ಮೀರತ್: ಕೆಲವೊಮ್ಮೆ ಸೆಲ್ಫೀ ಹುಚ್ಚು ಪ್ರಾಣವನ್ನೇ ಬಲಿ ಪಡೆಯುತ್ತದೆ. ಜಲಪಾತ, ಬೆಟ್ಟದ ತುದಿಯಲ್ಲಿ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಎಷ್ಟೋ ಘಟನೆಗಳು ನಡೆದಿವೆ. ಆದರೆ, ವಿಚಿತ್ರ ಪ್ರಕರಣವೊಂದರಲ್ಲಿ ಲೋಡ್ ಆಗಿರುವ ಗನ್ ಜೊತೆ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ಅನಿರೀಕ್ಷಿತವಾಗಿ ಗುಂಡು ಹಾರಿ, ಬಾಲಕ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೊಬೈಲ್ ಸೆಲ್ಫೀಯಿಂದ ಬಾಲಕನ ಪ್ರಾಣವೇ ಹಾರಿಹೋಗಿದೆ.
ಉತ್ತರ ಪ್ರದೇಶದ 14 ವರ್ಷದ ಬಾಲಕ ಉವೈಶ್ ಅಹಮದ್ ತನ್ನ ಅಣ್ಣ 19 ವರ್ಷದ ಸುಹೇಲ್ ಅಹಮದ್ ಜೊತೆಗೆ ಶೇಂಗಾ ತಿನ್ನಲು ಹೋಗಿದ್ದ. ಅಣ್ಣ ಸುಹೇಲ್ ಶೇಂಗಾ ಖರೀದಿಸಲು ಹೋದಾಗ ಆತನ ತಮ್ಮ ಉವೈಶ್ ಅಹಮದ್ ಲೋಡೆಡ್ ಗನ್ನೊಂದಿಗೆ ಆಟವಾಡುತ್ತಿದ್ದ. ಗನ್ ಅನ್ನು ತನ್ನ ಹೆಣೆಯ ಬಳಿ ಇಟ್ಟುಕೊಂಡು ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ನೋಡಿದ್ದ. ಆಗ ಅನಿರೀಕ್ಷಿತವಾಗಿ ಗನ್ನಿಂದ ಗುಂಡು ಹಾರಿದೆ. ಆತನ ಅಣ್ಣ ವಾಪಾಸ್ ಬರುವಷ್ಟರಲ್ಲಿ ಉವೈಶ್ ರಕ್ತದ ಓಕುಳಿಯಲ್ಲಿ ಬಿದ್ದಿದ್ದ.
ಮೀರತ್ನಲ್ಲಿ ಈ ಘಟನೆ ನಡೆದಿದ್ದು, ಗನ್ನಿಂದ ಗುಂಡು ಹಾರಿ ಉವೈಶ್ ಅಹಮದ್ ಸಾವನ್ನಪ್ಪಿದ್ದಾನೆ. ಆದರೆ, ಮೂರನೇ ವ್ಯಕ್ತಿ ಗುಂಡು ಹಾರಿಸಿ ಉವೈಶ್ ಅಹಮದ್ನನ್ನು ಕೊಲೆ ಮಾಡಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಆದರೆ, ಪೊಲೀಸರ ತನಿಖೆಯಿಂದ ಆ ಬಾಲಕನೇ ಅನಿರೀಕ್ಷಿತವಾಗಿ ಟ್ರಿಗರ್ ಎಳೆದು ಗುಂಡು ಹಾರಿಸಿಕೊಂಡಿದ್ದಾನೆ ಎಂಬುದು ಖಚಿತವಾಗಿದೆ.
ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ನಿಂತು ವಿಡಿಯೋಕ್ಕೆ ಪೋಸ್ ಕೊಡುತ್ತಿದ್ದ ಯುವಕನ ದುರಂತ ಸಾವು; ಸರಕು ರೈಲು ಡಿಕ್ಕಿ