು, ಮುಕ್ತಿರಂಜನ್ ರಾಯ್ಗೆ ಇಬ್ಬರು ಸಹೋದರರು ಇದ್ದಾರೆ. ಓರ್ವ ಬೆಂಗಳೂರಿನ ಹೆಬ್ಬಗೋಡಿಯಲ್ಲಿ ಮುಕ್ತಿರಂಜನ್ ರಾಯ್ ಜೊತೆಗೆ ವಾಸವಾಗಿದ್ದನು. ಮತ್ತೋರ್ವ ಒಡಿಶಾದ ಗಂಜಂನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ತನ್ನ ಇಬ್ಬರು ತಮ್ಮಂದಿರ ಬಳಿ ತಾನು ಮದುವೆ ಆಗುತ್ತಿರುವ ಬಗ್ಗೆ ಹೇಳಿದ್ದಾನೆ.
ಮಹಾಲಕ್ಷ್ಮೀಯ ಮೊದಲನೇ ಮದುವೆ ವಿಚಾರ ತಿಳಿದ ಮುಕ್ತಿರಂಜನ್
ಮುಂದಿನ ದಿನಗಳಲ್ಲಿ ಮುಕ್ತಿರಂಜನ್ಗೆ ಮಹಾಲಕ್ಷ್ಮೀ ನಡವಳಿಕೆ ಮೇಲೆ ಅನುಮಾನ ಹುಟ್ಟಿದೆ. ಮಹಾಲಕ್ಷ್ಮೀ ಬೇರೆ ಯುವಕನ ಜೊತೆಗೆ ಸಂಪರ್ಕ ಹೊಂದಿದ್ದಾಳೆ ಎಂದು ಅನುಮಾನಗೊಂಡು, ಒಂದು ದಿನ ಆಕೆಯ ಮೊಬೈಲ್ ಪರಿಶೀಲನೆ ಮಾಡಿದಾಗ, ಆಕೆಗೆ ಮದುವೆಯಾಗಿ ಮಗು ಇರುವ ವಿಚಾರ ಗೊತ್ತಾಗಿದೆ.
ಎಲ್ಲ ವಿಚಾರ ಗೊತ್ತಾದ ಬಳಿಕ ಮುಕ್ತಿರಂಜನ್ ರಾಯ್ ಮಹಾಲಕ್ಷ್ಮಿಯಿಂದ ಅಂತರ ಕಾಯ್ದುಕೊಂಡಿದ್ದಾನೆ. ನಂತರ, ತಾನು ಕೆಲಸ ಮಾಡುವ ಕಂಪನಿಯಲ್ಲೇ ಬೇರೆ ಯುವತಿಯ ಜೊತೆ ಮುಕ್ತಿರಂಜನ್ ರಾಯ್ ಸ್ನೇಹ ಬೆಳಸಿದ್ದಾನೆ. ಇದನ್ನು ಕಂಡ ಮಹಾಲಕ್ಷ್ಮೀ ಆ ಯುವತಿ ಜೊತೆ ಜಗಳವಾಡಿ ಇನ್ಮೇಲೆ ಮುಕ್ತಿರಂಜನ್ ಜೊತೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದಾಳೆ. ಈ ವಿಚಾರ ಗೊತ್ತಾಗಿ ಮುಕ್ತಿರಂಜನ್ ಮಹಾಲಕ್ಷ್ಮಿ ಜೊತೆಗೆ ಜಗಳವಾಡಿದ್ದನು.
ಇದನ್ನೂ ಓದಿ: ಮಹಾಲಕ್ಷ್ಮಿ ಭೀಕರ ಹತ್ಯೆ: ಕೊಲೆ ನಂತರ ಹಂತಕನಿಗೆ ಕಾಡಿತ್ತಾ ಪಾಪ ಪ್ರಜ್ಞೆ?
ಮುಕ್ತಿರಂಜನ್ಗೆ ಬೆದರಿಕೆ ಹಾಕಿದ್ದ ಮಹಾಲಕ್ಷ್ಮೀ
ನೀನು ಮದುವೆ ಆಗಿರುವ ವಿಚಾರ ನನ್ನಿಂದ ಮುಚ್ಚಿಟ್ಟಿದ್ದೆ, ಹೀಗಾಗಿ ನಾನು ನಿನ್ನ ಮದುವೆ ಆಗಲ್ಲ ಎಂದು ಮುಕ್ತಿರಂಜನ್ ರಾಯ್ ಮಹಾಲಕ್ಷ್ಮೀಗೆ ಹೇಳಿದ್ದಾನೆ. ಆಗ ಮಹಾಲಕ್ಷ್ಮೀ ನನ್ನ ಪತಿಗೆ ವಿಚ್ಛೇದನ ನೀಡುತ್ತೇನೆ ಎಂದು ಹೇಳಿದ್ದಾಳೆ. ಒಂದು ವೇಳೆ ನೀನು ನನ್ನ ಮದುವೆ ಆಗಿಲ್ಲ ಅಂದ್ರೆ ಪೊಲೀಸರಿಗೆ ದೂರು ನೀಡುತ್ತೇನೆ ಅಂತ ಮಹಾಲಕ್ಷ್ಮೀ ಮುಕ್ತಿರಂಜನ್ ರಾಯ್ಗೆ ಬೆದರಿಕೆ ಹಾಕಿದ್ದಾಳೆ. ಇದರಿಂದ ಮುಕ್ತಿರಂಜನ್ ರಾಯ್ ಸುಮ್ಮನಾಗಿದ್ದಾನೆ.
ಒಂದಾದ ಪ್ರೇಮಿಗಳು
ಮಹಾಲಕ್ಷ್ಮೀ ಕೊಲೆಯಾದ ಹಿಂದಿನ ದಿನ ಮುಕ್ತಿರಂಜನ್ಗೆ ವಾರದ ರಜೆ ಇತ್ತು. ಹೀಗಾಗಿ, ಮಹಾಲಕ್ಷ್ಮೀ ಹೆಬ್ಬಗೋಡಿಯಲ್ಲಿನ ಮುಕ್ತಿರಂಜನ್ ಮನೆಗೆ ಹೋಗಿದ್ದಳು. ಮಹಾಲಕ್ಷ್ಮೀ ಎಷ್ಟೇ ಬಾಗಿಲು ಬಡಿದರೂ ಮುಕ್ತಿರಂಜನ್ ರಾಯ್ ತೆಗೆಯಲಿಲ್ಲ. ಕೊನೆಗೆ ಮಹಾಲಕ್ಷ್ಮಿ ಮಾತಿಗೆ ಮಣಿದು ಮುಕ್ತಿರಂಜನ್ ಬಾಗಿಲು ತೆರೆದಿದ್ದಾನೆ. ಇಲ್ಲಿ, ಇಬ್ಬರೂ ಕೂತು ಮಾತನಾಡಿ ಕಾಂಪ್ರಮೈಸ್ ಆಗಿದ್ದಾರೆ. ಆಗಿದ್ದು ಆಗೋಯ್ತು ಇನ್ಮುಂದೆ ಚೆನ್ನಾಗಿ ಇರೋಣ ಅಂತ ನಿರ್ಧಾರಕ್ಕೆ ಬಂದಿದ್ದಾರೆ.
ಇಬ್ಬರ ನಡುವೆ ಜಗಳ ಕೊಲೆಯಲ್ಲಿ ಅಂತ್ಯ
ಅಂದು ರಾತ್ರಿ ಮಹಾಲಕ್ಷ್ಮಿ ಮುಕ್ತಿರಂಜನ್ ಜೊತೆಗೆ ಉಳಿದುಕೊಂಡಿದ್ದಾಳೆ. ಮರುದಿನ ಇಬ್ಬರೂ ವಾಪಾಸ್ ವೈಯಾಲಿಕಾವಲ್ ಮಹಾಲಕ್ಷ್ಮಿ ರೂಮ್ಗೆ ಬಂದಿದ್ದಾರೆ. ಅಂದು ರಾತ್ರಿ ಮತ್ತೆ ಇಬ್ಬರ ಮಧ್ಯೆ ಜಗಳವಾಗಿದೆ. ಜಗಳದ ನಡುವೆ ಮಹಾಲಕ್ಷ್ಮಿ ಆರೋಪಿ ಮುಕ್ತಿರಂಜನ್ ರಾಯ್ಗೆ ಹೊಡೆದಿದ್ದಾಳೆ.
ಇದರಿಂದ ಸಿಟ್ಟಾದ ಮುಕ್ತಿರಂಜನ್ ಆಕೆಯ ಮುಖಕ್ಕೆ ಹೊಡೆದಿದ್ದಾನೆ. ಇದರಿಂದ ಮಹಾಲಕ್ಷ್ಮೀ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಬಳಿಕ ಮುಕ್ತಿರಂಜನ್ ರಾಯ್ ಮಹಾಲಕ್ಷ್ಮಿ ಮುಖದ ಮೇಲೆ ದಿಂಬು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಹೇಗೆ ಪಾರಾಗುವುದು ಎಂದು ಯೋಚಿಸಿದ್ದಾನೆ. ಮೃತದೇಹ ಹೀಗೆ ಬಿಟ್ಟರೆ ವಾಸನೆ ಬರುತ್ತೆ ಅಂತ ಯೋಚಿಸಿದ್ದಾನೆ.
ಮೃತದೇಹವನ್ನು ಹೇಗೆ ಡಿಸ್ಪೋಸ್ ಮಾಡುವುದು ಅಂತ ಇಂಟರ್ನೆಟ್ನಲ್ಲಿ ವಿಡಿಯೋ ನೋಡಿದ್ದಾನೆ. ಕೊನೆಗೆ ಫ್ರಿಡ್ಜ್ ಒಳಗೆ ಇಟ್ಟರೆ ವಾಸನೆ ಬರಲ್ಲ ಅಂತ ಗೊತ್ತಾಗಿದೆ. ತಕ್ಷಣವೇ ಮುಕ್ತಿರಂಜನ್ ರಾಯ್ ಹೊರಗಡೆ ಹೋಗಿ ಒಂದು ಮಚ್ಚು ಖರೀದಿಸಿ ತಂದಿದ್ದಾನೆ. ಮೃತದೇಹವನ್ನು ವಾಶ್ ರೂಮ್ಗೆ ತೆಗೆದುಕೊಂಡು ಹೋಗಿ, 57 ತುಂಡು ಮಾಡಿ ಫ್ರಿಡ್ಜ್ನಲ್ಲಿ ಇಟ್ಟಿದ್ದಾನೆ. ಬಳಿಕ ವಾಶ್ ರೂಮ್‌ನಲ್ಲಿ ಆಸಿಡ್ ಹಾಕಿ ರಕ್ತದ ಕಲೆಗಳನ್ನು ಸ್ವಚ್ಛ ಮಾಡಿದ್ದಾನೆ. ಮಧ್ಯರಾತ್ರಿ ಅಷ್ಟೊತ್ತಿಗೆ ಇಷ್ಟೆಲ್ಲ ಮಾಡಿ ಮುಗಿಸಿದ್ದನು.
ಬಾಂಗ್ಲಾದೇಶದಲ್ಲಿ ತಲೆಮರೆಸಿಕೊಳ್ಳುವ ಪ್ಲಾನ್
ಬೆಳಗಾಗುತ್ತಿದ್ದಂತೆ ಹೆಬ್ಬಗೋಡಿಯ ತನ್ನ ರೂಮ್ಗೆ ವಾಪಾಸ್ ಹೋಗಿದ್ದ ಮುಕ್ತಿರಂಜನ್ ರಾಯ್ ತನ್ನ ತಮ್ಮನಿಗೆ ತಕ್ಷಣವೇ ರೂಮ್ ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗು, ತಾನು ಮಹಾಲಕ್ಷ್ಮಿಯನ್ನು ಕೊಲೆ ಮಾಡಿ ಬಂದಿದ್ದೀನಿ ಅಂತ ಹೇಳಿದ್ದಾನೆ. ತಮ್ಮನ ಬಳಿ ಇದ್ದ ಹಣ ಸಹ ತೆದುಕೊಂಡು ಬೈಕ್ನಲ್ಲಿ ಊರಿನತ್ತ ಪ್ರಯಾಣ ಬೆಳಸಿದ್ದಾನೆ. ಊರು ತಲುಪಿದ ಬಳಿಕ ಬಾಂಗ್ಲಾದೇಶ ಹೋಗಿ ತಲೆಮರೆಸಿಕೊಳ್ಳುವ ಪ್ಲಾನ್ ಮಾಡಿದ್ದನು.
ಪ್ಲಾಟಿನಂ ಬೈಕ್ ಚಲಾಯಿಸಿಕೊಂಡು 1660 ಕಿಮೀ ದೂರದಲ್ಲಿರುವ ಭದ್ರಕ್ ತಲುಪಿದ್ದಾನೆ. ಊರಿಗೆ ಹೋದ ಬಳಿಕ ತಾಯಿಯ ಬಳಿ ತಾನು ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾನೆ. ಆಗ ತಾಯಿ ಗಂಜಂನಲ್ಲಿ ಇರುವ ತಮ್ಮನ ಜೊತೆಗೆ ಹೋಗಿ ಇರುವಂತೆ ಸಲಹೆ ನೀಡಿದ್ದಾಳೆ. ತಾಯಿಯ ಸಲಹೆಯಂತೆ ವಿದ್ಯಾಭ್ಯಾಸ ಮಾಡುತ್ತಿದ್ದ ತಮ್ಮನ ರೂಮ್ ಸೇರಿಕೊಂಡಿದ್ದಾನೆ.
ತಮ್ಮನ ಮೊಬೈಲ್ನಲ್ಲಿ ಪ್ರತಿದಿನ ಕನ್ನಡ ನ್ಯೂಸ್ ಚಾನಲ್ ಲೈವ್ ನೋಡುತ್ತಿದ್ದನು. ಕೊನೆಗೊಂದು ದಿನ ಮಹಾಲಕ್ಷ್ಮಿ ಕೊಲೆ ವಿಚಾರ ಚಾನಲ್‌ಗಳಲ್ಲಿ ಬಂದಿದೆ. ತನಿಖಾ ತಂಡಗಳು ಆಂಧ್ರ, ಪಶ್ಚಿಮ ಬಂಗಾಳ ಮೊದಲಾದ ಕಡೆ ಹುಡುಕಾಟ ನಡೆಸ್ತಿರುವ ವಿಚಾರ ಗೊತ್ತಾಗಿದೆ. ಇನ್ನು, ಪೊಲೀಸರ ಕೈಗೆ ತಾನು ಸಿಕ್ಕಿಹಾಕಿಕೊಳ್ಳುತ್ತೇನೆ, ತಪ್ಪಿಸಿಕೊಳ್ಳಲು ಆಗಲ್ಲ ಅಂತ ಅರಿವಾಗಿ, ಗಂಜಂನಿಂದ ದ್ವಿಚಕ್ರ ವಾಹನದಲ್ಲಿ ವಾಪಾಸ್ ಭದ್ರಕ್ಗೆ ಬಂದಿದ್ದಾನೆ. ಬಳಿಕ, ಊರ ಹೊರಭಾಗದಲ್ಲಿ ಡೆತ್ ನೋಟ್ ಬರೆದಿಟ್ಟು ಮುಕ್ತಿರಂಜನ್ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Sat, 5 October 24